Dailyhunt Logo
  • Light mode
    Follow system
    Dark mode
    • Play Story
    • App Story
ಫಿಫಾ ವಿಶ್ವಕಪ್ ಮೊದಲ ಸೆಮಿಫೈನಲ್‌: ಫ್ರಾನ್ಸ್‌- ಸ್ಪೇನ್ ಮುಖಾಮುಖಿ ಇಂದು

ಫಿಫಾ ವಿಶ್ವಕಪ್ ಮೊದಲ ಸೆಮಿಫೈನಲ್‌: ಫ್ರಾನ್ಸ್‌- ಸ್ಪೇನ್ ಮುಖಾಮುಖಿ ಇಂದು

ಲಾಸ್‌ (ಅಮೆರಿಕ), (ಎಎಫ್‌ಪಿ): ಯುರೋಪ್‌ನ ಎರಡು ದಿಗ್ಗಜ ತಂಡಗಳ ನಡುವಣ ಫಿಫಾ ವಿಶ್ವಕಪ್ ಸೆಮಿಫೈನಲ್ ಹಣಾಹಣಿಗೆ ವೇದಿಕೆ ಸಿದ್ಧಗೊಂಡಿದೆ. ವಿಶ್ವಕಪ್ ಇತಿಹಾಸದಲ್ಲೇ ಪ್ರಬಲ ಆಕ್ರಮಣದ ಅಸ್ತ್ರಗಳನ್ನು ಹೊಂದಿರುವ ಫ್ರಾನ್ಸ್‌ನ ಬತ್ತಳಿಕೆಯನ್ನು ನಿಷ್ಫಲಗೊಳಿಸಲು ಸ್ಪೇನ್‌ ಮಂಗವಾರ ರಾತ್ರಿ ಪ್ರಯತ್ನಿಸಲಿದೆ.

ಯುರೋಪಿನ ಹಾಲಿ ಚಾಂಪಿಯನ್ ತಂಡವು ಅರ್ಲಿಂಗ್ಟನ್‌ನ ಎಟಿ ಆಯಂಡ್ ಟಿ ಕ್ರೀಡಾಂಗಣದಲ್ಲಿ ದಿದಿಯರ್ ದೇಶಾಂಪ್ ಅವರ ಫ್ರೆಂಚ್‌ ಪಡೆಯನ್ನು ಎದುರಿಸಲಿದೆ. ಹಲವರು ಈ ಪಂದ್ಯವನ್ನು 'ಫೈನಲ್‌ಗಿಂತ ಮೊದಲಿನ ಫೈನಲ್' ಎಂದು ಬಣ್ಣಿಸಿದ್ದಾರೆ.

ಫ್ರಾನ್ಸ್‌ನ ದಾಳಿ ಪಡೆಯ ನೇತೃತ್ವವನ್ನು ನಾಯಕ ಕೈಲಿಯನ್ ಎಂಬಾಪೆ ವಹಿಸಿದ್ದಾರೆ. ಅವರು ಆರು ಪಂದ್ಯಗಳಿಂದ ಎಂಟು ಗೋಲುಗಳನ್ನು ಗಳಿಸಿ ಉಜ್ವಲ ಫಾರ್ಮ್‌ನಲ್ಲಿದ್ದಾರೆ. ಬಯಾನ್ ಮ್ಯೂನಿಕ್ ತಾರೆ ಮೈಕೆಲ್ ಒಲಿಸೆ, ಬ್ಯಾಲನ್‌ ಡೋರ್ ವಿಜೇತ ಉಸ್ಮಾನ್ ಡೆಂಬೆಲೆ, ಪ್ಯಾರಿಸ್‌ ಸೇಂಟ್‌ ಜರ್ಮೇನ್‌ಗೆ ಆಡುವ ಬ್ರಾಡ್ಲಿ ಬರ್ಕೊಲಾ ಮತ್ತು ಡೆಸಿರೆ ಡುವೆ ಅವರು ಎಂಬಾಪೆ ಅವರಿಗೆ ಮುಂಚೂಣಿಯಲ್ಲಿ ಬಲ ನೀಡಲಿದ್ದಾರೆ.

ಸಾಂಘಿಕ ಆಟಕ್ಕೆ ಒತ್ತು

ವೈಯಕ್ತಿಕ ಕೌಶಲದ ಆಟ ಫ್ರೆಂಚ್‌ ಪಡೆಯ ಅಸ್ತ್ರವಾದರೆ, ಹೆಚ್ಚು ಅಬ್ಬರವಿಲ್ಲದೇ ಫೈನಲ್ ತಲುಪಿರುವ ಸ್ಪೇನ್‌ ಸಾಂಘಿಕ ಆಟಕ್ಕೆ ಒತ್ತು ನೀಡಿದೆ. ತಂಡ ಸುಸಜ್ಜಿತ ಯಂತ್ರದ ರೀತಿ ಕಾರ್ಯನಿರ್ವಹಿಸುತ್ತಿದೆ. ರೊದ್ರಿ, ಪೆದ್ರಿ ಮತ್ತು ಫ್ಯಾಬಿಯನ್ ರುಯಿಝ್ ಅವರ ನಡುವಣ 'ನಾಜೂಕಾದ ಪಾಸ್‌ಗಳು' ತಂಡದ ಆಟದಲ್ಲಿ ಗಮನಸೆಳೆದಿವೆ. ಹದಿಹರೆಯದ ತಾರೆ ಲಮಿನ್ ಯಮಾಲ್ ಅವರೂ ದಾಳಿಯ ಮುಂಚೂಣಿಯಲ್ಲಿದ್ದಾರೆ.

ವಿಭಿನ್ನ ಶೈಲಿಯ ಆಟವಾಡುವ ಎರಡು ತಂಡಗಳ ಮುಖಾಮುಖಿಯಲ್ಲಿ ಸ್ಪೇನ್ ತಂಡವು, ಫ್ರಾನ್ಸ್‌ನ ಆಕ್ರಮಣದ ಸಂಪರ್ಕಗಳನ್ನು ಕಡಿಯಲು ಶ್ರಮ ಹಾಕುವುದು ಖಚಿತ. ಚೆಂಡು ಎದುರಾಳಿಯ ಹಿಡಿತದಲ್ಲಿರದಂತೆ ತಡೆಯುವುದರ ಜೊತೆಜೊತೆಯಲ್ಲೇ ಫ್ರಾನ್ಸ್‌ ರಕ್ಷಣೆ ವಿಭಾಗದ ಮೇಲೆ ಶ್ರಮ ಹಾಕಲೂ ಪ್ರಯತ್ನಿಸಲಿದೆ. ಈ ವಿಶ್ವಕಪ್‌ನಲ್ಲಿ ಫ್ರಾನ್ಸ್ ರಕ್ಷಣಾ ವಿಭಾಗಕ್ಕೆ ಗಂಭೀರ ಸತ್ವಪರೀಕ್ಷೆ ಈವರೆಗೆ ಎದುರಾಗಿಲ್ಲ.

'ಲಾ ರೋಜಾ' ತಂಡವು, 2025ರ ಯುಇಎಫ್‌ಎ ನೇಷನ್ಸ್ ಲೀಗ್‌ನಲ್ಲಿ ಫ್ರಾನ್ಸ್ ತಂಡವನ್ನು 5-4 ಗೋಲುಗಳಿಂದ ಸೋಲಿಸಿತ್ತು. ಯುರೋಪಿಯನ್‌ ಚಾಂಪಿಯನ್‌ಷಿಪ್‌ನಲ್ಲೂ ಸ್ಪೇನ್ ತಂಡ ಸೆಮಿಫೈನಲ್‌ನಲ್ಲಿ 2-1 ಗೆಲುವು ಪಡೆದಿತ್ತು.

'ಸ್ಪೇನ್‌ಗೆ ಹೆದರುವಂಥದ್ದು ಏನೂ ಇಲ್ಲ. ಸಹಜವಾಗಿ ಎರಡೂ ತಂಡಗಳು ಅತ್ಯುತ್ತಮವಾಗಿವೆ. ಏನಾಗುತ್ತದೆಯೇ ನೋಡೋಣ. ಆದರೆ ನಮಗೆ ಭಯವಿಲ್ಲ' ಎಂದು ಯಮಾಲ್ ಹೋದ ಶುಕ್ರವಾರ ಬೆಲ್ಜಿಯಂ ಎದುರು ಗೆಲುವಿನ ನಂತರ ಪ್ರತಿಕ್ರಿಯಿಸಿದ್ದರು. ಅವರು ಸೋಮವಾರ 19ನೇ ವರ್ಷಕ್ಕೆ ಕಾಲಿಟ್ಟರು. ಸ್ಪೇನ್ ಕೋಚ್‌ ಡೆ ಲಾ ಪುಯೆಂಟೆ ಕೂಡ ಈ ಮಾತಿಗೆ ಧ್ವನಿಗೂಡಿಸಿದರು

ಫ್ರಾನ್ಸ್ ತಂಡದ ಹೆಸರಾಂತ ದಾಳಿಗಾರರು, ಸ್ಪೇನ್ ರಕ್ಷಣಾ ವಿಭಾಗದ ಮೇಲೆ ಮುಗಿಬೀಳಲು ಪ್ರಯತ್ನಿಸಲಿದ್ದಾರೆ. ಸ್ಪೇನ್ ಇದುವರೆಗೆ ಒಂದೇ ಗೋಲು (ಬೆಲ್ಜಿಯಂ ಎದುರು ಕ್ವಾರ್ಟರ್‌ಫೈನಲ್‌ನಲ್ಲಿ) ಬಿಟ್ಟುಕೊಟ್ಟಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani