Dailyhunt Logo
  • Light mode
    Follow system
    Dark mode
    • Play Story
    • App Story
ಹಾಸನ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಲು ರೈತ ಸಂಘದ ಪ್ರತಿಭಟನೆ

ಹಾಸನ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಲು ರೈತ ಸಂಘದ ಪ್ರತಿಭಟನೆ

ಹಾಸನ: ಜಿಲ್ಲೆಯಲ್ಲಿನ ಮಳೆಯ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಹಾಸನ ಜಿಲ್ಲೆಯನ್ನು ತಕ್ಷಣವೇ ಬರಪೀಡಿತ ಜಿಲ್ಲೆಯೆಂದು ಘೋಷಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಜಿಲ್ಲಾ ಸಮಿತಿ ಸದಸ್ಯರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆ ಎನ್.ಆರ್. ವೃತ್ತದ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿತು. ಅಲ್ಲಿ ಕೆಲ‌ಕಾಲ ಧರಣಿ ನಡೆಸಿದ ಪ್ರತಿಭಟನಕಾರರು, ಘೋಷಣೆ ಕೂಗಿದರು‌.

ಬೆಳೆ ನಷ್ಟಕ್ಕೊಳಗಾದ ರೈತರಿಗೆ ಸಮರ್ಪಕ ಪರಿಹಾರ ನೀಡಬೇಕು. ಮೆಕ್ಕೆಜೋಳ ಬೆಳೆಯಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿರುವ ಬಿಳಿಸುಳಿ ರೋಗಕ್ಕೆ ಕಾರಣವಾಗಿರುವ ಬೀಜ ಕಂಪನಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಮುಖಂಡರು, 'ಈ ವರ್ಷ ಮುಂಗಾರು ಸಂಪೂರ್ಣ ಕೈಕೊಟ್ಟಿದ್ದು, ಕೃಷಿ ಚಟುವಟಿಕೆಗಳಿಗೆ ಭಾರೀ ಹೊಡೆತ ಬಿದ್ದಿದೆ. ಜಿಲ್ಲೆಯಲ್ಲಿ ಶೇ 60ಕ್ಕೂ ಅಧಿಕ ಮಳೆಯ ಕೊರತೆಯಾಗಿದೆ. 2.86 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ನಿಗದಿಪಡಿಸಲಾಗಿದ್ದರೂ, ಕೇವಲ 91,534 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಸಾಧ್ಯವಾಗಿದೆ' ಎಂದರು.

ಮಳೆಯ ಅಭಾವದಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಆಲೂಗಡ್ಡೆ, ಮೆಕ್ಕೆಜೋಳ, ಶುಂಠಿ, ರಾಗಿ, ಭತ್ತ, ತೆಂಗು ಹಾಗೂ ಅಡಿಕೆ ಸೇರಿದಂತೆ ಪ್ರಮುಖ ಬೆಳೆಗಳು ನಷ್ಟಕ್ಕೊಳಗಾಗಿವೆ. ಬೆಳೆ ಬೆಳೆಯಲು ಮಾಡಿದ ಹೂಡಿಕೆ ಸಂಪೂರ್ಣ ಹಾಳಾಗಿದ್ದು, ರೈತರು ಸಾಲದ ಹೊರೆ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮೆಕ್ಕೆಜೋಳ ಬೆಳೆಯಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿರುವ ಬಿಳಿಸುಳಿ ರೋಗಕ್ಕೆ ಕಳಪೆ ಗುಣಮಟ್ಟದ ಬಿತ್ತನೆ ಬೀಜವೇ ಪ್ರಮುಖ ಕಾರಣವಾಗಿದೆ ಎಂದು ಆರೋಪಿಸಿದ ಮುಖಂಡರು, ಸಂಬಂಧಿಸಿದ ಬೀಜ ಕಂಪನಿಗಳ ವಿರುದ್ಧ ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು. ರೈತರಿಗೆ ಉಂಟಾಗಿರುವ ನಷ್ಟವನ್ನು ಬೀಜ ಕಂಪನಿಗಳಿಂದಲೇ ಭರಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಹಲವು ವರ್ಷಗಳಿಂದ ರೈತರು ಬೆಳೆ ವಿಮೆ ಕಂತು ಪಾವತಿಸುತ್ತಿದ್ದರೂ, ಬೆಳೆ ಹಾನಿಯಾದ ಸಂದರ್ಭಗಳಲ್ಲಿ ಸಮರ್ಪಕ ಪರಿಹಾರ ದೊರೆಯುತ್ತಿಲ್ಲ. ವಿಮೆ ಯೋಜನೆಯ ಉದ್ದೇಶವೇ ರೈತರ ರಕ್ಷಣೆಯಾಗಿದ್ದರೂ ಅದು ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ. ಕೃಷಿ ಚಟುವಟಿಕೆಗಳಿಗೆ ಮಾಡಿದ ಹೂಡಿಕೆ ವಾಪಸ್ ಬಾರದ್ದರಿಂದ ರೈತರು ಸಾಲದ ಸುಳಿಯಲ್ಲಿ ಸಿಲುಕಿದ್ದು, ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯನ್ನು ತಕ್ಷಣ ಬರಪೀಡಿತ ಜಿಲ್ಲೆಯೆಂದು ಘೋಷಿಸಬೇಕು. ಬೆಳೆ ನಷ್ಟಕ್ಕೊಳಗಾದ ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು. ಬೆಳೆ ನಷ್ಟದ ಸಮಗ್ರ ಸಮೀಕ್ಷೆ ನಡೆಸಬೇಕು. ಬೆಳೆ ವಿಮೆ ಹಾಗೂ ಬರ ಪರಿಹಾರವನ್ನು ವಿಳಂಬವಿಲ್ಲದೆ ಬಿಡುಗಡೆ ಮಾಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಜಾನುವಾರುಗಳಿಗೆ ಮೇವು ಒದಗಿಸಬೇಕು. ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಪತ್ರದ ಮೂಲಕ ಸರ್ಕಾರವನ್ನು ಒತ್ತಾಯಿಸಿದರು.

ಕೆಪಿಆರ್‌ಎಸ್‌ನ ಜಿಲ್ಲಾ ಸಮಿತಿ ಕಾರ್ಯದರ್ಶಿ ನವೀನ್ ಕುಮಾರ್, ಜಿಲ್ಲಾ ಮುಖಂಡರಾದ ಚಂದ್ರಹಾಸ್, ವಾಸುದೇವ ಕಲ್ಕೆರೆ, ತೇಜಸ್‌ಗೌಡ, ಜಯಲಕ್ಷ್ಮಿ, ಸುಜಾತಾ ಕುಮಾರಸ್ವಾಮಿ, ಮುತ್ತಣ್ಣ, ಡಿವೈಎಫ್‌ಐನ ಎಂ.ಜಿ. ಪೃಥ್ವಿ, ಸಿಐಟಿಯು ಮುಖಂಡ ಅರವಿಂದ, ದಲಿತ ಮುಖಂಡರಾದ ಟಿ.ಆರ್.ವಿಜಯ್ ಕುಮಾರ್, ರಾಜು ಗೊರೂರ್, ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260807-36-674278049

Dailyhunt
Disclaimer: This content has not been generated, created or edited by Dailyhunt. Publisher: Prajavani