Dailyhunt Logo
  • Light mode
    Follow system
    Dark mode
    • Play Story
    • App Story
ಗುರಿ ಬದಲಿಸುವ ಟ್ರಂಪ್, ನಿಲುವು ಸಡಿಲಿಸದ ಪುಟಿನ್: ಯುದ್ಧ ಸಾರಿ ಗೆಲ್ಲದ ನಾಯಕರು

ಗುರಿ ಬದಲಿಸುವ ಟ್ರಂಪ್, ನಿಲುವು ಸಡಿಲಿಸದ ಪುಟಿನ್: ಯುದ್ಧ ಸಾರಿ ಗೆಲ್ಲದ ನಾಯಕರು

ಬ್ಬ ನಾಯಕ ಕಳೆದ 5 ವರ್ಷಗಳಿಂದ ಯುದ್ಧವನ್ನು ಮುಂದುವರಿಸುತ್ತಿದ್ದರೆ. ಮತ್ತೊಬ್ಬ ನಾಯಕ ಕೇವಲ ಆರು ವಾರಗಳಲ್ಲೇ ಅದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದರು. ಆದರೆ, ಫಲಿತಾಂಶ ಮಾತ್ರ ಇಬ್ಬರಿಗೂ ಒಂದೇ ತೆರನಾಗಿದೆ. ಏಕೆಂದರೆ ತಮ್ಮ ರಾಜಕೀಯ ಮತ್ತು ಸೇನಾ ಗುರಿಗಳನ್ನು ಸಾಧಿಸುವಲ್ಲಿ ಉಭಯ ನಾಯಕರೂ ಯಶಸ್ವಿಯಾಗಿಲ್ಲ.

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಗುರಿ ಬದಲಿಸುವ ಟ್ರಂಪ್, ನಿಲುವು ಸಡಿಲಿಸದ ಪುಟಿನ್: ಯುದ್ಧ ಸಾರಿ ಗೆಲ್ಲದ ಜಾಗತಿಕ ನಾಯಕರು

ಒಂದು ಸಾಲಿನಲ್ಲಿಟ್ರಂಪ್ ಮತ್ತು ಪುಟಿನ್ ಇಬ್ಬರೂ ತಮ್ಮ ಯುದ್ಧತಂತ್ರಗಳಲ್ಲಿ ವೈಫಲ್ಯ ಕಂಡಿದ್ದು, ಯುದ್ಧವನ್ನು ಆರಂಭಿಸುವುದಕ್ಕಿಂತ ಅದನ್ನು ಗೌರವಯುತವಾಗಿ ಅಂತ್ಯಗೊಳಿಸುವುದು ಹೇಗೆ ಎಂಬ ದೊಡ್ಡ ಸವಾಲನ್ನು ಎದುರಿಸುತ್ತಿದ್ದಾರೆ.ಪ್ರಮುಖ ವ್ಯತ್ಯಾಸಗಳುಪುಟಿನ್ ಅವರ ಅಚಲ ಯುದ್ಧತಂತ್ರ• ಪುಟಿನ್ ಅವರ ಸ್ಥಿರ ನಿಲುವುವ್ಲಾಡಿಮಿರ್ ಪುಟಿನ್ ತಮ್ಮ ಯುದ್ಧದ ಗುರಿಗಳನ್ನು ಬದಲಿಸದೆ, ಯುದ್ಧವನ್ನೇ ರಾಜಕೀಯ ಲಾಭದ ಸಾಧನವನ್ನಾಗಿ ಬಳಸಿಕೊಂಡು ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.• ಯುದ್ಧದ ಮೇಲಿನ ರಾಜಕೀಯ ಒತ್ತಡಅಮೆರಿಕದೊಳಗೆ ಯುದ್ಧ ವಿರಾಮದ ನಿರ್ಧಾರ ಟೀಕೆಗೆ ಗುರಿಯಾಗಿದ್ದರೆ, ರಷ್ಯಾದಲ್ಲಿ ದೀರ್ಘಕಾಲದ ಯುದ್ಧದಿಂದ ಆರ್ಥಿಕತೆ ಮತ್ತು ಮಾನವ ಸಂಪನ್ಮೂಲದ ಮೇಲೆ ಭಾರಿ ಹೊಡೆತ ಬಿದ್ದಿದೆ.• ನಾಯಕತ್ವ ಶೈಲಿಯ ವ್ಯತ್ಯಾಸಪುಟಿನ್ ಸೈನಿಕ ಬಲದ ಮೂಲಕ ಒತ್ತಡ ಹೇರಲು ನಂಬಿದರೆ, ಟ್ರಂಪ್ ಮಾತುಕತೆಯ ಮೂಲಕ ಸಂಘರ್ಷವನ್ನು ಶೀಘ್ರವಾಗಿ ಅಂತ್ಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ.ಟ್ರಂಪ್ ಅವರ ಬದಲಾಗುವ ರಾಜತಾಂತ್ರಿಕತೆ• ಟ್ರಂಪ್ ಅವರ ಬದಲಾಗುವ ತಂತ್ರಡೊನಾಲ್ಡ್ ಟ್ರಂಪ್ ಪರಿಸ್ಥಿತಿಗೆ ಅನುಗುಣವಾಗಿ ತಮ್ಮ ರಾಜತಾಂತ್ರಿಕ ನಿಲುವುಗಳನ್ನು ಮತ್ತು ಯುದ್ಧದ ಗುರಿಗಳನ್ನು ಬದಲಿಸುತ್ತಾ, ಶಾಂತಿ ಸಂಧಾನಕ್ಕೆ ಒತ್ತು ನೀಡುತ್ತಿದ್ದಾರೆ.• ನಿರ್ಗಮನದ ಮಾರ್ಗದ ಸವಾಲುಯುದ್ಧದಿಂದ ಹೊರಬರುವ ಸಂದರ್ಭದಲ್ಲಿ ಅಮೆರಿಕ ತನ್ನ ರಾಜಕೀಯ ಚೌಕಟ್ಟನ್ನು ಬದಲಿಸಿಕೊಳ್ಳಬಲ್ಲದು, ಆದರೆ ಪುಟಿನ್‌ಗೆ ಯುದ್ಧವನ್ನೇ ನಿಲ್ಲಿಸುವುದು ಪ್ರತಿಷ್ಠೆಯ ವಿಷಯವಾಗಿದೆ.ಪ್ರಮುಖ ಅಂಕಿಅಂಶಗಳು5 ವರ್ಷಉಕ್ರೇನ್ ಯುದ್ಧದ ಅವಧಿ3.5 ಲಕ್ಷದಿಂದ 4.5 ಲಕ್ಷಅಂದಾಜು ರಷ್ಯನ್ ಸೈನಿಕರ ಸಾವುಆರು ವಾರಇರಾನ್ ಕಾರ್ಯಾಚರಣೆಯ ಅವಧಿಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್ ಅನ್ನು ಮಣಿಸಲು ಐದನೇ ವರ್ಷವೂ ಯುದ್ಧವನ್ನು ಮುಂದುವರಿಸಿದ್ದಾರೆ. ಮತ್ತೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಆರಂಭಿಸಿದ್ದ ವೈಮಾನಿಕ ಕಾರ್ಯಾಚರಣೆಯನ್ನು ಶೀಘ್ರದಲ್ಲೇ ಅಂತ್ಯಗೊಳಿಸಲು ಮುಂದಾದರು. ಆದರೆ, ಯುದ್ಧದಿಂದ ಹೊರಬರಲು ಮಾಡಿದ ಆ ಪ್ರಯತ್ನವೇ ಅವರನ್ನು ಮತ್ತೆ ಅದೇ ಸಂಘರ್ಷದಲ್ಲಿ ಸಿಲುಕಿಕೊಳ್ಳುವಂತೆ ಮಾಡಿದೆ.

ಈ ಎರಡೂ ಯುದ್ಧಗಳು ಸ್ವರೂಪದಲ್ಲಿ ಒಂದೇ ಅಲ್ಲ. ಒಂದೆಡೆ ನೆರೆ ರಾಷ್ಟ್ರದ ವಿರುದ್ಧ ರಷ್ಯಾ ನಡೆಸುತ್ತಿರುವ ಭೂ ಆಕ್ರಮಣ. ಮತ್ತೊಂದೆಡೆ ಮಧ್ಯಪ್ರಾಚ್ಯದಲ್ಲಿ ಇರಾನ್ ವಿರುದ್ಧ ಅಮೆರಿಕ ನಡೆಸಿದ ವೈಮಾನಿಕ ದಾಳಿ. ಎರಡಕ್ಕೂ ವಿಭಿನ್ನ ಕಾರಣಗಳಿವೆ.

ಜಾಗತಿಕ ಪರಿಣಾಮ

ಜಾಗತಿಕ ಇಂಧನ ಮಾರುಕಟ್ಟೆ, ವಾಯು ರಕ್ಷಣಾ ವ್ಯವಸ್ಥೆಗಳ ಪೂರೈಕೆ, ಅಮೆರಿಕದ ರಾಜತಾಂತ್ರಿಕತೆ...ಈ ಎಲ್ಲದರ ಮೇಲೂ ಉಕ್ರೇನ್ ಮತ್ತು ಇರಾನ್ ಯುದ್ಧಗಳು ಪರಸ್ಪರ ಪ್ರಭಾವ ಬೀರುತ್ತಿವೆ.

ವಿಶ್ವದ ಎರಡು ಪ್ರಬಲ ರಾಷ್ಟ್ರಗಳೆಂದು ತಮ್ಮನ್ನು ತಾವು ಬಿಂಬಿಸಿಕೊಳ್ಳುವ ಅಮೆರಿಕ ಮತ್ತು ರಷ್ಯಾ, ತಮ್ಮ ಸೇನಾ ಸಾಮರ್ಥ್ಯವನ್ನು ಪ್ರದರ್ಶಿಸಲು ಯತ್ನಿಸಿದರೂ, ಉದ್ದೇಶಿತ ಫಲಿತಾಂಶಗಳನ್ನು ಪಡೆಯುವಲ್ಲಿ ಎರಡೂ ದೇಶಗಳಿಗೂ ಮಿತಿಗಳಿವೆ ಎಂಬುದನ್ನು ಈ ಬೆಳವಣಿಗೆಗಳು ತೋರಿಸುತ್ತಿವೆ. ಆದರೆ, ಇಲ್ಲಿಯೇ ಟ್ರಂಪ್ ಮತ್ತು ಪುಟಿನ್ ನಡುವಿನ ವ್ಯತ್ಯಾಸವೂ ಸ್ಪಷ್ಟವಾಗುತ್ತದೆ.

ಉಭಯ ನಾಯಕರ ನಿಲುವಿನಲ್ಲಿ ವ್ಯತ್ಯಾಸ

ಪುಟಿನ್, ತಮ್ಮ ಗುರಿಗಳನ್ನು ಬದಲಿಸದೆ ಯುದ್ಧವನ್ನು ಮುಂದುವರಿಸಿದರೆ, ಟ್ರಂಪ್ ಪರಿಸ್ಥಿತಿಗೆ ಅನುಗುಣವಾಗಿ ತಮ್ಮ ನಿಲುವುಗಳನ್ನು ಬದಲಿಸುತ್ತಿದ್ದಾರೆ. ಇರಾನ್ ವಿರುದ್ಧದ ಕಾರ್ಯಾಚರಣೆಯನ್ನು ಮಧ್ಯದಲ್ಲೇ ನಿಲ್ಲಿಸಿದ ಟ್ರಂಪ್ ಅವರ ನಿರ್ಧಾರವೇ ಈಗ ಅಮೆರಿಕದೊಳಗೂ ಟೀಕೆಗೆ ಗುರಿಯಾಗಿದೆ.

ಯುದ್ಧ ವಿರಾಮಕ್ಕೆ ತ್ವರಿತವಾಗಿ ಒಪ್ಪಿಕೊಂಡ ಕಾರಣ ಅಮೆರಿಕ ತನ್ನ ಪ್ರಮುಖ ಒತ್ತಡದ 'ಸಾಧನ'ವನ್ನೇ ಕಳೆದುಕೊಂಡಿತು. ಕಳೆದ ವಾರ ಇರಾನ್ ವಾಣಿಜ್ಯ ಹಡಗುಗಳ ಮೇಲೆ ನಡೆಸಿದ ದಾಳಿ ಮತ್ತು ಅದಕ್ಕೆ ಅಮೆರಿಕ ನೀಡಿದ ಪ್ರತಿಕ್ರಿಯೆ, ಆ ಟೀಕೆಗೆ ಮತ್ತಷ್ಟು ಬಲ ನೀಡಿದೆ ಎನ್ನುತ್ತಾರೆ ವಿಶ್ಲೇಷಕರು.

ಟ್ರಂಪ್ ಹಿಂದೆ ಸರಿದಿದ್ದು ಶಕ್ತಿಯೋ ದೌರ್ಬಲ್ಯವೋ?

ಇರಾನ್‌ ಜೊತೆಗಿನ ಶಾಂತಿ ಒಪ್ಪಂದದ ಮಾತುಕತೆಯಲ್ಲಿ ಟ್ರಂಪ್ ಅನುಭವಿಸುತ್ತಿರುವ ಹಿನ್ನಡೆಯನ್ನು ನೋಡಿ, ಅಮೆರಿಕದ ಕೆಲವು ರಕ್ಷಣಾ ತಜ್ಞರು, ಸೇನಾ ಕಾರ್ಯಾಚರಣೆ ಬೇಗನೆ ನಿಲ್ಲಿಸಿ ಅವರು (ಟ್ರಂಪ್ ) ತಪ್ಪು ಮಾಡಿದರು ಎಂದು ಟೀಕಿಸಿದ್ದಾರೆ. 'ಯುದ್ಧ ನಡೆಯುತ್ತಿರುವಾಗಲೇ ಮಾತುಕತೆ ನಡೆಸಿದ್ದರೆ ನಮಗೆ ಮೇಲುಗೈ ಸಿಗುತ್ತಿತ್ತು. ಪುಟಿನ್ ತಂತ್ರವೂ ಅದೇ ಅಲ್ಲವೇ?' ಎನ್ನುತ್ತಾರೆ ನಿವೃತ್ತ ಜನರಲ್ ಜ್ಯಾಕ್ ಕೀನ್.

ಟ್ರಂಪ್ ಇರಾನ್‌ನೊಂದಿಗೆ ಒಪ್ಪಂದಕ್ಕೆ ಮುಂದಾಗಿದ್ದನ್ನು ಕೆಲವರು ಅಮೆರಿಕದ ದೌರ್ಬಲ್ಯ ಎಂದು ಕರೆದರೆ, ರಷ್ಯಾದಲ್ಲಿ ಈ ಬೆಳವಣಿಗೆಯನ್ನು ಬೇರೆ ದೃಷ್ಟಿಯಿಂದ ವಿಶ್ಲೇಷಿಸಲಾಗುತ್ತಿದೆ.

ಟ್ರಂಪ್ ಇರಾನ್ ಜೊತೆ ಮಾಡಿಕೊಂಡ ಪ್ರಾಥಮಿಕ ತಿಳುವಳಿಕಾ ಒಪ್ಪಂದವು ಅಮೆರಿಕದ ದೌರ್ಬಲ್ಯ ಎನ್ನುತ್ತಾರೆ ಕೆಲ ರಷ್ಯನ್ ವಿಶ್ಲೇಷಕರು. ಜಾಗತಿಕ ವೇದಿಕೆಯಲ್ಲಿ ಅಮೆರಿಕದ ಪ್ರಭಾವ ಕ್ಷೀಣಿಸುತ್ತಿದೆ ಎಂಬ ತಮ್ಮ ವಾದಕ್ಕೆ ಅದು ಮತ್ತೊಂದು ಆಧಾರ ಎಂದಿದ್ದಾರೆ ಅವರು.

ಆದರೆ, ಎಲ್ಲರ ಅಭಿಪ್ರಾಯ ಒಂದೇ ಆಗಿರಲಿಲ್ಲ. ರಷ್ಯಾದ ಆಡಳಿತ ವರ್ಗದ ಕೆಲವರಲ್ಲಿ ಬೇರೆ ರೀತಿಯ ಚರ್ಚೆಯೂ ನಡೆಯುತ್ತಿತ್ತು ಎನ್ನುತ್ತಾರೆ ಕ್ರೆಮ್ಲಿನ್ ರಾಜಕೀಯ ತಜ್ಞೆ ಹಾಗೂ ಕಾರ್ನೆಗಿ ರಷ್ಯಾ ಯುರೇಷಿಯಾ ಕೇಂದ್ರದ ಸಂಶೋಧಕಿ ಟಟಿಯಾನಾ ಸ್ಟಾನೋವಾಯಾ.

ಪುಟಿನ್ ಕೂಡ ಟ್ರಂಪ್ ಅವರಂತೆ ಯುದ್ಧ ನಿಲ್ಲಿಸುವ ನಿರ್ಧಾರ ಮಾಡಬೇಕಿತ್ತು. ಟ್ರಂಪ್‌ ಆರಂಭದಲ್ಲಿ ಸೇನಾ ಕಾರ್ಯಚರಣೆ ನಡೆಸಿದರು. ನಂತರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡರು. ಪುಟಿನ್ ಇದನ್ನು ಯಾವಾಗ ಅರ್ಥ ಮಾಡಿಕೊಳ್ಳುತ್ತಾರೋ? ಎಂಬ ರಷ್ಯಾದ ರಷ್ಯನ್ ಗಣ್ಯರ ಅಭಿಪ್ರಾಯವನ್ನು ಸ್ಟಾನೋವಾಯಾ ಹಂಚಿಕೊಂಡಿದ್ದಾರೆ.

ಈ ಪ್ರಶ್ನೆ ಕೇವಲ ಇಬ್ಬರು ನಾಯಕರ ವ್ಯಕ್ತಿತ್ವದ ಬಗ್ಗೆ ಅಲ್ಲ. ಯುದ್ಧವನ್ನು ಮುಗಿಸುವ ರಾಜಕೀಯ ಇಚ್ಛಾಶಕ್ತಿಯ ಬಗ್ಗೆಯೂ ಆಗಿದೆ.

ಯುದ್ಧದಿಂದ ಹೊರಬರುವ ಅವಕಾಶ

ಕಳೆದ ವರ್ಷ ಟ್ರಂಪ್, ಪುಟಿನ್‌ಗೆ ಯುದ್ಧದಿಂದ ಹೊರಬರುವ ಅವಕಾಶವನ್ನೂ ನೀಡಿದ್ದರು. ಯುದ್ಧ ವಿರಾಮಕ್ಕೆ ಒಪ್ಪಿದರೆ, ರಷ್ಯಾ ಮೇಲಿನ ಕೆಲವು ಆರ್ಥಿಕ ನಿರ್ಬಂಧಗಳನ್ನು ಸಡಿಲಿಸುವುದು ಹಾಗೂ ವ್ಯಾಪಾರ ಅವಕಾಶಗಳನ್ನು ತೆರೆಯುವ ಸಾಧ್ಯತೆಯನ್ನು ಶ್ವೇತಭವನ ಮುಂದಿಟ್ಟಿತ್ತು.

ಆದರೆ, ಈ ಪ್ರಸ್ತಾವನೆಗೆ ವ್ಯಾಪಕ ಟೀಕೆಯೂ ವ್ಯಕ್ತವಾಗಿತ್ತು. ಯುದ್ಧ ಆರಂಭಿಸಿದ ರಾಷ್ಟ್ರಕ್ಕೇ ಪ್ರತಿಫಲ ನೀಡುತ್ತಿರುವಂತಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಆದರೆ ಪುಟಿನ್‌ಗೆ ಅದು ಸಾಕಾಗಲಿಲ್ಲ. ಯುದ್ಧದ 'ಮೂಲ ಕಾರಣಗಳು' ಪರಿಹಾರವಾಗುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.

'ಯುದ್ಧವೇ' ಒತ್ತಡದ ಸಾಧನ

ಕ್ರೆಮ್ಲಿನ್‌ಗೆ ಆಪ್ತ ಮೂಲಗಳ ಪ್ರಕಾರ, ಪುಟಿನ್‌ಗೆ ಯುದ್ಧವೇ ಪ್ರಮುಖ ಒತ್ತಡದ ಸಾಧನವಾಗಿದೆ. ಮೊದಲು ಯುದ್ಧ ನಿಲ್ಲಿಸಿದರೆ, ನಂತರ ಪಶ್ಚಿಮ ರಾಷ್ಟ್ರಗಳಿಂದ ಯಾವುದೇ ರಾಜಕೀಯ ಲಾಭ ಪಡೆಯುವುದು ಕಷ್ಟವಾಗುತ್ತದೆ ಎಂಬುದು ಅವರ ಲೆಕ್ಕಾಚಾರ. ಸೇನಾ ಒತ್ತಡ ಕಡಿಮೆಯಾದ ಕ್ಷಣದಿಂದಲೇ ಮಾತುಕತೆಯಲ್ಲಿನ ತನ್ನ ಬಲವೂ ಕುಗ್ಗತ್ತದೆ ಎಂಬ ನಂಬಿಕೆ ಅವರಲ್ಲಿದೆ.

ಅದೇ ಕಾರಣಕ್ಕೆ, ಟ್ರಂಪ್ ಇರಾನ್‌ನಲ್ಲಿ ಯುದ್ಧ ಆರಂಭಿಸಿದ್ದನ್ನು ಮತ್ತು ಕೆಲವೇ ವಾರಗಳಲ್ಲಿ ಶಾಂತಿ ಒಪ್ಪಂದಕ್ಕೆ ಮುಂದಾಗಿದ್ದನ್ನು ತಪ್ಪು ಎಂದೇ ಪುಟಿನ್‌ ಭಾವಿಸಿದ್ದರು ಎಂಬುವುದಾಗಿ ಕ್ರೆಮ್ಲಿನ್‌ ಆಪ್ತ ಮೂಲಗಳು ಹೇಳಿವೆ.

