Dailyhunt Logo
  • Light mode
    Follow system
    Dark mode
    • Play Story
    • App Story
ಹಾಕಿ ವಿಶ್ವಕಪ್ ಅಂಗಳದಲ್ಲಿ ಇಲ್ಲ ಭಾರತದ ಅಂಪೈರ್‌

ಹಾಕಿ ವಿಶ್ವಕಪ್ ಅಂಗಳದಲ್ಲಿ ಇಲ್ಲ ಭಾರತದ ಅಂಪೈರ್‌

ವದೆಹಲಿ: ಮುಂದಿನ ವಾರ ಆರಂಭವಾಗಲಿರುವ ಎಫ್‌ಐಎಚ್ ಹಾಕಿ ವಿಶ್ವಕಪ್ ಪುರುಷರ ವಿಭಾಗದ ಟೂರ್ನಿಯಲ್ಲಿ ಭಾರತದಿಂದ ಯಾವುದೇ ಅಂಪೈರ್‌ಗಳೂ ಕಾರ್ಯನಿರ್ವಹಿಸುತ್ತಿಲ್ಲ. 28 ವರ್ಷಗಳ ನಂತರ ಇದೇ ಮೊದಲ ಸಲ ಇಂತಹ ಸನ್ನಿವೇಶ ಎದುರಾಗಿದೆ. ಈ ರೀತಿಯಾಗಿರುವುದಕ್ಕೆ ಮಾಜಿ ಅಂತರರಾಷ್ಟ್ರೀಯ ಅಂಪೈರ್ ಮತ್ತು ರೆಫರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಗಸ್ಟ್ 15ರಿಂದ ನೆದರ್ಲೆಂಡ್ಸ್ ಮತ್ತು ಬೆಲ್ಜಿಯಂ ಆತಿಥ್ಯದಲ್ಲಿ ಹಾಕಿ ವಿಶ್ವಕಪ್ ಟೂರ್ನಿ ನಡೆಯಲಿದೆ. ಇದರಲ್ಲಿ ಭಾರತದ ಯಾವೊಬ್ಬ ಅಂಪೈರ್ ಅಥವಾ ತಾಂತ್ರಿಕ ಅಧಿಕಾರಿಗಳು ಇಲ್ಲ. ಪ್ಯಾನೆಲ್‌ನಲ್ಲಿ ಯುರೋಪ್ ದೇಶಗಳ ಅಂಪೈರ್‌ಗಳೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ.

ಆಧುನಿಕ ಯುಗದ ಹಾಕಿ ಕ್ರೀಡೆಯಲ್ಲಿ ಭಾರತವು ನಾಲ್ವರು ವಿಶ್ವಕಪ್ ಅಂಪೈರ್‌ಗಳನ್ನು ನೀಡಿದೆ. ಅಮರಜೀತ್ ಸಿಂಗ್ (1990), ತರ್ಲೋಕ್‌ ಸಿಂಗ್ ಭುಲ್ಲರ್ (1994), ಸತಿಂದರ್ ಶರ್ಮಾ (2002, 2006, 2010) ಮತ್ತು ಆರ್‌.ವಿ. ರಘುಪ್ರಸಾದ್ (2010, 2014, 2018 ಮತ್ತು 2023) ಅವರು ಇದುವರೆಗೆ ವಿಶ್ವಕಪ್ ಟೂರ್ನಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

ರಘುಪ್ರಸಾದ್ (ಕರ್ನಾಟಕದವರು) ಅವರು 200 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ ಏಷ್ಯಾದ ಮೊದಲ ಅಂಪೈರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 'ಎಫ್‌ಐಎಚ್ ಅಂಪೈರಿಂಗ್ ಕಮಿಟಿಯು ಅಧಿಕಾರಿಗಳನ್ನು ಆಯ್ಕೆ ಮಾಡುತ್ತದೆ. ಅವರು ಪ್ರಮುಖ ಟೂರ್ನಿಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ಕಳೆದ ವಿಶ್ವಕಪ್ ಟೂರ್ನಿ, ಒಲಿಂಪಿಕ್ಸ್, ಪ್ರೊ ಲೀಗ್ ಮತ್ತು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಕಾರ್ಯನಿರ್ವಹಿಸಿದ ಮೆರಿಟ್ ಮೇಲೆ ಆಯ್ಕೆಗೆ ಪರಿಗಣಿಸಲಾಗುತ್ತದೆ. ಸ್ಥಿರ ಪ್ರದರ್ಶನ ನೀಡುವವರಿಗೆ ಹೆಚ್ಚು ಅವಕಾಶ ಇರುತ್ತದೆ' ಎಂದು ರಘುಪ್ರಸಾದ್ ಹೇಳಿದ್ದಾರೆ.

'ಬಾವಾ ಸರ್ ಮತ್ತು ಭುಲ್ಲರ್ ಸರ್ ಅವರ ನಂತರ ನಾನು ಮತ್ತು ರಘು ಅವರು ಹೊಣೆಯನ್ನು ನಿಭಾಯಿಸಿದ್ದೇವೆ. ಪರಂಪರೆಯನ್ನು ಮುಂದುವರೆಸಿದ್ದೆವು. ಯುರೋಪ್‌ ಅಂಪೈರ್‌ಗಳೊಂದಿಗೆ ಸ್ಪರ್ಧಿಸಿ ಕಾರ್ಯನಿರ್ವಹಿಸುವುದು ಸುಲಭದ ಮಾತಲ್ಲ' ಎಂದು ಒಲಿಂಪಿಕ್ಸ್ ಮತ್ತು ವಿಶ್ವಕಪ್ ಹಾಕಿ ಟೂರ್ನಿಗಳಲ್ಲಿ ಕಾರ್ಯನಿರ್ವಹಿಸಿದ್ದ ಸತಿಂದರ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

ಎಫ್‌ಐಎಚ್‌ ಅಂಪೈರಿಂಗ್ ಪ್ಯಾನೆಲ್‌ನಲ್ಲಿ ಭಾರತದ ನಾಲ್ವರು ಪುರುಷ ಮತ್ತು ಇಬ್ಬರು ಮಹಿಳಾ ಅಧಿಕಾರಿಗಳು ಇದ್ದಾರೆ. ಆದರೆ ಭಾರತದ ದೇಶಿ ವಿಭಾಗಗಳಲ್ಲಿ ಉತ್ತಮ ಸಂಖ್ಯೆಯಲ್ಲಿ ಅಂಪೈರ್‌ಗಳು ಇದ್ದಾರೆ.

ರಘುಪ್ರಸಾದ್ ಅವರು ಹೋದ ವರ್ಷ ಅಂತರರಾಷ್ಟ್ರೀಯ ಅಂಪೈರಿಂಗ್‌ನಿಂದ ನಿವೃತ್ತರಾಗಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani