Dailyhunt Logo
  • Light mode
    Follow system
    Dark mode
    • Play Story
    • App Story
ಫಿಫಾ ರೆಡ್ ಕಾರ್ಡ್ ನಿಯಮ: ಟ್ರಂಪ್ 'ಫೌಲ್', ಸಂಚಲನ ಸೃಷ್ಟಿಸಿದ ವಿವಾದ

ಫಿಫಾ ರೆಡ್ ಕಾರ್ಡ್ ನಿಯಮ: ಟ್ರಂಪ್ 'ಫೌಲ್', ಸಂಚಲನ ಸೃಷ್ಟಿಸಿದ ವಿವಾದ

ವಾಷಿಂಗ್ಟನ್: ಪ್ರಸಕ್ತ ಸಾಗುತ್ತಿರುವ 2026ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅಮೆರಿಕ ತಂಡದ ಸ್ಟಾರ್ ಸ್ಟ್ರೈಕರ್ ಫೊಲಾರಿನ್ ಬಾಲೋಗನ್ ಅವರಿಗೆ ವಿಧಿಸಲಾಗಿದ್ದ ಒಂದು ಪಂದ್ಯದ ನಿಷೇಧವನ್ನು 'ಫಿಫಾ' ಅತ್ಯಂತ ವಿರಳ ಎಂಬಂತೆ ಹಿಂಪಡೆದಿರುವುದು ಕ್ರೀಡಾ ಜಗತ್ತಿನಲ್ಲಿ ಭಾರಿ ಆಕ್ರೋಶ ಮತ್ತು ವಿವಾದಕ್ಕೆ ಕಾರಣವಾಗಿದೆ.

ಬಾಲೋಗನ್ ಅವರಿಗೆ 'ರೆಡ್‌ ಕಾರ್ಡ್‌' ನೀಡಿದ (ಹೊರಕಳಿಸುವ) ಈ ಆಘಾತಕಾರಿ ನಿರ್ಧಾರವನ್ನು

ಮರುಪರಿಶೀಲಿಸುವಂತೆ ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಅವರಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆ ಮಾಡಿ ಒತ್ತಡ ಹೇರಿರುವ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಬಾಲೋಗನ್‌ಗೆ ಆಡಲು ಅವಕಾಶ...

ಬೋಸ್ನಿಯಾ ವಿರುದ್ಧ ಜುಲೈ 1ರಂದು 32ರ ಸುತ್ತಿನ ಪಂದ್ಯದಲ್ಲಿ ಎದುರಾಳಿ ಗೋಲಿನತ್ತ ಮುನ್ನುಗ್ಗುವ ಭರದಲ್ಲಿ ರಕ್ಷಣಾ ಆಟಗಾರನನ್ನು (ತಾರಿಕ್‌ ಮುಹರೆಮೊವಿಕ್‌) ತುಳಿದಿದ್ದಕ್ಕೆ ಬಾಲೋಗನ್ ಅವರಿಗೆ ರೆಡ್‌ಕಾರ್ಡ್‌ ನೀಡಲಾಗಿತ್ತು. ವಿಡಿಯೊ ಮರುಪರಿಶೀಲನೆ (ವಿಎಆರ್‌) ನಡೆಸಿ ರೆಫರಿ ರೆಡ್ ಕಾರ್ಡ್ ನೀಡಿದ್ದರು.

ಫಿಫಾ ನಿಯಮದ ಪ್ರಕಾರ ರೆಡ್ ಕಾರ್ಡ್ ಪಡೆದ ಆಟಗಾರನಿಗೆ ಮುಂದಿನ ಪಂದ್ಯ ಆಡುವ ಅವಕಾಶ ಕೈತಪ್ಪುತ್ತದೆ. ಆದರೆ, ಬೆಲ್ಜಿಯಂ ವಿರುದ್ಧದ ನಿರ್ಣಾಯಕ ಪ್ರಿಕ್ವಾರ್ಟರ್ ಪಂದ್ಯಕ್ಕೂ ಮುನ್ನ ಫಿಫಾ ಶಿಸ್ತು ಸಮಿತಿಯು ವಿಶೇಷಾಧಿಕಾರ ಬಳಸಿ, ಬಾಲೋಗನ್ ಮೇಲಿದ್ದ ನಿಷೇಧವನ್ನು ಒಂದು ವರ್ಷದ ಅವಧಿಗೆ ಅಮಾನತಿನಲ್ಲಿಟ್ಟು ಅವರಿಗೆ ಆಡಲು ಹಸಿರು ನಿಶಾನೆ ತೋರಿಸಿತು.

ಫಿಫಾ ವಿಶ್ವಕಪ್: ಆತಿಥೇಯ ಅಮೆರಿಕ ಮಣಿಸಿದ ಬೆಲ್ಜಿಯಂ ಕ್ವಾರ್ಟರ್‌ಗೆ ಲಗ್ಗೆರೊನಾಲ್ಡೊ ಕನಸು ಭಗ್ನ, ಪೋರ್ಚುಗಲ್ ಮಣಿಸಿದ ಸ್ಪೇನ್ ಕ್ವಾರ್ಟರ್‌ಗೆ ಲಗ್ಗೆ

'ನ್ಯಾಯ ಸಿಕ್ಕಿದೆ' ಎಂದ ಟ್ರಂಪ್

ಫಿಫಾದ ಈ ತೀರ್ಮಾನವನ್ನು ಸಾಮಾಜಿಕ ಮಾಧ್ಯಮದಲ್ಲಿ ಸ್ವಾಗತಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 'ಸರಿಯಾದ ನಿರ್ಧಾರ ಕೈಗೊಂಡಿದ್ದಕ್ಕಾಗಿ ಮತ್ತು ದೊಡ್ಡ ಅನ್ಯಾಯವನ್ನು ಸರಿಪಡಿಸಿದ್ದಕ್ಕಾಗಿ ಫಿಫಾಗೆ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ. ಟ್ರಂಪ್ ಅವರು ಫಿಫಾ ಅಧ್ಯಕ್ಷರಿಗೆ ಕರೆ ಮಾಡಿ ರೆಫರಿಯ ತೀರ್ಪಿನ ಬಗ್ಗೆ ಆಕ್ಷೇಪ ಎತ್ತಿದ್ದರು ಎನ್ನಲಾಗಿದೆ.

ಬೆಲ್ಜಿಯಂ ಸೇರಿದಂತೆ ಫುಟ್‌ಬಾಲ್ ಜಗತ್ತಿನ ಪ್ರಮುಖರ ಆಕ್ರೋಶ

ಫಿಫಾದ ಈ ದಿಢೀರ್ ನಿರ್ಧಾರದಿಂದ ಬೆಲ್ಜಿಯಂ ಫುಟ್‌ಬಾಲ್ ಸಂಸ್ಥೆ (ಆರ್‌ಬಿಎಫ್‌ಎ) ದಿಗ್ಭ್ರಮೆ ವ್ಯಕ್ತಪಡಿಸಿದೆ. 'ಇದು ವಿಶ್ವಕಪ್ ನಿಯಮಕ್ಕೆ ಸಂಪೂರ್ಣ ವಿರುದ್ಧವಾಗಿದೆ ಮತ್ತು ಕ್ರೀಡಾ ಸ್ಫೂರ್ತಿಗೆ ಧಕ್ಕೆ ತಂದಿದೆ. ನಿಯಮ ಎಲ್ಲರಿಗೂ ಒಂದೇ ಆಗಿರಬೇಕು. ರಾಜಕೀಯ ಒತ್ತಡಕ್ಕೆ ಮಣಿದು ಇಂತಹ ನಿರ್ಧಾರ ಕೈಗೊಂಡಿರುವುದು ಖಂಡನೀಯ' ಎಂದು ಬೆಲ್ಜಿಯಂ ಆಕ್ರೋಶ ಹೊರಹಾಕಿದೆ.

ಫಿಫಾ ಮಾಜಿ ಅಧ್ಯಕ್ಷ ಸೆಪ್ ಬ್ಲ್ಯಾಟರ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, 'ಫುಟ್‌ಬಾಲ್ ಮೈದಾನ ರಾಜಕೀಯದ ಆಟದ ಮೈದಾನವಾಗಬಾರದು. ರಾಜಕೀಯ ನಾಯಕರ ಫೋನ್ ಕರೆಗಳಿಂದ ರೆಡ್ ಕಾರ್ಡ್‌ಗಳನ್ನು ರದ್ದುಗೊಳಿಸಲು ಸಾಧ್ಯವಿಲ್ಲ' ಎಂದು ಕಟುವಾಗಿ ಟೀಕಿಸಿದ್ದಾರೆ.

ಫೊಲಾರಿನ್ ಬಾಲೋಗನ್

ನಿಯಮ ಏನು ಹೇಳುತ್ತದೆ?

