ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಫಿಫಾ ವಿಶ್ವಕಪ್‌ಗೆ ಟ್ರಂಪ್ 'ರೆಡ್ ಕಾರ್ಡ್': ಅಮೆರಿಕ ವಲಸೆ ನೀತಿಯೇ ದೊಡ್ಡ ಸಮಸ್ಯೆ
ಒಂದು ಸಾಲಿನಲ್ಲಿಅಮೆರಿಕದ ಕಠಿಣ ವಲಸೆ ನೀತಿಯಿಂದಾಗಿ ಫಿಫಾ ವಿಶ್ವಕಪ್ ಆಟಗಾರರು ಮತ್ತು ಅಭಿಮಾನಿಗಳು ತೊಂದರೆಗೀಡಾಗಿದ್ದು, ಜಾಗತಿಕ ಕ್ರೀಡಾ ಹಬ್ಬವು ರಾಜಕೀಯ ನಿರ್ಬಂಧಗಳ ಸುಳಿಗೆ ಸಿಲುಕಿದೆ.ಪ್ರಮುಖ ಅಂಶಗಳು• ವಲಸೆ ನೀತಿಯಿಂದ ಆತಂಕಅಮೆರಿಕದ ಕಠಿಣ ವಲಸೆ ಕಾನೂನುಗಳು ವಿದೇಶಿ ಆಟಗಾರರು, ರೆಫ್ರಿಗಳು ಮತ್ತು ಅಭಿಮಾನಿಗಳಲ್ಲಿ ಭೀತಿ ಉಂಟುಮಾಡಿವೆ, ಇದು ಕ್ರೀಡಾ ಸಂಭ್ರಮದ ಮೇಲೆ ಪರಿಣಾಮ ಬೀರಿದೆ.• ಮಾನವ ಹಕ್ಕುಗಳ ಉಲ್ಲಂಘನೆಅಧ್ಯಕ್ಷ ಟ್ರಂಪ್ ಅವರ ವಲಸೆ ಮತ್ತು ಕಸ್ಟಮ್ಸ್ ಜಾರಿ ಸಂಸ್ಥೆ (ICE) ವ್ಯಾಪಕ ಬಂಧನಗಳನ್ನು ನಡೆಸುತ್ತಿರುವುದು ಮತ್ತು ವಲಸಿಗರನ್ನು ಗುರಿಯಾಗಿಸುತ್ತಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.• ವೀಸಾ ನಿರಾಕರಣೆ ಸಮಸ್ಯೆ39 ದೇಶಗಳ ಮೇಲೆ ಪ್ರಯಾಣ ನಿರ್ಬಂಧ ವಿಧಿಸಿರುವುದರಿಂದ, ಅಂತರಾಷ್ಟ್ರೀಯ ತಂಡಗಳ ಸಿಬ್ಬಂದಿ ಮತ್ತು ಅಭಿಮಾನಿಗಳಿಗೆ ವೀಸಾ ಸಿಗದೆ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ.• ಫಿಫಾದ ದ್ವಂದ್ವ ನಿಲುವುಎಲ್ಲರಿಗೂ ಸುರಕ್ಷಿತ ವಾತಾವರಣ ಕಲ್ಪಿಸುವುದಾಗಿ ಭರವಸೆ ನೀಡಿದ್ದ ಫಿಫಾ, ಟ್ರಂಪ್ ಅವರಿಗೆ ಶಾಂತಿ ಪ್ರಶಸ್ತಿ ನೀಡಿರುವುದು ಮತ್ತು ಅಮೆರಿಕದ ವೀಸಾ ನೀತಿಯ ಕುರಿತು ಮೌನವಹಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.• ತಂಡಗಳು ಮತ್ತು ಸಿಬ್ಬಂದಿಗೆ ತೊಡಕುಇರಾನ್ ತಂಡದ ಹೋಟೆಲ್ ಸ್ಥಳಾಂತರ, ಸೋಮಾಲಿಯಾದ ರೆಫ್ರಿಗೆ ಪ್ರವೇಶ ನಿರಾಕರಣೆ ಮತ್ತು ಇರಾಕ್ ತಂಡದ ತಪಾಸಣೆಯಂತಹ ಘಟನೆಗಳು ಕ್ರೀಡಾ ಸಮಗ್ರತೆಗೆ ಧಕ್ಕೆ ತಂದಿವೆ.ಪ್ರಮುಖ ಅಂಕಿಅಂಶಗಳು1,67,000ಬಂಧನಕ್ಕೊಳಗಾದ ಜನರ ಸಂಖ್ಯೆ39ದೇಶಗಳ ಮೇಲೆ ಪ್ರಯಾಣ ನಿರ್ಬಂಧ2025ರ ಜನವರಿಯಿಂದ 2026ರ ಮಾರ್ಚ್ಬಂಧನಗಳ ಅವಧಿಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಪ್ರವಾಸಿಗರಿಗೆ ಎಚ್ಚರಿಕೆ:
