ಸಂತೋಷ ಜಿಗಳಿಕೊಪ್ಪ
ಹಾವೇರಿ: ಗ್ರಾಮ ಆಡಳಿತ ಅಧಿಕಾರಿ (ವಿಎಒ) ನೇಮಕಾತಿ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದ ಅಭ್ಯರ್ಥಿ ಶಂಕರ ಬನ್ನೂರ ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಬಳಸಿರುವುದಕ್ಕೆ ಕೇಂದ್ರದ ಭದ್ರತಾ ಲೋಪ ಕಾರಣ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.
ಹೀಗಾಗಿ ಕೇಂದ್ರದ ಮುಖ್ಯಸ್ಥ ಸೇರಿ ಎಂಟು ಮಂದಿ ವಿರುದ್ಧ ಕಾನೂನು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ.
ಜಿಲ್ಲೆಯ ಶಿಗ್ಗಾವಿಯ ಬಿ.ಬಿ. ಮಾಮ್ಲೆದೇಸಾಯಿ ಸಂಯುಕ್ತ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ, ಕರ್ತವ್ಯಕ್ಕೆ ನಿಯೋಜಿಸಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯವು ವಿಚಾರಣೆಯಿಂದ ಗೊತ್ತಾಗಿದೆ. ಪರೀಕ್ಷೆ ಅಕ್ರಮದ ಬಗ್ಗೆ ವಿಚಾರಣೆ ಪೂರ್ಣಗೊಳಿಸಿರುವ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ವರದಿ ಸಲ್ಲಿಸಿದ್ದಾರೆ.
'ಶಂಕರ ಬನ್ನೂರ, ಪರೀಕ್ಷಾ ಕೇಂದ್ರದೊಳಗೆ ಮೊಬೈಲ್‌ನಂಥ ವಸ್ತು ಬಳಸಿ ಪರೀಕ್ಷೆ ಬರೆದಿರುವುದಕ್ಕೆ ಸಿಸಿಟಿವಿ ಕ್ಯಾಮೆರಾ ದೃಶ್ಯಗಳು ಸಿಕ್ಕಿವೆ. ಪರೀಕ್ಷಾ ಕೇಂದ್ರದಲ್ಲೂ ಸಾಕಷ್ಟು ಭದ್ರತಾ ಲೋಪ ಆಗಿವೆ. ಕೇಂದ್ರದ ಮುಖ್ಯಸ್ಥರೂ ಆಗಿರುವ ಕಾಲೇಜಿನ ಪ್ರಾಂಶುಪಾಲ ರಮಾಕಾಂತ್ ಭಟ್, ಪರೀಕ್ಷಾ ವೀಕ್ಷಕ, ಮೇಲ್ವಿಚಾರಕ, ಪಿಎಸ್‌ಐ, ಎಎಸ್‌ಐ ಹಾಗೂ ಗೃಹ ರಕ್ಷಕ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು' ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
'ಕೈಕೊಟ್ಟ ಜಾಮರ್, ಕುರ್ಚಿ ಬಿಡದ ಮೇಲ್ವಿಚಾರಕ'
'ವಿದ್ಯಾರ್ಥಿಗಳು ತಂದಿದ್ದ ಬ್ಯಾಗ್‌ಗಳನ್ನು ಇರಿಸಲು ಪರೀಕ್ಷಾ ಕೇಂದ್ರದಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಇತ್ತು. ಶಂಕರ ಬ್ಯಾಗ್ ಮಾತ್ರ ಇಟ್ಟು ಮೊಬೈಲ್‌ಫೋನ್ ಜೊತೆ ಕೊಠಡಿಗೆ ಹೋಗಿದ್ದರು. ಇದನ್ನು ಯಾರೂ ಗಮನಿಸಿರಲಿಲ್ಲ' ಎಂಬುದು ಸದ್ಯದ ವಿಚಾರಣೆಯಿಂದ ಗೊತ್ತಾಗಿದೆ.'ಕೊಠಡಿಯ ಕೊನೇ ಸಾಲಿನಲ್ಲಿ ಕೂತ ಶಂಕರ, ಪ್ರಶ್ನೆಪತ್ರಿಕೆಯ ಹಾಳೆಗಳ ಫೋಟೊ ಕ್ಲಿಕ್ಕಿಸಿದ್ದರು. ಬಳಿಕ ಗೂಗಲ್ ಲೆನ್ಸ್ ಮೂಲಕ ಸರಿ ಉತ್ತರ ಪಡೆದು ಒಎಂಆರ್ ಪ್ರತಿ ತುಂಬಿದ್ದರು' ಎಂದು ತಿಳಿದು ಬಂದಿದೆ.
'ಕೆಇಎ ಮೂಲಕ ಗುತ್ತಿಗೆ ಪಡೆದಿದ್ದ ಕಂಪನಿಯೇ ಆವರಣದಲ್ಲಿ ಹಾಕಿದ್ದ ಜಾಮರ್ ಸರಿಯಾಗಿ ಕೆಲಸ ಮಾಡಿಲ್ಲ. ಜೊತೆಗೆ, ಕೊಠಡಿಯ ಮೇಲ್ವಿಚಾರಕರು ಕೂಡ ಕುರ್ಚಿ ಮೇಲೆಯೇ ಕೂತಿದ್ದರು. ಓಡಾಡಲಿಲ್ಲ ಮತ್ತು ಪರಿಶೀಲಿಸಲಿಲ್ಲ. ಕೇಂದ್ರದ ಮುಖ್ಯಸ್ಥ ಸಹ ಕೊಠಡಿಗೆ ಹೋಗಿ ಅಭ್ಯರ್ಥಿಗಳ ಚಲನವಲನ ನೋಡಿಲ್ಲ' ಎಂಬ ಸಂಗತಿ ವರದಿಯಲ್ಲಿದೆ.
ಪರೀಕ್ಷಾ ಅಕ್ರಮದ ವಿಚಾರಣೆ ಬಗ್ಗೆ ಸದ್ಯ ಮಾಹಿತಿ ಬಹಿರಂಗ ಪಡಿಸಲು ಆಗದು. ಎಲ್ಲವನ್ನೂ ಜಿಲ್ಲಾಧಿಕಾರಿಗೆ ತಿಳಿಸಿದ್ದೇವೆ
ಮಹದೇವಸ್ವಾಮಿ, ಉಪನಿರ್ದೇಶಕ, ಪದವಿಪೂರ್ವ ಶಿಕ್ಷಣ ಇಲಾಖೆ
261104-51-1855000399

