Dailyhunt Logo
  • Light mode
    Follow system
    Dark mode
    • Play Story
    • App Story
ಗೌರಿ ಜತೆ ನಟ ಅಮೀರ್ ಖಾನ್ ಮದುವೆಗೆ ಸಜ್ಜು; ಮಕ್ಕಳೇ ನಿರ್ಧರಿಸಿದ ವಿಶೇಷ ಮೆನು

ಗೌರಿ ಜತೆ ನಟ ಅಮೀರ್ ಖಾನ್ ಮದುವೆಗೆ ಸಜ್ಜು; ಮಕ್ಕಳೇ ನಿರ್ಧರಿಸಿದ ವಿಶೇಷ ಮೆನು

ಮುಂಬೈ: ಬಾಲಿವುಡ್‌ನ ಹಿರಿಯ ನಟ ಅಮೀರ್ ಖಾನ್ ತಮ್ಮ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಜುಲೈ 5ರಂದು ಗೌರಿ ಸ್ಪ್ರ್ಯಾಟ್ ಅವರೊಂದಿಗೆ ಮೂರನೇ ಮದುವೆಯಾಗಲು ಅಮೀರ್ ಖಾನ್ ಸಜ್ಜಾಗಿದ್ದಾರೆ. ತೀರಾ ಖಾಸಗಿಯಾಗಿ ನಡೆಯಲಿರುವ ಈ ಮದುವೆ ಸಮಾರಂಭದಲ್ಲಿ ಕೇವಲ ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರು ಸೇರಿದಂತೆ 100 ರಿಂದ 150 ಅತಿಥಿಗಳು ಮಾತ್ರ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮದುವೆ ಸಮಾರಂಭವು ಮುಂಬೈನಲ್ಲಿರುವ ಅಮೀರ್ ಖಾನ್ ಅವರ ನಿವಾಸದಲ್ಲೇ ಜುಲೈ 5ರ ಮುಂಜಾನೆ ನೆರವೇರಲಿದೆ. ಈ ಮದುವೆಗೆ ಅಮೀರ್ ಖಾನ್ ಯಾವುದೇ ಲಗ್ನಪತ್ರಿಕೆ ಮುದ್ರಿಸಿಲ್ಲ. ಬದಲಿಗೆ ಅತ್ಯಂತ ಆಪ್ತರು ಮತ್ತು ಸಂಬಂಧಿಕರ ಮನೆಗೆ ಸ್ವತಃ ತಾವೇ ಖುದ್ದಾಗಿ ತೆರಳಿ ಮದುವೆಗೆ ಆಮಂತ್ರಣ ನೀಡುತ್ತಿದ್ದಾರೆ.

ಇನ್ನು, ಅಚ್ಚರಿಯ ಸಂಗತಿಯೆಂದರೆ, ನಟ ಅಮೀರ್ ಖಾನ್ ಚಿತ್ರರಂಗದ ಯಾವುದೇ ನಟ-ನಟಿಯರಿಗೆ ಆಹ್ವಾನ ನೀಡಿಲ್ಲ. ಈ ಹಿಂದೆ ಅಮೀರ್ ಖಾನ್ ಮದುವೆಗೆ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಆಗಮಿಸಲಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಆದರೆ ಆ ವದಂತಿಗಳಿಗೆ ಬ್ರೇಕ್ ಬಿದ್ದಿದ್ದು, ಚಿತ್ರರಂಗದ ಯಾರನ್ನೂ ಕರೆಯದಿರಲು ಅಮೀರ್ ನಿರ್ಧರಿಸಿದ್ದಾರಂತೆ.

ನಟ ಅಮೀರ್ ಖಾನ್ ಮನಗೆದ್ದ ಬೆಂಗಳೂರಿನ ಗೌರಿ ಯಾರು? ಹಿನ್ನೆಲೆಯೇನು?25 ವರ್ಷ ಪೂರೈಸಿದ ಲಗಾನ್: ಮೊದಲು ಕಥೆ ತಿರಸ್ಕರಿಸಿದ್ದ ಅಮೀರ್ ಖಾನ್! ಏಕೆ ಗೊತ್ತಾ?

