ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
Good News: ವಾಹನಗಳಿಗೆ ಸಂಪೂರ್ಣ ಎಥೆನಾಲ್ ಬಳಕೆಗೆ ಅಸ್ತು; ಕೇಂದ್ರ ಸಚಿವ ಗಡ್ಕರಿ
ಒಂದು ಸಾಲಿನಲ್ಲಿಭಾರತದಲ್ಲಿ ಪೆಟ್ರೋಲ್ ಬದಲಿಗೆ ಶೇ 100ರಷ್ಟು ಎಥೆನಾಲ್ ಬಳಸುವ ವಾಹನಗಳಿಗೆ ಕೇಂದ್ರ ಸರ್ಕಾರ ಕಾನೂನು ಮಾನ್ಯತೆ ನೀಡಿದ್ದು, ಆಮದು ಹೊರೆಯನ್ನು ಕಡಿಮೆ ಮಾಡಲು ನಿರ್ಧರಿಸಿದೆ.
ಪ್ರಮುಖ ಅಂಶಗಳು• ಎಥೆನಾಲ್ ಇಂಧನಕ್ಕೆ ಕಾನೂನು ಮಾನ್ಯತೆಕೇಂದ್ರ ಸರ್ಕಾರವು ವಾಹನಗಳಲ್ಲಿ ಶೇ 100ರಷ್ಟು ಎಥೆನಾಲ್ ಬಳಕೆಗೆ ಅಧಿಕೃತ ಅನುಮೋದನೆ ನೀಡಿದ್ದು, ಅದಕ್ಕೆ ಸಂಬಂಧಿಸಿದ ಕಡತಕ್ಕೆ ಸಚಿವ ನಿತಿನ್ ಗಡ್ಕರಿ ಸಹಿ ಹಾಕಿದ್ದಾರೆ.• ಆಮದು ಹೊರೆಯನ್ನು ಕಡಿಮೆ ಮಾಡುವ ಗುರಿಪಳೆಯುಳಿಕೆ ಇಂಧನದ ಮೇಲಿನ ಅವಲಂಬನೆಯನ್ನು ತಪ್ಪಿಸುವ ಮೂಲಕ ದೇಶದ ವಾರ್ಷಿಕ ₹22 ಲಕ್ಷ ಕೋಟಿ ಇಂಧನ ಆಮದು ವೆಚ್ಚವನ್ನು ಉಳಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.• ಎಥೆನಾಲ್ ಮೂಲ ಮತ್ತು ವಿಶೇಷತೆಎಥೆನಾಲ್ ಕಬ್ಬು, ಜೋಳದಂತಹ ಕೃಷಿ ಉತ್ಪನ್ನಗಳಿಂದ ಪಡೆಯಲಾಗುವ ನವೀಕರಿಸಬಹುದಾದ ಜೈವಿಕ ಇಂಧನವಾಗಿದ್ದು, ಇದು ಪೆಟ್ರೋಲ್‌ಗೆ ಅತ್ಯುತ್ತಮ ಪರ್ಯಾಯವಾಗಿದೆ.• ವಾಹನ ಉತ್ಪಾದಕರ ಸಿದ್ಧತೆಪ್ರಸ್ತುತ ಬಹುತೇಕ ವಾಹನಗಳು ಶೇ 100ರಷ್ಟು ಎಥೆನಾಲ್ ಬಳಸಲು ಸಜ್ಜಾಗಿಲ್ಲವಾದರೂ, ಮಾರುತಿ ಸುಜುಕಿ, ಟೊಯೊಟಾ ಮತ್ತು ಹುಂಡೈ ಕಂಪನಿಗಳು ಅಂತಹ ವಾಹನ ಬಿಡುಗಡೆಗೆ ಮುಂದಾಗಿವೆ.• ಜಾಗತಿಕ ಮಾದರಿ ಮತ್ತು ಅನುಷ್ಠಾನಬ್ರೆಜಿಲ್ ಮತ್ತು ಅಮೆರಿಕದಂತಹ ದೇಶಗಳಲ್ಲಿ ಈಗಾಗಲೇ ಇಂತಹ ತಂತ್ರಜ್ಞಾನ ಬಳಕೆಯಲ್ಲಿದ್ದು, ಭಾರತವು ಅದೇ ಹಾದಿಯಲ್ಲಿ ಶೀಘ್ರವೇ ದ್ವಿಚಕ್ರ ವಾಹನಗಳನ್ನೂ ಒಳಗೊಂಡಂತೆ ಬದಲಾವಣೆಯನ್ನು ತರಲಿದೆ.