Tuesday, 20 Oct, 6.07 am ಪ್ರಜಾವಾಣಿ

ರಾಜ್ಯ
ಹೈರಾಣ ಮಾಡಿದ 'ಲಾ ನಿನಾ'!

ಬೆಂಗಳೂರು: ಹವಾಮಾನ ವೈಪರೀತ್ಯ 'ಲಾ ನಿನಾ' ಕಾರಣ ಈಗಾಗಲೇ ಭಾರಿ ಮಳೆಯಿಂದ ಸಂಕಷ್ಟಕ್ಕೆ ತುತ್ತಾಗಿರುವ ರಾಜ್ಯಕ್ಕೆ ಇನ್ನೊಂದು ಸುತ್ತಿನ ಮಳೆ ಅಪ್ಪಳಿಸುವ ಸಾಧ್ಯತೆ ಇದೆ. ಬಂಗಾಳ ಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ ಆಗುತ್ತಿದ್ದು, ರಾಜ್ಯದ ಹಲವೆಡೆ ಮಳೆ ಆಗುವ ಸಾಧ್ಯತೆ ಹೆಚ್ಚಾಗಿದೆ.

ಈವರೆಗೆ ಬಿದ್ದ ಮಳೆ ಮತ್ತು ಪ್ರವಾಹದಿಂದ ಸುಧಾರಿಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ. ಮತ್ತೊಂದು ಸುತ್ತಿನ ಮಳೆಯ ಮುನ್ಸೂಚನೆ ಸರ್ಕಾರವನ್ನು ಚಿಂತೆಗೀಡು ಮಾಡಿದೆ.

'ಲಾ ನಿನಾ' ಪರಿಣಾಮದ ಕಾರಣ ಈ ವರ್ಷ ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ 12 ಬಾರಿ ವಾಯು ಭಾರ ಕುಸಿದಿದೆ. ಇದು ಅತ್ಯಂತ ವಿರಳಾತೀವಿರಳ ವಿದ್ಯಮಾನ. ಅಕ್ಟೋಬರ್‌ನಲ್ಲೇ ಮೂರು ಬಾರಿ ವಾಯುಭಾರ ಕುಸಿತವಾಗಿ, ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ರಾಜ್ಯಗಳು ಮಳೆ ಮತ್ತು ಪ್ರವಾಹಕ್ಕೆ ತತ್ತರಿಸಿವೆ' ಎನ್ನುತ್ತಾರೆ ಕರ್ನಾಟಕ ರಾಜ್ಯ ನಿಸರ್ಗ ವಿಕೋಪ ಉಸ್ತುವಾರಿ ಕೇಂದ್ರದ ಮಾಜಿ ನಿರ್ದೇಶಕ ಹಾಗೂ ಸರ್ಕಾರದ ಸಲಹೆಗಾರ ಡಾ.ಶ್ರೀನಿವಾಸ ರೆಡ್ಡಿ.

'ಒಂದು ವೇಳೆ ವಾಯುಭಾರ ಕುಸಿತ ಹೆಚ್ಚು ಕ್ರಿಯಾಶೀಲವಾದರೆ ಸಮಸ್ಯೆ ಆಗಬಹುದು. ತೀರಾ ಗಂಭೀರ ಎನ್ನುವ ಮಟ್ಟಕ್ಕೆ ಮಳೆಯಾಗುವ ಸಾಧ್ಯತೆ ಇಲ್ಲ. ಒಂದು ವೇಳೆ ಅಧಿಕ ಮಳೆಯಾದರೆ ಉತ್ತರ ಒಳನಾಡು ಸಂಕಷ್ಟಕ್ಕೆ ಸಿಲುಕಬಹುದು' ಎಂದರು.

'ಲಾ ನಿನಾ' ಅತ್ಯಂತ ಅಪರೂಪದ ಹವಾಮಾನ ವಿದ್ಯಮಾನ. ಪೆಸಿಫಿಕ್‌ ಸಾಗರದ ಮೇಲೆ ಕ್ರಿಯೆಯ ಪರಿಣಾಮ ತೀರಾ ಶೀತಲ ವಾತಾವರಣ ನಿರ್ಮಾಣವಾಗಿದೆ. ತಾಪಮಾನ ತೀವ್ರವಾಗಿ ಕುಸಿದಿರುವುದರಿಂದ ವಾಯುಭಾರ ಕುಸಿತವೂ ಪದೇ ಪದೇ ಆಗುತ್ತಿದೆ. ಇದು ಮಳೆಗೆ ಕಾರಣವಾಗುತ್ತಿದೆ. ಈ ವರ್ಷ 12 ಬಾರಿ ವಾಯುಭಾರ ಕುಸಿದಿರುವುದು ವಾಡಿಕೆಗೆ ವ್ಯತಿರಿಕ್ತವಾದುದು' ಎನ್ನುತ್ತಾರೆ ಅವರು.

'ಲಾ ನಿನಾ' ಸಕ್ರಿಯಗೊಂಡಿರುವ ಪರಿಣಾಮ ರಾಜ್ಯದಲ್ಲಿ ಮುಂಗಾರು ಹಿಂದೆಗೆತವಾಗಿ (ಮಾನ್ಸೂನ್‌ ವಿತ್‌ಡ್ರಾವಲ್), ಈಶಾನ್ಯ ಮುಂಗಾರು ಪ್ರವೇಶವೂ ಆಗಿಲ್ಲ. ದೇಶದ ಎರಡೂ ಭಾಗದ ಸಮುದ್ರಗಳ ಮೇಲೆ ಇಷ್ಟೊಂದು ಸಂಖ್ಯೆಯ ವಾಯುಭಾರ ಕುಸಿತವನ್ನು ನಾವು ಕಂಡಿಲ್ಲ. ರಾಜ್ಯದಲ್ಲಿ ವ್ಯಾಪಕವಾಗಿ ಮಳೆ ಹಂಚಿಕೆಯಾಗಿದ್ದು, ಬಹುತೇಕ 60 ವರ್ಷಗಳಲ್ಲಿ ಮೊದಲ ಬಾರಿಗೆ ರಾಜ್ಯದ ಯಾವುದೇ ತಾಲ್ಲೂಕು ಮಳೆ ಕೊರತೆಗೆ ತುತ್ತಾಗಿಲ್ಲ. 2018 ಮತ್ತು 2019ರಲ್ಲಿ ಭಾರಿ ಮಳೆ ಆಗಿದ್ದಾಗಲೂ, 30 ರಿಂದ 35 ತಾಲ್ಲೂಕುಗಳು ಮಳೆ ಕೊರತೆಯ ಪಟ್ಟಿಗೆ ಸೇರಿದ್ದವು ಎಂದು ರೆಡ್ಡಿ ತಿಳಿಸಿದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top