ಅಹಮದಾಬಾದ್/ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಣ್ಮಣಿ ವಿರಾಟ್ ಕೊಹ್ಲಿ ತಮ್ಮ ಅಭಿಮಾನಿಗಳನ್ನು ನಿರಾಶೆಗೊಳಿಸಲಿಲ್ಲ. ಸತತ ಎರಡನೇ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಬೆಂಗಳೂರಿಗೆ ತಂದರು. ಸಾಬರಮತಿ ನದಿ ತೀರದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ಹುಟ್ಟಿದ ಸಂಭ್ರಮದ ಅಲೆಗಳು ಕರ್ನಾಟಕದ ಬೀದಿಬೀದಿಗಳಿಗೂ ಅಪ್ಪಳಿಸಿದವು.
ಸತತ 17 ವರ್ಷಗಳ ಪ್ರಶಸ್ತಿ ಬರ ಎದುರಿಸಿದ್ದ ಆರ್‌ಸಿಬಿ ಹೋದ ವರ್ಷ ಇದೇ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ಕಿರೀಟ ಧರಿಸಿತ್ತು. ಆಗ ಭಾವುಕತೆಯು ನದಿಯಾಗಿ ಹರಿದಿತ್ತು. ಈ ಸಲ ಆತಿಥೇಯ ಗುಜರಾತ್ ಟೈಟನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿದಾಗ ಅಂತಹ ಯಾವುದೇ ಭಾವನಾತ್ಮಕ ದೃಶ್ಯಗಳು ಕಾಣಲಿಲ್ಲ. ಕೊಹ್ಲಿಯನ್ನು ಸುತ್ತುವರಿದ ಸಹ ಆಟಗಾರರು ಸಂಭ್ರಮಿಸಿದರು. 'ಅಂದುಕೊಂಡಂತೆ ಎರಡನೇ ಸಲ ಪ್ರಶಸ್ತಿ ಜಯಿಸಿದ್ದೇವೆ' ಎಂಬ ವಿಶ್ವಾಸಭರಿತ ಭಾವ ಆಟಗಾರರಲ್ಲಿ ಕಂಡಿತ್ತು. ಐಪಿಎಲ್ ಇತಿಹಾಸದಲ್ಲಿ ಸತತ ಎರಡನೇ ಪ್ರಶಸ್ತಿ ಗೆದ್ದ ಮೂರನೇ ತಂಡವೆಂಬ ಹೆಗ್ಗಳಿಕೆಗೆ ರಜತ್ ಪಾಟೀದಾರ್ ಬಳಗ ಪಾತ್ರವಾಯಿತು.
ಟೂರ್ನಿ ಆರಂಭವಾಗುವ ಮುನ್ನ ಬೆಂಗಳೂರಿನಲ್ಲಿ ಫೈನಲ್ ನಡೆಯಲಿದೆ ಎಂದು ಘೋಷಿಸಲಾಗಿತ್ತು. ಆದರೆ ಲೀಗ್ ಹಂತದ ಅಂತ್ಯದಲ್ಲಿ ಸ್ಥಳಾಂತರ ಮಾಡಲಾಗಿತ್ತು. ಇದರಿಂದಾಗಿ ಬೆಂಗಳೂರಿಗೆ ಫೈನಲ್ ಆತಿಥ್ಯದ ಅವಕಾಶ ಕೈತಪ್ಪಿತ್ತು. ಆದರೆ ಪಂದ್ಯ ನೋಡಲು ಬೆಂಗಳೂರಿನಿಂದ ಅಪಾರ ಸಂಖ್ಯೆಯ ಅಭಿಮಾನಿಗಳು ಅಹಮದಾಬಾದಿಗೆ ಪ್ರಯಾಣಿಸಿದ್ದರು. ಅವರೂ ಸೇರಿದಂತೆ ದೇಶದಾದ್ಯಂತ ಇರುವ ಲಕ್ಷಾಂತರ ಅಭಿಮಾನಿಗಳ ನಿರೀಕ್ಷೆಯನ್ನು ಆಟಗಾರರು ಈಡೇರಿಸಿದರು.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಆರ್‌ಸಿಬಿಯ ಜೋಶ್ ಹೇಝಲ್‌ವುಡ್ (37ಕ್ಕೆ2), ರಸೀಕ್ ಸಲಾಮ್ ದಾರ್ (27ಕ್ಕೆ3) ಮತ್ತು ಭುವನೇಶ್ವರ್ ಕುಮಾರ್ (29ಕ್ಕೆ2) ಅವರು ಗುಜರಾತ್ ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದರು. ಗುರಿ ಬೆನ್ನಟ್ಟಿದ್ದ ಆರ್‌ಸಿಬಿ ತಂಡವು ಕೆಲವು ಆತಂಕದ ಕ್ಷಣಗಳನ್ನು ಎದುರಿಸಿತು. ಆದರೆ ವಿರಾಟ್ ಚೆಂದದ ಬ್ಯಾಟಿಂಗ್ ಮುಂದೆ ಬೌಲರ್‌ಗಳ ಆಟ ನಡೆಯಲಿಲ್ಲ. ವಿರಾಟ್, ವಿಜಯದ ಸಿಕ್ಸರ್ ಹೊಡೆದಾಗ ಇನಿಂಗ್ಸ್‌ನಲ್ಲಿ ಇನ್ನೂ 12 ಎಸೆತಗಳು ಬಾಕಿ ಇದ್ದವು.
ಸ್ಕೋರ್...
ಗುಜರಾತ್ ಟೈಟನ್ಸ್; 8ಕ್ಕೆ155 (20 ಓವರ್)
ಆರ್‌ಸಿಬಿ: 5ಕ್ಕೆ161 (18 ಓವರ್)