ಪ್ರಮುಖ ಅಂಕಿಅಂಶಗಳು12 ವರ್ಷಪ್ರಧಾನಿ ಮೋದಿಯವರ ಅಧಿಕಾರಾವಧಿ₹22 ಲಕ್ಷ ಕೋಟಿಇಂಧನ ಆಮದು ಹೊರೆಯನ್ನು ಕಡಿಮೆ ಮಾಡುವ ಗುರಿಶೇ 100ಗರಿಷ್ಠ ಬಳಕೆಯ ಪ್ರಮಾಣಶೇ 5 ಮತ್ತು 10ಆರಂಭಿಕ ಮಿಶ್ರಣದ ಪ್ರಮಾಣಶೇ 20ಪ್ರಾಯೋಗಿಕ ಮಿಶ್ರಣದ ಪ್ರಮಾಣಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ನವದೆಹಲಿ: ಆಮದು ಮಾಡಿಕೊಳ್ಳುವ ಪಳೆಯುಳಿಕೆ ಇಂಧನ ಮತ್ತು ಶುದ್ಧ ಇಂಧನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿ, ಭಾರತವು ಶೇ 100ರಷ್ಟು ಎಥೆನಾಲ್ ಇಂಧನ ಬಳಕೆಗೆ ಕಾನೂನು ಮಾನ್ಯತೆ ನೀಡಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಘೋಷಿಸಿದ್ದಾರೆ. ಇದರರ್ಥ ಈಗ ಸಂಪೂರ್ಣ ಎಥೆನಾಲ್ ಬಳಸಿಕೊಂಡು ವಾಹನಗಳನ್ನು ಓಡಿಸಲು ಅನುಮತಿಸಲಾಗುತ್ತದೆ.
ನರೇಂದ್ರ ಮೋದಿ ಪ್ರಧಾನಿಯಾಗಿ 12 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಾಗ್ಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಗಡ್ಕರಿ, ಈ ಅನುಮೋದನೆಯು ಎಥೆನಾಲ್ ಅನ್ನು 'ಪೆಟ್ರೋಲ್‌ಗೆ ಕಾರ್ಯಸಾಧ್ಯವಾದ ಪರ್ಯಾಯ ಇಂಧನವಾಗಿ ಹೊರಹೊಮ್ಮಲು ಅನುವು ಮಾಡಿಕೊಡುತ್ತದೆ. ಭಾರತದ ವಾರ್ಷಿಕ ಪಳೆಯುಳಿಕೆ ಇಂಧನ ಆಮದುಗಳಿಂದಾಗುತ್ತಿರುವ ₹22 ಲಕ್ಷ ಕೋಟಿ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಈ ಸಂಬಂಧಿತ ಆದೇಶದ ಕಡತಕ್ಕೆ ಶುಕ್ರವಾರ ರಾತ್ರಿ ಸಹಿ ಹಾಕಲಾಗಿದೆ. ಶೇ 100ರಷ್ಟು ಎಥೆನಾಲ್ ಬಳಕೆಗೆ ಅನುವು ಮಾಡಿಕೊಡಲು ನಿಯಂತ್ರಕ ಚೌಕಟ್ಟನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.
'ವಾಹನಗಳಿಗೆ ಶೇ 100ರಷ್ಟು ಎಥೆನಾಲ್ ಬಳಕೆಗೆ ನಿಯಮ ರೂಪಿಸುವ ಕಡತಕ್ಕೆ ಕಳೆದ ರಾತ್ರಿ 8 ಗಂಟೆ ಸುಮಾರಿಗೆ ನಾನು ಸಹಿ ಹಾಕಿ, ಕಾನೂನು ಪ್ರಕ್ರಿಯೆಗೆ ಕಳುಹಿಸಿದ್ದೇನೆ' ಎಂದು ಹೇಳಿದ್ದಾರೆ.
ಭಾರತದಲ್ಲಿ ಚಾಲನೆಯಲ್ಲಿರುವ ಬಹುತೇಕ ಕಾರುಗಳಲ್ಲಿ ಶೇ 85ರಷ್ಟು ಅಥವಾ ಶೇ 100ರಷ್ಟು ಎಥೆನಾಲ್ ಬಳಸುವ ತಂತ್ರಜ್ಞಾನ ಇಲ್ಲ. ಅಧಿಕ ಪ್ರಮಾಣದ ಗ್ಯಾಸೊಲಿನ್ ಮತ್ತು ಕಡಿಮೆ ಪ್ರಮಾಣದ ಎಥೆನಾಲ್ ಮಿಶ್ರಣ ಬಳಕೆಗೆ ಮಾತ್ರ ಅನುವು ಮಾಡಿಕೊಡುತ್ತವೆ. ಏಕೆಂದರೆ, ಈ ವಾಹನಗಳಲ್ಲಿ ಅಗತ್ಯ ಹಾರ್ಡ್‌ವೇರ್ ಮತ್ತು ಇಂಜಿನ್ ನಿಯತಾಂಕಗಳಿಲ್ಲ.