ಪುಟಿನ್ ಅವರ ದೃಷ್ಟಿಯಲ್ಲಿ, ಎದುರಾಳಿಯಿಂದ ಶಾಶ್ವತ ರಾಜಕೀಯ ಲಾಭ ಪಡೆಯುವವರೆಗೆ ಸೇನಾ ಕಾರ್ಯಾಚರಣೆಯನ್ನು ನಿರಂತರವಾಗಿ ಮುಂದುವರಿಸುವುದೇ ಪರಿಣಾಮಕಾರಿ ತಂತ್ರವಾಗಿದೆ. ಇಲ್ಲಿಯೇ ಟ್ರಂಪ್ ಮತ್ತು ಪುಟಿನ್ ಅವರ ಯುದ್ಧತಂತ್ರಗಳ ನಡುವಿನ ಮೂಲಭೂತ ವ್ಯತ್ಯಾಸ ಸ್ಪಷ್ಟವಾಗುತ್ತದೆ.

ಒಬ್ಬರಿಗೆ, ಯುದ್ಧವೇ ಮಾತುಕತೆಯ ಸಾಧನ...

ಇನ್ನೊಬ್ಬರಿಗೆ, ಮಾತುಕತೆಯೇ ಯುದ್ಧಕ್ಕೆ ಅಂತ್ಯ ಹೇಳುವ ಸಾಧನ.

ಆದರೆ, ಈ ಎರಡೂ ಮಾರ್ಗಗಳು ಉಭಯ ನಾಯಕರಿಗೆ ತಮ್ಮ ಗುರಿಯನ್ನು ಸಾಧಿಸಲು ನೆರವಾಗಿಲ್ಲ. ಅದೇ ಕಾರಣಕ್ಕೆ ಈ ಎರಡೂ ಸಂಘರ್ಷಗಳ ದೊಡ್ಡ ವ್ಯಂಗ್ಯವಾಗಿ ಉಳಿದಿವೆ.

ಒಬ್ಬ ನಾಯಕ, ಮಾತುಕತೆಗೆ ಮುನ್ನ ಸೇನಾ ಕಾರ್ಯಚರಣೆ ಮುಂದುವರಿಯಲು ಬಯಸುತ್ತಾನೆ. ಇನ್ನೊಬ್ಬ ನಾಯಕ, ಸಂಘರ್ಷವನ್ನು ಶೀಘ್ರವೇ ಅಂತ್ಯಗೊಳಿಸಲು ಯತ್ನಿಸುತ್ತಾನೆ. ಆದರೆ, ಇಬ್ಬರ ಮುಂದೆಯೂ ಈಗ ಒಂದೇ ಪ್ರಶ್ನೆ ನಿಂತಿದೆ. ಅದೇನೆಂದರೆ ಯುದ್ಧ ಆರಂಭಿಸುವುದಕ್ಕಿಂತ, ಅದನ್ನು ಮುಗಿಸುವುದೇ ಹೆಚ್ಚು ಕಷ್ಟಕರವೇ? ಎಂಬುವುದು.

ಯುದ್ಧ ನಿಲ್ಲಿಸಬೇಕೇ ಅಥವಾ ಒತ್ತಡ ಮುಂದುವರಿಸಬೇಕೇ?

ಟ್ರಂಪ್ ಆಡಳಿತದೊಳಗಿನ ಎಲ್ಲರೂ ಇರಾನ್‌ ಜೊತೆಗಿನ ಶಾಂತಿ ಒಪ್ಪಂದವನ್ನು ಒಂದೇ ರೀತಿಯಲ್ಲಿ ನೋಡಲಿಲ್ಲ. ಉಕ್ರೇನ್‌ನಲ್ಲಿ ರಷ್ಯಾ ನಡೆಸುತ್ತಿರುವ ಯುದ್ಧ ಮತ್ತು ಇರಾನ್ ವಿರುದ್ಧ ಅಮೆರಿಕ ಕೈಗೊಂಡ ಕಾರ್ಯಾಚರಣೆ ಎರಡೂ ಸ್ವರೂಪದಲ್ಲೂ, ಗುರಿಯಲ್ಲೂ ಹಾಗೂ ಸೇನಾ ಸಾಮರ್ಥ್ಯದಲ್ಲೂ ಸಂಪೂರ್ಣ ವಿಭಿನ್ನ ಎಂಬುವುದು ತಜ್ಞರ ಅಭಿಪ್ರಾಯ.

ಅಮೆರಿಕದ ನಿವೃತ್ತ ಜನರಲ್ ಜಾಕ್ ಕೀನ್ ಅವರ ಪ್ರಕಾರ, ಏಪ್ರಿಲ್‌ನಲ್ಲಿ ಯುದ್ಧ ವಿರಾಮಕ್ಕೆ ಮುಂದಾಗಿದ್ದು ಅಮೆರಿಕದ ದುರ್ಬಲತೆಯಿಂದಲ್ಲ, ಅದು ತೆಗೆದುಕೊಂಡ ರಾಜಕೀಯ ನಿರ್ಧಾರ. ನಾವು ಯುದ್ಧ ವಿರಾಮವನ್ನು ಆಯ್ಕೆ ಮಾಡಿಕೊಂಡೆವು. ಆದರೆ, ಇರಾನ್ ವಿರುದ್ಧದ ನಮ್ಮ ಸೇನಾ ಸಾಮರ್ಥ್ಯ ಮತ್ತು ಉಕ್ರೇನ್‌ನಲ್ಲಿ ಪುಟಿನ್ ಹೊಂದಿರುವ ಸೇನಾ ಸಾಮರ್ಥ್ಯವನ್ನು ಒಂದೇ ತಕ್ಕಡಿಯಲ್ಲಿ ಅಳೆಯಲು ಸಾಧ್ಯವಿಲ್ಲ ಎಂದಿದ್ದಾರೆ.

ಅವರ ಅಭಿಪ್ರಾಯದಲ್ಲಿ, ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳನ್ನು ಮಾತ್ರ ಬಳಸುತ್ತಿರುವ ರಷ್ಯಾಕ್ಕೆ ಉಕ್ರೇನ್‌ನ್ನು ಸಂಪೂರ್ಣವಾಗಿ ತನ್ನ ನಿಯಂತ್ರಣಕ್ಕೆ ತರುವುದು ಸುಲಭದ ಕೆಲಸವಲ್ಲ. ಪುಟಿನ್ ಏನೇ ಮಾಡಿದರೂ, ಉಕ್ರೇನ್ ಮೇಲೆ ಆ ಮಟ್ಟದ ಪ್ರಾಬಲ್ಯ ಸಾಧಿಸಲು ಸಾಧ್ಯವಾಗುವುದಿಲ್ಲ. ಅಮೆರಿಕದ ಪರಿಸ್ಥಿತಿ ಅದಕ್ಕಿಂತ ಭಿನ್ನ. ನಾವು ಬಯಸಿದರೆ ಈ ಯುದ್ಧವನ್ನು ಸೇನಾ ಮಟ್ಟದಲ್ಲೇ ಅಂತ್ಯಗೊಳಿಸುವ ಸಾಮರ್ಥ್ಯ ನಮ್ಮಲ್ಲಿದೆ ಎಂದು ಹೇಳಿದ್ದಾರೆ.

ಈ ವಾದ ಟ್ರಂಪ್ ಆಡಳಿತದೊಳಗಿದ್ದ ಮತ್ತೊಂದು ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಆದರೆ, ಯುದ್ಧಕ್ಕೆ ತೆತ್ತ ಬೆಲೆ ಲೆಕ್ಕ ಹಾಕಿದರೆ ಚಿತ್ರಣ ಬದಲಾಗುತ್ತದೆ.

ಉದ್ಧೇಶಿತ ಗುರಿ ಸಾಧನೆಗೆ ಯತ್ನ

ಉಕ್ರೇನ್ ಯುದ್ಧದಲ್ಲಿ ಪುಟಿನ್ ಈಗಾಗಲೇ ಅಪಾರ ಮಾನವ ಸಂಪನ್ಮೂಲ, ಆರ್ಥಿಕ ಸಂಪನ್ಮೂಲ ಹೂಡಿದ್ದಾರೆ. ಡೊನ್‌ಬಾಸ್ ಪ್ರದೇಶದ ಸಂಪೂರ್ಣ ನಿಯಂತ್ರಣ ಹಾಗೂ ಉಕ್ರೇನ್‌ ನ್ಯಾಟೊ ಸದಸ್ಯತ್ವ ರಾಷ್ಟ್ರವಾಗದಂತೆ ತಡೆಯುವುದು ಅವರ ಯುದ್ಧದ ಘೋಷಿತ ಗುರಿಗಳಾಗಿವೆ.

ಈ ಗುರಿಗಳನ್ನು ಹಲವು ವರ್ಷಗಳಿಂದ ಸಾರ್ವಜನಿಕವಾಗಿ ಪುನರುಚ್ಚರಿಸಿರುವ ಕಾರಣ, ಈಗ ಯುದ್ಧದಿಂದ ಹಿಂದೆ ಸರಿಯುವುದು ಪುಟಿನ್‌ಗೆ ರಾಜಕೀಯ ಹಿನ್ನಡೆಯಾಗಿಯೂ ಕಾಣಬಹುದು. ಸ್ವೇಚ್ಛಾಚಾರದ ಆಡಳಿತ ವ್ಯವಸ್ಥೆಯಲ್ಲಿಯೂ ಆ ದಾರಿಯನ್ನು ಆರಿಸುವುದು ಅವರಿಗೆ ಸುಲಭವಲ್ಲ ಎನ್ನುತ್ತಾರೆ ವಿಶ್ಲೇಷಕರು.

ಆದರೆ ಟ್ರಂಪ್ ಅವರ ಪರಿಸ್ಥಿತಿ ಅದಕ್ಕಿಂತ ಭಿನ್ನ. ಈ ವರ್ಷದ ಫೆಬ್ರುವರಿಯಲ್ಲಿ ಅವರು, ಇರಾನ್‌ನ ಕ್ಷಿಪಣಿಗಳನ್ನು ನಾಶ ಮಾಡುತ್ತೇವೆ ಎಂದು ಘೋಷಿಸಿದ್ದರು. ಆದರೆ, ಕೆಲವೇ ತಿಂಗಳುಗಳ ಬಳಿಕ ಅವರ ಧ್ವನಿ ಬದಲಾಗಿತ್ತು.

ಇತರ ದೇಶಗಳ ಬಳಿ ಬ್ಯಾಲಿಸ್ಟಿಕ್ ಕ್ಷಿಪಣಿಗಳಿದ್ದರೆ, ಇರಾನ್ ಬಳಿ ಇರಲೇಬಾರದು ಎನ್ನುವುದು ತಾರತಮ್ಯವಾಗಬಹುದು ಎಂದಿದ್ದರು. ಹೀಗೆ ಒಂದೇ ವಿಷಯದ ಬಗ್ಗೆ ಟ್ರಂಪ್ ವ್ಯಕ್ತಪಡಿಸಿದ ಈ ವಿಭಿನ್ನ ನಿಲುವುಗಳು, ಅವರ ರಾಜತಾಂತ್ರಿಕ ಧೋರಣೆಯಲ್ಲಿರುವ ದ್ವಂದ್ವತೆಗೆ ಸಾಕ್ಷಿಯಾಗಿವೆ.

