Dailyhunt Logo
  • Light mode
    Follow system
    Dark mode
    • Play Story
    • App Story
ಫೋಟೊಗಾಗಿ ಬೇಡಿಕೊಂಡಿದ್ದ ಮೆಲೊನಿ: ಹೇಳಿಕೆ ಪುನರುಚ್ಛರಿಸಿದ ಟ್ರಂಪ್

ಫೋಟೊಗಾಗಿ ಬೇಡಿಕೊಂಡಿದ್ದ ಮೆಲೊನಿ: ಹೇಳಿಕೆ ಪುನರುಚ್ಛರಿಸಿದ ಟ್ರಂಪ್

ವಾಷಿಂಗ್ಟನ್ : 'ಫ್ರಾನ್ಸ್‌ನಲ್ಲಿ ಈಚೆಗೆ ನಡೆದ ಜಿ7 ಶೃಂಗಸಭೆಯ ವೇಳೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ನನ್ನೊಂದಿಗೆ ಫೋಟೊ ತೆಗೆಸಿಕೊಳ್ಳಲು ಪದೇಪದೇ ಬೇಡಿಕೊಂಡಿದ್ದರು' ಎಂಬ ತಮ್ಮ ಹೇಳಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಪ್ರಸ್ತಾಪಿಸಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣ 'ಟ್ರುಥ್ ಸೋಷಿಯಲ್'ನಲ್ಲಿ ಮತ್ತೆ ಈ ವಿಚಾರವನ್ನು ಉಲ್ಲೇಖಿಸಿದ ಟ್ರಂಪ್, 'ಬಹುಶಃ ಅಮೆರಿಕವನ್ನು ಕಡೆಗಣಿಸಿದ್ದಕ್ಕಾಗಿ ಇಟಲಿಯಲ್ಲಿ ಆಕೆಯ ಜನಪ್ರಿಯತೆ ಕುಸಿದಿದೆ. ಆದರೆ ಅಮೆರಿಕವು ನಿಜಕ್ಕೂ ಇಟಲಿಯನ್ನು ಪ್ರೀತಿಸುತ್ತದೆ ಮತ್ತು ಪೋಷಿಸುತ್ತದೆ' ಎಂದು ಬರೆದುಕೊಂಡಿದ್ದಾರೆ.

ಇದು ಇಬ್ಬರು ನಾಯಕರ ನಡುವಿನ ವೈಮನಸ್ಸು ಮತ್ತು ರಾಜತಾಂತ್ರಿಕ ಸಂಬಂಧಕ್ಕೆ ಪೆಟ್ಟು ನೀಡಿದ್ದಷ್ಟೇ ಅಲ್ಲ, ಇರಾನ್ ವಿರುದ್ಧದ ಯುದ್ಧ ಮತ್ತು ನ್ಯಾಟೊ ಬಣದೊಂದಿಗಿನ ಟ್ರಂಪ್ ಮುನಿಸಿನೊಂದಿಗೂ ತಳಕು ಹಾಕಿಕೊಳ್ಳುತ್ತಿದೆ.

'ಇರಾನ್ ವಿರುದ್ಧದ ಅಮೆರಿಕದ ಕಾರ್ಯಾಚರಣೆಗೆ ಬೆಂಬಲಿಸಲು ಇಟಲಿ ವಿಫಲವಾಗಿದೆ. ಈಗ ಆಂತರಿಕ ರಾಜಕೀಯದ ಕಾರಣಕ್ಕೆ ವಾಷಿಂಗ್ಟನ್ ಜೊತೆ ಸಂಬಂಧ ಸುಧಾರಣೆಗೆ ಮೆಲೊನಿ ಯತ್ನಿಸುತ್ತಿದ್ದಾರೆ. ಅಮೆರಿಕವು ಇರಾನ್ ಸೇನೆಯನ್ನು ಸದೆಬಡಿದ ಬಳಿಕ ಆಕೆ ತನ್ನ ಜನಪ್ರಿಯತೆಯನ್ನು ಮರಳಿ ಗಳಿಸಲೆಂದು ಸ್ನೇಹ ಬಯಸುತ್ತಿದ್ದಾಳೆ. ಅದರ ಅಗತ್ಯವಿಲ್ಲ' ಎಂದು ಟ್ರಂಪ್ ಬರೆದಿದ್ದಾರೆ.

'ಯುದ್ಧದ ವೇಳೆ ಇಟಲಿಯ ಲ್ಯಾಂಡಿಂಗ್ ಸ್ಟ್ರಿಪ್ ಮತ್ತು ರನ್‌ವೇಗಳನ್ನು ಬಳಸುವುದಕ್ಕೆ ನಿರಾಕರಿಸಿದ್ದಕ್ಕೂ ಇದಕ್ಕೂ ಸಂಬಂಧವಿದೆ. ಇಟಲಿ ಮತ್ತು ಯುರೋಪ್‌ನ ಇತರ ರಾಷ್ಟ್ರಗಳ ರಕ್ಷಣೆಗಾಗಿ ಅಮೆರಿಕವು ನ್ಯಾಟೊ ಮೇಲೆ ನೂರಾರು ಶತಕೋಟಿ ಡಾಲರ್‌ಗಳನ್ನು ಸುರಿಯುತ್ತಿದೆ' ಎಂದು ಅವರು ಸೇರಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani