Dailyhunt Logo
  • Light mode
    Follow system
    Dark mode
    • Play Story
    • App Story
ಗ್ಯಾರಂಟಿ ನಿರಾತಂಕ, ಅಭಿವೃದ್ಧಿಗೂ ಅಂಕ: ಇದು ಸಿದ್ದರಾಮಯ್ಯ ಅರ್ಥಲೋಕ

ಗ್ಯಾರಂಟಿ ನಿರಾತಂಕ, ಅಭಿವೃದ್ಧಿಗೂ ಅಂಕ: ಇದು ಸಿದ್ದರಾಮಯ್ಯ ಅರ್ಥಲೋಕ

ಗ್ಯಾರಂಟಿಗಳ ಭಾರವಿದ್ದರೂ ಅದರ ಹಂಗು ತೊರೆಯದೇ, ಯಾವುದೇ ಜನಪ್ರಿಯ ಘೋಷಣೆಗಳ ಮೊರೆ ಹೋಗದೇ ಕರ್ನಾಟಕವನ್ನು ಮಾದರಿ ರಾಜ್ಯವಾಗಿಸುವ ಪ್ರಮೇಯಗಳನ್ನು ಬಜೆಟ್‌ನಲ್ಲಿ ಮುಂದಿಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾಡನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಕಿರುದಾರಿಗಳ ಹುಡುಕಿ, ಅದಕ್ಕೆ ಬೇಕಾದ ಕುಸುರಿ ಕೆಲಸವನ್ನು ಬಜೆಟ್ ಪುಸ್ತಕದ ಪ್ರತಿ ಪುಟದಲ್ಲಿ ನೇಯುವ ಯತ್ನ ಮಾಡಿದ್ದಾರೆ.

ಹಣಕಾಸು ಖಾತೆಯನ್ನೂ ಹೊಂದಿರುವ ಸಿದ್ದರಾಮಯ್ಯ ತಮ್ಮದೇ ದಾಖಲೆಯ 17ನೇ ಬಜೆಟ್‌ ಅನ್ನು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದರು. ವಿಧಾನಸಭೆ ಚುನಾವಣೆಗೆ ಮುನ್ನ ಘೋಷಿಸಿದ್ದ 'ಗ್ಯಾರಂಟಿ'ಗಳ ಅನುಷ್ಠಾನಕ್ಕೆ ಹಿಂದಿನ ಮೂರು ಬಜೆಟ್‌ನಲ್ಲಿ ಅವರು ಕಸರತ್ತು ಮಾಡಿದ್ದರು. ಈ ಬಾರಿ, ಅದಕ್ಕಿಂತ ಭಿನ್ನದಾರಿಯಲ್ಲಿ ಸಾಗಿರುವ ಮುಖ್ಯಮಂತ್ರಿ, ಅಭಿವೃದ್ಧಿಯ ಗುಂಗಿಗೆ ಆಡಳಿತಾಂಗದ ಬಲವನ್ನು ಒಳಗು ಮಾಡುವ ಮೂಲಕ ತಮ್ಮ ಮೊದಲ ಅವಧಿಯಲ್ಲಿನ ಹಳಿಗೆ ಮರಳಿದ್ದಾರೆ.

‌ಜಿಎಸ್‌ಟಿ ಸ್ಲ್ಯಾಬ್‌ ಪರಿಷ್ಕರಣೆಯಿಂದ ಸಂಪನ್ಮೂಲ ಕೊರತೆ, ಕೇಂದ್ರದ ಪಾಲಿನಲ್ಲಿ ಕಡಿತ, ಕೇಂದ್ರ ಪುರಸ್ಕೃತ ಯೋಜನೆ ಹಾಗೂ ಸಹಾಯಾನುದಾನದಲ್ಲಿ ಇಳಿಕೆಯ ಮಧ್ಯೆಯೇ ಬಜೆಟ್‌ ಗಾತ್ರ ಹಿಂದಿನ ಸಾಲಿಗಿಂತ ಕಡಿಮೆಯಾಗಬಹುದು ಎಂಬ ಲೆಕ್ಕಾಚಾರಗಳಿದ್ದವು. ಕರ್ನಾಟಕದ ಬಜೆಟ್‌ ಗಾತ್ರವನ್ನು ಹಿಂದಿನ ವರ್ಷ ₹4.09 ಲಕ್ಷ ಕೋಟಿಗೆ ಮುಟ್ಟಿಸಿದ್ದ ಸಿದ್ದರಾಮಯ್ಯ, ಈ ಸಾಲಿನಲ್ಲಿ ₹4.48 ಲಕ್ಷ ಕೋಟಿಗೆ ಹೆಚ್ಚಿಸಿದ್ದಾರೆ. ಸಾಲದ ಪ್ರಮಾಣ ನಿರೀಕ್ಷೆಯಂತೆ ಹೆಚ್ಚಾಗಿದ್ದರೂ ಆರ್ಥಿಕ ಶಿಸ್ತಿನ ಮಿತಿಯನ್ನು ಮೀರದಿರುವ 'ಜಾಣತನ'ವನ್ನು ತೋರಿದ್ದಾರೆ.

'ಪ್ರಗತಿಶೀಲ ರಾಜ್ಯದ ಜನರ ತೆರಿಗೆ ಹಣಕ್ಕೆ ಪ್ರಮುಖ ಟ್ರಸ್ಟಿಯಾದ ನಾನು ಸರ್ವರ ಏಳಿಗೆಯನ್ನು ಬಯಸಿ ಆಯವ್ಯಯವನ್ನು ಮಂಡಿಸುತ್ತಿದ್ದೇನೆ' ಎಂದು ತಮ್ಮ ಬಜೆಟ್ ಭಾಷಣ ಆರಂಭಿಸಿದ ಅವರು, ಏಳು ಕೋಟಿ ಕನ್ನಡಿಗರ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ. ಜನಕೇಂದ್ರಿತ ಆರ್ಥಿಕ ತತ್ವಗಳ ಮೂಲಬಿಂದು ಇದೇ ಆಗಿದೆ' ಎಂದು ಪ್ರತಿಪಾದಿಸಿದರು. ಅದಕ್ಕಾಗಿಯೇ ಈ ಸರ್ತಿ 11 ಜಿ ಎಂಬ ಪರಿಕಲ್ಪನೆಯನ್ನು ಪ್ರಸ್ತಾಪಿಸಲಾಗಿದ್ದು, ಅದೇ ಬಜೆಟ್‌ನ ಹೂರಣವಾಗಿದೆ.

ಲಾಗಾಯ್ತಿನಿಂದಲೂ ದಮನಿತರು, ಮಹಿಳೆಯರು, ಪರಿಶಿಷ್ಟರು, ಹಿಂದುಳಿದವರು, ಅಲ್ಪಸಂಖ್ಯಾತರು, ರೈತರ ಪರವಾದ ನಿಲುವನ್ನು ತಮ್ಮ ಬಜೆಟ್‌ಗಳಲ್ಲಿ ಪ್ರತಿಬಿಂಬಿಸಿದ್ದ ಅವರು ಈ ಬಾರಿಯೂ ಅದನ್ನೇ ಮುಂದುವರಿಸಿದ್ದಾರೆ. ಕಾಂಗ್ರೆಸ್‌ ಪಕ್ಷದ ಮತ ಬ್ಯಾಂಕ್ ಆಗಿರುವ ಪರಿಶಿಷ್ಟರು ಹಾಗೂ ಅಹಿಂದ ಸಮುದಾಯವನ್ನು ಕೇಂದ್ರೀಕರಿಸಿ ಬಜೆಟ್ ರೂಪಿಸಿದ್ದಾರೆ.

ಸದ್ಯದಲ್ಲಿ ಎಲ್ಲ ಕ್ಷೇತ್ರಗಳನ್ನೂ ಪ್ರಭಾವಿಸುತ್ತಿರುವ ಕೃತಕ ಬುದ್ಧಿಮತ್ತೆಯ (ಎ.ಐ) ಬಗ್ಗೆ ಜಾಗೃತ ಹೆಜ್ಜೆ ಇಡುವತ್ತ ಬಜೆಟ್ ಲಕ್ಷ್ಯ ವಹಿಸಿದ್ದು, ಅದಕ್ಕೆ ನಾಡ ಜನರನ್ನು ತಯಾರು ಮಾಡುವ ರೂಪುರೇಷೆಗಳು ಬಜೆಟ್‌ನ ಭಾಗವಾಗಿವೆ. 'ಕೃತಕ ಬುದ್ಧಿಮತ್ತೆಯ (AI) ಕ್ರಾಂತಿಕಾರಕ ಬೆಳವಣಿಗೆಗಳಿಂದ ಜಾಗತಿಕ ಉತ್ಪಾದನಾ ವಿಧಾನಗಳು ದಿನ ದಿನಕ್ಕೂ ಬದಲಾಗುತ್ತಿವೆ. ಈ ಸಂದರ್ಭದಲ್ಲಿ ನಾವು ಬೆಂಕಿಯನ್ನು ಬೆಳಕಾಗಿಸಿಕೊಳ್ಳುವ ಸಂಕಲ್ಪ ಹೊತ್ತು ಮುನ್ನಡೆಯಬೇಕಾಗಿದೆ' ಎಂಬ ಸೂಕ್ಷ್ಮತೆ ಬಜೆಟ್‌ನ ರೂಪಣೆಯ ಹಿಂದಿನ ಶಕ್ತಿಯಾದಂತೆ ತೋರುತ್ತದೆ. ಕೃತಕ ಬುದ್ಧಿಮತ್ತೆಯ ಸಮರ್ಪಕ ಬಳಕೆಯ ಬಗ್ಗೆ ಅನೇಕ ಕಡೆ ಉದ್ದೇಶಿತ ಪ್ರಸ್ತಾವಗಳು ಇವೆ.

‌ಮೂಲಸೌಕರ್ಯ, ಕೈಗಾರಿಕೆ, ಇಂಧನ ಕ್ಷೇತ್ರಗಳಲ್ಲಿನ ಬಂಡವಾಳ ವೆಚ್ಚವನ್ನು ಹೆಚ್ಚಿಸುವ ಬಗ್ಗೆ ಬಜೆಟ್ ಒತ್ತು ನೀಡಿದೆ. ಬೆಂಗಳೂರು ಕೇಂದ್ರಿತವಲ್ಲದೇ, ಎರಡು ಮತ್ತು ಮೂರನೇ ಹಂತದ ನಗರಗಳಿಗೆ ಉದ್ಯಮ ಸೃಷ್ಟಿಯ ಅವಕಾಶದ ಬಾಗಿಲನ್ನು ಬಜೆಟ್‌ನಲ್ಲಿ ತೆರೆಯಲಾಗಿದೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಉಸ್ತುವಾರಿಯಲ್ಲಿರುವ ಜಲಸಂಪನ್ಮೂಲ ಇಲಾಖೆಯ ಮಹತ್ವದ ಯೋಜನೆಗಳಿಗೆ ದೊಡ್ಡ ಮೊತ್ತದ ಅನುದಾನ ನೀಡಿಲ್ಲ. ಮೇಕೆದಾಟು, ಕೃಷ್ಣ ಮೇಲ್ದಂಡೆ, ಮಹದಾಯಿ, ಎತ್ತಿನ ಹೊಳೆ ಯೋಜನೆಗಳನ್ನು ಪ್ರಸ್ತಾಪಿಸಲಾಗಿದೆ. ಕೇಂದ್ರದ ಅನುಮತಿ, ಕಾನೂನು ತೊಡಕು ವಿಷಯಗಳನ್ನು ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದ್ದು, ಅವುಗಳ ತೀರುವಳಿ ಬಳಿಕ ಯೋಜನೆ ಅನುಷ್ಠಾನ ಮಾಡಲಾಗುವುದು ಎಂದು ಭರವಸೆಯ ಮಾತುಗಳನ್ನಷ್ಟೇ ಆಡಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯ 135 ಕಿ.ಮೀ ಉದ್ದದ ಚಿತ್ರದುರ್ಗ ಶಾಖಾ ಕಾಲುವೆ ಹಾಗೂ ಫೀಡರ್ ಕಾಮಗಾರಿಗಳನ್ನು ಮುಗಿಸಿ 2027ರಲ್ಲಿ 157 ಕೆರೆಗಳನ್ನು ತುಂಬಿಸಲಾಗುವುದು ಎಂದು ಪ್ರಸ್ತಾಪಿಸಲಾಗಿದೆ.

ದೊಡ್ಡ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡದೇ ಇದ್ದರೂ ಸಣ್ಣ ನೀರಾವರಿ ಯೋಜನೆಗಳು, ಕೆರೆಗಳ ಅಭಿವೃದ್ಧಿ, ಏತ ನೀರಾವರಿ ಯೋಜನೆಗಳಿಗೆ ಅನುದಾನ ಮೀಸಲಿಡಲಾಗಿದೆ.

‍ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಏಳಿಗೆಗೆ ಆದ್ಯತೆ ಸಿಕ್ಕಿದೆ. ಸುಮ್ಮನೆ ಅನುದಾನ ನೀಡುವ ಬದಲು, ಶಾಲೆ-ಕಾಲೇಜು, ವಿದ್ಯಾರ್ಥಿ ನಿಲಯಗಳ ನಿರ್ಮಾಣ, ಅಂಬೇಡ್ಕರ್‌ ಹಾಗೂ ಸಂತ ಶಿಶುನಾಳ ಷರೀಫರ ಹೆಸರಿನಲ್ಲಿ ವಸತಿ ಶಾಲೆಗಳ ಆರಂಭ, ಕೌಶಲ ತರಬೇತಿಗೆ ಒತ್ತುವ ನೀಡುವ ಯೋಜನೆಗಳನ್ನು ಘೋಷಿಸಿ ಅನುದಾನ ನಿಗದಿಪಡಿಸಲಾಗಿದೆ.

ಪರಿಶಿಷ್ಟ ಪಂಗಡಗಳ ಆಯೋಗ, ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮ, ಬೌದ್ಧ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವುದಾಗಿ ಘೋಷಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ವ್ಯಾಪ್ತಿಯ ನಿಗಮಗಳಲ್ಲಿ 2021ರಿಂದ ಈಚೆಗೆ ಮಾಡಿರುವ ಸಾಲವನ್ನು ಪಾವತಿಸಿದರೆ ಒಂದಾವರ್ತಿ ಬಡ್ಡಿ ಮನ್ನಾ ಮಾಡುವ ಘೋಷಣೆ ಮಾಡಿದ್ದಾರೆ.

ಗೃಹ ಲಕ್ಷ್ಮಿಗೆ ₹28,608 ಕೋಟಿ, ಗೃಹ ಜ್ಯೋತಿಗೆ ₹10,578 ಕೋಟಿ, ಅನ್ನಭಾಗ್ಯದ ಬದಲು ಜಾರಿ ಮಾಡಿರುವ ಇಂದಿರಾ ಆಹಾರ ಕಿಟ್‌ಗೆ ₹6,200 ಕೋಟಿ, ಶಕ್ತಿ ಯೋಜನೆಗೆ ₹5,300 ಕೋಟಿ ಹಾಗೂ ಯುವನಿಧಿಗೆ ₹600 ಕೋಟಿ ಸೇರಿ ಒಟ್ಟು ₹51,286 ಕೋಟಿ ಒದಗಿಸಲಾಗಿದೆ. ಕಳೆದ ಸಾಲಿನಲ್ಲಿ ಈ ಮೊತ್ತವು ₹51,034 ಕೋಟಿಯಷ್ಟಿತ್ತು.

