ಗದಗ: 'ಚಿಕ್ಕಂದಿನಿಂದಲೇ ಟೈಪ್ 1 ಡಯಾಬಟೀಸ್ ಹಾಗೂ ಅಂತಿಮ ಹಂತದ ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದ ಗದುಗಿನ ಮೇಘರಾಜ ಕಟ್ಟಿಮನಿ ಅವರಿಗೆ ಬೆಂಗಳೂರಿನ ಆಸ್ಟರ್ ಆರ್.ವಿ. ಆಸ್ಪತ್ರೆಯಲ್ಲಿ ಏಕಕಾಲದಲ್ಲೇ ಕಿಡ್ನಿ ಮತ್ತು ಮೇದೊಜೀರಕ ಗ್ರಂಥಿ ಕಸಿ ಯಶಸ್ವಿಯಾಗಿ ನೆರವೇರಿದೆ' ಎಂದು ಆಸ್ಪತ್ರೆಯ ಕಸಿ ತಜ್ಙ ರೊಮ್ಮೆಲ್ ಎಸ್.
ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಿಸಬೇಕಿದ್ದರಿಂದ ಕಿಡ್ನಿ ಸಮಸ್ಯೆ ಉಂಟಾಗಿತ್ತು. ಇನ್ಸುಲಿನ್ ಮೇಲಿನ ಅವಲಂಬನೆಯಿಂದ ಹೃದಯ ಮತ್ತು ನರ ಸಂಬಂಧಿ ತೊಂದರೆಗಳೂ ಬಾಧಿಸುತ್ತಿದ್ದವು' ಎಂದರು.
ಹೆಪಟಲಾಜಿ ಮತ್ತು ಇಂಟಿಗ್ರೇಟೆಡ್ ಲಿವರ್ ಕೇರ್‌ನ ವೈದ್ಯ ನವೀನ್ ಗುಂಜೂ ಮಾತನಾಡಿ, 'ವೈದ್ಯರಾದ ಸೋನಲ್ ಅಸ್ತಾನಾ, ರೊಮ್ಮೆಲ್ ಎಸ್. ನೇತೃತ್ವದ ಕಸಿ ತಂಡ ಎಂಟು ತಾಸುಗಳ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ. ಇಂತಹ ಶಸ್ತ್ರಚಿಕಿತ್ಸೆ ಕರ್ನಾಟಕದಲ್ಲಿ ವರ್ಷಕ್ಕೆ ಒಂದೆರಡು ನಡೆಯಬಹುದಷ್ಟೆ' ಎಂದು ಹೇಳಿದರು.
'ಕಟ್ಟಿಮನಿ ಅವರು ಚೇತರಿಸಿಕೊಂಡಿದ್ದು, ಡಯಾಲಿಸಿಸ್, ಇನ್ಸುಲಿನ್, ಮಾತ್ರೆಗಳನ್ನು ಸೇವಿಸುವ ಅವಶ್ಯತೆ ಈಗಿಲ್ಲ. ಒಂದು ಲಕ್ಷದಲ್ಲಿ ಐದಾರು ಜನರಿಗೆ ಇಂತಹ ಸಮಸ್ಯೆ ಕಾಣಿಸಿಕೊಳ್ಳಬಹುದು. ಜೀವನ ಕ್ರಮ, ವಂಶವಾಹಿ ಇದಕ್ಕೆ ಕಾರಣ' ಎಂದು ವಿವರಿಸಿದರು.
ಚಂದ್ರಶೇಖರ, ಮೇಘರಾಜ್ ಕಟ್ಟಿಮನಿ, ರೇಣುಕಾ ಕಟ್ಟಿಮನಿ, ನೇತ್ರಾವತಿ ಕಟ್ಟಿಮನಿ, ಚಂದ್ರಕಾಂತ್ ಕಟ್ಟಿಮನಿ, ರಾಕೇಶ ಕಟ್ಟಿಮನಿ ಇದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-23-583068779

