ಈಸ್ಟ್ ರುದರ್‌ಫೋರ್ಡ್ (ಅಮೆರಿಕ): ಯುರೋಪಿನ ಚಾಂಪಿಯನ್ ಸ್ಪೇನ್ ಮತ್ತು ದಕ್ಷಿಣ ಅಮೆರಿಕದ ಚಾಂಪಿಯನ್ ಅರ್ಜೆಂಟೀನಾ ತಂಡಗಳು ಕತಾರ್‌ನಲ್ಲಿ ಈ ವರ್ಷದ ಆರಂಭದಲ್ಲಿ ಎದುರಾಗ ಬೇಕಿತ್ತು. ಆದರೆ ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಅದು ಸಾಧ್ಯ ವಾಗಲಿಲ್ಲ. ಈಗ ವಿಶ್ವ ಫುಟ್‌ಬಾಲ್‌ನ ಮಹೋನ್ನತ ವೇದಿಕೆಯಲ್ಲಿ ಭಾನುವಾರ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಇವೆರಡು ತಂಡಗಳು ಮುಖಾಮುಖಿ ಯಾಗಲಿವೆ.
ಇಲ್ಲಿ ವಿಶ್ವಕಪ್ ಪ್ರಶಸ್ತಿ ಜೊತೆಗೆ ಪ್ರತಿಷ್ಠೆಯೂ ಪಣಕ್ಕಿದೆ.
ಫೈನಲ್ ಪಂದ್ಯವು ಸ್ಪೇನ್‌ನ ಲವಲವಿಕೆಯ ಆಟ ಮತ್ತು ಅರ್ಜೆಂಟೀನಾದ ಗಟ್ಟಿ ಮನೋಬಲದ ನಡುವಣ ಹೋರಾಟವಾಗಿದೆ. ವೃತ್ತಿಜೀವನದ ಅಂಚಿನಲ್ಲಿರುವ ಲಯನೊಲ್ ಮೆಸ್ಸಿ ಮತ್ತು ಭವಿಷ್ಯದ ಸೂಪರ್ ಸ್ಟಾರ್ ಲಮಿನ್ ಯಮಾಲ್ ನಡುವಣ ಜಿದ್ದಾಜಿದ್ದಿ ಎಂದೂ ಬಿಂಬಿಸಲಾಗಿದೆ. ಅವರ ನಡುವೆ 20 ವರ್ಷಗಳ ಅಂತರವಿದೆ!
ಈ ಪಂದ್ಯ ಫುಟ್‌ಬಾಲ್ ಉಸಿರಾಡುವ ಅರ್ಜೆಂಟೀನಾ ಮತ್ತು ಕರಾರುವಾಕ್ ಆಟವಾಡುವ ಸ್ಪೇನ್ ನಡುವಣ ಹಣಾಹಣಿ ಸಹ. ಮೆಸ್ಸಿ ಅವರಲ್ಲಿರುವ ಕೌಶಲ ಹುರಿಗಟ್ಟಿದ್ದು ಸ್ಪೇನ್‌ನ ಬಾರ್ಸಿಲೋನಾ ಕ್ಲಬ್‌ಗೆ ಆಡುವಾಗ ಎಂಬುದು ವಿಶೇಷ.
ನಾಲ್ಕು ವರ್ಷಗಳ ಹಿಂದೆ ಕತಾರ್‌ನಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಅರ್ಜೆಂಟೀನಾ ತಂಡವು ಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ ಅಮೋಘ ಜಯಗಳಿಸಿತ್ತು. ಆಗ 35 ವರ್ಷ ವಯಸ್ಸಿನ ಮೆಸ್ಸಿ ಟ್ರೋಫಿ ಎತ್ತಿಹಿಡಿದು ತಮ್ಮ ದೀರ್ಘಕಾಲದ ಕನಸನ್ನು ಸಾಕಾರಗೊಳಿಸಿದ್ದರು. ಈಗ ಅರ್ಜೆಂಟೀನಾಕ್ಕೆ ಮತ್ತೊಮ್ಮೆ ವಿಶ್ವಕಪ್ ಗೆಲ್ಲುವ ಉಜ್ವಲ ಅವಕಾಶ ಒದಗಿದೆ. ಅಂದಿನಂತೆ ಈಗಲೂ ಮೆಸ್ಸಿ ಅವರದ್ದು ವಯಸ್ಸಿಗೆ ಮೀರಿದ ಆಟ. ಎದುರಾಳಿ ರಕ್ಷಣೆ ಆಟಗಾರರನ್ನು ತಪ್ಪಿಸಿ ಮುನ್ನಡೆಯುವ ಚಾಕಚಕ್ಯತೆ, ಕೌಶಲ ಸ್ವಲ್ಪವೂ ಕಳೆಗುಂದಿಲ್ಲ.
ಲಯೊನೆಲ್ ಸ್ಕಾಲೋನಿ ಮಾರ್ಗದರ್ಶನದ ಅರ್ಜೆಂಟೀನಾ ತಂಡದ ಫೈನಲ್ ಹಾದಿ ಕಲ್ಲುಮುಳ್ಳಿನದ್ದು. ಈಗಿನ ತಂಡದಲ್ಲಿರುವ 17 ಮಂದಿ 2022ರ ವಿಶ್ವಕಪ್‌ನಲ್ಲಿ ಆಡಿದ್ದರೂ ಗೆಲುವಿಗೆ ಬೆವರು ಹರಿಸಬೇಕಾಯಿತು. ಪದಾರ್ಪಣೆ ಮಾಡಿದ್ದ ಕೇಪ್ ವರ್ಡ್ (ಕೇಬೊ ವೆರ್ಡೆ) ಎದುರು ಹೆಚ್ಚುವರಿ ಅವಧಿಯವರೆಗೆ ಆಡಬೇಕಾಯಿತು. ಈಜಿಪ್ಟ್, ಸ್ವಿಟ್ಜರ್ಲೆಂಡ್, ಇಂಗ್ಲೆಂಡ್ ವಿರುದ್ಧ ಪಂದ್ಯಗಳಲ್ಲೂ ಗೆಲುವು ಒಲಿದಿದ್ದು ಅಂತಿಮ ಕ್ಷಣಗಳಲ್ಲಿ.
ಕೆಲವು ಪಂದ್ಯಗಳಲ್ಲಿ ಸಾಂಘಿಕ ಆಟ ಕೈಹಿಡಿಯಿತು. ಆದರೆ ಮೆಸ್ಸಿ ಮೋಡಿಯೇ ನಿರ್ಣಾಯಕವಾಯಿತು. ಗೋಲುಗಳು, ಅಸಿಸ್ಟ್‌ಗಳು ತಂಡದ ಯಶಸ್ಸಿನ ಯಾತ್ರೆಯಲ್ಲಿ ಪಾತ್ರ ವಹಿಸಿದವು. ಬ್ರೆಜಿಲ್‌ನ ಪೆಲೆ ಮತ್ತು ಮೆಸ್ಸಿ ಇವರಲ್ಲಿ ಯಾರು ಶ್ರೇಷ್ಠ ಎಂಬ ಮುಗಿಯದ ಚರ್ಚೆಯ ಅಧ್ಯಾಯಕ್ಕೆ ಮತ್ತೊಂದು ಪುಟ ಸೇರ್ಪಡೆಯಾಯಿತು. ಎಂಟು ಗೋಲುಗಳನ್ನು ಗಳಿಸಿರುವ ಅವರು 'ಚಿನ್ನದ ಬೂಟಿನ' ರೇಸಿನಲ್ಲಿದ್ದಾರೆ.

37 ಪಂದ್ಯಗಳಲ್ಲಿ ಅಜೇಯ: ಅರ್ಜೆಂಟೀನಾ ತಂಡದ ಕೆಚ್ಚು ಮತ್ತು ಗಟ್ಟಿ ಮನೋಬಲದ ಆಟ ಒಂದೆಡೆಯಾದರೆ, ಇನ್ನೊದೆಡೆ ಸ್ಪೇನ್ ತನ್ನ ಪಂದ್ಯಗಳನ್ನು ಗೆದ್ದಿದ್ದು ಶಾಂತಚಿತ್ತದಿಂದ. ಗೋಲಿನ ಅವಕಾಶಗಳು ಒಲಿದಾಗ ಅವುಗಳನ್ನು ಗಬಕ್ಕನೇ ಬಾಚಿಕೊಂಡಿತು. ರಕ್ಷಣೆಯ ಕೋಟೆ ಹೆಚ್ಚುಕಮ್ಮಿ ಅಭೇದ್ಯವಾಗಿತ್ತು. ತಂಡ ಇದುವರೆಗೆ ಬಿಟ್ಟುಕೊಟ್ಟಿರುವುದು ಒಂದು ಗೋಲು ಮಾತ್ರ. ನಾಯಕ ರಾದ್ರಿ ಅವರಿರುವ ಮಿಡ್‌ಫೀಲ್ಡ್ ಸ್ಪೇನ್‌ನ ಶಕ್ತಿಯೂ ಸಹ.
ಸ್ಪೇನ್ 37 ಪಂದ್ಯಗಳಿಂದ ಅಜೇಯವಾಗುಳಿದಿದೆ. ಎರಡನೇ ಬಾರಿ ವಿಶ್ವಕಪ್ ಗೆದ್ದರೆ, ಇಟಲಿ ತಂಡದ (2018 ರಿಂದ 2021ರವರೆಗಿನ ಅವಧಿಯಲ್ಲಿ 37 ಪಂದ್ಯಗಳಲ್ಲಿ ಅಜೇಯ) ದಾಖಲೆ ಮುರಿಯಲು ಅವಕಾಶವಿದೆ.
ಯುರೋಪಿಯನ್ ಚಾಂಪಿಯನ್‌ಷಿಪ್ ಕಿರೀಟ ಗೆದ್ದುಕೊಂಡ ಸ್ಪೇನ್ ತಂಡವು, ಬುಕ್ಕಿಗಳ ನೆಚ್ಚಿನ ತಂಡವಾಗಿ ಉತ್ತರ ಅಮೆರಿಕಕ್ಕೆ ಬಂದಿಳಿದಿತ್ತು. ಒತ್ತಡವನ್ನು ಅಪಾಯ ಎಂದು ಈ ತಂಡ ಪರಿಗಣಿಸೇ ಇಲ್ಲ.
ಲೂಯಿಸ್ ದೆಲಾ ಫ್ಯುಯಂತ್ ಅವರ ಮಾರ್ಗದರ್ಶನದಲ್ಲಿ ತಂಡವು ಸುಸಜ್ಜಿತ ಯಂತ್ರದ ರೀತಿ ಕಾರ್ಯನಿರ್ವಹಿಸುತ್ತಿದೆ. ಆಟಗಾರರಲ್ಲಿ ಹೊಂದಾಣಿಕೆಯಿದೆ. ಎದುರಾಳಿ ಆಟಗಾರರಿಗೆ 'ದಿಗ್ಬಂಧನ'ದ ಭಾವನೆ ಮೂಡಿಸುವ ರೀತಿಯಲ್ಲಿ ತಂತ್ರ ರೂಪಿಸುತ್ತಿದೆ. ಫ್ರಾನ್ಸ್ ತಂಡಕ್ಕೆ ಇದರ ಅನುಭವವಾಗಿದೆ.
ಸ್ಪೇನ್‌ನ ಪಾಸಿಂಗ್ ಮತ್ತು ಪೊಸಿಷನಲ್ ಆಟ ಎದುರಾಳಿ ತಂಡಗಳ ಉಸಿರುಗಟ್ಟಿಸುವ ರೀತಿಯಲ್ಲಿದೆ. ತಂತ್ರಗಾರಿಕೆಯಲ್ಲೂ ಹೊಸತನ ಕಾಣಿಸುತ್ತಿದೆ. ಇದರಲ್ಲಿ ಹೆಚ್ಚಿನ ಪಾತ್ರ ವಹಿಸಿರುವುದು ಲಮಿನ್ ಯಮಾಲ್ ಅವರು. 16ನೇ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಪದಾರ್ಪಣೆ ಮಾಡಿರುವ ಈ ಪ್ರತಿಭಾ ಸಂಪನ್ನ ಆಟಗಾರ ದಾಖಲೆಗಳ ಜೊತೆ ನಿರೀಕ್ಷೆಗಳನ್ನು ಮೀರಿದ್ದಾರೆ. ಅವರನ್ನು ಮೆಸ್ಸಿ ಜೊತೆ ಹೋಲಿಸುವ ಕೆಲಸವೂ ಶುರುವಾಗಿದೆ.
ಸ್ಪೇನ್ ತಂಡವು, ಎಂದಿನಂತೆ ಚೆಂಡನ್ನು ಹಿಡಿತದಲ್ಲಿರಿಸಲು, ನಿಯಂತ್ರಣ ಸಾಧಿಸಲು ಯತ್ನಿಸಲಿದೆ. ಅರ್ಜೆಂಟೀನಾ ತಂಡದ ಮುಂದಿರುವ ಗುರಿ ಎದುರಾಳಿಯ ಆಟದ ಲಯ ತಪ್ಪಿಸುವುದು. ಇದೆಲ್ಲದರ ಮಧ್ಯೆ ಮೆಸ್ಸಿ ಅವರು ಕೊನೆಯ ವಿಶ್ವಕಪ್‌ನಲ್ಲಿ ತಮ್ಮ ವಿದಾಯಕ್ಕಿಂತ ಹೆಚ್ಚಾಗಿ ಮತ್ತೊಮ್ಮೆ ಚಮತ್ಕಾರದ ಆಟದ ಕಡೆಗೇ ಗಮನ ಹರಿಸಲಿದ್ದಾರೆ.
64 ವರ್ಷಗಳ ನಂತರ, ಪ್ರಶಸ್ತಿ ಉಳಿಸಿಕೊಂಡ ಮೊದಲ ತಂಡವಾಗುವ ಹಂಬಲದಲ್ಲಿ ಮೆಸ್ಸಿ ಸಾರಥ್ಯದ ಅರ್ಜೆಂಟೀನಾ ತಂಡ ಇದೆ. 1958 ಮತ್ತು 1962ರಲ್ಲಿ ಬ್ರೆಜಿಲ್ ವಿಶ್ವಕಪ್ ಗೆದ್ದನಂತರ ಯಾವುದೇ ತಂಡ ಸತತ ಎರಡು ಬಾರಿ ಟ್ರೋಫಿ ಗೆದ್ದಿಲ್ಲ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260719-43-1487759175

