ಹಳೇಬೀಡು: ಪರಿಸರದ ಉಳಿವಿನೊಂದಿಗೆ ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಿರುವ ಜಿ.ಸಾಣೇನಹಳ್ಳಿ ಗ್ರಾಮದ ಎಸ್.ಎನ್.ಯೋಗೀಶಪ್ಪ ಅಪರೂಪದ ಗುಣಗಳನ್ನು ಮೈಗೂಡಿಸಿಕೊಂಡಿದ್ದಾರೆ.
ಕೃಷಿ ಎಂದರೆ ಕೇವಲ ಬೆಳೆ ಬೆಳೆದು ಆದಾಯ ಗಳಿಸುವ ಉದ್ಯಮವಲ್ಲ. ಅದು ಪ್ರಕೃತಿಯೊಂದಿಗೆ ಬೆಸೆದುಕೊಂಡ ಬದುಕು ಎಂಬುದನ್ನು ತಮ್ಮ ಕಾರ್ಯಗಳ ಮೂಲಕ ಯೋಗೀಶಪ್ಪ ತೋರಿಸುತ್ತಿದ್ದಾರೆ.
ಎರಡು ಎಕರೆ ಕೃಷಿ ಭೂಮಿಯಲ್ಲಿ ಕಾಡು ಕೃಷಿ ನಡೆಸುತ್ತಿದ್ದಾರೆ.
ಅವರ ತೋಟ ಇಂದು ಕೇವಲ ಕೃಷಿ ಭೂಮಿಯಾಗಿ ಉಳಿದಿಲ್ಲ. ಪ್ರಕೃತಿಯನ್ನು ಅರಿಯುವ, ಜೀವವೈವಿಧ್ಯವನ್ನು ಗೌರವಿಸುವ ಹಾಗೂ ಪರಿಸರದೊಂದಿಗೆ ಬದುಕುವುದನ್ನು ಕಲಿಸುವ ಕಾಡು ಕೃಷಿಯ ಶಾಲೆಯಾಗಿದೆ. ವಿಜ್ಞಾನಿ ಮಳಲೀಗೌಡ ಅವರ ಮಾರ್ಗದರ್ಶನದಲ್ಲಿ ಯೋಗೀಶಪ್ಪ ಅವರ ತೋಟ ಕಾಡುಕೃಷಿಯ ಶಾಲೆಯಾಗಿ ಹೊರಹೊಮ್ಮಿದೆ.
ಯೋಗೀಶಪ್ಪ ಅವರ ತೋಟದ ಮನೆಗೆ ಪ್ರವೇಶಿಸಿದಾಕ್ಷಣ, ಸುತ್ತಲಿನ ಹಸಿರಿನ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ. ತೋಟದ ಒಳಹೊಕ್ಕಾಗ ಕಾಣಸಿಗುವ ಸಿಲ್ವರ್, ಮಾವು, ಸಪೋಟ, ಸೀಬೆ, ಸಪೋಟ, ಸೀತಾಫಲ, ರಾಮಫಲ, ಬೇಲದ ಹಣ್ಣು, ನೆಲ್ಲಿಕಾಯಿ ಮರಗಳು ಬಯಲು ಸೀಮೆಯಲ್ಲಿಯೂ ಮಲೆನಾಡಿನ ಅನುಭವ ನೀಡುತ್ತವೆ. ಮನೆ ಬಳಕೆಗಾಗಿ ಎರಡೂ ಸೇಬಿನ ಮರವನ್ನು ಬೆಳೆಸಿದ್ದಾರೆ. ಔಷಧಿ ಬಳಕೆ ನೋನಿಮರ ಅವರ ತೋಟದಲ್ಲಿದೆ. ಕರಿಬೇವು, ಚಕ್ರಮುನಿ ಮೊದಲಾದ ಸಣ್ಣ ಸಸ್ಯಗಳನ್ನು ಬೆಳೆಸಲಾಗಿದೆ.
ಹಾಸನದಲ್ಲಿರುವ ವಾಸದ ಮನೆಯ ಅಂಗಳ ಹಾಗೂ ತಾರಸಿಯಲ್ಲಿಯೂ ಗಿಡ ಬೆಳೆದು ಸಸ್ಯಕಾಶಿ ಮಾಡಿದ್ದಾರೆ. ಕರಿಕಟ್ಟೆಹಳ್ಳಿಯ ಸಂಬಂಧಿಕರ ತೋಟದಲ್ಲಿಯೂ ಯೋಗೀಶಪ್ಪ ಕಾಡುಕೃಷಿ ನಡೆಸುತ್ತಿದ್ದಾರೆ.

ದಾರಿಯಲ್ಲಿ ಸತ್ತಿರುವ ನಾಯಿಗೆ ಸಂಸ್ಕಾರ ಕೊಡಲು ರಸ್ತೆಬದಿಗೆ ಎಳೆಯುತ್ತಿರುವ ಎಸ್.ಎನ್. ಯೋಗೀಶಪ್ಪ.
ಯೋಗೀಶಪ್ಪ ಅವರ ವ್ಯಕ್ತಿತ್ವದ ಮತ್ತೊಂದು ವಿಶೇಷವೆಂದರೆ, ತಾವು ಸಂಚರಿಸುವ ರಸ್ತೆಯಲ್ಲಿ ಬೀದಿ ನಾಯಿ ಸತ್ತು ಬಿದ್ದಿರುವುದನ್ನು ಕಂಡರೆ ಅದನ್ನು ನಿರ್ಲಕ್ಷಿಸಿ ಮುಂದೆ ಸಾಗುವುದಿಲ್ಲ. ಸತ್ತ ಪ್ರಾಣಿಯನ್ನು ರಸ್ತೆ ಬದಿಗೆ ಎಳೆದು, ಮಣ್ಣಿನಿಂದ ಮುಚ್ಚಿ ಗೌರವಯುತವಾಗಿ ಸಂಸ್ಕಾರ ಮಾಡುವ ಕಾಳಜಿ ಹೊಂದಿದ್ದಾರೆ. ಸತ್ತ ಪ್ರಾಣಿ ಸಂಸ್ಕಾರಕ್ಕಾಗಿಯೇ ತಮ್ಮ ಕಾರಿನಲ್ಲಿ ಗುದ್ದಲಿ, ಪಿಕಾಸಿ ಇರುತ್ತದೆ.
ತಂದೆ ನಿಂಗೇಗೌಡ ಕೃಷಿ ಕಾಯಕ ನಂಬಿ ಬದುಕಿದ್ದರು. ಹೀಗಾಗಿ ಕೃಷಿ ರಕ್ತಗತವಾಗಿ ನಮಗೆ ಬಂದಿದೆ. ತಾಯಿ ಪುಟ್ಟತಾಯಮ್ಮ ಜೀವನದುದ್ದಕ್ಕೂ ಬೆನ್ನುತಟ್ಟುತ್ತಿದ್ದಾರೆ. ಸಹೋದರ ಸತೀಶ, ನಾದಿನಿ ಭವ್ಯಾ, ಸಹೋದರಿ ಪುಷ್ಪಾವತಿ ಹಾಗೂ ಮಗ ಕುಶಾಲ್ ಸಹಕಾರ ಮರೆಯುವಂತಿಲ್ಲ. ಪತ್ನಿ ಕೆ.ವೀಣಾ, ಮಗ ಪ್ರಜ್ವಲ್ ಎಸ್.ವೈ. ಪರಿಸರ ಕಾಳಜಿಯ ಆಸಕ್ತಿಯನ್ನು ಪ್ರೋತ್ಸಾಯಿಸುತ್ತಿದ್ದಾರೆ. ಅಡಗೂರಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ನೋಡಿದ್ದ ಬಾಲರಾಜ್ ಅವರ ಶಿಸ್ತುಬದ್ದ ಕೃಷಿ ಪರಿಸರ ಕಾಳಜಿಗೆ ಪ್ರೇರಣೆ ನೀಡಿದೆ ಎನ್ನುತ್ತಾರೆ ಎಸ್.ಎನ್.ಯೋಗೀಶಪ್ಪ.