ಫಿಫಾ ತನ್ನ ನಿಯಮದ 27ನೇ ವಿಧಿಯನ್ನು ಉಲ್ಲೇಖಿಸಿ ಈ ಕ್ರಮವನ್ನು ಸಮರ್ಥಿಸಿಕೊಂಡಿದೆ. ಇದರ ಪ್ರಕಾರ ವಿಶೇಷ ಸಂದರ್ಭಗಳಲ್ಲಿ ಶಿಸ್ತು ಕ್ರಮಗಳನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಡುವ ಅಧಿಕಾರ ಸಮಿತಿಗಿದೆ. ಆದರೆ, ವಿಶ್ವಕಪ್ ಇತಿಹಾಸದಲ್ಲಿ 1962ರ ನಂತರ ಇಂತಹ ಘಟನೆ ನಡೆದಿರುವುದು ಇದೇ ಮೊದಲು ಎನ್ನಲಾಗಿದೆ.

ಅಮೆರಿಕ ತಂಡದ ತರಬೇತುದಾರ ಮೌರಿಸಿಯೋ ಪೋಚೆಟ್ಟಿನೋ ಅವರು ಫಿಫಾ ನಿರ್ಧಾರವನ್ನು ಸ್ವಾಗತಿಸಿದ್ದು, 'ಬಾಲೋಗನ್ ಅವರಿಗೆ ರೆಡ್ ಕಾರ್ಡ್ ನೀಡಿದ್ದೇ ತಪ್ಪು ನಿರ್ಧಾರವಾಗಿತ್ತು, ಈಗ ನ್ಯಾಯ ಸಿಕ್ಕಿದೆ' ಎಂದಿದ್ದಾರೆ. ಆದಾಗ್ಯೂ, ಈ ವಿವಾದ ಇಡೀ ಟೂರ್ನಿಯ ಪಾರದರ್ಶಕತೆಯ ಮೇಲೆ ಕರಿನೆರಳು ಬೀರಿದೆ.

ಯುರೋಪಿನ ಫುಟ್‌ಬಾಲ್ ನಿಯಂತ್ರಣ ಸಂಸ್ಥೆ ಯುಇಎಫ್‌ಎ ಸಹ ಈ ನಿರ್ಧಾರವನ್ನು ಖಂಡಿಸಿದೆ. 'ನಿಯಮಗಳನ್ನು ಕಾಪಾಡಬೇಕಾದವರೇ ಅವುಗಳನ್ನು ಕಾಪಾಡಲು ವಿಫಲರಾದರೆ, ಸ್ಪರ್ಧೆಯ ಸಮಗ್ರತೆ ಮತ್ತು ವಿಶ್ವಾಸಾರ್ಹತೆಗೆ ಧಕ್ಕೆಯಾಗುತ್ತದೆ. ಈ ನಿರ್ಧಾರ ಅಭೂತಪೂರ್ವ, ಅರ್ಥವಾಗದ ಮತ್ತು ಸಮರ್ಥಿಸಲಾಗದಂತಹದ್ದು' ಎಂದು ಹೇಳಿದೆ.

'ರೆಡ್ ಕಾರ್ಡ್' ನಿಯಮ

ವಿಶ್ವಕಪ್ ಫುಟ್‌ಬಾಲ್‌ನಲ್ಲಿ ಕೆಂಪು ಕಾರ್ಡ್ ಎಂದರೆ ಅದರ ಪರಿಣಾಮವೂ ಸ್ಪಷ್ಟ. ಆಟಗಾರ ಮೈದಾನದಿಂದ ಹೊರಹೋಗಬೇಕು. ಸಹಜವಾಗಿಯೇ ಮುಂದಿನ ಪಂದ್ಯದಲ್ಲಿ ಆಡಲು ಅವಕಾಶ ಇರುವುದಿಲ್ಲ. ಇದು ಫುಟ್‌ಬಾಲ್‌ನ ಮೂಲಭೂತ ಶಿಸ್ತು ನಿಯಮಗಳಲ್ಲಿ ಒಂದು.

