Dailyhunt Logo
  • Light mode
    Follow system
    Dark mode
    • Play Story
    • App Story
FIFA World Cup: ಸ್ವಿಟ್ಜರ್ಲೆಂಡ್, ಕೆನಡಾ, ಮೊರಕ್ಕೊ, ಬೊಸ್ನಿಯಾ ನಾಕೌಟ್‌ಗೆ

FIFA World Cup: ಸ್ವಿಟ್ಜರ್ಲೆಂಡ್, ಕೆನಡಾ, ಮೊರಕ್ಕೊ, ಬೊಸ್ನಿಯಾ ನಾಕೌಟ್‌ಗೆ

ಟ್ಲಾಂಟಾ: 2026ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಸ್ವಿಟ್ಜರ್ಲೆಂಡ್, ಕೆನಡಾ, ಮೊರಕ್ಕೊ ಹಾಗೂ ಬೊಸ್ನಿಯಾ ತಂಡಗಳು ಅಂತಿಮ 32ರ ಹಂತಕ್ಕೆ ಪ್ರವೇಶಿಸಿದೆ.

ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಕೆನಡಾ ವಿರುದ್ಧ 2-1 ಗೋಲುಗಳ ಅಂತರದ ಗೆಲುವು ಸಾಧಿಸಿರುವ ಸ್ವಿಟ್ಜರ್ಲೆಂಡ್ ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟಿತು.

ಈ ಸೋಲಿನ ಹೊರತಾಗಿಯೂ 'ಬಿ' ಗುಂಪಿನಲ್ಲಿ ಸ್ವಿಟ್ಜರ್ಲೆಂಡ್ ಜೊತೆಗೆ ಕೆನಡಾ ಹಾಗೂ ಬೊಸ್ನಿಯಾ ಸಹ ಅಂತಿಮ 32ರ ಹಂತಕ್ಕೆ ಪ್ರವೇಶಿಸಿದೆ.

ಮತ್ತೊಂದೆಡೆ 'ಸಿ' ಗುಂಪಿನಲ್ಲಿ ಬ್ರೆಜಿಲ್ ಜೊತೆಗೆ ಮೊರಕ್ಕೊ ನಾಕೌಟ್‌ಗೆ ಎಂಟ್ರಿ ಕೊಟ್ಟಿತು. ಹೈಟಿ ವಿರುದ್ಧ ನಡೆದ ಪಂದ್ಯದಲ್ಲಿ ಮೊರಕ್ಕೊ 4-2 ಗೋಲುಗಳ ಭರ್ಜರಿ ಗೆಲುವು ಸಾಧಿಸಿತು.

ಸ್ವಿಟ್ಜರ್ಲೆಂಡ್ ವಿರುದ್ಧ ಸೋತರೂ ನಾಕೌಟ್‌ಗೆ ಲಗ್ಗೆ ಇಟ್ಟ ಕೆನಡಾ

ವ್ಯಾಂಕೋವರ್‌ನಲ್ಲಿ ಬುಧವಾರ ರಾತ್ರಿ ನಡೆದ 'ಬಿ' ಗುಂಪಿನ ಅಂತಿಮ ಲೀಗ್ ಪಂದ್ಯದಲ್ಲಿ ಕೆನಡಾ ವಿರುದ್ಧ ಸ್ವಿಟ್ಜರ್ಲೆಂಡ್ 2-1 ಗೋಲುಗಳ ಜಯ ಸಾಧಿಸಿತು.

ಮೂರು ಪಂದ್ಯಗಳಲ್ಲಿ ಎರಡು ಗೆಲುವು ಹಾಗೂ ಒಂದು ಡ್ರಾ ಫಲಿತಾಂಶ ಕಂಡಿರುವ ಸ್ವಿಟ್ಜರ್ಲೆಂಡ್ ಏಳು ಅಂಕಗಳೊಂದಿಗೆ ಗುಂಪಿನ ಅಗ್ರಸ್ಥಾನಿ ಎನಿಸಿಕೊಂಡಿತು.

