ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಫಿಫಾ ವಿಶ್ವಕಪ್ ಪ್ರವೇಶಿಸಿದ ಪುಟ್ಟ ದೇಶ: ಐಸ್‌ಲ್ಯಾಂಡ್ ದಾಖಲೆ ಮುರಿದ ಕ್ಯುರಸಾವೊ
ಒಂದು ಸಾಲಿನಲ್ಲಿಕೇವಲ 1.58 ಲಕ್ಷ ಜನಸಂಖ್ಯೆಯ ಪುಟ್ಟ ದ್ವೀಪ ರಾಷ್ಟ್ರ ಕುರಾಕಾವೊ ಫಿಫಾ ವಿಶ್ವಕಪ್‌ಗೆ ಅರ್ಹತೆ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿ, ಹೊಸ ದಾಖಲೆ ನಿರ್ಮಿಸಿದೆ.ಪ್ರಮುಖ ಅಂಶಗಳು• ವಿಶ್ವಕಪ್ ದಾಖಲೆ ನಿರ್ಮಾಣ1,58,000 ಜನಸಂಖ್ಯೆಯ ಕುರಾಕಾವೊ ವಿಶ್ವಕಪ್‌ಗೆ ಅರ್ಹತೆ ಪಡೆದ ವಿಶ್ವದ ಅತ್ಯಂತ ಸಣ್ಣ ದೇಶವಾಗಿದ್ದು, ಐಸ್‌ಲ್ಯಾಂಡ್‌ನ ಹಿಂದಿನ ದಾಖಲೆಯನ್ನು ಮುರಿದಿದೆ.• ವಲಸಿಗ ಆಟಗಾರರ ತಂತ್ರದೇಶದಲ್ಲಿ ವೃತ್ತಿಪರ ತರಬೇತಿ ವ್ಯವಸ್ಥೆ ಇಲ್ಲದ ಕಾರಣ, ನೆದರ್‌ಲೆಂಡ್ಸ್‌ನಲ್ಲಿ ನೆಲೆಸಿರುವ ಕುರಾಕಾವೊ ಮೂಲದ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವ ತಂತ್ರವನ್ನು ಫೆಡರೇಶನ್ ಬಳಸಿದೆ.• ರಾಜಕೀಯ ಮತ್ತು ಭೌಗೋಳಿಕ ಸ್ಥಿತಿಕುರಾಕಾವೊ ಸ್ವಾಯತ್ತ ದೇಶವಾಗಿದ್ದರೂ, ಮಿಲಿಟರಿ ಮತ್ತು ವಿದೇಶಾಂಗ ವ್ಯವಹಾರಗಳನ್ನು ನೆದರ್‌ಲೆಂಡ್ಸ್ ನಿರ್ವಹಿಸುತ್ತದೆ ಮತ್ತು ಇಲ್ಲಿನ ಜನರು ಡಚ್ ಪಾಸ್‌ಪೋರ್ಟ್ ಹೊಂದಿದ್ದಾರೆ.• ಆರ್ಥಿಕತೆಯ ಮೇಲೆ ಪ್ರಭಾವತೈಲ ಸಂಸ್ಕರಣಾಗಾರ ಮುಚ್ಚಿ ಮತ್ತು ಕೋವಿಡ್‌ನಿಂದ ಕುಸಿದಿದ್ದ ಆರ್ಥಿಕತೆಗೆ, ವಿಶ್ವಕಪ್ ಅರ್ಹತೆಯು ಪ್ರವಾಸೋದ್ಯಮದ ಮೂಲಕ ಹೊಸ ಭರವಸೆ ನೀಡಿದೆ.• ಸ್ಥಳೀಯರ ಅಭೂತಪೂರ್ವ ಬೆಂಬಲಆಟಗಾರರು ನೆದರ್‌ಲೆಂಡ್ಸ್‌ನಲ್ಲಿ ಬೆಳೆದಿದ್ದರೂ ಅವರ ಸಾಂಸ್ಕೃತಿಕ ನಂಟು ಮತ್ತು ಭಾಷಾ ಗೌರವದಿಂದಾಗಿ, ದೇಶದ ಜನತೆ ಅವರನ್ನು ಹೀರೋಗಳಂತೆ ಬರಮಾಡಿಕೊಂಡಿದ್ದಾರೆ.ಪ್ರಮುಖ ಅಂಕಿಅಂಶಗಳು1,58,000ಕುರಾಕಾವೊದ ಜನಸಂಖ್ಯೆ3.5 ಲಕ್ಷಐಸ್‌ಲ್ಯಾಂಡ್‌ನ ಜನಸಂಖ್ಯೆ11,000ಕ್ರೀಡಾಂಗಣದ ಸಾಮರ್ಥ್ಯಇತ್ತೀಚೆಗೆಅರುಬಾ ಪಂದ್ಯದ ಸಮಯಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಫುಟ್‌ಬಾಲ್ ವಿಶ್ವಕಪ್ ಪಂದ್ಯಾವಳಿಯ ಸುಮಾರು 100 ವರ್ಷಗಳ ಇತಿಹಾಸದಲ್ಲಿ ಇದುವರೆಗೆ ಒಟ್ಟು 80 ದೇಶಗಳು (ಈಗ ಅಸ್ತಿತ್ವದಲ್ಲಿಲ್ಲದ ಕೆಲವು ದೇಶಗಳೂ ಸೇರಿ) ಸ್ಪರ್ಧಿಸಿವೆ. ಈ ಬಾರಿ ಹೊಸದಾಗಿ ನಾಲ್ಕು ದೇಶಗಳು ಈ ಸಾಲಿಗೆ ಸೇರಿದ್ದು, ಅವುಗಳಲ್ಲಿ ಕ್ಯುರಸಾವೊ ಕೂಡ ಒಂದು. ವೆನೆಜುವೆಲಾ ಕರಾವಳಿಯಿಂದ 40 ಮೈಲಿ ದೂರದಲ್ಲಿರುವ ಈ ಪುಟ್ಟ ದ್ವೀಪ 1,58,000 ಜನಸಂಖ್ಯೆಯನ್ನು ಹೊಂದಿದೆ. ದೇಶ ಚಿಕ್ಕದಾಗಿದ್ದರೂ ಜಾಗತಿಕ ಮಟ್ಟದಲ್ಲಿ ಹೇಗೆ ಸಾಧನೆ ಮಾಡಬಹುದು ಎಂಬುದನ್ನು ಇದು ತೋರಿಸಿಕೊಟ್ಟಿದೆ.
ಈ ಸಾಧನೆ ಸಾಧ್ಯವಾಗಿದ್ದು ಹೇಗೆ?:
ವಲಸಿಗ ಆಟಗಾರರ ಆಯ್ಕೆ: ಕ್ಯುರಸಾವೊ ದೇಶದಲ್ಲಿ ವೃತ್ತಿಪರ ಲೀಗ್‌ಗಳಾಗಲಿ ಅಥವಾ ಉತ್ತಮ ತರಬೇತಿ ಕೇಂದ್ರಗಳಾಗಲಿ ಇಲ್ಲ. ಹಾಗಾಗಿ, ಕ್ಯುರಸಾವೊದ ಫುಟ್‌ಬಾಲ್ ಫೆಡರೇಶನ್ ಒಂದು ಹೊಸ ತಂತ್ರ ಬಳಸಿತು. ನೆದರ್‌ಲೆಂಡ್ಸ್‌ನಲ್ಲಿ ನೆಲೆಸಿರುವ, ಆದರೆ ಕ್ಯುರಸಾವೊ ಮೂಲದ ವೃತ್ತಿಪರ ಆಟಗಾರರನ್ನು ಹುಡುಕಿ ತಂಡಕ್ಕೆ ಸೇರಿಸಿಕೊಂಡಿತು.
ಕಳೆದ ವರ್ಷದಿಂದ ಫೆಡರೇಶನ್‌ನ ಅಧ್ಯಕ್ಷರಾಗಿರುವ ಗಿಲ್ಬರ್ಟ್ ಮಾರ್ಟಿನಾ ಅವರು, ಆಟಗಾರನ ಪೋಷಕರು ಅಥವಾ ತಾತ-ಅಜ್ಜಿ ಹೀಗೆ.. ಕನಿಷ್ಠ ಒಬ್ಬರಾದರೂ ಈ ದ್ವೀಪದಲ್ಲಿ ಜನಿಸಿರಬೇಕು ಎಂಬುದು ಮಾತ್ರ ತಂಡಕ್ಕೆ ಆಯ್ಕೆಯಾಗಲು ಇದ್ದ ಏಕೈಕ ಅರ್ಹತೆ ಎಂದು ಹೇಳಿದ್ದರು.
ನೆದರ್‌ಲೆಂಡ್ಸ್ ನಂಟು:
ತಂಡದ ನಾಯಕ ಲಿಯಾಂಡ್ರೊ ಬಕುನಾ ಸೇರಿದಂತೆ ಬಹುತೇಕ ಎಲ್ಲಾ ಆಟಗಾರರು ನೆದರ್‌ಲೆಂಡ್ಸ್‌ನಲ್ಲಿ ಹುಟ್ಟಿ ಅಲ್ಲಿಯೇ ಬೆಳೆದವರು. ತಂಡದ ಒಬ್ಬ ಆಟಗಾರ 'ತಾಹಿತ್ ಚಾಂಗ್' ಮಾತ್ರ ಈ ದ್ವೀಪದಲ್ಲಿ ಜನಿಸಿದವರು.
ಇತಿಹಾಸ ಮತ್ತು ಭೌಗೋಳಿಕ ಹಿನ್ನೆಲೆ:
ವೆನೆಜುವೆಲಾ ಕರಾವಳಿಯಿಂದ 40 ಮೈಲಿ ದೂರದಲ್ಲಿರುವ ಈ ಪುಟ್ಟ ದ್ವೀಪ 1,58,000 ಜನಸಂಖ್ಯೆಯನ್ನು ಹೊಂದಿದೆ. 2010ರಲ್ಲಿ 'ನೆದರ್ಲೆಂಡ್ಸ್ ಆಯಂಟಿಲಸ್' ವಿಘಟನೆಯಾದ ನಂತರ, ಕ್ಯುರಸಾವೊ ಒಂದು ಸ್ವಾಯತ್ತ (ಸ್ವಯಂ ಆಡಳಿತ ಹೊಂದಿದ) ದೇಶವಾಯಿತು.
ಇದು ತನ್ನದೇ ಆದ ಪ್ರಧಾನ ಮಂತ್ರಿ, ಸಂಸತ್ತು ಮತ್ತು ಕಾನೂನುಗಳನ್ನು ಹೊಂದಿದೆ. ಆದರೆ ಡಚ್ ರಾಜನೇ (ವಿಲ್ಲೆಮ್-ಅಲೆಕ್ಸಾಂಡರ್) ದೇಶದ ಮುಖ್ಯಸ್ಥನಾಗಿರುತ್ತಾರೆ. ಅತ್ಯುನ್ನತ ನ್ಯಾಯಾಲಯವು ನೆದರ್‌ಲೆಂಡ್ಸ್‌ನ ಸುಪ್ರೀಂ ಕೋರ್ಟ್ ಆಗಿದೆ. ಅದರ ಮಿಲಿಟರಿ ಹಾಗೂ ವಿದೇಶಾಂಗ ವ್ಯವಹಾರಗಳನ್ನು ದಿ ಹೇಗ್‌ನಿಂದ (ನೆದರ್‌ಲೆಂಡ್ಸ್ ರಾಜಧಾನಿ) ನಿರ್ವಹಿಸಲಾಗುತ್ತದೆ. ಇಲ್ಲಿನ ಜನರು ಡಚ್ ಪಾಸ್‌ಪೋರ್ಟ್ ಹೊಂದಿದ್ದಾರೆ.
ಶಿಕ್ಷಣ ಮತ್ತು ಕೆಲಸಕ್ಕಾಗಿ ಇಲ್ಲಿನ ಅರ್ಧದಷ್ಟು ಜನರು ನೆದರ್‌ಲೆಂಡ್ಸ್‌ನಲ್ಲಿಯೇ ವಾಸಿಸುತ್ತಿದ್ದಾರೆ. ಅಲ್ಲಿನ ಶಾಲೆಗಳಲ್ಲಿ ನಾಲ್ಕು ಭಾಷೆಗಳನ್ನು (ಡಚ್, ಇಂಗ್ಲಿಷ್, ಸ್ಪ್ಯಾನಿಷ್ ಮತ್ತು ಸ್ಥಳೀಯ ಭಾಷೆಯಾದ ಪಾಪಿಯಮೆಂಟೊ) ಕಲಿಸುವುದರಿಂದ ಜನರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.
ಆರ್ಥಿಕತೆಗೆ ಚೈತನ್ಯ:
ವಿಶ್ವಕಪ್‌ನಲ್ಲಿ ಅರ್ಹತೆ ಪಡೆದಿರುವುದು ದೇಶಕ್ಕೆ ಆರ್ಥಿಕತೆಗೆ ಚೈತನ್ಯ ನೀಡಿದೆ ಎನ್ನುತ್ತಾರೆ ಇಲ್ಲಿನ ಕ್ರೀಡಾ ಸಚಿವರು. 2019ರಲ್ಲಿ ವೆನೆಜುವೆಲಾದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಯು ದ್ವೀಪದಲ್ಲಿದ್ದ ಏಕೈಕ ತೈಲ ಸಂಸ್ಕರಣಾಗಾರವನ್ನು ಮುಚ್ಚಿದ್ದರಿಂದ ಸಾವಿರಾರು ಜನ ಉದ್ಯೋಗ ಕಳೆದುಕೊಂಡರು. ಬಳಿಕ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಕ್ಯುರಸಾವೊದ ಪ್ರವಾಸೋದ್ಯಮ ಹಾಗೂ ಆರ್ಥಿಕತೆ ತೀವ್ರ ಪೆಟ್ಟು ಬಿದ್ದಿತ್ತು.
ವಿಶ್ವದಲ್ಲಿ ಕ್ಯುರಸಾವೊ ಎಲ್ಲಿದೆ ಎಂದು ಯಾರಿಗೂ ಗೊತ್ತಿರಲಿಲ್ಲ, ಆದರೆ ಈಗ ವಿಶ್ವಕಪ್‌ನಿಂದಾಗಿ ಅದು ಸಾಧ್ಯವಾಗಿದೆ ಎನ್ನುತ್ತಾರೆ ಕ್ಯುರಸಾವೊದ ಶಿಕ್ಷಣ, ವಿಜ್ಞಾನ, ಸಂಸ್ಕೃತಿ ಮತ್ತು ಕ್ರೀಡಾ ಸಚಿವ ಸಿಥ್ರೀ ವ್ಯಾನ್ ಹೇಡೋರ್ನ್.
ವಿಶ್ವಕಪ್ ಪ್ರವೇಶವು ದೇಶದ ಪ್ರವಾಸೋದ್ಯಮಕ್ಕೆ ಅದರಲ್ಲೂ ವಿಶೇಷವಾಗಿ ಅಮೆರಿಕದ ಪ್ರವಾಸಿಗರನ್ನು ಆಕರ್ಷಿಸಲು ದೊಡ್ಡ ಮಟ್ಟದಲ್ಲಿ ನೆರವಾಗುತ್ತಿದೆ ಎಂದಿದ್ದಾರೆ.
ದೇಶದಾದ್ಯಂತ ಹಬ್ಬದ ವಾತಾವರಣ:
ದ್ವೀಪದಾದ್ಯಂತ ತಂಡದ ಧ್ವಜಗಳು, ಬ್ಯಾನರ್‌ಗಳು ರಾರಾಜಿಸುತ್ತಿವೆ. ಆಟಗಾರರು ನೆದರ್‌ಲೆಂಡ್ಸ್‌ನಲ್ಲಿ ಬೆಳೆದಿದ್ದರೂ ಸ್ಥಳೀಯ ಭಾಷೆಯಾದ 'ಪಾಪಿಯಮೆಂಟೊ' ಮಾತನಾಡುತ್ತಾರೆ ಮತ್ತು ಇಲ್ಲಿನ ಸಂಸ್ಕೃತಿಯನ್ನು ಗೌರವಿಸುವುದರಿಂದ, ಸ್ಥಳೀಯರು ಅವರನ್ನು ತಮ್ಮದೇ ದೇಶದ ಹೀರೋಗಳಂತೆ ಬರಮಾಡಿಕೊಂಡಿದ್ದಾರೆ.
ಇಂದು ಜರ್ಮನಿ ಸವಾಲು:
ಸ್ಟನ್ ವಿಲ್ಲಾದ ಮಿಡ್‌ಫೀಲ್ಡರ್ ಲಿಯಾನ್ಡ್ರೊ ಬೆಕುನಾ, ಅವರ ತಮ್ಮ ಜುನಿನ್ಹೊ, ಶೆಫೀಲ್ಡ್ ಯುನೈಟೆಡ್‌ನ ಫಾರ್ವರ್ಡ್ ತಹಿತ್ ಚೊಂಗ್ ಅವರು ಭಾನುವಾರ ಫಿಫಾ ವಿಶ್ವಕಪ್ ಪಂದ್ಯದಲ್ಲಿ ಪ್ರಬಲ ಜರ್ಮನಿ ತಂಡವನ್ನು ಎದುರಿಸಲಿರುವ ಸಂದರ್ಭವು ಪುಟ್ಟ ದ್ವೀಪ ಕ್ಯುರಸಾವೊ ಪಾಲಿಗೆ ಚಾರಿತ್ರಿಕ ಕ್ಷಣ. ಹೌಸ್ಟನ್‌ನಲ್ಲಿ ರಾತ್ರಿ 10.30ಕ್ಕೆ (ಭಾರತೀಯ ಕಾಲಮಾನ) ನಡೆಯಲಿರುವ ಈ ಪಂದ್ಯದ ಮೂಲಕ, ಈ ಪುಟ್ಟ ದ್ವೀಪದ ತಂಡವು ವಿಶ್ವಕಪ್‌ಗೆ ಪದಾರ್ಪಣೆ ಮಾಡಲಿದೆ.
ಈ ತಂಡದ ಕೋಚ್ ಡಿಕ್ ಅಡ್ವೊಕಾಟ್ ಅವರಿಗೆ 78 ವರ್ಷ. ಅತಿ ಚಿಕ್ಕ ತಂಡದ ಈ ಕೋಚ್ ಹಾಲಿ ವಿಶ್ವಕಪ್‌ನ ಅತಿ ಹಿರಿಯ ತರಬೇತುದಾರ ಎನಿಸಿದ್ದಾರೆ. ಅವರು 2002ರ ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಿದ್ದ ದಕ್ಷಿಣ ಕೊರಿಯಾ ತಂಡಕ್ಕೆ ಕೋಚ್ ಆಗಿದ್ದರು. ಈ ಬಾರಿ ತಂಡ ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲೂ ಅವರ ಪಾತ್ರ ಮಹತ್ವದ್ದು.
ದೇಶದ ಗಾತ್ರವಲ್ಲ, ಸಾಧಿಸುವ ಛಲ ಮುಖ್ಯ ಎಂಬುದನ್ನು ಈ ಪುಟ್ಟ ದ್ವೀಪ ರಾಷ್ಟ್ರ ಜಗತ್ತಿಗೆ ತೋರಿಸಿಕೊಟ್ಟಿದೆ.
ಆಧಾರ: ದಿ ನ್ಯೂಯಾರ್ಕ್ ಟೈಮ್ಸ್ ಹಾಗೂ ಫಿಫಾ ವೆಬ್‌ಸೈಟ್
ಪುಟ್ಟ ದ್ವೀಪ ಕ್ಯುರಸಾವೊಕ್ಕೆ ಇಂದು ಜರ್ಮನಿ ಸವಾಲು