ಫಿಫಾ ನಿಯಮದಂತೆ ರೆಡ್‌ಕಾರ್ಡ್‌ ಪಡೆಯುವ ಆಟಗಾರನಿಗೆ ಒಂದು ಪಂದ್ಯದ ನಿಷೇಧ ವಿಧಿಸಲಾಗುತ್ತದೆ. ಇದರ ವಿರುದ್ಧ ಆ ಆಟಗಾರನ ತಂಡ ಮನವಿ ಸಹ ಸಲ್ಲಿಸುವಂತಿಲ್ಲ. ಅಮೆರಿಕದ ಫುಟ್‌ಬಾಲ್‌ ಫೆಡರೇಷನ್‌ ಇದರ ವಿರುದ್ಧ ಪ್ರಶ್ನಿಸಲು ಮುಂದಾಗಿರಲಿಲ್ಲ. ಸ್ವತಃ ಬಾಲೋಗನ್ ಅವರೇ ತೀರ್ಪನ್ನು ಒಪ್ಪಿಕೊಂಡಿದ್ದರು.

ಫಿಫಾ ಶಿಸ್ತು ಸಮಿತಿಯು ಬಾಲೋಗನ್‌ಗೆ ನೀಡಲಾದ ಕೆಂಪು ಕಾರ್ಡ್ ಅನ್ನು ರದ್ದುಪಡಿಸಲಿಲ್ಲ. ಅಂದರೆ ರೆಫರಿಯ ನಿರ್ಧಾರವನ್ನು ಸಮಿತಿ ಬದಲಾಯಿಸಲಿಲ್ಲ. ಆದರೆ, ಆ ಕೆಂಪು ಕಾರ್ಡ್‌ಗೆ ಸಂಬಂಧಿಸಿದ ಒಂದು ಪಂದ್ಯದ ಕಡ್ಡಾಯ ಅಮಾನತನ್ನು ಅಮಾನತುಗೊಳಿಸಲಾಯಿತು. ಇದರಿಂದ ಬಾಲೋಗನ್‌ಗೆ ಬೆಲ್ಜಿಯಂ ವಿರುದ್ಧದ ಪಂದ್ಯದಲ್ಲಿ ಆಡುವ ಅವಕಾಶ ದೊರೆಯಿತು.

ಫಿಫಾ ಪ್ರಕಟಣೆಯಲ್ಲಿ, ಶಿಸ್ತು ಕ್ರಮಗಳನ್ನು ಅಮಾನತುಗೊಳಿಸುವ ವಿವೇಚನಾ ಅಧಿಕಾರ ಸಮಿತಿಗೆ ಇದೆ ಎಂದು ಉಲ್ಲೇಖಿಸಿತು. ಆದರೆ ಈ ಪ್ರಕರಣದಲ್ಲಿ ಆ ಅಧಿಕಾರವನ್ನು ಯಾವ ಕಾರಣಕ್ಕೆ ಬಳಸಲಾಯಿತು ಎಂಬುದನ್ನು ವಿವರವಾಗಿ ತಿಳಿಸಲಿಲ್ಲ.

ಯಾರು ತೆಗೆದುಕೊಂಡರು ಈ ನಿರ್ಧಾರ?

ಫಿಫಾ ಪ್ರಕಾರ, ಈ ನಿರ್ಧಾರವನ್ನು ಅದರ ಸ್ವತಂತ್ರ ಶಿಸ್ತು ಸಮಿತಿಯೇ ತೆಗೆದುಕೊಂಡಿದೆ. ಸಮಿತಿಯ ಅಧ್ಯಕ್ಷರಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ನ ವಕೀಲ ಮೊಹಮ್ಮದ್ ಅಲ್ ಕಮಾಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮಿತಿಯಲ್ಲಿ ವಿವಿಧ ದೇಶಗಳ ಸದಸ್ಯರಿದ್ದಾರೆ. ಆದರೆ, ಸಮಿತಿಯ ಚರ್ಚೆಗಳು ಸಾರ್ವಜನಿಕವಾಗಿರುವುದಿಲ್ಲ. ಸದಸ್ಯರ ಮತದಾನ, ಚರ್ಚೆಯ ವಿವರ ಅಥವಾ ನಿರ್ಧಾರಕ್ಕೆ ಕಾರಣವಾದ ದಾಖಲೆಗಳನ್ನು ಸಾಮಾನ್ಯವಾಗಿ ಬಹಿರಂಗಪಡಿಸಲಾಗುವುದಿಲ್ಲ.

ಫಿಫಾ ನಿಲುವು

ಈ ವಿವಾದದ ನಡುವೆಯೂ ಫಿಫಾ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ನ್ಯಾಯಾಂಗ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ನಿರ್ಧಾರವನ್ನು ಸಂಬಂಧಿತ ಸಮಿತಿಯೇ ತೆಗೆದುಕೊಂಡಿದೆ ಎಂದು ಸಂಸ್ಥೆ ಪುನರುಚ್ಚರಿಸಿದೆ.

ಈಗ ಚರ್ಚೆಯಾಗುತ್ತಿರುವುದು ಏನು?

ಬಾಲೋಗನ್ ಪ್ರಕರಣವು ಕೇವಲ ಒಬ್ಬ ಆಟಗಾರನ ಅಮಾನತು ಪ್ರಶ್ನೆಯಾಗಿ ಉಳಿದಿಲ್ಲ. ವಿಶ್ವಕಪ್‌ನಂತಹ ಅತಿ ದೊಡ್ಡ ಕ್ರೀಡಾಕೂಟದಲ್ಲಿ ಶಿಸ್ತು ಕ್ರಮಗಳ ನಿರ್ಧಾರ ಹೇಗೆ ತೆಗೆದುಕೊಳ್ಳಲಾಗುತ್ತದೆ, ಆ ಪ್ರಕ್ರಿಯೆ ಎಷ್ಟು ಪಾರದರ್ಶಕವಾಗಿದೆ ಮತ್ತು ಫಿಫಾದ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಉಂಟಾಗಿರುವ ಪ್ರಶ್ನೆಗಳಿಗೆ ಸಂಸ್ಥೆ ಹೇಗೆ ಉತ್ತರ ನೀಡುತ್ತದೆ ಎಂಬ ವಿಚಾರಗಳು ಈಗ ಜಾಗತಿಕ ಚರ್ಚೆಯ ಕೇಂದ್ರವಾಗಿವೆ.

ಒಂದೆಡೆ, ಫಿಫಾ ತನ್ನ ನಿಯಯಕ್ಕೆ ಅನುಸಾರವಾಗಿ ಸ್ವತಂತ್ರ ಸಮಿತಿಯೇ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳುತ್ತಿದೆ. ಮತ್ತೊಂದೆಡೆ, ಯುಇಎಫ್‌ಎ ಸೇರಿದಂತೆ ಹಲವು ಫುಟ್‌ಬಾಲ್ ಸಂಸ್ಥೆಗಳು ಈ ನಿರ್ಧಾರದ ಕುರಿತು ಹೆಚ್ಚಿನ ಪಾರದರ್ಶಕತೆ ಮತ್ತು ಸ್ಪಷ್ಟನೆ ಅಗತ್ಯ ಎಂದು ಒತ್ತಾಯಿಸುತ್ತಿವೆ.

ಬೆಲ್ಜಿಯಂ ವಿರುದ್ಧ ಸೋತ ಅಮೆರಿಕ ಹೊರಕ್ಕೆ...

ಈ ಎಲ್ಲ ವಿವಾದಗಳ ನಡುವೆ ಬೆಲ್ಜಿಯಂ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಅಮೆರಿಕದ ಸ್ಟಾರ್ ಆಟಗಾರ ಫೊಲಾರಿನ್ ಬಾಲೋಗನ್ ಕಣಕ್ಕಿಳಿದರು. ಆದರೆ ಆತಿಥೇಯ ಅಮೆರಿಕ ಬಯಸಿದಂತೆ ಫಲಿತಾಂಶ ಹೊರಬರಲಿಲ್ಲ. ಬೆಲ್ಜಿಯಂ ವಿರುದ್ಧ 1-4 ಗೋಲುಗಳ ಅಂತರದ ಹೀನಾಯ ಸೋಲು ಅನುಭವಿಸಿರುವ ಅಮೆರಿಕ ಟೂರ್ನಿಯಿಂದಲೇ ನಿರ್ಗಮಿಸಿದೆ. ಮತ್ತೊಂದೆಡೆ ಬೆಲ್ಜಿಯಂ ಅಂತಿಮ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದು, ಸ್ಪೇನ್ ವಿರುದ್ಧದ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ.

ತಪ್ಪು ಹೆಜ್ಜೆ ಇಟ್ಟರೆ ಸರ್ವನಾಶ: ಖಮೇನಿ ಅಂತ್ಯಕ್ರಿಯೆ ನಡುವೆ ಟ್ರಂಪ್ ಎಚ್ಚರಿಕೆ ಫಿಫಾ ವಿಶ್ವಕಪ್ 2026: ಏನಿದು 'ಸಡನ್ ಡೆತ್' ನಿಯಮ?
Dailyhunt
Disclaimer: This content has not been generated, created or edited by Dailyhunt. Publisher: Prajavani