ಅಮೆರಿಕದ 21 ಫುಟ್‌ಬಾಲ್ ಅಭಿಮಾನಿ ಸಂಘಟನೆಗಳು ಮತ್ತು ನಾಗರಿಕ ಹಕ್ಕುಗಳ ಸಂಸ್ಥೆಗಳು ಜಂಟಿಯಾಗಿ ಪ್ರವಾಸಿಗರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿವೆ. ಟ್ರಂಪ್ ಸರ್ಕಾರದ ಸರ್ವಾಧಿಕಾರಿ ಧೋರಣೆಯಿಂದಾಗಿ ಅಮೆರಿಕಕ್ಕೆ ಬರುವ ವಿದೇಶಿ ಪ್ರವಾಸಿಗರು, ಅದರಲ್ಲೂ ಮುಖ್ಯವಾಗಿ ಅಲ್ಪಸಂಖ್ಯಾತರು, ವಲಸಿಗರು ಮತ್ತು ಎಲ್‌ಜಿಬಿಟಿಕ್ಯೂ ಸಮುದಾಯದವರು ತೊಂದರೆಗೆ ಸಿಲುಕುವ ಸಾಧ್ಯತೆ ಇದೆ ಎಂದು ಅವು ಎಚ್ಚರಿಸಿವೆ.
ಇಂಗ್ಲೆಂಡ್‌ನ ಪ್ರಮುಖ ಫುಟ್‌ಬಾಲ್ ಅಭಿಮಾನಿ ಸಂಘಟನೆಯಾದ 'ಥ್ರೀ ಲಯನ್ಸ್ ಪ್ರೈಡ್', ಅಮೆರಿಕದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಖಂಡಿಸಿದ್ದು, ತಾವು ಅಲ್ಲಿ ನಡೆಯುವ ಪಂದ್ಯಗಳಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದೆ. ಅಷ್ಟೇ ಅಲ್ಲದೆ, ಅಮೆರಿಕಕ್ಕೆ ಪ್ರಯಾಣಿಸುವುದರಿಂದ ಉಂಟಾಗಬಹುದಾದ ಅಪಾಯಗಳ ಬಗ್ಗೆ ತನ್ನ ಸದಸ್ಯರಿಗೂ ಎಚ್ಚರಿಕೆ ನೀಡಿದೆ.
1,67,000 ಜನರ ಬಂಧನ:
2025ರ ಜನವರಿಯಲ್ಲಿ ಟ್ರಂಪ್ ಅಧಿಕಾರಕ್ಕೆ ಬಂದಾಗಿನಿಂದ, ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ ಸಂಸ್ಥೆ (ಐಸಿಇ) ವಲಸಿಗರು ಮತ್ತು ಪ್ರತಿಭಟನಾಕಾರರನ್ನು ಗುರಿಯಾಗಿಸಿಕೊಂಡಿದೆ. ' ಮಾನವ ಹಕ್ಕುಗಳ ಕಣ್ಗಾವಲು ಸಂಸ್ಥೆಯ' ವರದಿಯ ಪ್ರಕಾರ, 2025ರ ಜನವರಿಯಿಂದ 2026ರ ಮಾರ್ಚ್‌ವರೆಗೆ ವಿಶ್ವಕಪ್ ಪಂದ್ಯಗಳು ನಡೆಯಲಿರುವ ಅಮೆರಿಕದ 11 ನಗರಗಳ ವ್ಯಾಪ್ತಿಯಲ್ಲೇ ಸುಮಾರು 1,67,000 ಜನರನ್ನು ಐಸಿಇ ಅಧಿಕಾರಿಗಳು ಬಂಧಿಸಿದ್ದಾರೆ.