ಇಲ್ಲಿಯೇ ಪುಟಿನ್ ಮತ್ತು ಟ್ರಂಪ್ ನಡುವಿನ ಮತ್ತೊಂದು ವ್ಯತ್ಯಾಸ ಗೋಚರಿಸುತ್ತದೆ. ಒಬ್ಬ ನಾಯಕ, ಆರಂಭದಲ್ಲಿ ಘೋಷಿಸಿದ ಗುರಿಗಳಿಂದ ಹಿಂದೆ ಸರಿಯುವುದಿಲ್ಲ. ಇನ್ನೊಬ್ಬ ನಾಯಕ, ಪರಿಸ್ಥಿತಿಗೆ ಅನುಗುಣವಾಗಿ ತನ್ನ ಗುರಿಗಳ ವ್ಯಾಖ್ಯಾನವನ್ನೇ ಬದಲಾಯಿಸಲು ಹಿಂಜರಿಯುವುದಿಲ್ಲ ಎಂಬುವುದು.

ಈ ಎರಡು ವಿಭಿನ್ನ ನಾಯಕತ್ವ ಶೈಲಿಗಳೇ, ಇಂದು ಉಕ್ರೇನ್ ಮತ್ತು ಇರಾನ್ ಯುದ್ಧಗಳ ಮುಂದಿನ ದಿಕ್ಕನ್ನು ನಿರ್ಧರಿಸುತ್ತಿರುವ ಪ್ರಮುಖ ಅಂಶಗಳಾಗಿ ಕಾಣಿಸುತ್ತಿವೆ.

ಇಬ್ಬರು ನಾಯಕರ ದಾರಿಯೂ ಬೇರೆ ಬೇರೆ

ಯುದ್ಧದ 5ನೇ ವರ್ಷಕ್ಕೆ ಕಾಲಿಟ್ಟರೂ, ಪುಟಿನ್ ಹಿಂದೆ ಸರಿಯುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಆ ನಿರ್ಧಾರಕ್ಕೆ ರಷ್ಯಾ ಈಗಾಗಲೇ ಭಾರೀ ಬೆಲೆ ತೆತ್ತಿದೆ. ಅಂದಾಜು 3.5 ಲಕ್ಷದಿಂದ 4.5 ಲಕ್ಷದವರೆಗೆ ರಷ್ಯನ್ ಸೈನಿಕರು ಮೃತಪಟ್ಟಿದ್ದಾರೆ. ಆರ್ಥಿಕತೆಯ ಮೇಲೂ ವ್ಯಾಪಕ ಪರಿಣಾಮ ಬೀರಿದೆ. ಆದರೂ, ಕ್ರೆಮ್ಲಿನ್ ತನ್ನ ಗುರಿಯಿಂದ ಹಿಂದೆ ಸರಿಯುವ ಸೂಚನೆ ನೀಡಿಲ್ಲ.

ಪುಟಿನ್‌ಗೆ, ಯುದ್ಧವನ್ನು ಮಧ್ಯದಲ್ಲೇ ನಿಲ್ಲಿಸುವುದಕ್ಕಿಂತ ಆರಂಭದಲ್ಲಿ ಘೋಷಿಸಿದ ಗುರಿಯನ್ನು ಸಾಧಿಸುವುದೇ ಮುಖ್ಯವಾಗಿದೆ.

ಇತ್ತ ಟ್ರಂಪ್ ಅವರ ನಿಲುವು ಬೇರೆ. ಕಳೆದ ವಾರ ಅವರು ಟೆಹರಾನ್ ಆಡಳಿತವನ್ನು ಕಸ, ರೋಗಗ್ರಸ್ತ, ದುಷ್ಟ, ಹುಚ್ಚು ಎಂದು ಟೀಕಿಸಿದ್ದರು. ಅಗತ್ಯವಿದ್ದರೆ ರಾಷ್ಟ್ರವನ್ನು ಸಂಪೂರ್ಣವಾಗಿ ನಾಶಮಾಡಲು ತಾವು ಸಿದ್ಧ ಎಂದು ಎಚ್ಚರಿಕೆಯನ್ನೂ ನೀಡಿದ್ದರು.

ಯುದ್ಧದಿಂದ ಹೊರಬರುವುದು ಯಾರಿಗೆ ಸುಲಭ?

ಇನ್ನು ಇರಾನ್ ವಿರುದ್ಧದ ಕಾರ್ಯಾಚರಣೆ ಆರಂಭವಾದ ಬಳಿಕ ಟ್ರಂಪ್ ಈಗಾಗಲೇ ಸಾಕಷ್ಟು ರಾಜಕೀಯ ಹಾಗೂ ಆರ್ಥಿಕ ಬೆಲೆ ತೆತ್ತಿದ್ದಾರೆ. ಹೀಗಾಗಿ, ಮತ್ತೊಮ್ಮೆ ಪೂರ್ಣ ಪ್ರಮಾಣದ ಯುದ್ಧಕ್ಕೆ ಅವರು ಮುಂದಾಗುವ ಸಾಧ್ಯತೆ ಕಡಿಮೆ ಎಂಬ ಅಂದಾಜು ಹಲವರಲ್ಲಿದೆ.