ಮರೆಯಾಗುತ್ತಿರುವ ಕೃಷಿ ಪರಿಕರಗಳ ಸಂರಕ್ಷಕ
ಆಧುನಿಕ ಕೃಷಿ ಪದ್ಧತಿಗಳ ನಡುವೆ ಹಿಂದಿನ ತಲೆಮಾರುಗಳು ಬಳಸುತ್ತಿದ್ದ ಅನೇಕ ಕೃಷಿ ಪರಿಕರಗಳನ್ನು ಯೋಗೀಶಪ್ಪ ಸಂಗ್ರಹಿಸಿದ್ದಾರೆ. ಹಿಂದೆ ಕೃಷಿಕರು ಬಳಸುತ್ತಿದ್ದ ಪರಿಕರಗಳು ಕೇವಲ ವಸ್ತುಗಳಲ್ಲ. ಅವು ನಮ್ಮ ಕೃಷಿ ಪರಂಪರೆಯ ಜೀವಂತ ದಾಖಲೆಗಳು ಎಂಬುದನ್ನು ಯೋಗೀಶಪ್ಪ ಮನಗಂಡಿದ್ದಾರೆ. ಹಳೆಯ ಕಾಲದ ಕುಂಟೆ, ಕೂರಿಗೆ, ನೇಗಿಲು, ಗೆಡ್ಡೆಗೋಲು ಮೊದಲಾದ ಪರಿಕರಗಳ ಸಂಗ್ರಹ ಅವರಲ್ಲಿದೆ.
ಹಿಂದಿನ ಕೃಷಿ ಬದುಕನ್ನು ಹೊಸಬರಿಗೆ ಪರಿಚಯ ಮಾಡಿಸುವುದರ ಜೊತೆಗೆ ಮುಂದಿನ ತಲೆಮಾರುಗಳಿಗಾಗಿ ಗ್ರಾಮೀಣ ಪರಂಪರೆಯನ್ನು ಉಳಿಸಬೇಕೆಂಬ ಕಾಳಜಿ ಹೊಂದಿದ್ದಾರೆ.
ಡಾ.ಮಳಲೀಗೌಡ, ಕೃಷಿ ವಿಜ್ಜಾನಿಯೋಗೀಶಪ್ಪ ಅವರ ಕುಟುಂಬ 20 ವರ್ಷದಿಂದ ಕಾಡುಕೃಷಿ ನಡೆಸುತ್ತಿರುವುದು ಸಂತಸದ ವಿಚಾರ. ಅವರ ತೋಟ, ವಾತಾವರಣಕ್ಕೆ ಉತ್ತಮ ಗಾಳಿ ಕೊಡುತ್ತಿದೆ. ಪಕ್ಷಿಗಳಿಗೆ ಆಶ್ರಯ ನೀಡಿದೆಎಸ್.ಎನ್. ಯೋಗೀಶಪ್ಪ, ಸಾಣೇನಹಳ್ಳಿ ಕೃಷಿಕಪರಿಸರಕ್ಕೆ ಕೈಲಾದ ಸೇವೆ ಸಲ್ಲಿಸಬೇಕೆಂದು ಕಾಡು ಕೖಷಿ ನಡೆಸುತ್ತಿದ್ದೇವೆ. ಬೀದಿಯಲ್ಲಿ ಮೃತ ನಾಯಿಯಿಂದ ಪರಿಸರಕ್ಕೆ ಹಾನಿಯಾಗಬಾರದು ಎಂದು ಸಂಸ್ಕಾರ ಮಾಡುವುದನ್ನು ರೂಢಿಸಿಕೊಂಡಿದ್ದೇವೆ.ಸುಭಾಷಿತಗಳ ಸಂಗ್ರಹ
ಯೋಗೀಶಪ್ಪ ಅವರ ಆಸಕ್ತಿ ಕೃಷಿ ಮತ್ತು ಪರಿಸರಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರಲ್ಲಿ ಲೆಕ್ಕವಿಲ್ಲದಷ್ಟು ಸುಭಾಷಿತಗಳ ಸಂಗ್ರಹವಿದೆ. ಬದುಕಿಗೆ ದಾರಿ ತೋರುವ ಮಾತುಗಳನ್ನು ಸಂಗ್ರಹಿಸುವುದು, ಅವುಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು ಅವರ ಹವ್ಯಾಸ. ಆಹ್ವಾನ ಪತ್ರಿಕೆಗಳನ್ನು ಸಮಾರಂಭ ಮುಗಿದ ಬಳಿಕ ಅದರ ಹಿಂಬದಿಯ ಖಾಲಿ ಜಾಗದಲ್ಲಿ ಒಳ್ಳೆಯ ವಿಚಾರಗಳನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾರೆ.