ಈ ಮದುವೆಯಲ್ಲಿ ಅಮೀರ್ ಖಾನ್ ಅವರ ಮಾಜಿ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್ ಅವರ ಮಕ್ಕಳು ಈ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ಅಮೀರ್ ಖಾನ್, 'ನಾವಿಬ್ಬರೂ ಪರಸ್ಪರ ಬದ್ಧರಾಗಿದ್ದೇವೆ. ಆದರೆ 60ನೇ ವಯಸ್ಸಿನಲ್ಲಿ ಮದುವೆ ನನಗೆ ಸರಿಹೊಂದುತ್ತದೆಯೇ ಇಲ್ಲವೇ ಗೊತ್ತಿಲ್ಲ, ಕಾದು ನೋಡೋಣ' ಎಂದು ಮದುವೆ ಕುರಿತ ಪ್ರಶ್ನೆಗೆ ಉತ್ತರಿಸಿದ್ದರು.

ಇದು ಅಮೀರ್ ಖಾನ್ ಅವರ ಮೂರನೇ ಮದುವೆ

ನಟ ಅಮೀರ್ ಖಾನ್ ಅವರ ವೈವಾಹಿಕ ಜೀವನದತ್ತ ನೋಡುವುದಾದರೆ, ಇದು ಅವರ ಮೂರನೇ ವಿವಾಹವಾಗಿದೆ. ಅವರು ಮೊದಲು ರೀನಾ ದತ್ತಾ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಜುನೈದ್ ಮತ್ತು ಇರಾ ಎಂಬ ಇಬ್ಬರು ಮಕ್ಕಳಿದ್ದಾರೆ. ಇವರು 2002ರಲ್ಲಿ ವಿಚ್ಛೇದನ ಪಡೆದರು. ತದನಂತರ ಖ್ಯಾತ ಚಿತ್ರನಿರ್ಮಾಪಕಿ ಕಿರಣ್ ರಾವ್ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಆಜಾದ್ ಎಂಬ ಮಗನಿದ್ದಾನೆ. ಆದರೆ ಇವರಿಬ್ಬರು ಕೂಡ 2021ರಲ್ಲಿ ಪರಸ್ಪರ ಒಪ್ಪಿಗೆಯಿಂದ ದೂರವಾಗಿದ್ದರು.

 ಅಮೀರ್ ಖಾನ್‌

ಯಾರು ಈ ಗೌರಿ ಸ್ಪ್ರಾಟ್‌..?

