Dailyhunt Logo
  • Light mode
    Follow system
    Dark mode
    • Play Story
    • App Story
ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮಾಹಿತಿ ಸಂಗ್ರಹ ಶುರು

ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮಾಹಿತಿ ಸಂಗ್ರಹ ಶುರು

ಬೆಂಗಳೂರು: ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮಾಹಿತಿ ಸಂಗ್ರಹಿಸುವ ಕಾರ್ಯಕ್ಕೆ ಬುಧವಾರ ಚಾಲನೆ ನೀಡಲಾಗಿದೆ. ಆದರೆ, ಸರ್ವರ್‌ ಸಮಸ್ಯೆಯಿಂದಾಗಿ ಮೊದಲ ದಿನ ಹಲವು ಕಡೆ ಮೀಟರ್‌ ರೀಡರ್‌ಗಳಿಗೆ ಮಾಹಿತಿ ಸಂಗ್ರಹಿಸಲು ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ.

ಬೆಸ್ಕಾಂ ವ್ಯಾಪ್ತಿಯಲ್ಲಿ ಬುಧವಾರ ಒಟ್ಟು 2,536 ಫಲಾನುಭವಿಗಳ ಮಾಹಿತಿ ಸಂಗ್ರಹಿಸಲಾಯಿತು.

ಬೇರೆ ಕಂಪನಿಗಳಿಂದ ನಿಖರ ಮಾಹಿತಿ ದೊರೆತಿಲ್ಲ. ಆದರೆ, ಎಲ್ಲ ಕಡೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಬೇರೆ ಕಂಪನಿಗಳ ವ್ಯಾಪ್ತಿಯಲ್ಲಿ ತಲಾ ಒಂದು ಸಾವಿರದಿಂದ 1,500 ಫಲಾನುಭವಿಗಳ ಮಾಹಿತಿ ಸಂಗ್ರಹಿಸಿರುವ ಅಂದಾಜಿದೆ ಎಂದು ಮೂಲಗಳು ತಿಳಿಸಿವೆ.

ಮೀಟರ್‌ ರೀಡರ್‌ಗಳು ಹಾಗೂ ಸಿಬ್ಬಂದಿ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿ, ಸೇವಾ ಸಿಂಧು ಮೊಬೈಲ್‌ ಆಯಪ್‌ನಲ್ಲಿ ದಾಖಲಿಸಿದರು. ಈ ಕಾರ್ಯ ಆಗಸ್ಟ್‌ 31ರವರೆಗೆ ನಡೆಯಲಿದೆ.

ಸರ್ವರ್‌ ಸಮಸ್ಯೆಯಿಂದಾಗಿ ಬುಧವಾರ ಮಾಹಿತಿ ಸಂಗ್ರಹಿಸಲು ಆಗಲಿಲ್ಲ. ಗುರುವಾರ ಈ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ. ಒಬ್ಬ ಮೀಟರ್‌ ರೀಡರ್‌ಗೆ ಸರಾಸರಿ 4ರಿಂದ 5 ಸಾವಿರ ಮನೆಗಳ ಜವಾಬ್ದಾರಿ ವಹಿಸಲಾಗಿದೆ. ಇದರಲ್ಲಿ ಒಂದು ಸಾವಿರ ಮನೆಗಳು ಗೃಹಜ್ಯೋತಿ ವ್ಯಾಪ್ತಿಗೆ ಬರುವುದಿಲ್ಲ ಎಂದು ಅಂದಾಜಿಸಿದರೂ, ಉಳಿದ ಮನೆಗಳಿಂದ ಮಾಹಿತಿ ಸಂಗ್ರಹಿಸ ಬೇಕಾಗುತ್ತದೆ ಎಂದು ಮೀಟರ್‌ ರೀಡರ್‌ ಒಬ್ಬರು 'ಪ್ರಜಾವಾಣಿ'ಗೆ ತಿಳಿಸಿದರು.

ಮೊಬೈಲ್‌ ಆಯಪ್‌ ಜೊತೆಗೆ ಮುದ್ರಿತ ಘೋಷಣಾ ಪತ್ರವನ್ನು ಫಲಾನುಭವಿಗಳ ಸಮ್ಮುಖದಲ್ಲಿ ಸಿಬ್ಬಂದಿ ಭರ್ತಿ ಮಾಡಿಕೊಂಡರು. ಫಲಾನುಭವಿಯ ವಿದ್ಯುತ್‌ ಖಾತೆ ಸಂಖ್ಯೆ, ಗೃಹ ಜ್ಯೋತಿ ನೋಂದಣಿ ಸಮಯದಲ್ಲಿ ನೀಡಿದ್ದ ಆಧಾರ್‌ ಸಂಖ್ಯೆ, ಮೊಬೈಲ್‌ ಸಂಖ್ಯೆ ಸೇರಿದಂತೆ, ಫಲಾನುಭವಿಯ ಪಾಸ್‌ ಪೋರ್ಟ್‌ ಆಳತೆಯ ಭಾವಚಿತ್ರ, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ , ಪ್ಯಾನ್‌ ಕಾರ್ಡ್‌, ಬಾಡಿಗೆ/ಭೋಗ್ಯ (ಲೀಸ್‌) ಕರಾರು ಪತ್ರ (ಅನ್ವಯಿಸಿದರೆ ಮಾತ್ರ) ಹಾಗೂ ಪ್ರವರ್ಗದ ಮಾಹಿತಿ ಪಡೆದರು.ಈ ಎಲ್ಲ ದಾಖಲೆಗಳನ್ನು ಸಿದ್ಧಪಡಿಸಿ ಕೊಂಡು, ಸಿಬ್ಭಂದಿ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಒದಗಿಸುವಂತೆ ಅಧಿಕಾರಿಗಳು ಫಲಾನುಭವಿಗಳಿಗೆ ಮನವಿ ಮಾಡಿದ್ದಾರೆ.

ಬೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 68.86 ಲಕ್ಷ ಗೃಹ ಜ್ಯೋತಿ ಫಲಾನುಭವಿಗಳಿದ್ದು,ಅವರು ನೋಂದಣಿ ಸಮಯದಲ್ಲಿ ನೀಡಿರುವ ಮೊಬೈಲ್‌ ಸಂಖ್ಯೆಗೆ ಮಾಹಿತಿ ಸಂಗ್ರಹ ಹಾಗೂ ಸಿಬ್ಬಂದಿ ಭೇಟಿ ಕುರಿತು ಎಸ್‌ಎಮ್‌ಎಸ್‌ ಸಂದೇಶ ಕಳುಹಿಸಲಾಗಿದೆ. ಮುದ್ರಿತ ಘೋಷಣಾ ಪತ್ರದಲ್ಲಿ ಫಲಾನುಭವಿಗಳ ಸಹಿಯನ್ನು ಪಡೆದುಕೊಳ್ಳಬೇಕು. ಒಂದು ವೇಳೆ ಮಾಹಿತಿ ಪರಿಶೀಲನೆ ಸಮಯದಲ್ಲಿ ಫಲಾನುಭವಿ ಸ್ಥಳದಲ್ಲಿ ಲಭ್ಯವಿಲ್ಲದಿದ್ದರೆ ಫಲಾನುಭವಿಯ ಹತ್ತಿರದ ಸಂಬಂಧಿಯ ಸಹಿಯನ್ನು ಪಡೆಯಲು ಸಿಬ್ಬಂದಿಗೆ ಸೂಚಿಸಲಾಗಿದೆ.

ಬೆಸ್ಕಾಂ ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಫಲಾನುಭವಿಗಳು ನೀಡಿರುವ ಮಾಹಿತಿಯು ಅಪೂರ್ಣವಾಗಿದ್ದರೆ, ಅವರು ನೀಡಿರುವ ಮಾಹಿತಿಗಳನ್ನು ಮೊಬೈಲ್‌ ಆಯಪ್‌ನ ಡ್ರಾಫ್ಟ್‌ನಲ್ಲಿ ಉಳಿಸಿಕೊಂಡು, ಮತ್ತೊಮ್ಮೆ ಫಲಾನುಭವಿಯ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲು ಸೂಚಿಸಲಾಗಿದೆ.

'ಯಾವುದೇ ನಿರ್ಧಾರವಾಗಿಲ್ಲ'

ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಂದ ಮಾಹಿತಿ ಯನ್ನು ಅಷ್ಟೇ ಸಂಗ್ರಹಿಸ ಲಾಗುತ್ತಿದೆ. ಯಾವ ವರ್ಗದ ವರನ್ನು ಕೈಬಿಡಬೇಕು ಎಂಬ ಬಗ್ಗೆ ಚರ್ಚೆಯಾಗಿಲ್ಲ. ಹೀಗಾಗಿ
ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಬೆಸ್ಕಾಂನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಿಂಗಳಿಗೆ 200 ಯೂನಿಟ್‌ ಒಳಗೆ ವಿದ್ಯುತ್‌ ಬಳಕೆ ಮಾಡುವ ಎಲ್ಲರಿಗೂ ಈಗ ಉಚಿತ ವಿದ್ಯುತ್‌ ಸೌಲಭ್ಯವಿದೆ. ಪರಿಶೀಲನೆ ನಂತರ ರಾಜ್ಯದಲ್ಲಿ ಮತದಾನದ ಹಕ್ಕು ಹೊಂದಿಲ್ಲದೆ ಇರುವವರು, ಆದಾಯ ತೆರಿಗೆ ಪಾವತಿದಾರರು ಸೇರಿದಂತೆ ಕೆಲವರನ್ನು ಕೈಬಿಡುವ ಸಾಧ್ಯತೆ ಇದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260702-4-86487210

Dailyhunt
Disclaimer: This content has not been generated, created or edited by Dailyhunt. Publisher: Prajavani