ಕಳೆದ ಬೇಸಿಗೆಯಲ್ಲಿ, ನ್ಯೂಜೆರ್ಸಿಯ ಮೆಟ್‌ಲೈಫ್ ಕ್ರೀಡಾಂಗಣದಲ್ಲಿ (ಇದೇ ಮೈದಾನದಲ್ಲಿ ಈ ಬಾರಿಯ ವಿಶ್ವಕಪ್ ಫೈನಲ್ ಪಂದ್ಯವೂ ನಡೆಯಲಿದೆ) ನಡೆದ ಫಿಫಾ ಕ್ಲಬ್ ವಿಶ್ವಕಪ್ ಫೈನಲ್ ಪಂದ್ಯವನ್ನು ನೋಡಲು ತನ್ನ 10 ಮತ್ತು 14 ವರ್ಷದ ಮಕ್ಕಳೊಂದಿಗೆ ಬಂದಿದ್ದ ವ್ಯಕ್ತಿಯೊಬ್ಬನನ್ನು ಐಸಿಇ ಬಂಧಿಸಿತ್ತು.
ಕುಟುಂಬದ ಫೋಟೊ ತೆಗೆಯಲು ಆತ ಡ್ರೋನ್ ಬಳಸಿದ್ದ ಕಾರಣಕ್ಕೆ ಆತನನ್ನು ಬಂಧಿಸಿದ ಪೊಲೀಸರು ಬಳಿಕ ಐಸಿಇ ವಶಕ್ಕೆ ಒಪ್ಪಿಸಿದ್ದರು. ಮೂರು ತಿಂಗಳುಗಳ ಕಾಲ ಬಂಧನದಲ್ಲಿಟ್ಟು ಬಳಿಕ ಅವರನ್ನು ದೇಶದಿಂದ ಗಡೀಪಾರು ಮಾಡಲಾಗಿತ್ತು. ಫುಟ್‌ಬಾಲ್ ಪಂದ್ಯವನ್ನು ನೋಡಿ ಸಂಭ್ರಮಿಸಬೇಕಿದ್ದ ಆ ಪುಟ್ಟ ಮಕ್ಕಳು, ತಮ್ಮ ತಂದೆಯನ್ನು ಕೈಕೋಳ ತೊಡಿಸಿ ಕರೆದುಕೊಂಡು ಹೋಗುತ್ತಿದ್ದ ದೃಶ್ಯವನ್ನು ನೋಡಿ ಕಣ್ಣೀರು ಹಾಕಿದ್ದರು.
ಮುಂದುವರಿದು, ಸರ್ಕಾರದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕುವ ವಿದೇಶಿ ಅಭಿಮಾನಿಗಳಿಗೆ ಮತ್ತು ಪತ್ರಕರ್ತರಿಗೆ ಅಮೆರಿಕ ಪ್ರವೇಶ ನಿರಾಕರಿಸಲಾಗುತ್ತಿದೆ.
