ಶಿವಮೊಗ್ಗ: ಗಾಂಜಾ ಸೇವನೆ ಮಾಡದಂತೆ ಬುದ್ಧಿ ಹೇಳಿದ್ದ ಅಜ್ಜಿಯನ್ನು ಕೊಲೆ ಮಾಡಿದ್ದ ಆರೋಪಿ ಮೊಮ್ಮಗನ ಕಾಲಿಗೆ ಗುಂಡು ಹೊಡೆದು ಗುರುವಾರ ಬೆಳಿಗ್ಗೆ ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಮಿಳಘಟ್ಟದ ಆನಂದರಾವ್ ಬಡಾವಣೆ ನಿವಾಸಿ ಕಿಶೋರ್ (28) ಬಂಧಿತ ಆರೋಪಿ.
ಕಿಶೋರ್ ಸ್ನೇಹಿತರನ್ನು ಮನೆಗೆ ಕರೆತಂದು ಮದ್ಯಪಾನ, ಗಾಂಜಾ ಸೇವನೆ ಮಾಡುತ್ತಿದ್ದ. ಅದನ್ನು ಆಕ್ಷೇಪಿಸಿ ಬುದ್ಧಿವಾದ ಹೇಳಿದ್ದ ಅಜ್ಜಿ ಸುಶೀಲಮ್ಮ (65) ಅವರನ್ನು ಬುಧವಾರ ಹಾಡುಹಗಲೇ ರಸ್ತೆಯಲ್ಲಿ ಹಲ್ಲೆ ನಡೆಸಿ, ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದನು.
ಆರೋಪಿಯ ಪತ್ತೆಗೆ ಎಸ್ಪಿ ಬಿ.ನಿಖಿಲ್ ಎರಡು ವಿಶೇಷ ತಂಡ ರಚಿಸಿದ್ದರು.
ಕಿಶೋರ್ ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಾಜಪೇಯಿ ಲೇಔಟ್ ನಲ್ಲಿ ಅಡಗಿರುವ ಮಾಹಿತಿ ತಿಳಿದ ದೊಡ್ಡಪೇಟೆ ಠಾಣೆ ಪೊಲೀಸರು ಬೆಳಿಗ್ಗೆ ಆರೋಪಿಯನ್ನು ಬಂಧಿಸಲು ತೆರಳಿದ್ದಾರೆ. ಈ ವೇಳೆ ಆತ ಲಾಂಗ್ ನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಮುಂದಾಗಿದ್ದಾನೆ. ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ಸ್ಪಂದಿಸದ ಆರೋಪಿಯ ಕಾಲಿಗೆ ದೊಡ್ಡಪೇಟೆ ಠಾಣೆ ಇನ್ ಸ್ಪೆಕ್ಟರ್ ಸತ್ಯನಾರಾಯಣ ಗುಂಡು ಹೊಡೆದು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಗಾಯಾಳುವನ್ನು ಚಿಕಿತ್ಸೆಗೆ ಪೊಲೀಸರು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಿಶೋರ್ ವಿರುದ್ಧ ಈ ಹಿಂದೆ ಗಾಂಜಾ ಸೇವನೆ, ಮಾರಾಟದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಎಸ್ಪಿ ಬಿ. ನಿಖಿಲ್ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

