Dailyhunt Logo
  • Light mode
    Follow system
    Dark mode
    • Play Story
    • App Story
ಹಣ ಅಕ್ರಮ ವರ್ಗಾವಣೆ: ಸುಭಾಷ್ ಚಂದ್ರ ವಿರುದ್ಧ ಪ್ರಕರಣ ದಾಖಲಿಸಿದ ಇ.ಡಿ

ಹಣ ಅಕ್ರಮ ವರ್ಗಾವಣೆ: ಸುಭಾಷ್ ಚಂದ್ರ ವಿರುದ್ಧ ಪ್ರಕರಣ ದಾಖಲಿಸಿದ ಇ.ಡಿ

ನವದೆಹಲಿ: ಹಣ ಅಕ್ರಮ ವರ್ಗಾವಣೆ ನಡೆಸಿದ ಆರೋಪದ ಮೇಲೆ ಉದ್ಯಮಿ ಸುಭಾಷ್ ಚಂದ್ರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಸೋಮವಾರ ಪ್ರಕರಣ ದಾಖಲಿಸಿದೆ.

ಸಾಲವನ್ನು ಸರಿಯಾಗಿ ಮರುಪಾವತಿ ಮಾಡದ ಕಾರಣ ಲೈಫ್‌ ಇನ್ಶೂರೆನ್ಸ್‌ ಕಾರ್ಪೊರೇಷನ್‌ ಹೌಸಿಂಗ್‌ ಫೈನಾನ್ಸ್‌ ಲಿಮಿಟೆಡ್‌ (ಎಲ್‌ಐಸಿಎಚ್‌ಎಫ್‌ ಎಲ್‌) ಸಂಸ್ಥೆಗೆ ₹1,322 ಕೋಟಿ ನಷ್ಟ ಉಂಟುಮಾಡಿದ ಆರೋಪವಿದೆ.

ಸಾಲ ಪಡೆಯುವ ಸಲುವಾಗಿ ತಮ್ಮ ಆದಾಯವನ್ನು ಹೆಚ್ಚು ಮಾಡಿ ತೋರಿಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಸಿಬಿಐ ಈಗಾಗಲೇ ಎಫ್‌ಐಆರ್‌ ದಾಖಲಿಸಿದೆ. ಈ ಎಫ್‌ಐಆರ್‌ನ್ನು ಗಮನದಲ್ಲಿರಿಸಿಕೊಂಡು, ಹಣ ಅಕ್ರಮ ವರ್ಗಾವಣೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.

'₹980 ಕೋಟಿ ಸಾಲ ಪಡೆಯಲು ಸುಭಾಷ್ ಚಂದ್ರ ಅವರು ತಮ್ಮ ನಿವ್ವಳ ಆದಾಯ ಪ್ರಮಾಣಪತ್ರವನ್ನುಸಲ್ಲಿಸಿದ್ದರು. ಅದರಲ್ಲಿ, ಅವರ ಒಟ್ಟು ಆಸ್ತಿ ಅಂದಾಜು ₹59,000 ಕೋಟಿ ಎಂದು ನಮೂದಿಸಲಾಗಿತ್ತು' ಎಂದು ಲೈಫ್‌ ಇನ್ಶೂರೆನ್ಸ್‌ ಕಾರ್ಪೊರೇಷನ್‌ ಹೌಸಿಂಗ್‌ ಫೈನಾನ್ಸ್‌ ಲಿಮಿಟೆಡ್‌ (ಎಲ್‌ಐಸಿಎಚ್‌ಎಫ್‌ ಎಲ್‌) ಆರೋಪಿಸಿದೆ.

ವೈಯಕ್ತಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ್ದು: 'ಸುಭಾಷ್‌ ಚಂದ್ರ ವೈಯಕ್ತಿಕ ಸಾಮರ್ಥ್ಯದ ಆಧಾರದ ಮೇಲೆ ಇ.ಡಿ ಅವರ ವಿರುದ್ಧ ಪ್ರಕರಣ ದಾಖಲಿಸಿದೆ. ಕಂಪನಿ ಅಥವಾ ಕಾರ್ಯಾಚರಣೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ' ಎಂದು 'ಜೀ ಎಂಟರ್‌ಟೈನ್‌ಮೆಂಟ್‌ ಎಂಟರ್‌ಪ್ರೈಸಸ್‌' ತಿಳಿಸಿದೆ.

'ಇಡೀ ಪ್ರಕರಣವು ಸುಭಾಷ್‌ ಅವರಿಗೆ ಸಂಬಂಧಿಸಿದೆ. ಇದಕ್ಕೆ ಸಂಸ್ಥೆಯ ಪ್ರವರ್ತಕರು ಹಾಗೂ ಅಥವಾ ಕಂಪನಿಯು ಯಾವುದೇ ಹೊಣೆಗಾರಿಕೆಯನ್ನು ಹೊರುವುದಿಲ್ಲ' ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani