ಹಾಸನ: ಆರೋಗ್ಯಕರ ಜೀವನಶೈಲಿ, ದೈಹಿಕ ಸದೃಢತೆ ಹಾಗೂ ಪರಿಸರ ಜಾಗೃತಿ ಸಮಾಜದಲ್ಲಿ ಬೆಳೆಸುವ ಉದ್ದೇಶದಿಂದ ಕುವೆಂಪು ಯುವಕರ ಸಂಘ ಹಾಸನ ವತಿಯಿಂದ ಭಾನುವಾರ ಬೆಳಿಗ್ಗೆ ಆಯೋಜಿಸಿದ್ದ 'ಫಿಟ್ ಹಾಸನ್ ಮ್ಯಾರಥಾನ್ - ನಮ್ಮ ನಡೆ... ಆರೋಗ್ಯದ ಕಡೆ' ಕಾರ್ಯಕ್ರಮಕ್ಕೆ ನಗರದ ಎಂ.ಜಿ. ರಸ್ತೆಯ ಆದಿಚುಂಚನಗಿರಿ ಮಠದ ಎದುರು ಶಂಭುನಾಥ ಸ್ವಾಮೀಜಿ ಹಾಗೂ ಶಾಸಕ ಎಚ್.ಪಿ. ಸ್ವರೂಪ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಶಂಭುನಾಥ ಸ್ವಾಮೀಜಿ, 'ಆರೋಗ್ಯವೇ ಜೀವನದ ಅಮೂಲ್ಯ ಸಂಪತ್ತು. ಆರೋಗ್ಯಕರ ದೇಹದಲ್ಲೇ ಆರೋಗ್ಯಕರ ಮನಸ್ಸು ನೆಲೆಸಿರುತ್ತದೆ. ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ನಿಯಮಿತ ವ್ಯಾಯಾಮ, ಯೋಗ, ಶಿಸ್ತುಬದ್ಧ ಜೀವನ ಹಾಗೂ ಪ್ರಕೃತಿ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಯುವಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿಯಾಗಲಿ' ಎಂದರು.
ಶಾಸಕ ಎಚ್.ಪಿ. ಸ್ವರೂಪ್ ಮಾತನಾಡಿ, 'ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯಾಘಾತ ಸೇರಿದಂತೆ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಅನಿಯಮಿತ ಆಹಾರ ಪದ್ಧತಿ, ಮಾನಸಿಕ ಒತ್ತಡ, ದೈಹಿಕ ಚಟುವಟಿಕೆಯ ಕೊರತೆ, ಧೂಮಪಾನ, ಮದ್ಯಪಾನ ಸೇರಿದಂತೆ ದುಶ್ಚಟಗಳು ಹಾಗೂ ಪರಿಸರ ಮಾಲಿನ್ಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಇಂತಹ ಸಂದರ್ಭದಲ್ಲಿ ಜನರಲ್ಲಿ ಆರೋಗ್ಯಕರ ಬದುಕಿನ ಬಗ್ಗೆ ಅರಿವು ಮೂಡಿಸಲು ಆಯೋಜಿಸಿರುವ 'ಫಿಟ್ ಹಾಸನ್ ಮ್ಯಾರಥಾನ್' ಅರ್ಥಪೂರ್ಣ ಕಾರ್ಯಕ್ರಮವಾಗಿದೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
'ಪ್ರತಿಯೊಬ್ಬರೂ ನಿತ್ಯ ಕನಿಷ್ಠ ಅರ್ಧ ಗಂಟೆಯಾದರೂ ವಾಕಿಂಗ್, ಜಾಗಿಂಗ್ ಅಥವಾ ವ್ಯಾಯಾಮವನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು. ನಿಯಮಿತ ದೈಹಿಕ ಚಟುವಟಿಕೆಗಳಿಂದ ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ, ರಕ್ತದೊತ್ತಡ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಸಾಧ್ಯ. ಯುವಜನರು ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಿಗೆ ಸೀಮಿತರಾಗದೇ ಕ್ರೀಡೆ ಮತ್ತು ವ್ಯಾಯಾಮದತ್ತ ಹೆಚ್ಚು ಗಮನ ಹರಿಸಬೇಕು' ಎಂದು ಸಲಹೆ ನೀಡಿದರು.
ವಿವಿಧ ವಯೋಮಾನದ ಸ್ಪರ್ಧಿಗಳು ಉತ್ಸಾಹದಿಂದ ಪಾಲ್ಗೊಂಡು ಗಮನ ಸೆಳೆದರು. ಮಳೆಯ ನಡುವೆಯೂ ಮ್ಯಾರಥಾನ್‌ನಲ್ಲಿ ಎಲ್ಲರೂ ಹೆಜ್ಜೆ ಹಾಕಿದರು. ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಟಿ-ಶರ್ಟ್, ಉಪಾಹಾರ ಹಾಗೂ ಸ್ಮರಣಿಕೆಗಳನ್ನು ವಿತರಿಸಲಾಯಿತು.
ಕುವೆಂಪು ಯುವಕರ ಸಂಘದ ಅಧ್ಯಕ್ಷ ಐ.ಜಿ. ಗಿರೀಶ್ ಕುಮಾರ್, ರಂಗೇಗೌಡ, ಕಂಚಮಾರನಹಳ್ಳಿ ಕಾಂತರಾಜು, ಒಕ್ಕಲಿಗರ ಸಂಘದ ನಿರ್ದೇಶಕ ಸುಮುಖ ರಘು, ಕುವೆಂಪು ಯುವಕರ ಸಂಘದ ಗೌರವಾಧ್ಯಕ್ಷ ಡಾ. ಸಿ.ಎನ್. ಜಗದೀಶ್, ಜಿ.ಸಿ. ಧರ್ಮರಾಜ್, ರಾಜೇಶ್, ದಯಾನಿಧಿ, ಸ್ಕೌಟ್ ಅಂಡ್ ಗೈಡ್ಸ್‌ನ ಆರ್.ಜಿ.ಗಿರೀಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260706-36-86050416