ಕಳೆದ ತಿಂಗಳು ಟ್ರಂಪ್ ಸ್ವತಃ ಯುದ್ಧ ಮುಂದುವರಿದಿದ್ದರೆ ಅದರ ಪರಿಣಾಮ ಅಮೆರಿಕದ ಆರ್ಥಿಕತೆಯ ಮೇಲೂ ಬೀಳಬಹುದು ಎಂಬುದನ್ನು ಒಪ್ಪಿಕೊಂಡಿದ್ದರು. ಈ ಹೇಳಿಕೆ, ಪುಟಿನ್ ಅವರ ನಿಲುವಿಗೆ ಸಂಪೂರ್ಣ ವಿರುದ್ಧವಾಗಿದೆ.

ಒಬ್ಬ ನಾಯಕ, ಹೆಚ್ಚು ಬೆಲೆ ತೆತ್ತಾದರೂ ಯುದ್ಧವನ್ನು ಮುಂದುವರಿಸಲು ಸಿದ್ಧನಾಗಿದ್ದಾನೆ. ಇನ್ನೊಬ್ಬ ನಾಯಕ, ಯುದ್ಧಕ್ಕೆ ಹೆಚ್ಚಿನ ಬೆಲೆ ತೆರುವ ಮುನ್ನ ಅದನ್ನು ನಿಲ್ಲಿಸುವ ಪ್ರಯತ್ನ ಮಾಡಿದ್ದಾನೆ.

ಅಮೆರಿಕದ ಮಾಜಿ ವಿಶೇಷ ರಾಯಭಾರಿ ರಾಬರ್ಟ್ ಮ್ಯಾಲಿ ಅವರ ಪ್ರಕಾರ, ಟ್ರಂಪ್ ಅವರ ಈ ನಡೆ ಅನುಕೂಲವೂ ಹೌದು. ಯುದ್ಧದ ಗುರಿಗಳನ್ನು ಅವರು ಕಾಲಕಾಲಕ್ಕೆ ಬದಲಾಯಿಸಿಕೊಂಡಿರುವುದರಿಂದ, ಯಾವ ಹಂತದಲ್ಲಾದರೂ ತಾವು ಗುರಿ ಸಾಧಿಸಿದ್ದೇವೆ ಎಂದು ಘೋಷಿಸಿ ಹೊರಬರುವ ಅವಕಾಶ ಅವರಿಗೆ ಇದೆ. ಆದರೆ, ಪುಟಿನ್‌ಗೆ ಆ ಅವಕಾಶ ಅಷ್ಟೊಂದು ಸುಲಭವಲ್ಲ ಎಂದಿದ್ದಾರೆ.

ಟ್ರಂಪ್ ಈ ಯುದ್ಧದಿಂದ ಕನಿಷ್ಠ ಒಂದು ಪಾಠವನ್ನಾದರೂ ಕಲಿತಂತಿದೆ. ಅದೇನೆಂದರೆ, ಯುದ್ಧವನ್ನು ಮುಂದುವರಿಸುವುದಕ್ಕಿಂತ ಅದನ್ನು ಅಂತ್ಯಗೊಳಿಸುವುದೇ ಉತ್ತಮ ಎಂಬುದು. ಯುದ್ಧ ಆರಂಭಿಸುವ ನಿರ್ಧಾರ ಇಬ್ಬರು ನಾಯಕರದ್ದಾಗಿರಬಹುದು. ಆದರೆ, ಅದನ್ನು ಯಾವಾಗ ಮತ್ತು ಹೇಗೆ ಮುಗಿಸಬೇಕು ಎಂಬ ಪ್ರಶ್ನೆಯೇ ಇಂದು ಟ್ರಂಪ್ ಮತ್ತು ಪುಟಿನ್ ಇಬ್ಬರನ್ನೂ ವಿಭಿನ್ನ ರೀತಿಯಲ್ಲಿ ಸವಾಲು ಎದುರಿಸುವಂತೆ ಮಾಡುತ್ತಿದೆ ಎಂದಿದ್ದಾರೆ.

ಉಕ್ರೇನ್ ಯುದ್ಧ ಇನ್ನೂ ಅಂತ್ಯಗೊಂಡಿಲ್ಲ.

ಇರಾನ್‌ನೊಂದಿಗೆ ಉದ್ವಿಗ್ನತೆಯೂ ಕಡಿಮೆಯಾಗಿಲ್ಲ.

ಒಟ್ಟಿನಲ್ಲಿ ಯುದ್ಧ ಆರಂಭಿಸುವ ಅಧಿಕಾರ ದೊಡ್ಡ ರಾಷ್ಟ್ರಗಳ ನಾಯಕರ ಕೈಯಲ್ಲಿರಬಹುದು. ಆದರೆ, ಅದನ್ನು ತಮ್ಮ ಷರತ್ತುಗಳ ಮೇಲೆ ಅಂತ್ಯಗೊಳಿಸುವ ಅಧಿಕಾರ ಯಾವಾಗಲೂ ಅವರ ಕೈಯಲ್ಲೇ ಇರುವುದಿಲ್ಲ ಎಂಬ ಸತ್ಯವನ್ನು ಈ ಎರಡು ಸಂಘರ್ಷಗಳು ಮತ್ತೊಮ್ಮೆ ನೆನಪಿಸುತ್ತವೆ.

ಆಧಾರ: ನ್ಯೂಯಾರ್ಕ್ ಟೈಮ್ಸ್

Dailyhunt
Disclaimer: This content has not been generated, created or edited by Dailyhunt. Publisher: Prajavani