ಆಯಮ್ಸ್ಟಿಲ್ವೀನ್, ನೆದರ್ಲೆಂಡ್ಸ್ : ಅರ್ಧ ಶತಮಾನಕ್ಕೂ ಹೆಚ್ಚು ಸಮಯದಿಂದ ಕಾಯುವಿಕೆಯು ಈ ವರ್ಷವಾದರೂ ಅಂತ್ಯವಾಗುವುದೇ?
ಭಾರತದ ಹಾಕಿ ಕ್ರೀಡಾಪ್ರಿಯರ ಮನದಲ್ಲಿರುವ ಪ್ರಶ್ನೆ ಇದು. ಭಾರತ ಪುರುಷರ ತಂಡವು 1975ರಲ್ಲಿ ವಿಶ್ವಕಪ್ ಗೆದ್ದ ನಂತರ ಇದುವರೆಗೆ ಮತ್ತೆ ಚಿನ್ನದ ಪದಕ ಒಲಿದಿಲ್ಲ.
ಶನಿವಾರದಿಂದ ಆರಂಭವಾಗಲಿರುವ 16ನೇ ವಿಶ್ವಕಪ್ ಟೂರ್ನಿಯಲ್ಲಿ ಚಿನ್ನದ ಕನಸು ಕೈಗೂಡುವ ಆಸೆ ಗರಿಗೆದರಿದೆ.
ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದ ಪುರುಷರ ತಂಡವು ಮೊದಲ ಪಂದ್ಯದಲ್ಲಿ ವೇಲ್ಸ್ ಬಳಗವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಜಯಿಸುವ ಮೂಲಕ ದೇಶವಾಸಿಗಳಿಗೆ ಸ್ವಾತಂತ್ರ್ಯೋತ್ಸವ ದಿನದ ಕಾಣಿಕೆಯನ್ನು ನೀಡುವ ಛಲದಲ್ಲಿ ತಂಡವಿದೆ.
ಭಾರತ ತಂಡವು 1971ರಲ್ಲಿ ಕಂಚು ಮತ್ತು 1973ರಲ್ಲಿ ಬೆಳ್ಳಿ ಪದಕ ಗೆದ್ದಿತ್ತು. ಪ್ರಸ್ತುತ ತಂಡವು ಜಯಸಾಧಿಸುವ ಕುರಿತು ಆಪಾರ ವಿಶ್ವಾಸ ಮೂಡಲು ಕಾರಣವಿದೆ. ಒಲಿಂಪಿಕ್ಸ್‌ನಲ್ಲಿ 41 ವರ್ಷಗಳ ಪದಕ ಬರವನ್ನು 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನೀಗಿಸಿದ್ದ ತಂಡದ ಬಹುತೇಕ ಆಟಗಾರರು ಇಲ್ಲಿಯೂ ಇದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿಯೂ ಕಂಚು ಗೆದ್ದಿದ್ದ ತಂಡವು ವಿಶ್ವಕಪ್ ಅಂಗಳದಲ್ಲಿಯೂ ಪದಕ ಮಿಂಚು ಹರಿಸುವ ಹುಮ್ಮಸ್ಸಿನಲ್ಲಿದೆ.
'ನಾವು ಅದೇ ಉತ್ಸಾಹ, ಮನಸ್ಥಿತಿ ಮತ್ತು ಸಿದ್ಧತೆಯೊಂದಿಗೆ ಇಲ್ಲಿ ಕಣಕ್ಕಿಳಿಯುತ್ತಿದ್ದೇವೆ. ವಿಶ್ವಕಪ್‌ನಲ್ಲಿ ಪದಕ ಗೆಲ್ಲಬೇಕೆಂಬುದು ಒತ್ತಡವಲ್ಲ. ಅದು ನಮ್ಮ ಜವಾಬ್ದಾರಿ' ಎಂದು ನಾಯಕ ಹರ್ಮನ್‌ಪ್ರೀತ್ ಸಿಂಗ್ ಹೇಳಿದ್ದಾರೆ.
15ನೇ ಶ್ರೇಯಾಂಕದ ವೇಲ್ಸ್ ವಿರುದ್ಧದ ಆರಂಭಿಕ ಪಂದ್ಯವು 8ನೇ ಶ್ರೇಯಾಂಕದ ಭಾರತಕ್ಕೆ ಅನುಕೂಲಕರವಾಗಿ ಕಾಣುತ್ತದೆ. ಆದರೆ ಕೋಚ್ ಕ್ರೇಗ್ ಫುಲ್ಟನ್ ಅವರು ಯಾವುದೇ ತಂಡವನ್ನೂ ಹಗುರವಾಗಿ ಪರಿಗಣಿಸುವುದಿಲ್ಲ ಎಂದು ಹೇಳಿದ್ದಾರೆ.
ಗುಂಪು ಹಂತದಲ್ಲಿ ವೇಲ್ಸ್ ನಂತರ ಪಾಕಿಸ್ತಾನ, ಇಂಗ್ಲೆಂಡ್ ತಂಡಗಳ ಸವಾಲು ಕೂಡ ಮುಂದಿನ ದಿನಗಳಲ್ಲಿ ಎದುರಾಗಲಿದೆ.
ಕಳೆದ ಋತುವಿನಲ್ಲಿ ಒಂಬತ್ತು ತಂಡಗಳ ಪ್ರೊ ಲೀಗ್‌ನಲ್ಲಿ ಭಾರತ ತಂಡವು ಎಂಟನೇ ಸ್ಥಾನ ಪಡೆದಿತ್ತು. ಆ ನಿರಾಶಾದಾಯಕ ಪಯಣದ ನಂತರ ತಂಡವು ಯುರೋಪಿಯನ್ ಲೀಗ್ ಕೊನೆಯ ಭಾಗದಲ್ಲಿ ತನ್ನ ಲಯ ಕಂಡುಕೊಂಡಿತು. ವಿಶ್ವ ಚಾಂಪಿಯನ್ ಜರ್ಮನಿ ಹಾಗೂ ಒಲಿಂಪಿಕ್ ಚಾಂಪಿಯನ್ ನೆದರ್ಲೆಂಡ್ಸ್ ತಂಡಗಳನ್ನು ಸೋಲಿಸಿತ್ತು.
417 ಅಂತಾರಾಷ್ಟ್ರೀಯ ಪಂದ್ಯಗಳ ಅನುಭವ ಹೊಂದಿರುವ ಹಿರಿಯ ಮಿಡ್‌ಫೀಲ್ಡರ್ ಮನ್‌ಪ್ರೀತ್ ಸಿಂಗ್ ನಾಯಕತ್ವ ಮತ್ತು ಸ್ಥಿರತೆ ಒದಗಿಸಲಿದ್ದಾರೆ. ಇದೇ ವೇಳೆ ಎಂಟು ಆಟಗಾರರು ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ಬಳಿಕ ಪಿ.ಆರ್. ಶ್ರೀಜೇಶ್ ನಿವೃತ್ತರಾಗಿರುವುದರಿಂದ, ಯುವ ಆಟಗಾರರಾದ, ಕನ್ನಡಿಗ ಮೋಹಿತ್ ಎಚ್.ಎಸ್ ಮತ್ತು ಸೂರಜ್ ಕರ್ಕೇರಾ ಮೇಲೆ ಗೋಲ್‌ಕೀಪಿಂಗ್ ಹೊಣೆಯಿದೆ.
ಇನ್ನೊಂದೆಡೆ, ಹರ್ಮನ್‌ಪ್ರೀತ್ ಅವರ ಪೆನಾಲ್ಟಿ ಕಾರ್ನರ್ ಪರಿಣತಿ ಭಾರತದ ಪ್ರಮುಖ ಆಕ್ರಮಣಕಾರಿ ಅಸ್ತ್ರಗಳಲ್ಲಿ ಒಂದಾಗಿದೆ. ಅನುಭವಿ ಡಿಫೆಂಡರ್ ಅಮಿತ್ ರೋಹಿದಾಸ್ ಅವರೊಂದಿಗೆ ಹರ್ಮನ್ ಅವರು ತಂಡಕ್ಕೆ ಸ್ಥಿರತೆ ಒದಗಿಸಬಹುದು. ಮಿಡ್‌ಫೀಲ್ಡ್ ಮನ್‌ಪ್ರೀತ್ ಮತ್ತು ಹಾರ್ದಿಕ್ ಸಿಂಗ್ ಅವರ ಸುತ್ತ ಸುತ್ತಲಿದ್ದು, ಫಾರ್ವರ್ಡ್‌ನಲ್ಲಿ ಅಭಿಷೇಕ್ ಮತ್ತು ಮನದೀಪ್ ಅವರ ಮೇಲೆ ವಿಶ್ವಾಸವಿದೆ. ಮೈಂಡ್ ಕೋಚ್ ಪ್ಯಾಡಿ ಆಪ್ಟನ್ ಅವರು ಕೂಡ ಈಚೆಗೆ ಆಟಗಾರರಿಗೆ ವಿಶೇಷ ತರಬೇತಿ ನೀಡಿದ್ದಾರೆ.
ಪಂದ್ಯ ಆರಂಭ: ಸಂಜೆ 4.30 (ಭಾರತೀಯ ಕಾಲಮಾನ)

