ಪಾಂಡವಪುರ: ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹಾಗೂ ಗರ್ಭಕಂಠದ ಕ್ಯಾನ್ಸರ್ ಹೆಚ್ಚುತ್ತಿರುವುದರಿಂದ ಮಹಿಳೆಯರು ಆರೋಗ್ಯದ ಕಡೆ ಗಮನಹರಿಸಬೇಕು ಎಂದು ಪಟ್ಟಣದ ಲಕ್ಷ್ಮೀ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ಕೀರ್ತನಾ ಸಲಹೆ ನೀಡಿದರು.
ಪಟ್ಟಣದ ಟಿಎಪಿಸಿಎಂಎಸ್ ರೈತ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಮೇಲುಕೋಟೆ ಯೋಜನಾ ಕಚೇರಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಮಹಿಳಾವಿಚಾರಗೋಷ್ಠಿಯಲ್ಲಿ 'ಮಹಿಳೆಯರನ್ನು ಕಾಡುತ್ತಿರುವ ವಿವಿಧ ಕಾಯಿಲೆಗಳು' ಕುರಿತು ಮಾತನಾಡಿದರು.
ಒಬ್ಬ ಹೆಣ್ಣು ಆರೋಗ್ಯವಾಗಿದ್ದರೆ ಕುಟುಂಬ ಹಾಗೂ ಇಡೀ ಸಮಾಜವೇ ಉತ್ತಮವಾಗಿರುತ್ತದೆ. ಹೀಗಾಗಿ ಮಹಿಳೆಯರು ಆರೋಗ್ಯದ ಬಗ್ಗೆ ಉದಾಸೀನ ತೋರದೆ ನಿಗಾ ವಹಿಸುವುದು ಅತ್ಯವಶ್ಯಕ ಎಂದರು.
ಮಹಿಳೆಯರ ಗಂಭೀರ ಕಾಯಿಲೆಗಳಾದ ಸ್ತನ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್ ಬಾರದಂತೆ ಪ್ರತಿಯೊಬ್ಬ ಮಹಿಳೆಯರು ಪ್ರಾರಂಭಿಕ ಹಂತದಲ್ಲಿಯೇ ಎಚ್ಚರವಹಿಸಬೇಕು. ಜತೆಗೆ ಈ ಕಾಯಿಲೆಗಳನ್ನು ತಡೆಗಟ್ಟಲು ಪಾಸ್ಮೀಯ ಚಿಕಿತ್ಸೆಯನ್ನು ಮಾಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮ ಉದ್ಫಾಟಿಸಿದ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್‌ನ ಜಿಲ್ಲಾ ನಿರ್ದೇಶಕಿ ಮಮತಾರಾವ್, ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪನ್ನೂ ಮೂಡಿಸಿದ್ದಾರೆ. ಇಷ್ಟಾದರೂ ಸಮಾಜದಲ್ಲಿ ಮಹಿಳೆಯರು ಮೇಲಿನ ದೌರ್ಜನ್ಯ ಹಾಗೂ ಶೋಷಣೆಗಳು ಕಿಂಚಿತ್ತೂ ಕಡಿಮೆಯಾಗಿಲ್ಲ.ಸಮಸ್ಯೆಗಳನ್ನು ಸಂಘನಾತ್ಮಕವಾಗಿ ಎದುರಿಸಿಬೇಕಿದೆ ಎಂದರು.
ಟಿಎಪಿಸಿಎಂಎಸ್ ಪ್ರಭಾರ ಅಧ್ಯಕ್ಷೆ ಪ್ರೇಮ ಕೆ.ಪುಟ್ಟೇಗೌಡ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕಿ ಜೈನಾಬಿ ಚಪ್ಪರಮನಿ, 'ಕುಟುಂಬ ನಿರ್ವಹಣೆಯೊಂದಿಗೆ ಸ್ವಾವಲಂಬಿ' ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು. ವಕೀಲೆ ಸಿ.ಎಸ್.ಲತಾ, ಬಿಜೆಪಿ ಮೋರ್ಚಾದ ಜಿಲ್ಲಾಧ್ಯಕ್ಷ ಮಂಗಳಾ ನವೀನ್, ಸಿಡಿಪಿಒ ಕೆ.ಆರ್.ಪೂರ್ಣಿಮಾ ಮಾತನಾಡಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎಚ್.ಸಿ. ಧನಂಜಯ, ಸದಸ್ಯರಾದ ಎಚ್.ಆರ್.ಧನ್ಯಕುಮಾರ್, ಎಂ.ರಾಜಕುಮಾರ್, ಕರವೇ ಮಹಿಳಾ ಘಟಕದ ಜಿಲ್ಲಾ ಘಟಕದ ಅಧ್ಯಕ್ಷ ಬೇವಿನಕುಪ್ಪೆ ಭಾರತಿ ಇದ್ದರು.
ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
261104-40-1682041243

