ಹಾಸನ: ಬೇಲೂರು ಕ್ಷೇತ್ರದ ಮಾಜಿ ಶಾಸಕ ಕೆ.ಎಸ್ ಲಿಂಗೇಶ್ ಅವರನ್ನು ಬಗರ್‌ಹುಕುಂ ಭೂ ಹಗರಣ ಪ್ರಕರಣದಲ್ಲಿ ಸಿಐಡಿ ಪೊಲೀಸರು ಬಂಧಿಸಿರುವುದು ನ್ಯಾಯದಾನದಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ಪ್ರಕರಣ ಶೀಘ್ರ ಅಂತ್ಯ ಕಂಡು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದು ದೂರುದಾರ ಕೆ.ಸಿ.
ರಾಜಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2018ರಿಂದ 2023ರವರೆಗೆ ಕೆ.ಎಸ್. ಲಿಂಗೇಶ್ ಅವರು ಬೇಲೂರು ತಾಲ್ಲೂಕು ಬಗರ್‌ಹುಕುಂ ಸಮಿತಿಯ ಅಧ್ಯಕ್ಷರಾಗಿದ್ದು, ಈ ಅವಧಿಯಲ್ಲಿ ಸುಮಾರು 2,750 ಎಕರೆ ಸರ್ಕಾರಿ ಭೂಮಿಯನ್ನು 1,430 ಫಲಾನುಭವಿಗಳಿಗೆ ಮಂಜೂರು ಮಾಡಲಾಗಿದೆ. ಈ ಮಂಜೂರಾತಿಗಳು ನಕಲಿ ದಾಖಲೆಗಳ ಆಧಾರದಲ್ಲಿ ನಡೆದಿವೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಹೇಳಿದರು.
ಈ ಸಂಬಂಧ 2023ರಲ್ಲಿ ದೂರು ದಾಖಲಾಗಿತ್ತು. ನಂತರ ಹಿಂದಿನ ಉಪ ವಿಭಾಗಾಧಿಕಾರಿ ಪ್ರತೀಕ್ ಭಾಯಲ್ ಸಲ್ಲಿಸಿದ್ದ ವರದಿ ಆಧರಿಸಿ ತನಿಖೆ ತೀವ್ರಗೊಂಡಿತು. ಆರಂಭದಲ್ಲಿ ಬೇಲೂರು ಪೊಲೀಸರು ತನಿಖೆ ನಡೆಸಿದ್ದು, ಬಳಿಕ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಯಿತು ಎಂದು ವಿವರಿಸಿದರು.
ಪ್ರಕರಣದಲ್ಲಿ ಮಾಜಿ ಶಾಸಕ ಲಿಂಗೇಶ್ ಸೇರಿದಂತೆ ಒಟ್ಟು 30ಕ್ಕೂ ಹೆಚ್ಚು ಮಂದಿ ವಿರುದ್ಧ ದಾಖಲೆ ಸಂಗ್ರಹವಾಗಿದ್ದು, ಈವರೆಗೆ 16 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಇಬ್ಬರು ತಹಶೀಲ್ದಾರರು, ಮಾಜಿ ಶಾಸಕ, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಲು ಸೇರಿದ್ದಾರೆ ಎಂದು ಹೇಳಿದರು.
ತಮ್ಮ ಗಮನಕ್ಕೆ ಬಾರದೆ ಪ್ರಕರಣ ನಡೆದಿದೆ ಎಂದು ಕೆ.ಎಸ್ ಲಿಂಗೇಶ್ ಹೇಳಿಕೆ ನೀಡಿರುವುದು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ. ಸಮಿತಿಯ ಅಧ್ಯಕ್ಷರಾಗಿದ್ದ ವೇಳೆ ನಡೆದ ಮಂಜೂರಾತಿಗಳಿಗೆ ಅವರೇ ಜವಾಬ್ದಾರರಾಗಬೇಕು ಎಂದು ಆಗ್ರಹಿಸಿದರು.
ಪ್ರಕರಣದಲ್ಲಿ ಲಿಂಗೇಶ್ ಅವರು ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಸಿಐಡಿ ಪರ ವಕೀಲರು ತಾತ್ಕಾಲಿಕ ಜಾಮೀನು ರದ್ದುಪಡಿಸುವಂತೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಬಂಧನ ಮಾಡಲಾಗಿದೆ ಎಂದು ತಿಳಿಸಿದರು.
ಬಿ.ಎ. ಜಗದೀಶ್ ಅವರ ಅವಧಿಯಲ್ಲಿ 10.65 ಎಕರೆ, ಪುಟ್ಟಶೆಟ್ಟಿ ಅವಧಿಯಲ್ಲಿ 893 ಎಕರೆ, ಜೆ. ಉಮೇಶ್ ಅವಧಿಯಲ್ಲಿ ಸುಮಾರು 400 ಎಕರೆ ಹಾಗೂ ಯು.ಎನ್. ಮೋಹನ್ ಕುಮಾರ್ ಅವಧಿಯಲ್ಲಿ 287 ಎಕರೆ ಸೇರಿ ಒಟ್ಟು 2,822.04 ಎಕರೆ ಭೂಮಿ ಅಕ್ರಮವಾಗಿ ಮಂಜೂರಾಗಿದೆ. ಈ ಹಗರಣದ ಮೌಲ್ಯ ₹2,500 ಕೋಟಿಗೂ ಹೆಚ್ಚು ಇರಬಹುದೆಂದು ಅಂದಾಜಿಸಲಾಗಿದೆ ಎಂದು ಹೇಳಿದರು.
ಸಂಪೂರ್ಣ ತನಿಖೆ ಬಳಿಕ ಸಿಐಡಿ ದೋಷಾರೋಪಣಾ ಪಟ್ಟಿ ಸಲ್ಲಿಸಲಿದೆ. ತ್ವರಿತಗತಿ ನ್ಯಾಯಾಲಯದಲ್ಲಿ ಶೀಘ್ರ ನ್ಯಾಯ ಸಿಗಲಿದೆ ಎಂಬ ನಂಬಿಕೆ ಇದೆ ಎಂದು ರಾಜಣ್ಣ ಹೇಳಿದರು. ಶ್ರೀಕಾಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260623-36-698903208