ಮದ್ಯದ ದರ ಏರಿಕೆಯಾಗುವ ಎಲ್ಲ ಸೂಚನೆಗಳೂ ಬಜೆಟ್‌ ವಿವರಗಳಲ್ಲಿ ಇವೆ. ಈಗ ಬಿಯರ್‌, ವೈನ್‌, ವಿಸ್ಕಿ... ಹೀಗೆ ಮದ್ಯದ ಸ್ವರೂಪ ಆಧರಿಸಿ ಭಿನ್ನ ದರದ ಅಬಕಾರಿ ಸುಂಕ ವಿಧಿಸಲಾಗುತ್ತಿದೆ. ಮುಂದೆ ಪ್ರತಿ ಸ್ವರೂಪದ ಮದ್ಯದಲ್ಲಿರುವ ಆಲ್ಕೊಹಾಲ್‌ ಪ್ರಮಾಣ ಆಧರಿಸಿ ಅಬಕಾರಿ ಸುಂಕ ವಿಧಿಸಲಾಗುತ್ತದೆ. 2026-27ನೇ ಸಾಲಿನಲ್ಲಿ ಅಬಕಾರಿ ಸುಂಕ ಮೂಲದ ₹45,000 ಕೋಟಿ ಆದಾಯ ಗುರಿ ಹಾಕಿಕೊಳ್ಳಲಾಗಿದೆ. ಮದ್ಯದ ಬೆಲೆ ಏರಿಕೆಯಾಗಲಿದೆ ಎಂಬುದನ್ನೇ ಇದೂ ಸೂಚಿಸುತ್ತದೆ.
ಮದ್ಯ ದುಬಾರಿ..?

ಕಲೆ: ಸಂತೋಷ್ ಸಸಿಹಿತ್ಲು

16 ವರ್ಷದೊಳಗಿನ ಮಕ್ಕಳಿಗೆ ಜಾಲತಾಣದ ಬಳಕೆಯನ್ನು ನಿಷೇಧಿಸ ಲಾಗುವುದು ಎಂದು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಹೆಚ್ಚುತ್ತಿರುವ ಮೊಬೈಲ್ ಬಳಕೆಯಿಂದ ಮಕ್ಕಳ ಮೇಲೆ ಬೀರುವ ಅಡ್ಡ ಪರಿಣಾಮ ಗಳನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗುವುದು ಎಂದೂ ಉಲ್ಲೇಖಿಸಲಾಗಿದೆ.ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ

11ಜಿ ಆರ್ಥಿಕತೆ' ಎಂದರೆ

  1. ಗ್ಯಾರಂಟಿ ಎಕಾನಮಿ: ಕಲ್ಯಾಣ - ಸಮಾನತೆ

  2. ಗುಡ್‌ ಗವರ್ನೆನ್ಸ್‌: ಜನಸ್ನೇಹಿ ಆಡಳಿತ

  3. ಗುಡ್‌ ಪಬ್ಲಿಕ್‌ ಎಜುಕೇಷನ್‌: ಸರ್ವರಿಗೂ ಶಿಕ್ಷಣ

  4. ಗುಡ್‌ ಹೆಲ್ತ್‌ ಟು ಆಲ್‌: ಸಮಗ್ರ ಆರೋಗ್ಯ,

  5. ಗ್ರಾಸ್‌ರೂಟ್‌ ಎಕಾನಮಿ: ಕೃಷಿ, ಗ್ರಾಮೀಣಾಭಿವೃದ್ಧಿ

  6. ಗಿಗ್‌ ಎಕಾನಮಿ: ಕಾರ್ಮಿಕ ಕಲ್ಯಾಣ

  7. ಜಿಯೊಗ್ರಾಫಿಕಲ್‌ ಈಕ್ವಾಲಿಟಿ: ಪ್ರಾದೇಶಿಕ ಅಸಮಾನತೆಯ ನಿವಾರಣೆ

  8. ಗ್ಲೋಬಲ್‌ ಟ್ರೇಡ್‌ ಎಕಾನಮಿ: ವ್ಯಾಪಾರ ಮತ್ತು ಕೈಗಾರಿಕಾಭಿವೃದ್ಧಿ

  9. ಗ್ಲೋಬ್‌ ಟ್ರೋಟಿಂಗ್‌ ಎಕಾನಮಿ: ಪ್ರವಾಸೋದ್ಯಮ ಆರ್ಥಿಕತೆ

  10. ಗ್ರೀನ್‌ ಎಕಾನಮಿ: ಪರಿಸರ ಪೂರಕ ಆರ್ಥಿಕ ಚಟುವಟಿಕೆ

  11. ಗ್ರೋವಿಂಗ್ ಅರ್ಬನ್‌ ಎಕಾನಮಿ: ನಗರ ಕೇಂದ್ರಿತ ಸುಸ್ಥಿರ ಆರ್ಥಿಕತೆ

ವಿವಿಧ ಇಲಾಖೆಗಳ ಗುರಿಗಳನ್ನು ಬಜೆಟ್‌ನಲ್ಲಿ ನಿಗದಿ ಪಡಿಸುವಾಗ 32 ಸಾವಿರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವುದಾಗಿ ಪ್ರಸ್ತಾಪಿಸಲಾಗಿದೆ. ರಾಜ್ಯದಲ್ಲಿ ಖಾಲಿ ಇರುವ 2.84 ಲಕ್ಷ ಹುದ್ದೆಗಳ ಪೈಕಿ 56,432 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ 30 ದಿನದೊಳಗೆ ಚಾಲನೆ ನೀಡಲು ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳ ಲಾಗಿತ್ತು. ಈಗ ಪ್ರಸ್ತಾಪಿಸಿ ರುವ ನೇಮಕಾತಿಗೆ ಕಾಲಮಿತಿ ನಿಗದಿಪಡಿಸಿಲ್ಲ.32 ಸಾವಿರ ಹುದ್ದೆಗೆ ನೇಮಕ- ಎಚ್‌.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವಆದಾಯದ ಕೊರತೆ, ಹೆಚ್ಚುತ್ತಿರುವ ಸಾಲ, ತಾಳಮೇಳವಿಲ್ಲದ ಅನುದಾನ ಹಂಚಿಕೆ... ಸಿದ್ದರಾಮಯ್ಯ ಅವರ ಲೆಕ್ಕಾಚಾರ ಹಳಿತಪ್ಪಿದೆ ಎಂಬುದಕ್ಕೆ ಬಜೆಟ್‌ ಪುಸ್ತಕವೇ ಸಾಕ್ಷಿ. ನಿರೀಕ್ಷೆಗಳನ್ನು ಸೃಷ್ಟಿಸಿ, ಅತೀವ ನಿರಾಸೆ ಉಂಟುಮಾಡಿದ್ದಾರೆ. ಈ ಬಜೆಟ್‌ ಕರ್ಣಕಠೋರ ಮತ್ತು ರಾಜ್ಯಕ್ಕೆ ಭಾರ. ಮುಖ್ಯಮಂತ್ರಿ ಅವರು ಕೇಂದ್ರದ ನಿಂದನೆಯನ್ನು ಈಗಲೂ ಮುಂದುವರಿಸಿದ್ದಾರೆ.- ಆರ್‌.ಅಶೋಕ, ವಿಧಾನಸಭೆ ವಿರೋಧ ಪಕ್ಷದ ನಾಯಕಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನರ ಮೇಲೆ ಸಾಲದ ಹೊರೆ ಹೇರಿದ್ದಾರೆ. ಈ ಸರ್ಕಾರವು ಒಟ್ಟು ₹4.39 ಲಕ್ಷ ಕೋಟಿ ಸಾಲ ಮಾಡಿದೆ. ಈ ಹಣಕ್ಕೆ ಬಡ್ಡಿ ಪಾವತಿಸಲೂ ಆಗದ ಪರಿಸ್ಥಿತಿ ಇದೆ. 'ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು' ಕೊಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರ ಸರ್ಕಾರವು ಈಗ, 'ಸರ್ವರಿಗೂ ತೆರಿಗೆ, ಸರ್ವರಿಗೂ ಸಾಲ' ಎನ್ನುತ್ತಿದೆ. ಯಾವ ಯೋಜನೆಯೂ ಇಲ್ಲದ ಖಾಲಿ ಚೊಂಬಿನ ಬಜೆಟ್‌ ಇದು.
Dailyhunt
Disclaimer: This content has not been generated, created or edited by Dailyhunt. Publisher: Prajavani