ಬೆಂಗಳೂರು: ಫೇಸ್‌ಬುಕ್‌ನ ಜಾಹೀರಾತು ನಂಬಿ ಆನೈಲೈನ್ ಟ್ರೇಡಿಂಗ್‌ನಲ್ಲಿ ನಗರದ ಸಾಫ್ಟ್‌ವೇರ್ ಎಂಜಿನಿಯರ್ ₹1.9 ಕೋಟಿ ಕಳೆದುಕೊಂಡಿದ್ದಾರೆ.
ಸಂತ್ರಸ್ತ ವ್ಯಕ್ತಿಯ ದೂರು ಆಧರಿಸಿ ಪಶ್ಚಿಮ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆ ಹಾಗೂ ಹಣ ವರ್ಗಾವಣೆ ಕುರಿತು ತನಿಖೆ ಕೈಗೊಂಡಿದ್ದಾರೆ.
ಫೆಬ್ರುವರಿ ತಿಂಗಳಲ್ಲಿ ಫೇಸ್‌ಬುಕ್ ವೀಕ್ಷಿಸುತ್ತಿದ್ದಾಗ ಕಣ್ಣಿಗೆ ಬಿದ್ದ ಆನ್‌ಲೈನ್ ಟ್ರೇಡಿಂಗ್ ಜಾಹೀರಾತಿನ ಲಿಂಕ್ ಮೇಲೆ ಟಿಕಿ ಕ್ಲಿಕ್ ಮಾಡಿದ್ದರು. ತಕ್ಷಣವೇ ಸೈಬರ್ ವಂಚಕರು ಹೂಡಿಕೆ ಸಲಹೆಗಾರರು ಹಾಗೂ ಪ್ರತಿನಿಧಿಗಳ ಸೋಗಿನಲ್ಲಿ ಟೆಕಿಯನ್ನು ಸಂಪರ್ಕಿಸಿ 'Proxtrend' ಎಂಬ ಹೂಡಿಕೆ ವೇದಿಕೆ ಸೇರಲು ಪ್ರಚೋದಿಸಿದ್ದರು. ವಂಚಕರ ಮಾತನ್ನು ನಂಬಿ, ನಕಲಿ ವೆಬ್‌ಸೈಟ್‌ನಲ್ಲಿ ಖಾತೆ ತೆರೆದಿದ್ದರು. ಪ್ರಾಕ್ಸ್‌ಟ್ರೆಂಡ್ ಹೆಸರಿನ ವೇದಿಕೆಯಲ್ಲಿ ಷೇರು ಹಾಗೂ ಇತರೆ ಆನ್‌ಲೈನ್ ಷೇರು ವಹಿವಾಟು ನಡೆಸಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ನಂಬಿಸಿದ್ದರು.
ಆರಂಭದಲ್ಲಿ ಖಾತೆಯಲ್ಲಿ ಹೂಡಿಕೆ ಮೊತ್ತಕ್ಕೆ ಅನುಗುಣವಾಗಿ ಲಾಭ ಬಂದಿರುವಂತೆ ತೋರಿಸಿ ಟಕಿಯ ವಿಶ್ವಾಸ ಗಳಿಸಿದ್ದರು. ಬಳಿಕ ವಿವಿಧ ಹೆಸರಿನಲ್ಲಿ ಸಂಪರ್ಕಿಸುತ್ತಿದ್ದ ಅಕೌಂಟ್ ಮ್ಯಾನೇಜರ್‌ಗಳು ಹೆಚ್ಚಿನ ಮೊತ್ತ ಹೂಡಿಕೆ ಮಾಡುವಂತೆ ನಿರಂತರವಾಗಿ ಸಲಹೆ ನೀಡಿದ್ದರು.
ಆರೋಪಿಗಳ ಸೂಚನೆಯಂತೆ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಹಣ ವರ್ಗಾಯಿಸಲಾಗಿದೆ. ಈ ಅವಧಿಯಲ್ಲಿ ಒಟ್ಟು ₹1.9 ಕೋಟಿ ಹೂಡಿಕೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಆರಂಭದಲ್ಲಿ ಸಣ್ಣ ಮೊತ್ತ ಹಿಂಪಡೆಯಲು ಅವಕಾಶ ನೀಡಿದ್ದ ಆರೋಪಿಗಳು, ಸಂಪೂರ್ಣ ಹಣ ಪಡೆಯಲು ಹೆಚ್ಚುವರಿ ಶುಲ್ಕ ಪಾವತಿಸಬೇಕು ಎಂದು ತಿಳಿಸಿದ್ದಾರೆ. ಸೆಪ್ಟೆಂಬರ್ 9ರಂದು ಹಣ ಹಿಂಪಡೆಯಲು ಮುಂದಾದಾಗ ₹50 ಲಕ್ಷ ಹಾಗೂ ₹20 ಲಕ್ಷ ಪಾವತಿಸುವಂತೆ ಒತ್ತಡ ಹೇರಿದ್ದಾರೆ. ಇದರಿಂದ ಅನುಮಾನಗೊಂಡ ಟೆಕಿ, ತಾವು ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಸೈಬರ್ ಕ್ರೈಂ ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ.
ವಂಚನೆಗೆ ಬಳಸಿದ ಬ್ಯಾಂಕ್ ಖಾತೆಗಳನ್ನು ತಾತ್ಕಾಲಿಕವಾಗಿ 'ಫ್ರೀಜ್' (ಹಣ ವರ್ಗಾವಣೆಗೆ ತಡೆ) ಮಾಡಿ, ಆರೋಪಿಗಳ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

