ಯಲ್ಲಾಪುರ: 'ಕಾಂಗ್ರೆಸ್‌ನಲ್ಲಿದ್ದ 17 ಶಾಸಕರನ್ನು ಹಣ ನೀಡಿ ಬಿಜೆಪಿ ಖರೀದಿಸಿತ್ತು ಎಂದು ಹೇಳಿರುವ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹಣ ನೀಡಿದ್ದನ್ನು ಸಾಬೀತುಡಿಸಲಿ' ಎಂದು ಶಾಸಕ ಶಿವರಾಮ ಹೆಬ್ಬಾರ ಸವಾಲೆಸೆದರು.
'ಕಾಂಗ್ರೆಸ್‌ನಲ್ಲಿದ್ದ 17 ಮಂದಿ ಬಿಜೆಪಿಗೆ ಬೆಂಬಲಿಸಿದ್ದರಿಂದ ಈಶ್ವರಪ್ಪ ಸಚಿವರಾದರು.
ಅಧಿಕಾರ ಅನುಭವಿಸಿದರು. ಆದರೆ, ಲಂಚ ಪಡೆದ ಆರೋಪದಲ್ಲಿ ಹುದ್ದೆ ತ್ಯಜಿಸಿ, ಮೂಲೆಗುಂಪಾಗಬೇಕಾಯಿತು' ಎಂದರು.
'ಶಾಸಕರಿಗೆ ಹಣ ನೀಡಿ ಬಿಜೆಪಿಗೆ ಕರೆತಂದಿದ್ದರೆ ಯಾರು ಹಣ ನೀಡಿದರು? ಎಲ್ಲಿ ಹಣ ನೀಡಿದರು? ಎಷ್ಟು ಹಣ ನೀಡಿದರು? ಎಂಬುದನ್ನು ಈಶ್ವರಪ್ಪ ದಾಖಲೆ ಸಹಿತ ಬಹಿರಂಗಪಡಿಸಲಿ. ಇಲ್ಲವೇ ಹತಾಶ ಮನೋಭಾವದಲ್ಲಿರುವ ಅವರು ರಾಜಕೀಯ ನಿವೃತ್ತಿ ಪಡೆದು, ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ ಪಡೆಯಲಿ' ಎಂದು ಟೀಕಿಸಿದರು.