ಅಮೀರ್ ಖಾನ್‌ ಅವರು ಬೆಂಗಳೂರು ಮೂಲದ ಗೌರಿ ಸ್ಪ್ರಾಟ್‌ ಅವರೊಂದಿಗೆ ಮದುವೆಯಾಗುತ್ತಿದ್ದಾರೆ. ಗೌರಿ ಅವರು ಬೆಂಗಳೂರು ಮೂಲದ ಉದ್ಯಮಿ. ಇವರಿಗೆ ಆರು ವರ್ಷದ ಮಗ ಕೂಡ ಇದ್ದಾನೆ. ಅವರ ಪತಿಯ ಬಗ್ಗೆ ಎಲ್ಲಿಯೂ ಮಾಹಿತಿ ಹಂಚಿಕೊಂಡಿಲ್ಲ. ಗೌರಿ ಅವರ ತಾಯಿ ರಿಟಾ ಸ್ಪ್ರಾಟ್‌ ಬೆಂಗಳೂರಿನಲ್ಲಿ 'ದಿ ಸ್ಪ್ರಾಟ್ ಹೇರ್ ಸ್ಟುಡಿಯೊ' ಸಲೂನ್ ನಡೆಸುತ್ತಾರೆ. ಅವರು ಪಂಜಾಬಿ-ಐರಿಶ್ ಮೂಲದವರು, ಆದರೆ ಅವರ ತಂದೆ ರಾಬರ್ಟ್ ಸ್ಪ್ರಾಟ್‌ ತಮಿಳು-ಬ್ರಿಟಿಷ್ ಮೂಲದವರು. ವರದಿಗಳ ಪ್ರಕಾರ, ಗೌರಿ ಲಂಡನ್‌ನ ಕಲಾ ವಿಶ್ವವಿದ್ಯಾಲಯದಲ್ಲಿ ಛಾಯಾಗ್ರಹಣ ಮತ್ತು ಫ್ಯಾಷನ್‌ನಲ್ಲಿ ಪದವಿ ಪಡೆದಿದ್ದಾರೆ. ಗೌರಿ ಮತ್ತು ಅಮೀರ್ ಖಾನ್ ಅವರದ್ದು 20 ವರ್ಷಗಳ ಹಿಂದಿನ ಪರಿಚಯ. ಆದರೆ ಮಧ್ಯೆ ಹಲವು ವರ್ಷ ಸಂಪರ್ಕದಲ್ಲಿ ಇರಲಿಲ್ಲ. ಕೆಲವು ವರ್ಷಗಳ ಹಿಂದೆ ಅಮೀರ್ ಅವರ ಸಹೋದರಿಯೊಬ್ಬರ ಮೂಲಕ ಮತ್ತೆ ಭೇಟಿಯಾಗಿದ್ದರು. ನಂತರ ಇಬ್ಬರೂ ಡೇಟಿಂಗ್‌ನಲ್ಲಿದ್ದರು ಎನ್ನುತ್ತವೆ ವರದಿಗಳು.

ಮಕ್ಕಳೇ ನಿರ್ಧರಿಸಿದ 'ವಿಶೇಷ ಮೆನು'

ಅಮಿರ್ ಖಾನ್ ಮದುವೆಯ ದಿನದಂದು ವೈವಿಧ್ಯಮಯ ಖಾದ್ಯಗಳು ಮತ್ತು ಸೌತ್ ಹಾಗೂ ನಾರ್ತ್ ಇಂಡಿಯನ್ ಶೈಲಿಯ ಅಡುಗೆಗಳ ಆಯ್ಕೆಯನ್ನು ಸಂಪೂರ್ಣವಾಗಿ ಮಕ್ಕಳೇ ನಿರ್ಧರಿಸಿದ್ದಾರೆ. ಮದುವೆಯ ಊಟದ ಮೆನುವನ್ನು ಸಂಪೂರ್ಣವಾಗಿ ಆಯ್ಕೆ ಮಾಡಲಾಗಿದ್ದು, ಮಕ್ಕಳಿಗೆ ಇಷ್ಟವಾದ ಮತ್ತು ಅತಿಥಿಗಳಿಗೆ ಇಷ್ಟವಾಗುವ ವಿಶೇಷ ತಿನಿಸುಗಳನ್ನು ಆಯ್ಕೆ ಮಾಡಲಾಗಿದೆ. ಅಲ್ಲದೆ, ಮದುವೆಯ ಎಲ್ಲಾ ಕಾರ್ಯಕ್ರಮಗಳಲ್ಲೂ ಮಕ್ಕಳು ಅತ್ಯಂತ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಮೀರ್ ಖಾನ್ ಇತ್ತೀಚೆಗಷ್ಟೇ 'ಸಿತಾರೇ ಜಮೀನ್ ಪರ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಮುಂಬರುವ ದಿನಗಳಲ್ಲಿ ಅವರು ಖ್ಯಾತ ಕ್ರಿಕೆಟಿಗ ಲಾಲಾ ಅಮರನಾಥ್ ಅವರ ಜೀವನಾಧಾರಿತ ಬಯೋಪಿಕ್ ಹಾಗೂ ಖ್ಯಾತ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರ ಮುಂದಿನ ಹೆಸರಿಡದ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.

ಸುದ್ದಿ ಮೂಲಗಳು: ABP, Etemaad

Dailyhunt
Disclaimer: This content has not been generated, created or edited by Dailyhunt. Publisher: Prajavani