ವಿಶ್ವಕಪ್ ಪಂದ್ಯಗಳ ವೇಳೆ ಎಲ್ಲರಿಗೂ ರಕ್ಷಣೆ ನೀಡುವುದಾಗಿ ಹೇಳಿದ್ದ, ಫಿಫಾ ಸಂಸ್ಥೆಯು, ಅದರ ಅನ್ವಯ ನಿಯಮಾವಳಿಯನ್ನು ದೃಢಪಡಿಸಿತ್ತು. ಅದರಂತೆ, ವಿಶ್ವಕಪ್ ಪಂದ್ಯಗಳನ್ನು ಆಯೋಜಿಸುವ ನಗರಗಳು ಪ್ರತಿಯೊಬ್ಬ ವ್ಯಕ್ತಿ ಮತ್ತು ಸಮುದಾಯವನ್ನು ಪ್ರೀತಿಯಿಂದ ಸ್ವಾಗತಿಸಬೇಕು ಹಾಗೂ ಎಲ್ಲರಿಗೂ ಸುರಕ್ಷಿತ ವಾತಾವರಣವನ್ನು ನಿರ್ಮಿಸಿಕೊಡಬೇಕು ಎಂದು ಹೇಳಿತ್ತು. ಆದರೆ ವೀಸಾ ವಿಚಾರದಲ್ಲಿ ಅಮೆರಿಕದ ನಿಯಮಗಳ ಮುಂದೆ ಮೌನಕ್ಕೆ ಶರಣಾಗಿದೆ. ಅಲ್ಲದೆ, ಇತ್ತೀಚೆಗಷ್ಟೇ ಅಧ್ಯಕ್ಷ ಟ್ರಂಪ್ ಅವರಿಗೆ ಫಿಫಾ ಶಾಂತಿ ಪ್ರಶಸ್ತಿ (FIFA Peace Prize)ನೀಡಿ ಗೌರವಿಸಿರುವುದು ಸಾರ್ವಜನಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಜಗತ್ತಿನಾದ್ಯಂತ ಏಕತೆ ಮತ್ತು ಶಾಂತಿಯನ್ನು ಸ್ಥಾಪಿಸಲು ಟ್ರಂಪ್ ಅವರು ತೋರಿರುವ ಅಚಲ ಬದ್ಧತೆಯನ್ನು ಶ್ಲಾಘಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಫಿಫಾ ಹೇಳಿತ್ತು. ಇದು ನನ್ನ ಜೀವನದ ಅತ್ಯಂತ ಶ್ರೇಷ್ಠ ಗೌರವಗಳಲ್ಲಿ ಒಂದು ಎಂದು ಪ್ರಶಸ್ತಿ ಪಡೆದ ಟ್ರಂಪ್ ಬಣ್ಣಿಸಿದ್ದರು. ಫಿಫಾದ ಈ ದ್ವಂದ್ವ ನಿಲುವನ್ನು ಮಾನವ ಹಕ್ಕುಗಳ ಸಂಘಟನೆಗಳು ತೀವ್ರವಾಗಿ ಟೀಕಿಸಿವೆ.
ರೆಫ್ರಿಗೆ ಪ್ರವೇಶ ನಿರಾಕರಣೆ:
ಸೋಮಾಲಿಯಾದ ಖ್ಯಾತ ಫಿಫಾ ರೆಫ್ರಿ ಒಮರ್ ಅರ್ತಾನ್ ಅವರಿಗೆ ಉಗ್ರ ಸಂಘಟನೆಗಳ ಜೊತೆ ಸಂಬಂಧವಿದೆ ಎಂಬ ಆಧಾರರಹಿತ ಆರೋಪ ಹೊರಿಸಿ ಅಮೆರಿಕ ಪ್ರವೇಶಿಸದಂತೆ ತಡೆದು ವಾಪಸ್ ಕಳುಹಿಸಲಾಗಿದೆ.
ಇರಾಕ್ ತಂಡಕ್ಕೆ ತಪಾಸಣೆ:
ಇರಾಕ್ ಫುಟ್‌ಬಾಲ್ ತಂಡದ ಆಟಗಾರನೊಬ್ಬನನ್ನು ಚಿಕಾಗೋ ವಿಮಾನ ನಿಲ್ದಾಣದಲ್ಲಿ ಗಂಟೆಗಳ ಕಾಲ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಅಲ್ಲದೇ ಅವರ ಜೊತೆಗಿದ್ದ ಫೋಟೋಗ್ರಾಫರ್‌ಗೆ ಅಮೆರಿಕ ಪ್ರವೇಶ ನಿರಾಕರಿಸಲಾಗಿದೆ. ವಿಮಾನ ನಿಲ್ದಾಣದ ರನ್‌ವೇ ಮೇಲೆಯೇ ತಪಾಸಣೆ ನಡೆಸುತ್ತಿರುವ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ಭಾರಿ ಟೀಕೆಗೆ ಒಳಗಾಗಿವೆ.
ಇರಾನ್ ತಂಡದ ಹೋಟೆಲ್ ಸ್ಥಳಾಂತರ:
ಅಮೆರಿಕ ಸರ್ಕಾರದ ಕಠಿಣ ನಿಯಮಗಳ ಹಿನ್ನೆಲೆಯಲ್ಲಿ, ಇರಾನ್ ತಂಡವು ಅಮೆರಿಕದಲ್ಲಿ ತಂಗಲು ಅನುಮತಿ ಸಿಗದೆ ತನ್ನ ವಾಸ್ತವ್ಯವನ್ನು ಮೆಕ್ಸಿಕೋಗೆ ಬದಲಾಯಿಸಿದೆ. ಅಲ್ಲದೆ, ಇರಾನ್ ಫುಟ್‌ಬಾಲ್ ಫೆಡರೇಶನ್ ಅಧ್ಯಕ್ಷ ಸೇರಿದಂತೆ ಹಲವು ಸಿಬ್ಬಂದಿಗೆ ವೀಸಾ ನಿರಾಕರಿಸಲಾಗಿದೆ.
ಅಭಿಮಾನಿಗಳಿಗೆ ಸಿಗದ ವೀಸಾ:
ಟ್ರಂಪ್ ಸರ್ಕಾರವು ಸದ್ಯ 39 ದೇಶಗಳ ಮೇಲೆ ಪೂರ್ಣ ಅಥವಾ ಭಾಗಶಃ ಪ್ರಯಾಣ ನಿರ್ಬಂಧ ಹೇರಿದೆ. ಇದರಿಂದಾಗಿ ಪಂದ್ಯದ ಟಿಕೆಟ್ ಮತ್ತು ಹೋಟೆಲ್ ಬುಕಿಂಗ್ ಹೊಂದಿದ್ದರೂ ಸಹ ಸ್ಕಾಟ್ಲೆಂಡ್, ಮೊರಾಕ್ಕೋ ಸೇರಿದಂತೆ ಹಲವು ದೇಶಗಳ ನೂರಾರು ಅಭಿಮಾನಿಗಳಿಗೆ ವೀಸಾ ಸಿಕ್ಕಿಲ್ಲ.
ವಿಶ್ವಕಪ್‌ಗೆ ಅರ್ಹತೆ ಪಡೆದಿರುವ ಇರಾನ್, ಹೈತಿ, ಕೋಟ್ ಡಿ ಐವರಿ (ಐವರಿ ಕೋಸ್ಟ್) ಮತ್ತು ಸೆನೆಗಲ್ ದೇಶಗಳು ಈ ಕಠಿಣ ನಿಯಮಗಳ ನೇರ ಪರಿಣಾಮ ಎದುರಿಸುತ್ತಿವೆ.
ಲಕ್ಷಾಂತರ ರೂಪಾಯಿ ಕಳೆದುಕೊಂಡ ಅಭಿಮಾನಿಗಳು:
ಸ್ಕಾಟ್ಲೆಂಡ್ ಮತ್ತು ಮೊರಾಕ್ಕೋ ಸೇರಿದಂತೆ ಹಲವು ದೇಶಗಳ ಅಭಿಮಾನಿಗಳು ಪಂದ್ಯದ ಟಿಕೆಟ್, ಹೋಟೆಲ್ ಮತ್ತು ವಿಮಾನ ಬುಕಿಂಗ್‌ಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರೂ, ಕೊನೆ ಗಳಿಗೆಯಲ್ಲಿ ಅಮೆರಿಕ ಅವರಿಗೆ ವೀಸಾ ನಿರಾಕರಿಸಿದೆ ಅಥವಾ ವೀಸಾವನ್ನು ರದ್ದುಗೊಳಿಸಿದೆ.
ವಿಶ್ವಸಂಸ್ಥೆ ಮತ್ತು ಮಾನವ ಹಕ್ಕುಗಳ ಸಂಘಟನೆಗಳ ಆಕ್ರೋಶ:
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ ವೋಲ್ಕರ್ ಟರ್ಕ್ ಅವರು ಅಮೆರಿಕದ ಈ ವರ್ತನೆಯನ್ನು ಖಂಡಿಸಿದ್ದಾರೆ. ವಲಸೆ ನೀತಿಗಳು ಕ್ರೀಡಾಕೂಟದ ಉತ್ಸಾಹವನ್ನು ಕುಗ್ಗಿಸುತ್ತಿವೆ. ಹಾಗಾಗಿ ಈ ಬಗ್ಗೆ ಮರುಪರಿಶೀಲನೆ ನಡೆಸುವಂತೆ ಆಗ್ರಹಿಸಿದ್ದಾರೆ. ಅತ್ತ ಫಿಫಾ ಸಂಸ್ಥೆಯು, ವೀಸಾ ನೀಡುವುದು ಆಯಾ ದೇಶದ ಸಾರ್ವಭೌಮ ಹಕ್ಕು, ಇದರಲ್ಲಿ ನಮ್ಮ ಹಸ್ತಕ್ಷೇಪವಿಲ್ಲ ಎಂದು ಹೇಳಿ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ಇದು ಕ್ರೀಡಾ ಪ್ರೇಮಿಗಳಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.
ವಲಸೆ ನೀತಿ ಸಮರ್ಥಿಸಿಕೊಂಡ ಟ್ರಂಪ್:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ದೇಶದ ಕಠಿಣ ವೀಸಾ ಮತ್ತು ವಲಸೆ ನೀತಿಗಳನ್ನು ಸಮರ್ಥಿಸಿಕೊಂಡಿದ್ದಾರೆ. ವಿಶ್ವಕಪ್‌ಗಾಗಿ ಕೇವಲ 'ಸರಿಯಾದ ವ್ಯಕ್ತಿಗಳನ್ನು' ಮಾತ್ರ ಅಮೆರಿಕದೊಳಗೆ ಬಿಡಲು ನಮ್ಮ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದ್ದಾರೆ. ದೇಶದ ಭದ್ರತೆ ಮತ್ತು ವಲಸೆ ನಿಯಮಗಳಿಗೆ ಧಕ್ಕೆ ತರದೇ ಪ್ರವಾಸಿಗರಿಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದೂ ತಿಳಿಸಿದ್ದಾರೆ. ಟ್ರಂಪ್ ಸರ್ಕಾರದ ಈ ಕಠಿಣ ನಿಲುವಿಗೆ ಜಾಗತಿಕ ಮಟ್ಟದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಯಾವುದೇ ತಾರತಮ್ಯವಿಲ್ಲದೆ ವೀಸಾ ನೀಡಬೇಕು ಎಂಬ ಫಿಫಾ (FIFA) ಸಂಸ್ಥೆಯ ನಿಯಮಗಳಿಗೆ ಅಮೆರಿಕದ ಈ ವರ್ತನೆ ತದ್ವಿರುದ್ಧವಾಗಿದೆ ಎಂದು ಕ್ರೀಡಾ ವಿಶ್ಲೇಷಕರು ಟೀಕಿಸಿದ್ಧಾರೆ. ಇದರಿಂದಾಗಿ ಇಂದಿನಿಂದ ಆರಂಭವಾಗಲಿರುವ ವಿಶ್ವಕಪ್ ಕೇವಲ ಆಟದ ಕಾರಣಕ್ಕಷ್ಟೇ ಅಲ್ಲದೆ, ಅಮೆರಿಕದ ರಾಜಕೀಯ ಮತ್ತು ವಲಸೆ ನಿಯಮಗಳ ಕಾರಣದಿಂದಾಗಿಯೂ ಜಗತ್ತಿನಾದ್ಯಂತ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.
ಈ ಬಾರಿ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊ ದೇಶಗಳ ಜಂಟಿ ಅತಿಥ್ಯದಲ್ಲಿ 23ನೇ ಫಿಫಾ ವಿಶ್ವಕಪ್ ಟೂರ್ನಿ ನಡೆಯಲಿದೆ. ಟೂರ್ನಿಯ ಒಟ್ಟು 104 ಪಂದ್ಯಗಳ ಪೈಕಿ ಹೆಚ್ಚಿನ ಪಂದ್ಯಗಳು ಅಮೆರಿಕದಲ್ಲೇ ನಡೆಯುತ್ತಿವೆ.
ಆಧಾರ: ಫೋರ್ಬ್ಸ್, ರಾಯಿಟರ್ಸ್, ಎನ್‌ಪಿಆರ್
ಫಿಫಾ: ಹೆಚ್ಚು ಟ್ರೋಫಿ ಗೆದ್ದವರು, ಗೋಲು ಗಳಿಸಿದವರು, ಪ್ರಶಸ್ತಿ ಮೊತ್ತ...
