Dailyhunt Logo
  • Light mode
    Follow system
    Dark mode
    • Play Story
    • App Story
'ಗ್ಯಾರಂಟಿ' ವಿಚಾರದಲ್ಲಿ ಕಾಂಗ್ರೆಸ್ ಕುಂಟು ನೆಪ ಹುಡುಕುತ್ತಿದೆ:ಬಿ.ವೈ.ವಿಜಯೇಂದ್ರ

'ಗ್ಯಾರಂಟಿ' ವಿಚಾರದಲ್ಲಿ ಕಾಂಗ್ರೆಸ್ ಕುಂಟು ನೆಪ ಹುಡುಕುತ್ತಿದೆ:ಬಿ.ವೈ.ವಿಜಯೇಂದ್ರ

ಶಿವಮೊಗ್ಗ: 'ಗ್ಯಾರಂಟಿ ಯೋಜನೆ ಫಲಾನುಭವಿಗಳ ಕಡಿತ ಮಾಡಲು ಮಾನದಂಡ ಬದಲಾವಣೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಇದು ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಅನುಮಾನ ಮೂಡಿಸಿದ್ದು, ಸರ್ಕಾರ ಶ್ವೇತಪತ್ರ ಹೊರಡಿಸಲಿ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ 'ಗ್ಯಾರಂಟಿ' ಯೋಜನೆಗಳ ಬಗ್ಗೆ ಸರ್ಕಾರವೇ ವ್ಯತಿರಿಕ್ತ ಹೇಳಿಕೆ ನೀಡುತ್ತಿದೆ. ಜೊತೆಗೆ ಮಾನದಂಡದ ಬದಲಾವಣೆಗೆ ಮುಂದಾಗಿದೆ. ಹೀಗಾಗಿಯೇ ರಾಜ್ಯದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಬೆಳಕು ಚೆಲ್ಲಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಂದಾಗಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಶ್ವೇತಪತ್ರ ಹೊರಡಿಸಲು ಹಿಂದಿನ ಮುಖ್ಯಮಂತ್ರಿಗೆ ಬೇಡಿಕೆ ಇಟ್ಟಿದ್ದೆವು. ಅದು ಆಗಲಿಲ್ಲ. ಈಗಿನ ಸಿಎಂ ಅದನ್ನು ಮಾಡಲಿ ಎಂದು ಹೇಳಿದರು.

ಚುನಾವಣೆಗೆ ಮುನ್ನ ಯಾವುದೇ ಮಾನದಂಡ ಇಲ್ಲದೇ ರಾಜ್ಯದಲ್ಲಿನ ಪ್ರತೀ ಮಹಿಳೆಯರಿಗೆ 'ಗೃಹಲಕ್ಷ್ನಿ ಯೋಜನೆ' ಕೊಡುವುದಾಗಿ ಕಾಂಗ್ರೆಸ್ ಅವರು ಘೋಷಿಸಿದ್ದರು. ಆದರೆ ಈಗ ಹಣ ಕ್ರೋಢೀಕರಣ ಸಾಧ್ಯವಾಗದೇ ಫಲಾನುಭವಿಗಳ ಮೇಲೆ ಆರೋಪ ಮಾಡಿ ಲಕ್ಷಾಂತರ ಜನರನ್ನು ಈ ಯೋಜನೆಯಿಂದ ಕಡಿತ ಮಾಡಲು ಹೊರಟಿದ್ದಾರೆ. ಅದು ಸಲ್ಲ. ಚುನಾವಣೆಗೆ ಮುನ್ನ ನೀಡಿದ್ದ ಭರವಸೆಯಂತೆ 'ಮಾನದಂಡ'ದ ಮಿತಿ ಇಲ್ಲದೇ ಎಲ್ಲರಿಗೂ ಯೋಜನೆಯ ಲಾಭ ತಲುಪಿಸಲಿ ಎಂದು ಹೇಳಿದರು.

'ಗ್ಯಾರಂಟಿ' ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಕುಂಟು ನೆಪಗಳ ಹುಡುಕುತ್ತಿದೆ. ಅದರ ಬದಲಾಗಿ ಬಹಿರಂಗ ಸತ್ಯಗಳ ಒಪ್ಪಿಕೊಳ್ಳಲಿ. ಹಿಮಾಚಲ ಪ್ರದೇಶ, ತೆಲಂಗಾಣದ ಕಾಂಗ್ರೆಸ್ ಸರ್ಕಾರಗಳು 'ಗ್ಯಾರಂಟಿ' ಯೋಜನೆಗಳ ಜಾರಿಗೊಳಿಸಿ ತೊಂದರೆಗೀಡಾಗಿವೆ. ಅಲ್ಲಿ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಆಗದ ಪರಿಸ್ಥಿತಿ ಇದೆ. ಅದೇ ಸ್ಥಿತಿ ನಮ್ಮ ರಾಜ್ಯದಲ್ಲಿಯೂ ಬಂದಿರಬಹುದು. ಹೀಗಾಗಿಯೇ ಗ್ಯಾರಂಟಿ ಯೋಜನೆಗಳಿಗೆ ಒಂದೊಂದೆ ನೆಪ ಒಡ್ಡಿ ಕತ್ತರಿ ಹಾಕುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ ಎಂದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧಿಕಾರಿಗಳ ಸಭೆಯಲ್ಲಿ 'ನಾನು ಭ್ರಷ್ಟಾಚಾರವನ್ನು ಸಹಿಸುವುದಿಲ್ಲ' ಎಂದು ಹೇಳಿದ್ದಾರೆ. ಸಿಎಂ ಬಾಯಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತು ಅವರಿಗೆ ಶೋಭೆ ತರೊಲ್ಲ. ಭ್ರಷ್ಟಾಚಾರಕ್ಕೂ ಈ ಕಾಂಗ್ರೆಸ್ ಸರ್ಕಾರಕ್ಕೂ ಅವಿನಾಭಾವ ಸಂಬಂಧ ಇದ್ದು, ಸಿಎಂ ಹೇಳಿಕೆಯನ್ನು ರಾಜ್ಯದ ಜನರೇ ಹಾಸ್ಯಕ್ಕೀಡು ಮಾಡುತ್ತಿದ್ದಾರೆ' ಎಂದು ಛೇಡಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Prajavani