Thursday, 28 Jan, 10.55 am ಪ್ರಜಾವಾಣಿ

ವಿದೇಶ
ಫೇಸ್‌ಬುಕ್‌ನಲ್ಲಿ ರಾಜಕೀಯ ಗ್ರೂಪ್‌ಗಳ ಶಿಫಾರಸು ನಿಲ್ಲಿಸಲಾಗುತ್ತದೆ: ಜುಕರ್‌ಬರ್ಗ್

ವಾಷಿಂಗ್ಟನ್‌: ತಮ್ಮ ಮಾಧ್ಯಮದಲ್ಲಿ ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ಗ್ರೂಪ್‌ಗಳನ್ನು ವೇದಿಕೆಯಾಗಿ ಬಳಸುವಂತೆ ಬಳಕೆದಾರರಿಗೆ ಶಿಫಾರಸು ಮಾಡುವುದನ್ನು ಶಾಶ್ವತವಾಗಿ ನಿಲ್ಲಿಸಲಾಗುತ್ತದೆ ಎಂದು ಸಾಮಾಜಿಕ ಮಾಧ್ಯಮ ಸಂಸ್ಥೆ 'ಫೇಸ್‌ಬುಕ್‌'ನ ಮುಖ್ಯ ಕಾರ್ಯನಿರ್ವಾಹಕ ಮಾರ್ಕ್‌ ಜುಕರ್‌ಬರ್ಗ್‌ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಫೇಸ್‌ಬುಕ್‌ ಬಳಕೆದಾರರಿಗೆ ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ಗ್ರೂಪ್‌ಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುತ್ತದೆ ಎಂದು ಕಂಪನಿ ಹೇಳಿತ್ತು. ಇದೀಗ ಈ ನಿಯಮಗಳನ್ನು ಜಾಗತಿಕವಾಗಿ ಜಾರಿಗೊಳಿಸಲಾಗುತ್ತದೆ ಎಂದು ಹೇಳಿದೆ.

ಅಮೆರಿಕದ ಸೆನಟರ್ ಎಡ್ವರ್ಡ್ ಮಾರ್ಕಿನ್ ಅವರು ಜುಕರ್‌ಬರ್ಗ್‌ಗೆ ಪತ್ರ ಬರೆದಿದ್ದು, ದ್ವೇಷ ಹಾಗೂ ತಾರತಮ್ಯದ ವಿಷಯ ಪ್ರಸಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒ‌ತ್ತಾಯಿಸಿದ್ದರು.

ಫೇಸ್‌ಬುಕ್‌ನ ಗಳಿಕೆಯ ಬಗ್ಗೆ ವಿಶ್ಲೇಷಕರೊಂದಿಗೆ ಸಂವಾದ ನಡೆಸಿದ ಜುಕರ್‌ಬರ್ಗ್, 'ಫೇಸ್‌ಬುಕ್‌ ಕಂಪನಿಯು ಉತ್ತಮವಾಗಿ ಕಾರ್ಯನಿರ್ವಹಿಸುವುದರ ಜತೆಗೆ, ರಾಜಕೀಯ ವಿಷಯದ ಬಗೆಗಿನ ಚರ್ಚೆಗಳನ್ನು ಕಡಿಮೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ' ಎಂದು ತಿಳಿಸಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top