ಅತ್ತ ಈ ಸೋಲಿನ ಹೊರತಾಗಿಯೂ ನಾಲ್ಕು ಅಂಕ ಗಳಿಸಿರುವ ಕೆನಡಾ, ಗುಂಪಿನ ಎರಡನೇ ಸ್ಥಾನಿಯಾಗಿ ಅಂತಿಮ 32ರ ಹಂತಕ್ಕೆ ಪ್ರವೇಶಿಸಿತು.

ಮೊದಲ ಬಾರಿ 32ರ ಹಂತಕ್ಕೆ ಬೊಸ್ನಿಯಾ ಲಗ್ಗೆ...

ಇದೇ ಗುಂಪಿನ ಮಗದೊಂದು ಪಂದ್ಯದಲ್ಲಿ ಕತಾರ್ ವಿರುದ್ಧ ಬೊಸ್ನಿಯಾ 3-1 ಗೋಲುಗಳ ಭರ್ಜರಿ ಗೆಲುವು ದಾಖಲಿಸಿತ್ತು.

ಅಲ್ಲದೆ ನಾಲ್ಕು ಅಂಕಗಳೊಂದಿಗೆ ಮೂರನೇ ಕಾಯ್ದುಕೊಂಡಿದ್ದು, ಅಂತಿಮ 32ರ ಹಂತಕ್ಕೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.

ಫಿಫಾ ನಿಯಮದ ಪ್ರಕಾರ 24 ತಂಡಗಳ ಹೊರತಾಗಿ ಉತ್ತಮ ಸಾಧನೆ ಮಾಡಿದ ಇತರೆ ಎಂಟು ತಂಡಗಳು ನಾಕೌಟ್‌ಗೆ ಅವಕಾಶ ಪಡೆಯುತ್ತವೆ. ಇದರೊಂದಿಗೆ ಬೊಸ್ನಿಯಾ, ಮೊದಲ ಬಾರಿಗೆ ಫಿಫಾ ವಿಶ್ವಕಪ್‌ನಲ್ಲಿ ನಾಕೌಟ್‌ಗೆ ಲಗ್ಗೆ ಇಟ್ಟಿತು.

ಲೀಗ್ ಹಂತದ ಮೂರು ಪಂದ್ಯಗಳಲ್ಲಿ ಒಂದೇ ಒಂದು ಪಂದ್ಯ ಗೆಲ್ಲಲಾಗದ ಕತಾರ್, ಒಂದು ಡ್ರಾ ಫಲಿತಾಂಶದೊಂದಿಗೆ ಬರಿ ಒಂದು ಅಂಕದೊಂದಿಗೆ ಮನೆಗೆ ಮರಳಿತು.

ಬ್ರೆಜಿಲ್ ಜೊತೆ ನಾಕೌಟ್ ಸ್ಥಾನ ಗಟ್ಟಿ ಮಾಡಿದ ಮೊರಕ್ಕೊ

'ಸಿ' ಗುಂಪಿನಲ್ಲಿ ಮಗದೊಂದು ನಿರ್ಣಾಯಕ ಪಂದ್ಯದಲ್ಲಿ ಹೈಟಿ ವಿರುದ್ಧ 4-2 ಗೋಲುಗಳ ಭರ್ಜರಿ ಗೆಲುವು ದಾಖಲಿಸಿರುವ ಮೊರಕ್ಕೊ ನಾಕೌಟ್‌ಗೆ ಲಗ್ಗೆ ಇಟ್ಟಿತು.

'ಸಿ' ಗುಂಪಿನಲ್ಲಿ ಬ್ರೆಜಿಲ್ ನಂತರ ಮೊರಕ್ಕೊ ಎರಡನೇ ಸ್ಥಾನ ಪಡೆದುಕೊಂಡಿತು. ಮತ್ತೊಂದೆಡೆ ಟೂರ್ನಿಯಿಂದ ಹೈಟಿ ನಿರ್ಗಮಿಸಿದರೆ ಸ್ಕಾಟ್ಲೆಂಡ್ ತನ್ನ ಅವಕಾಶಕ್ಕಾಗಿ ಇತರೆ ತಂಡಗಳ ಫಲಿತಾಂಶಕ್ಕಾಗಿ ಕಾಯಬೇಕಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani