ಫ್ರಾನ್ಸ್‌ನಲ್ಲಿ ಇತ್ತೀಚೆಗೆ ಜಿ7 ಶೃಂಗಸಭೆ ನಡೆಯಿತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಇದನ್ನೇ ಆಧಾರವಾಗಿಟ್ಟುಕೊಂಡು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ.
ಅದರಲ್ಲಿ ಟ್ರಂಪ್ ಅವರು ಮೋದಿ ಅವರನ್ನು 'ಕೊಲೆಗಾರ' ಎಂದು ಕರೆದಿದ್ದು, '2002ರಲ್ಲಿ ಗುಜರಾತ್‌ನಲ್ಲಿ ಲಕ್ಷಾಂತರ ಮಂದಿಯನ್ನು ಮೋದಿ ಕೊಂದಿದ್ದಾರೆ' ಎಂದು ಆರೋಪಿಸಿದ್ದಾರೆ ಎಂಬುದಾಗಿ ವಿಡಿಯೊ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು.
ಗೂಗಲ್‌ನಲ್ಲಿ ನಿರ್ದಿಷ್ಟ ಪದದ ಮೂಲಕ ಹುಡುಕಾಡಿದಾಗ ಡೊನಾಲ್ಡ್ ಟ್ರಂಪ್ ಅವರು ನರೇಂದ್ರ ಮೋದಿ ಅವರನ್ನು ಗುಜರಾತ್ ಗಲಭೆಗಳ ಸಂಬಂಧ ಕೊಲೆಗಾರ ಎಂದು ಕರೆದ ಬಗ್ಗೆ ಯಾವುದೇ ವರದಿ ಕಾಣಲಿಲ್ಲ. ಈ ಹುಡುಕಾಟವು ಪಿಟಿಐ ತನ್ನ ಅಧಿಕೃತ ಯೂ ಟ್ಯೂಬ್ ವಾಹಿನಿಯಲ್ಲಿ ಮೋದಿ ಅವರ ಬಗ್ಗೆ ಟ್ರಂಪ್ ಅವರು ಮಾತನಾಡಿರುವ ವಿಡಿಯೊ ಅಪ್‌ಲೋಡ್ ಮಾಡಿರುವುದು ಕಂಡಿತು. ಅದರಲ್ಲಿ ಟ್ರಂಪ್ ಅವರು ಮೋದಿ ಅವರನ್ನು 'ದೇವದೂತ', 'ದೃಢ ಸಂಧಾನಕಾರ' ಎಂದು ಬಣ್ಣಿಸಿರುವುದು ಕಂಡಿತು. ಮುಂದುವರಿದು 'ಮೋದಿ ಅತ್ಯಂತ ಸುಂದರವಾದ ವ್ಯಕ್ತಿ. ಅವರೊಬ್ಬ ಉತ್ತಮ ವ್ಯಕ್ತಿ. ಆದರೆ, ಅವರು ದೃಢವಾದವರು.. ಅವರೆಷ್ಟು ದೃಢ ಎಂದರೆ..' ಎಂದು ಬಣ್ಣಿಸುತ್ತಾ 'He is a killer' ಎಂದಿದ್ದಾರೆ. ಅದರ ಅರ್ಥ ಅವರು ಕೊಲೆಗಡುಕ ಎಂದಲ್ಲ. ಜತೆಗೆ, ವಿಡಿಯೊದಲ್ಲಿ ಎಲ್ಲಿಯೂ ಗುಜರಾತ್ ಪ್ರಸ್ತಾಪ ಬರುವುದಿಲ್ಲ. ರಿಸೆಂಬಲ್ ಎಐ ಸಾಧನದ ಮೂಲಕ ಆಡಿಯೊ ಅನ್ನು ಪರಿಶೀಲಿಸಿದಾಗ, ಅದನ್ನು ಡಿಜಿಟಲ್ ಆಗಿ ಮಾರ್ಪಡಿಸಿರುವುದು ಕಂಡಿತು. ಧ್ವನಿ ಮಾರ್ಪಡಿಸಿದ ವಿಡಿಯೊ ಅನ್ನು ಹಂಚಿಕೊಂಡು ಸುಳ್ಳು ಪ್ರತಿಪಾದನೆ ಮಾಡಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

