Dailyhunt Logo
  • Light mode
    Follow system
    Dark mode
    • Play Story
    • App Story
ಫ್ಯಾಕ್ಟ್ ಚೆಕ್:ಮದ್ಯದ ಅಮಲೇರಿದ ಸ್ಥಿತಿಯಲ್ಲಿ ಪಂಜಾಬ್ ಸಿಎಂ; ಇದು ಸುಳ್ಳು ವಿಡಿಯೊ

ಫ್ಯಾಕ್ಟ್ ಚೆಕ್:ಮದ್ಯದ ಅಮಲೇರಿದ ಸ್ಥಿತಿಯಲ್ಲಿ ಪಂಜಾಬ್ ಸಿಎಂ; ಇದು ಸುಳ್ಳು ವಿಡಿಯೊ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೊದಲ್ಲಿ ಅವರು ಒಂದು ಕೊಠಡಿಯಲ್ಲಿ ಕುರ್ಚಿ ಮೇಲೆ ಕುಳಿತಿದ್ದು, ಕೂಗಾಡುತ್ತಾ ಗದ್ದಲ ಮಾಡುತ್ತಿರುವಂತೆ ಕಾಣುತ್ತದೆ. ಇದನ್ನೇ ಆಧಾರವಾಗಿಟ್ಟುಕೊಂಡು, ಮಾನ್ ಅವರು ಮದ್ಯ ಕುಡಿದು ಅಮಲೇರಿದ ಸ್ಥಿತಿಯಲ್ಲಿ ಇದ್ದಾರೆ ಎಂದು ಪ್ರತಿಪಾದಿಸುತ್ತಾ, ಅವರ ಜತೆಗೆ ಆಮ್ ಆದ್ಮಿ ಪಕ್ಷವನ್ನೂ ಲೇವಡಿ ಮಾಡಿ ವಿಡಿಯೊ ಹಂಚಿಕೊಳ್ಳುತ್ತಿದ್ದಾರೆ.

ಆದರೆ, ಇದು ಸುಳ್ಳು ಸುದ್ದಿ.

ವಿಡಿಯೊವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ದೃಶ್ಯಗಳಲ್ಲಿ ಕೆಲವು ವ್ಯತ್ಯಾಸಗಳಿರುವುದು ಕಂಡಿತು. ಉದಾಹರಣೆಗೆ, ಮಾನ್ ಅವರ ಹಿಂದೆ ಇರುವ ವ್ಯಕ್ತಿಯ ಕೈಗಳು ತಿರುಚಿರುವಂತೆ ಕಾಣುತ್ತವೆ. ಜತೆಗೆ, ಹಿಂದೆ ಇರುವ ವ್ಯಕ್ತಿಗಳ ಮುಖಗಳು ಮಸುಕಾಗಿದ್ದು, ಸರಿಯಾಗಿ ಕಾಣುವುದಿಲ್ಲ. ಇದು, ವಿಡಿಯೊ ಕೃತಕ ಬುದ್ಧಿಮತ್ತೆಯಿಂದ (ಎಐ) ನಿರ್ಮಿಸಿದ್ದಿರಬಹುದು ಎನ್ನುವ ಅನುಮಾನಕ್ಕೆ ಕಾರಣವಾಯಿತು. ವಿಡಿಯೊ ನಿಜವಾದದ್ದೇ ಎನ್ನುವುದನ್ನು ತಿಳಿಯಲು, ಹಲವು ಎಐ ಪತ್ತೆ ಸಾಧನಗಳ ಮೂಲಕ ಅದನ್ನು ಪರಿಶೀಲಿಸಲಾಯಿತು. ಹೈವ್ ಮಾಡರೇಷನ್ ಮತ್ತು ಎನ್‌ವಿಡಿಯಾದ ಸಿಂಥೆಟಿಕ್ ವಿಡಿಯೊ ಡಿಟೆಕ್ಟರ್ ಸಾಧನಗಳ ಮೂಲಕ ಪರೀಕ್ಷೆ ಮಾಡಿದಾಗ, ಅದು ಡೀಪ್‌ಫೇಕ್ ವಿಡಿಯೊ ಎನ್ನುವುದು ತಿಳಿಯಿತು. ವಿಡಿಯೊದ ಕೀಫ್ರೇಮ್‌ಗಳನ್ನು ಪ್ರತ್ಯೇಕಿಸಿ, ಒಂದು ಫ್ರೇಮ್ ಅನ್ನು ರಿವರ್ಸ್ ಇಮೇಜ್ ಸರ್ಚ್‌ಗೆ ಒಳಪಡಿಸಿದಾಗ, ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊವನ್ನು ಹೋಲುವ 2017ರ ವಿಡಿಯೊವೊಂದು ಕಂಡಿತು. ಅದರಲ್ಲಿ ಮಾನ್ ಅವರು ಕುಳಿತ ಸ್ಥಳದಲ್ಲಿ ಬೇರೊಬ್ಬ ವ್ಯಕ್ತಿ ಕುಳಿತಿದ್ದಾನೆ. ಉಳಿದಂತೆ ವಿಡಿಯೊದಲ್ಲಿನ ಬಹುತೇಕ ವಿವರಗಳು, ಹಿಂದೆ ನಿಂತಿರುವ ವ್ಯಕ್ತಿಗಳು ಎಲ್ಲವೂ ಒಂದೇ ರೀತಿ ಇವೆ. ಅಂದರೆ, 2017ರ ವಿಡಿಯೊವನ್ನು ಬಳಸಿಕೊಂಡು, ಎಐ ಮೂಲಕ ವ್ಯಕ್ತಿಯ ಜಾಗದಲ್ಲಿ ಭಗವಂತ್ ಮಾನ್ ಅವರನ್ನು ತೋರಿಸಿ, ಅವರನ್ನೂ ಆಮ್ ಆದ್ಮಿ ಪಕ್ಷವನ್ನೂ ಲೇವಡಿ ಮಾಡಲಾಗುತ್ತಿದೆ ಎಂದು ಫ್ಯಾಕ್ಟ್‌ಲಿ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani