ಐಪಿಎಲ್ ಕ್ರಿಕೆಟ್ ಹಬ್ಬ ಬಂದಾಗ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕರು ಹಿಂದೇಟು ಹಾಕುತ್ತಾರೆ. ಆದರೆ ಈ ಬಾರಿ ಚಂದನವನದಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಇಂದು (ಏ.10) ಐದು ಸಿನಿಮಾಗಳು ಬಿಡುಗಡೆಯಾಗಿವೆ.
ಕ್ಯಾಲೆಂಡರ್
'ಸ್ವಾರ್ಥರತ್ನ' ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದ ಆದರ್ಶ ಗುಂಡುರಾಜ್ ಅಭಿನಯದ ಚಿತ್ರವಿದು. ಈ ಮಹಿಳಾ ಪ್ರಧಾನ ಚಿತ್ರವನ್ನು ನವೀನ್ ಶಕ್ತಿ ನಿರ್ದೇಶಿಸಿದ್ದು, ಆದರ್ಶ್ ಅವರೇ ನಿರ್ಮಿಸಿದ್ದಾರೆ. ನಾಯಕಿಯರಾಗಿ ನಿವಿಷ್ಕ ಪಾಟೀಲ್ ಹಾಗೂ ಸುಶ್ಮಿತ ನಟಿಸಿದ್ದಾರೆ. ಮಾಲಾಶ್ರೀ ಅವರು ವಿಶೇಷ ಪಾತ್ರದಲ್ಲಿದ್ದಾರೆ. ರಮೇಶ್ ಇಂದಿರಾ, ಪ್ರಮೋದ್ ಶೆಟ್ಟಿ, ಪ್ರಕಾಶ್ ತೂಮಿನಾಡು, ಸುಚೇಂದ್ರ ಪ್ರಸಾದ್, ಚಂದ್ರಪ್ರಭ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಟೆರರ್
ಸಿಲ್ಕ್ ಮಂಜು, ರವಿ ಹಾಗೂ ಸ್ಮಿತಾ ವಸಿಷ್ಠ ನಿರ್ಮಾಣ ಮಾಡಿರುವ ಈ ಸಿನಿಮಾವನ್ನು ರಂಜನ್ ಶಿವರಾಮ್ ಗೌಡ ನಿರ್ದೇಶಿಸಿದ್ದಾರೆ. ಆದಿತ್ಯ ನಾಯಕರಾಗಿ ನಟಿಸಿದ್ದು, ದೇವರಾಜ್, ಶಶಿಕುಮಾರ್, ಕುಮಾರ್ ಬಂಗಾರಪ್ಪ, ಶರತ್ ಲೋಹಿತಾಶ್ವ, ರವಿಚೇತನ್, ಕೋಟೆ ಪ್ರಭಾಕರ್, ರವಿ ಭಟ್, ಅಶ್ವಿನ್ ಹಾಸನ್ ಮುಂತಾದವರು ತಾರಾಬಳಗದಲ್ಲಿದ್ದಾರೆ. 21 ವರ್ಷಗಳ ನಂತರ ಆದಿತ್ಯ ಹಾಗೂ ಶ್ರೀನಗರ ಕಿಟ್ಟಿ ಜೊತೆಯಾಗಿ ಈ ಸಿನಿಮಾ ಮೂಲಕ ಪರದೆ ಮೇಲೆ ಕಾಣಿಸಿಕೊಂಡಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ ನಿರ್ದೇಶನ, ವಿ.ನಾಗೇಂದ್ರಪ್ರಸಾದ್ ಸಾಹಿತ್ಯ ಚಿತ್ರದ ಹಾಡುಗಳಿಗಿವೆ.
ನಟ ವಿಷ್ಣುವರ್ಧನ್ ಅವರ 'ಕೋಟಿಗೊಬ್ಬ' ಸಿನಿಮಾ ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ರೀರಿಲೀಸ್ ಆಗಿದೆ.
ಕಾಡ
ಜಯರಾಮ್ ಕಾರ್ತಿಕ್
(ಜೆ.ಕೆ) ನಾಯಕರಾಗಿ ನಟಿಸಿರುವ ಈ ಚಿತ್ರವನ್ನು ವಿಶೃತ್ ನಾಯಕ್ ನಿರ್ದೇಶಿಸಿದ್ದಾರೆ. ಸೈಕೊ ಥ್ರಿಲ್ಲರ್ ಜಾನರ್‌ನ ಈ ಚಿತ್ರದಲ್ಲಿ ಕಾವ್ಯ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಉಗ್ರಂ ಮಂಜು, ಶ್ರೀರಾಮ್ ಮುಂತಾದವರು ನಟಿಸಿದ್ದಾರೆ.
ಪೀಟರ್
ಪೃಥ್ವಿ ಅಂಬಾರ್ ನಟನೆಯ 'ದೂರದರ್ಶನ' ಸಿನಿಮಾ ನಿರ್ದೇಶಿಸಿದ್ದ ಸುಕೇಶ್ ಶೆಟ್ಟಿ ನಿರ್ದೇಶನದ ಸಿನಿಮಾವಿದು. ಚಿತ್ರದಲ್ಲಿ ಮಣ್ಣಿನ ಸೊಗಡಿನ ಕಥೆಯನ್ನ ಎಳೆಯನ್ನಾಗಿಸಿಕೊಂಡು ಕೌತುಕ ತುಂಬಿದ ಪ್ರೇಮಕಥೆಯನ್ನು ಸುಕೇಶ್ ತೆರೆಗೆ ತಂದಿದ್ದಾರೆ. ಮಡಿಕೇರಿಯ ಭಾಗಮಂಡಲದಲ್ಲಿ ನಡೆಯುವ ರೋಚಕ ಕಥೆ ಚಿತ್ರದಲ್ಲಿದ್ದು, ರಾಜೇಶ್ ಧ್ರುವ, ಜಾನ್ವಿ ಹಾಗೂ ರವೀಕ್ಷಾ ಶೆಟ್ಟಿ ಮುಖ್ಯಭೂಮಿಕೆಯಲ್ಲಿದ್ದಾರೆ. ರಘು ಪಾಂಡೇಶ್ವರ್, ಪ್ರತಿಮಾ ನಾಯಕ್, ರಾಮನಾಡ ಗೌಡ, ವರುಣ್ ಪಟೇಲ್, ಭರತ್, ದೀನಾ, ರಾಧಾಕೃಷ್ಣ ಕುಂಬ್ಳೆ, ರಕ್ಷಿತ್ ದೊಡ್ಡೇರಾ ತಾರಾಗಣದಲ್ಲಿದ್ದಾರೆ. ರಿತ್ವಿಕ್ ಮುರಳೀಧರ್ ಸಂಗೀತ ಸಂಯೋಜನೆ, ಗುರುಪ್ರಸಾದ್ ನಾರ್ನಾಡ್ ಛಾಯಾಚಿತ್ರಗ್ರಹಣ, ನವೀನ್ ಶೆಟ್ಟಿ ಸಂಕಲನ ಚಿತ್ರಕ್ಕಿದೆ. ರವಿ ಹೀರೇಮಠ್ ಮತ್ತು ರಾಕೇಶ್ ಹೆಗ್ಗಡೆ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಈ ಚಿತ್ರವನ್ನು ವಿತರಿಸುತ್ತಿದೆ.
ಗ್ಯಾಂಗ್ಸ್ ಆಫ್ ಯುಕೆ
ರವಿ ಶ್ರೀವತ್ಸ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಸಿನಿಮಾ ಇದು. ರಂಗನಾಥ್ ರವೀಂದ್ರ ಈ ಚಿತ್ರದ ನಿರ್ಮಾಪಕರು. ಬಾಗಲಕೋಟೆಯ ಪಿಲ್ಲಾರಿ ಫಾಲ್ಸ್‌ನಲ್ಲಿ ನಡೆದ ರೋಚಕ ಘಟನೆಯನ್ನು ಆಧರಿಸಿ ಈ ಸಿನಿಮಾ ನಿರ್ಮಾಣವಾಗಿದೆ. ಉತ್ತರ ಕರ್ನಾಟಕದ ಹತ್ಯಾಕಾಂಡ ಎಂಬ ಟ್ಯಾಗ್‌ಲೈನ್ ಚಿತ್ರಕ್ಕಿದೆ.

