ಫಿಫಾ ವಿಶ್ವಕಪ್, ಜಗತ್ತಿನ ಫುಟ್ಬಾಲ್ ಪ್ರೇಮಿಗಳನ್ನು ಆಕರ್ಷಿಸುತ್ತಿದೆ. ಫುಟ್ಬಾಲ್ ಸಾರ್ವಕಾಲಿಕ ಜನಪ್ರಿಯ ಕ್ರೀಡೆಗಳಲ್ಲಿ ಒಂದು ಎಂಬುದರಲ್ಲಿ ಯಾವುದೇ ಅನುಮಾನಗಳಿಲ್ಲ. ಆದರೆ ಇದನ್ನು ಆಡುವ ಆಟಗಾರರು ಧೀರ್ಘಕಾಲದ ಮಿದುಳಿನ ಆರೋಗ್ಯದ ಸಮಸ್ಯೆ ಎದುರಿಸುವುದು ಬಹುತೇಕರಿಗೆ ತಿಳಿದಿರದ ಸಂಗತಿಯಾಗಿದೆ.
1960ರಿಂದ 1971ರ ಅವಧಿಯಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಮತ್ತು ಇಂಗ್ಲೆಂಡ್ ಪರ ಆಡುತ್ತಿದ್ದ, ಪ್ರಸಿದ್ಧ ಆಟಗಾರ ನಾಬಿ ಸ್ಟೈಲ್ಸ್ ಅವರು ಬುದ್ದಿಮಾಂದ್ಯತೆಯಿಂದ ಬಳಲುತ್ತಿದ್ದರು. ಮಾತ್ರವಲ್ಲ ಅವರು ಅದೇ ಖಾಯಿಲೆಯಿಂದ ಬಲಿಯಾದರು.
ಫುಟ್ಬಾಲ್ ಕ್ರೀಡೆಯಿಂದ ಮಿದುಳಿನ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯುವ ಉದ್ದೇಶದಿಂದಾಗಿ ನಾಬಿ ಸ್ಟೈಲ್ಸ್ ಅವರ ನಿಧನದ ಬಳಿಕ ಅವರ ಮಿದುಳನ್ನು ವೈಜ್ಞಾನಿಕ ಪರೀಕ್ಷೆಗೆಂದು ಲ್ಯಾಬ್ಗೆ ದಾನ ಮಾಡಲಾಗಿತ್ತು.
ಫುಟ್ಬಾಲ್ ಕ್ರೀಡೆಯಿಂದ ಬುದ್ದಿಮಾಂದ್ಯತೆ ಹಾಗೂ ಇತರೆ ನರ ದೌರ್ಬಲ್ಯದ ಖಾಯಿಲೆಗೆ ಒಳಗಾಗುವ ಆಟಗಾರರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವಂತೆ ಫುಟ್ಬಾಲ್ ಅಸೋಸಿಯೇಷನ್ ಅನ್ನು ಆಗ್ರಹಿಸಲು ನಾಬಿ ಸ್ಟೈಲ್ಸ್ ಅವರ ಮಗ ಜಾನ್ ಸ್ಟೈಲ್ಸ್ ಕ್ರೀಡಾ ನ್ಯಾಯ ವೇದಿಕೆ ಸ್ಥಾಪಿಸಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
ಕ್ರೀಡಾ ಸಂಘವು ಫುಟ್ಬಾಲ್ ಕ್ರೀಡೆಯಿಂದ ನರ ದೌರ್ಬಲ್ಯ ಅಥವಾ ಬುದ್ಧಿಮಾಂದ್ಯತೆಗೆ ಉಂಟಾಗುತ್ತದೆ ಎಂಬುದನ್ನು ದೃಢಪಡಿಸಲು ಸಾಕಷ್ಟು ಪುರಾವೆಗಳಿಲ್ಲ ಎಂದು ಹೇಳಿತ್ತು. ಇದಕ್ಕೆ ಜಾನ್ ಸ್ಟೈಲ್ಸ್ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ವರದಿ ತಿಳಿಸಿದೆ.
ನಾಬಿ ಸ್ಟೈಲ್ ಅವರಂತೆಯೇ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ರಾಫೆಲ್ ವರಾನೆ ಕೂಡ ಬಾಲ್ ಅನ್ನು ಪದೇ ಪದೇ ಹೆಡ್ಡರ್ ಮಾಡಿದ್ದರಿಂದ ಮಿದುಳಿನ ಅನಾರೋಗ್ಯಕ್ಕೆ ಒಳಗಾಗಿರುವುದಾಗಿ ಹೇಳಿಕೊಂಡಿದ್ದಾರೆ. ಮಾತ್ರವಲ್ಲ, ಅವರು ತಮ್ಮ ಮಕ್ಕಳಿಗೆ ಫುಟ್ಬಾಲ್ ಆಡುವಾಗ ಹೆಡ್ಡರ್ ಮಾಡುವುದೇ ಬೇಡ ಎಂದು ಹೇಳುವ ಹಂತಕ್ಕೆ ತಲುಪಿರುವುದಾಗಿ ಅಂತರರಾಷ್ಟ್ರೀಯ ಮಾಧ್ಯಮಗಳೊಂದಿಗೆ ಹೇಳಿಕೊಂಡಿದ್ದರು.
ಈ ರೀತಿಯ ಅನೇಕ ಉದಾಹರಣೆಗಳು ಫುಟ್ಬಾಲ್ ಅನ್ನು ಕ್ರೀಡೆಯಾಗಿ ಆಯ್ಕೆ ಮಾಡಿಕೊಳ್ಳುವ ಯುವ ಆಟಗಾರರಲ್ಲಿ ಭಯ ಉಂಟು ಮಾಡುತ್ತಿದೆ. ಫುಟ್ಬಾಲ್ ಆಡುವ ಆಟಗಾರರಲ್ಲಿ ಆರಂಭದಲ್ಲಿ ಮಿದುಳಿನ ಸಮಸ್ಯೆ ಕಾಣಿಸಿಕೊಳ್ಳದಿದ್ದರೂ ಕ್ರಮೇಣವಾಗಿ ನರಗಳಿಗೆ ಹಾನಿ ಉಂಟುಮಾಡುವ ಸಾಧ್ಯತೆ ಇದೆ.
ಫುಟ್ಬಾಲ್ ಆಡುವಾಗ ಹೆಡ್ಡರ್ ಮಾಡುವ ಎಲ್ಲಾ ಹೊಡೆತಗಳು ತಲೆಗೆ ಅಥವಾ ನರಗಳಿಗೆ ಹಾನಿ ಉಂಟುಮಾಡುವುದಿಲ್ಲ. ಆದರೆ, ಕ್ರಮೇಣವಾಗಿ ನರಗಳ ಹಾನಿಗೆ ಕಾರಣವಾಗುವ ಸಂಭವ ಇದೆ.
ಚೆಂಡನ್ನು ಹೆಡ್ಡರ್ ಮಾಡುವುದರಿಂದಾಗುವ ಅಪಾಯಗಳು
ಸೂಕ್ಷ್ಮ ಗಾಯ: ತಲೆಗೆ ಆಗುವ ಪ್ರತಿಯೊಂದು ಹೊಡೆತವು ತಲೆಬುರುಡೆ ಮತ್ತು ಮೆದುಳಿಗೆ ಆಗುವ ಸೂಕ್ಷ್ಮ ಆಘಾತವಾಗಿದೆ.
ಚಲನೆ: ಬಾಲ್ ಅನ್ನು ತಲೆಯಿಂದ ಬಲವಾಗಿ ಗುದ್ದಿದಾಗ ಅಥವಾ ತಲೆಕೆಳಗಾಗಿ ಬಿದ್ದಾಗ ಮಿದುಳು ತಲೆಬುರುಡೆಯೊಳಗೆ ಸ್ವಲ್ಪ ಪ್ರಮಾಣದಲ್ಲಿ ಚಲಿಸುವ ಅಪಾಯವಿದೆ.
ನರಗಳ ಆರೋಗ್ಯ: ತಲೆಗೆ ಬೀಳುವ ಹೊಡೆತವು ಕಾಲಾನಂತರದಲ್ಲಿ ನರ ನಾಡಿಯ ದುರ್ಬಲತೆಯ ಮೇಲೆ ಪರಿಣಾಮ ಬೀರಬಹುದು, ಇದರಿಂದ ಸಣ್ಣ ಪ್ರಮಾಣದ ನರ ಹಾನಿ ಉಂಟಾಗುವ ಸಾಧ್ಯತೆ ಇರುತ್ತದೆ.
ಗಮನಿಸದ ಅಘಾತ: ಕೆಲವು ಸಂದರ್ಭಗಳಲ್ಲಿ ಆಟಗಾರರಿಗೆ ಸಣ್ಣ ಪ್ರಮಾಣದ ಗಾಯ ಉಂಟಾಗುತ್ತದೆ. ಅದನ್ನು ಆಟಗಾರರು ನಿರ್ಲಕ್ಷಿಸುತ್ತಾರೆ. ಆದರೆ, ಇದೇ ಸಣ್ಣ ಗಾಯ ಭವಿಷ್ಯದಲ್ಲಿ ವ್ಯತಿರಿಕ್ತ ಪರಿಣಾಮ ಉಂಟು ಮಾಡುವ ಅಪಾಯ ಹೊಂದಿದೆ.
ಮನಸ್ಥಿತಿ ಬದಲಾವಣೆಗಳು: ಬಾಲ್ ಅನ್ನು ತಲೆಯಿಂದ ಹಿಟ್ ಮಾಡುವುದರಿಂದ ಭವಿಷ್ಯದಲ್ಲಿ ಆಟಗಾರರ ಭಾವನಾತ್ಮಕ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ವಿಶೇಷವಾಗಿ ಮರೆವು ಉಂಟಾಗಬಹುದು. ಸಣ್ಣ ವಿಚಾರಕ್ಕೂ ಕಿರಿಕಿರಿಗೆ ಒಳಗಾಗುವ ಸಂಭವಗಳಿರುತ್ತವೆ.
ಸದ್ಯ ನಡೆಯುತ್ತಿರುವ 2026ರ ವಿಶ್ವಕಪ್ನಲ್ಲಿ ಮಿದುಳಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಫಿಫಾ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಯಾವುದೇ ಆಟಗಾರ ಮಿದುಳಿನ ಗಾಯಕ್ಕೆ ತುತ್ತಾದರೆ, ಆತನ ಬದಲು ವಿಶೇಷ ಬದಲಿ ಆಟಗಾರನನ್ನು ನೇಮಿಸಿಕೊಳ್ಳಲು ತಂಡಗಳಿಗೆ ಅವಕಾಶ ನೀಡಲಾಗಿದೆ.
ಲ್ಯಾನ್ಸೆಟ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಸ್ವೀಡಿಷ್ ಉನ್ನತ ಮಟ್ಟದಲ್ಲಿ ಆಡಿದ ಆಟಗಾರರು, ಕೆಳಮಟ್ಟದ ಆಟಗಾರರಿಗಿಂತ ಹೆಚ್ಚು ನರ ದೌರ್ಬಲ್ಯತೆಯ ಅಪಾಯ ಹೊಂದಿದ್ದಾರೆ. ಸಾಮಾನ್ಯ ಜನರಿಗೆ ಹೋಲಿಸಿದರೆ ಫುಟ್ಬಾಲ್ ಆಟಗಾರರು ಬುದ್ಧಿಮಾಂದ್ಯರಾಗುವ ಅಪಾಯ ಶೇ. 50ರಷ್ಟು ಹೆಚ್ಚಿದೆ ಎಂದು ಅಧ್ಯಯನ ತಿಳಿಸಿದೆ.
ಗೋಲ್ಕೀಪರ್ಗಳಿಗೆ ಹೋಲಿಸಿದರೆ, ಔಟ್ಫೀಲ್ಡ್ನಲ್ಲಿ ಚೆಂಡನ್ನು ಹೆಡ್ ಮಾಡುವ ಆಟಗಾರರು ಬುದ್ಧಿಮಾಂದ್ಯರಾಗುವ ಅಪಾಯ ಹೆಚ್ಚಿದೆ ಎಂದು ವರದಿ ಗಮನಿಸಿದೆ.
ಈ ಕ್ರೀಡೆಯು ಮಿದುಳಿನ ಆರೋಗ್ಯದ ಮೇಲೆ ಪರಿಣಾಮ ಉಂಟುಮಾಡುತ್ತದೆ ಎಂಬುದನ್ನು ಗಮನಿಸಿರುವ ಫುಟ್ಬಾಲ್ ಅಸೋಸಿಯೇಷನ್, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಚೆಂಡನ್ನು ಹೆಡ್ಡರ್ ಮಾಡುವುದನ್ನು ನಿಷೇಧಿಸಲು ಮುಂದಾಗಿದೆ ಎಂದು ವರದಿಯಾಗಿದೆ.
ಆಟಗಾರರು ಈ ರೋಗಲಕ್ಷಣಗಳ ಬಗ್ಗೆ ಎಚ್ಚರದಿಂದಿರುವುದು ಮುಖ್ಯ
1. ತಲೆನೋವು
2. ದೃಷ್ಟಿ ಹೀನತೆ
3. ದಿಢೀರ್ ಆಘಾತಕ್ಕೆ ಒಳಗಾಗುವುದು
4. ಸ್ಮರಣ ಶಕ್ತಿ ಕಡಿಮೆಯಾಗುವುದು
5. ಕಿರಿಕಿರಿಗೆ ಒಳಗಾಗುವುದು
6. ತಲೆತಿರುಗುವಿಕೆ
7.ವಾಂತಿ
8. ಬೆಳಕು ಮತ್ತು ಶಬ್ದಕ್ಕೆ ಸೂಕ್ಷ್ಮವಾಗುವುದು.

