Dailyhunt Logo
  • Light mode
    Follow system
    Dark mode
    • Play Story
    • App Story
ಫಿಫಾ ವಿಶ್ವಕಪ್ ಟೂರ್ನಿ: ಮೆಸ್ಸಿ ದಾಖಲೆಯ ಸನಿಹ ಎಂಬಾಪೆ

ಫಿಫಾ ವಿಶ್ವಕಪ್ ಟೂರ್ನಿ: ಮೆಸ್ಸಿ ದಾಖಲೆಯ ಸನಿಹ ಎಂಬಾಪೆ

ಸ್ಟ್ ರುದರ್‌ಫೋರ್ಡ್ (ಎಪಿ): ಫ್ರಾನ್ಸ್‌ ತಂಡದ ಕೈಲಿಯನ್ ಎಂಬಾಪೆ ಇದೀಗ ಅರ್ಜೆಂಟೀನಾದ ತಾರೆ ಲಯೊನೆಲ್ ಮೆಸ್ಸಿ ಅವರ ಮೇಲೆ ಒತ್ತಡವನ್ನು ಹೆಚ್ಚಿಸಿದ್ದಾರೆ. ಫಿಫಾ ವಿಶ್ವಕಪ್ ಟೂರ್ನಿಗಳಲ್ಲಿ ಒಟ್ಟು 18 ಗೋಲು ಹೊಡೆದಿರುವ ಅವರು ಮೆಸ್ಸಿಯ ದಾಖಲೆಯಿಂದ ಕೇವಲ ಒಂದು ಹೆಜ್ಜೆಯಷ್ಟೇ ಹಿಂದಿದ್ದಾರೆ.

ಆದ್ದರಿಂದ ಈ ಇಬ್ಬರು ಸೂಪರ್‌ ಸ್ಠಾರ್ ಆಟಗಾರರ ಪೈಪೋಟಿಯು ಕುತೂಹಲ ಕೆರಳಿಸಿದೆ.

ಮಂಗಳವಾರ ರಾತ್ರಿ ನಡೆದ 32ರ ಘಟ್ಟದ ಪಂದ್ಯದಲ್ಲಿ ಎಂಬಾಪೆ ಅವರ ಅಮೋಘ ಆಟದ ಬಲದಿಂದ ಫ್ರಾನ್ಸ್ ತಂಡವು 3-0 ಗೋಲುಗಳಿಂದ ಸ್ವೀಡನ್ ಎದುರು ಜಯಿಸಿತು. ಎಂಬಾಪೆ ಅವರು 45 ನೇ ಮತ್ತು 74ನೇ ನಿಮಿಷಗಳಲ್ಲಿ ಗೋಲು ಗಳಿಸಿದರು. ಮೆಸ್ಸಿ (19 ಗೋಲು) ಅವರ ದಾಖಲೆಯ ಸನಿಹಕ್ಕೆ ಬಂದರು. ಪ್ರಸಕ್ತ ಟೂರ್ನಿಯಲ್ಲಿ ಇಬ್ಬರೂ ತಲಾ ಆರು ಗೋಲು ಗಳಿಸಿದ್ದಾರೆ. ಫ್ರಾನ್ಸ್ ತಂಡದ ಬ್ರಾಡ್ಲಿ ಬಾರ್ಕೊಲಾ ಅವರು 53ನೇ ನಿಮಿಷದಲ್ಲಿ ಗೋಲು ಹೊಡೆದರು. 16 ಘಟ್ಟದ ಪಂದ್ಯದಲ್ಲಿ ಫ್ರಾನ್ಸ್ ತಂಡವು ಪರಗ್ವೆಯನ್ನು ಎದುರಿಸಲಿದೆ.

ಸಂಜೆ 5 ಗಂಟೆ (ಸ್ಥಳೀಯ ಕಾಲಮಾನ) ಪಂದ್ಯ ಆರಂಭವಾದಾಗ 32 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು. ಮೊದಲಾರ್ಧದ ಪಾನೀಯ ವಿರಾಮ ನೀಡಿದ ಸಂದರ್ಭದಲ್ಲಿ ಫ್ರಾನ್ಸ್ ಆಟಗಾರ ಲುಕಾಸ್ ಡಿಗ್ನೆ ಅವರು ಸ್ಪ್ರಿಂಕಲರ್‌ ಬಳಸಿದರು.

ಪ್ರಥಮಾರ್ಧದ ಮುನ್ನ ಎಂಬಾಪೆ ಒಂದು ಗೋಲು ಹೊಡೆದು ತಂಡಕ್ಕೆ ಮುನ್ನಡೆ ಒದಗಿಸಿದ್ದರು. ಔಸ್‌ಮೆನ್ ಡೆಂಬೆಲೆ ಅವರ ನೆರವಿನಿಂದ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ ಎಂಬಾಪೆ, ಸ್ವೀಡನ್‌ನ ವಿಕ್ಟರ್ ಗೈಕೆರೆಸ ಮತ್ತು ಗೋಲ್‌ಕೀಪರ್ ಜೇಕಬ್ ವೈಡೆಲ್ ಝೆಟರ್‌ಸ್ಟ್ರಾಮ್ ಅವರನ್ನು ವಂಚಿಸಿ ಗೋಲು ಗಳಿಸಿದರು. ತಕ್ಷಣವೇ ಎಂಬಾಪೆ ಅವರು ಡಿಡೀರ್ ದೆಸ್‌ಚಾಂಪ್ಸ್‌ ಅವರ ಬಳಿ ಹೋಗಿ ಆಲಂಗಿಸಿಕೊಂಡರು.

'ವೇಗ ಮತ್ತು ದಿಕ್ಕು ನಿರ್ದೇಶನದ ನಿಖರತೆಯ ಸೊಗಸಾದ ಗೋಲು ಇದು' ಎಂದು ಫ್ರಾನ್ಸ್ ಕೋಚ್ ಗ್ರಹಾಂ ಪಾಟರ್ ಹೇಳಿದರು.

ವಿಶ್ವಕಪ್ ನಾಕೌಟ್ ಹಂತಗಳಲ್ಲಿ ಒಟ್ಟು ಹತ್ತು ಗೋಲು ಹೊಡೆದ ಸಾಧನೆಯೂ ಎಂಬಾಪೆಯದ್ದಾಯಿತು. ಅವರು ಬ್ರೆಜಿಲ್‌ನ ದಿಗ್ಗಜರಾದ ಲಿಯೊನಿಡಾಸ್ ಮತ್ತು ರೊನಾಲ್ಡೊ ಅವರ (ತಲಾ 9) ದಾಖಲೆ ಮೀರಿದರು.

ಎಂಬಾಪೆ ಅವರು ವಿಶ್ವಕಪ್ ಇತಿಹಾಸದಲ್ಲಿ 18 ಪಂದ್ಯಗಳನ್ನು ಆಡಿದ್ದಾರೆ. ಅದರಿಂದ 18 ಗೋಲು ಗಳಿಸಿದ್ದಾರೆ.

ಕೇನ್‌ ಸಾಹಸ: ಕಾಂಗೊ ಮಣಿಸಿ ಪ್ರಿಕ್ವಾರ್ಟರ್‌ಗೆ ಇಂಗ್ಲೆಂಡ್‌

ಅಟ್ಲಾಂಟಾ (ಎಎಫ್‌ಪಿ): ಇಂಗ್ಲೆಂಡ್‌ ತಂಡದ ತಾರಾ ಆಟಗಾರ ಹ್ಯಾರಿ ಕೇನ್‌ ಅವರು ಫುಟ್‌ಬಾಲ್‌ ವಿಶ್ವಕಪ್‌ನಲ್ಲಿ 13ನೇ ಗೋಲು ಹೊಡೆದರು. ಬುಧವಾರ ಅವರು ಗಳಿಸಿದ ಅವಳಿ ಗೋಲುಗಳ ಸಾಹಸದಿಂದ ಇಂಗ್ಲೆಂಡ್‌ ತಂಡವು 32ರ ಘಟ್ಟದಲ್ಲಿ 2-1ರಿಂದ ಕಾಂಗೊ ರಿಪಬ್ಲಿಕ್‌ ತಂಡವನ್ನು ಸೋಲಿಸಿತು.

ಅದರೊಂದಿಗೆ, ಥಾಮಸ್ ತುಚೆಲ್‌ ಮಾರ್ಗದರ್ಶನದ ಇಂಗ್ಲೆಂಡ್‌ ತಂಡವು ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಜಂಟಿ ಆತಿಥೇಯ ಮೆಕ್ಸಿಕೊ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಭಾನುವಾರ ಮೆಕ್ಸಿಕೊ ಸಿಟಿಯ 'ಅಝಟೆಕಾ' ಕ್ರೀಡಾಂಗಣದಲ್ಲಿ ನಡೆಯಲಿದೆ.

ವಿಂಗರ್‌ ಬ್ರಯಾನ್‌ ಸೀಪೆಂಗಾ ಅವರು ಪಂದ್ಯದ 7ನೇ ನಿಮಿಷದಲ್ಲಿ ಕಾಲ್ಚಳಕ ಮೆರೆದು ಇಂಗ್ಲೆಂಡ್‌ ಆಟಗಾರರನ್ನು ಬೆರಗುಗೊಳಿಸಿದರು.
ಕಾಂಗೊ ತಂಡದ ರಕ್ಷಣಾ ವಿಭಾಗದ ಆಟಗಾರರೂ ಸಂಘಟಿತವಾಗಿ ಆಡಿದರು. ಪಂದ್ಯದ 75ನೇ ನಿಮಿಷದವರೆಗೂ ಎದುರಾಳಿ ತಂಡಕ್ಕೆ ಗೋಲು ಗಳಿಸಲು ಅವಕಾಶ ನೀಡಲಿಲ್ಲ.

ಆಗ, 'ತ್ರೀ ಲಯನ್ಸ್‌' ತಂಡದ ಫಾರ್ವರ್ಡ್‌ ಆಟಗಾರ ಕೇನ್‌ 'ಹೆಡ್ಡರ್‌' ಮೂಲಕ ಗೋಲು ಗಳಿಸಿ ಸಮಬಲ ಸಾಧಿಸಿದರು. ಪಂದ್ಯ ಮುಗಿಯಲು 5 ನಿಮಿಷಗಳಿದ್ದಾಗ ಮತ್ತೊಮ್ಮೆ ಗೋಲ್‌ಕೀಪರ್‌ನನ್ನು ವಂಚಿಸಿ, ತಮ್ಮ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.

Dailyhunt
Disclaimer: This content has not been generated, created or edited by Dailyhunt. Publisher: Prajavani