Dailyhunt Logo
  • Light mode
    Follow system
    Dark mode
    • Play Story
    • App Story
Fact Check: ನೇಪಾಳ ಪ್ರವಾಹದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಆನೆ ರಕ್ಷಿಸಿದೆಯೇ?

Fact Check: ನೇಪಾಳ ಪ್ರವಾಹದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಆನೆ ರಕ್ಷಿಸಿದೆಯೇ?

ನೇಪಾಳದಲ್ಲಿ ಆಗಸ್ಟ್ 26ರಂದು ಸಂಭವಿಸಿದ ಭೀಕರ ಹಠಾತ್ ಪ್ರವಾಹದ ನಡುವೆ ವ್ಯಕ್ತಿಯೊಬ್ಬನನ್ನು ಆನೆಯೊಂದು ರಕ್ಷಿಸುತ್ತಿರುವ ದೃಶ್ಯ ಎಂಬ ಹೇಳಿಕೆಯೊಂದಿಗೆ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪ್ರವಾಹದ ನೀರಿನಲ್ಲಿ ಸಿಲುಕಿರುವ ವ್ಯಕ್ತಿಯೊಬ್ಬನ ಬಳಿ ಆನೆಯೊಂದು ತೆರಳಿ ಆತನನ್ನು ರಕ್ಷಿಸುತ್ತಿರುವುದು ವಿಡಿಯೊದಲ್ಲಿ ಕಾಣಿಸುತ್ತದೆ.

ಎಕ್ಸ್ ಬಳಕೆದಾರರೊಬ್ಬರು ಈ ವಿಡಿಯೊವನ್ನು ಹಂಚಿಕೊಂಡು, ''ನೇಪಾಳಕ್ಕಾಗಿ ಪ್ರಾರ್ಥಿಸುತ್ತಿದ್ದೇನೆ. ಭಗವಾನ್ ಗಣೇಶನು ಈ ವ್ಯಕ್ತಿಯನ್ನು ರಕ್ಷಿಸಿದಂತೆ, ಮಹಾದೇವನ ಕೃಪೆ ಹಾಗೂ ಆಶೀರ್ವಾದವು ಭೀಕರ ಪ್ರವಾಹದಿಂದ ತೊಂದರೆಗೊಳಗಾದ ಪ್ರತಿಯೊಬ್ಬರನ್ನೂ ರಕ್ಷಿಸಲಿ. ಪ್ರವಾಹದಿಂದ ಬಾಧಿತರಾದ ಪ್ರತಿಯೊಬ್ಬ ವ್ಯಕ್ತಿ, ಕುಟುಂಬ ಹಾಗೂ ಪ್ರತಿಯೊಂದು ಜೀವಿಯ ಮೇಲೂ ಭಗವಾನ್ ಶಿವನ ದಿವ್ಯ ಹಸ್ತವಿರಲಿ' ಎಂದು ಬರೆದುಕೊಂಡಿದ್ದಾರೆ.

ಆದರೆ, ವಿಡಿಯೊ ಕುರಿತು ಪರಿಶೀಲಿಸಿದಾಗ, ಇದು ನೇಪಾಳದಲ್ಲಿ ಆಗಸ್ಟ್ 26ರಂದು ಸಂಭವಿಸಿದ ಹಠಾತ್ ಪ್ರವಾಹದ ದೃಶ್ಯವಲ್ಲ ಎಂಬುದು ತಿಳಿದುಬಂದಿದೆ. ಈ ವಿಡಿಯೊ ಪ್ರವಾಹಕ್ಕೂ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸಿರುವ ಕೆಲವರು ಕೂಡ ವಿಡಿಯೊದಲ್ಲಿರುವ ಘಟನೆ ಬೇರೆ ಪ್ರದೇಶದಲ್ಲಿ ನಡೆದಿದ್ದು, ನೇಪಾಳ ಪ್ರವಾಹಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ವಿಡಿಯೊದ ಪ್ರಮುಖ ಕೀ-ಫ್ರೇಮ್​ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ ಇದೇ ವಿಡಿಯೊವನ್ನು ಆಜ್ ಬಾಂಗ್ಲಾ ಎಂಬ ಯೂಟ್ಯೂಬ್ ಖಾತೆಯಲ್ಲಿ 2026ರ ಆಗಸ್ಟ್ 7ರಂದು ಹಂಚಿಕೊಂಡಿರುವುದು ಸಿಕ್ಕಿದೆ. ಈ ದೃಶ್ಯವು ಅಸ್ಸಾಂನಲ್ಲಿ ಸಂಭವಿಸಿದ ಪ್ರವಾಹಕ್ಕೆ ಸಂಬಂಧಿಸಿದ ಘಟನೆಯೊಂದರ ವಿಡಿಯೊ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಹಾಗೆಯೆ ಇದು ಅಸ್ಸಾಂನದ್ದು ಎಂದು ಹೇಳಿಕೊಳ್ಳುವ ಅನೇಕ ಪೋಸ್ಟ್​ಗಳು ಆಗಸ್ಟ್ 7, 8 ರಂದು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಆಗಿದೆ.

ಇದರ ಜೊತೆಗೆ ಇನ್ನೂ ಕೆಲವು ಪೋಸ್ಟ್​ಗಳು ಇದು ನೇಪಾಳದ 2017ರ ಪ್ರವಾಹದ ಹಳೆಯ ದೃಶ್ಯ ಎಂದೂ ಹೇಳುತ್ತಿವೆ. ಆದರೆ, ನೇಪಾಳದಲ್ಲಿ ಭೀಕರ ಹಠಾತ್ ಪ್ರವಾಹ ಆಗಸ್ಟ್ 26ರಂದು ಸಂಭವಿಸಿತು. ಅದಕ್ಕಿಂತ ಮುನ್ನವೇ ಈ ವಿಡಿಯೊ ಹರಿದಾಡಿತ್ತು ಎಂಬುದು ಸ್ಪಷ್ಟ.

ಅಂದಹಾಗೆ ನೇಪಾಳದಲ್ಲಿ ಪ್ರವಾಹದ ಸಂದರ್ಭದಲ್ಲಿ ಆನೆಗಳನ್ನು ಬಳಸಿ ರಕ್ಷಣಾ ಕಾರ್ಯ ನಡೆಸಿದ ನೈಜ ಘಟನೆಗಳೂ ಇವೆ. 2017ರಲ್ಲಿ ಚಿತ್ವನ್‌ನ ಸೌರಾಹಾ ಪ್ರದೇಶದಲ್ಲಿ ಪ್ರವಾಹದ ನೀರು ಏರಿಕೆಯಾದಾಗ ಸಿಲುಕಿದ್ದ ಪ್ರವಾಸಿಗರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ತರಬೇತಿ ಪಡೆದ ಆನೆಗಳನ್ನು ಬಳಸಲಾಗಿತ್ತು.

Dailyhunt
Disclaimer: This content has not been generated, created or edited by Dailyhunt. Publisher: Prajavani