ಆದರೆ, ಇತ್ತೀಚೆಗೆ ಮಾರುತಿ ಸುಜುಕಿ, ಹೀರೊ ಮೊಟೊಕಾರ್ಪ್, ಟೊಯೊಟಾ, ಸುಜುಕಿ ಮತ್ತು ಹುಂಡೈ ಕಂಪನಿಗಳು ಅಧಿಕ ಪ್ರಮಾಣದಲ್ಲಿ ಅಥವಾ ಸಂಪೂರ್ಣ ಎಥೆನಾಲ್ ಬಳಸಿ ಓಡಿಸಬಲ್ಲ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ.
ಎಥೆನಾಲ್ ನವೀಕರಿಸಬಹುದಾದ ಜೈವಿಕ ಇಂಧನವಾಗಿದ್ದು, ಪ್ರಾಥಮಿಕವಾಗಿ ಕಬ್ಬು, ಜೋಳ ಮತ್ತು ಇತರ ಕೃಷಿ ಕಚ್ಚಾ ವಸ್ತುಗಳ ಉಪಉತ್ಪನ್ನವಾಗಿದೆ. ಭಾರತದಲ್ಲಿ ಹೆಚ್ಚಿನ ಎಥೆನಾಲ್ ಅನ್ನು ಮೊಲಾಸಸ್‌ನಂತಹ ಕಬ್ಬಿನ ಆಧಾರಿತ ಉತ್ಪನ್ನಗಳಿಂದ ಉತ್ಪಾದಿಸಲಾಗುತ್ತದೆ.
ಎಥೆನಾಲ್ ಅನ್ನು ವಿವಿಧ ಪ್ರಮಾಣದಲ್ಲಿ ಪೆಟ್ರೋಲ್‌ನೊಂದಿಗೆ ಬೆರೆಸಬಹುದು ಅಥವಾ ವಿಶೇಷವಾಗಿ ವಿನ್ಯಾಸಗೊಳಿಸಲಾದ ಫ್ಲೆಕ್ಸ್-ಇಂಧನ ವಾಹನಗಳಲ್ಲಿ ಸಂಪೂರ್ಣ ಅದನ್ನೇ ಬಳಸಬಹುದು.
ಪೆಟ್ರೋಲ್ ಜೊತೆ ಎಥೆನಾಲ್ ಬಳಸಿ ವಾಹನ ಚಾಲನೆಯು ಇತ್ತೀಚಿನ ವರ್ಷಗಳಲ್ಲಿ ಬಹಳಷ್ಟು ಹೆಸರುವಾಸಿಯಾಗಿದೆ. ಆರಂಭಿಕವಾಗಿ ಶೇ 5 ಮತ್ತು 10ರಷ್ಟು, ಬಳಿಕ, ಶೇ 20ರಷ್ಟು ಎಥೆನಾಲ್ ಬಳಸುವ ಮೂಲಕ ಪ್ರಯೋಗ ನಡೆಸಲಾಗಿದೆ. ಹೀಗಾಗಿ, ಸರ್ಕಾರವು ನವೀಕರಿಸಬಹುದಾದದ ಇಂಧನ ಉತ್ಪಾದನೆಗೆ ಆದ್ಯತೆ ಹೆಚ್ಚಿಸಿದೆ.
ಬ್ರೆಜಿಲ್ ಮತ್ತು ಅಮೆರಿಕದ ಕೆಲ ಭಾಗಗಳಲ್ಲಿ ಶೇ 85ರಷ್ಟು ಎಥೆನಾಲ್ ಬಳಕೆಯ ವಾಹನಗಳನ್ನು ಬಳಸಲಾಗುತ್ತಿದೆ.
ದೇಶದಲ್ಲಿ ನವೀಕರಿಸಬಹುದಾದ ಇಂಧನದ ಉತ್ಪಾದನೆ ಹೆಚ್ಚಿಸುವ ಮೂಲಕ ಕ್ರಮೇಣ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅವಲಬನೆಯನ್ನು ತಪ್ಪಿಸುವುದು ಸರ್ಕಾರದ ಗುರಿಯಾಗಿದೆ ಎಂದು ಗಡ್ಕರಿ ಹೇಳಿದ್ದಾರೆ.
ವಿವಿಧ ಕಂಪನಿಗಳು ದ್ವಿಚಕ್ರ ವಾಹನ ಸೇರಿದಂತೆ ಶೇ 100ರಷ್ಟು ಎಥೆನಾಲ್ ಬಳಸುವ ವಾಹನಗಳ ಉತ್ಪಾದನೆಯತ್ತ ಶೀಘ್ರ ಚಿತ್ತ ಹರಿಸಲಿವೆ ಎಂದಿದ್ದಾರೆ.

