Wednesday, 05 Aug, 6.51 am ಪ್ರಜಾವಾಣಿ

ಚಾಮರಾಜ ನಗರ
ಹನೂರು | ಎಂಟು ವರ್ಷಗಳಿಂದ ಪಾವತಿಯಾಗದ ಬಾಡಿಗೆ

ಹನೂರು: ತಾಲ್ಲೂಕಿನ ಮಾರ್ಟಳ್ಳಿಯ ಗ್ರಾಮ ಪಂಚಾಯಿತಿಯು 2011ರಿಂದ ಸೇಂಟ್‌ ಮೆರೀಸ್‌ ಯೂತ್‌ ಕ್ಲಬ್‌ಗೆ ಸೇರಿದ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದು, ಎಂಟು ವರ್ಷಗಳಿಂದ ಕ್ಲಬ್‌ಗೆ ಬಾಡಿಗೆ ಪಾವತಿಸಿಲ್ಲ.

ಬಾಡಿಗೆ ಪಾವತಿಸಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಕ್ಲಬ್‌ನ ಸದಸ್ಯರು ಆಗ್ರಹಿಸಿದ್ದಾರೆ.

ಗ್ರಾಮ ಪಂಚಾಯಿತಿ ರಚನೆಯಾದ ಬಳಿಕ ಇದ್ದ ಹಳೆಯ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡುತ್ತಿದ್ದ ಸಂದರ್ಭದಲ್ಲಿ ಪಂಚಾಯಿತಿಗೆ ಸ್ವಂತ ಕಟ್ಟಡ ಇಲ್ಲದೇ ಇದ್ದುದರಿಂದ, ಸಮೀಪದಲ್ಲೇ ಇದ್ದ ಸೇಂಟ್ ಮೇರಿಸ್ ಯೂತ್ ಕ್ಲಬ್‍ಗೆ ಸೇರಿದ ಎರಡು ಕೊಠಡಿಗಳನ್ನು 2011ರ ಫೆಬ್ರುವರಿ 1ರಂದು ತಿಂಗಳಿಗೆ ₹1000ದಂತೆ ಬಾಡಿಗೆಗೆ ಪಡೆಯಲಾಗಿತ್ತು.

ಕ್ಲಬ್‌ನ ಕಟ್ಟಡವು ಪಂಚಾಯಿತಿ ಕಚೇರಿಗೆ ಹೊಂದಿಕೊಂಡಂತೆ ಇರುವುದರಿಂದ ಕಚೇರಿ ಕೆಲಸಗಳಿಗೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಅಂದಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಂಗಾಧರ್‌ ಎಂಬುವವರು ₹15 ಸಾವಿರ ಮುಂಗಡ ಹಣ ನೀಡಿ ನೀಡಿ ಬಾಡಿಗೆಗೆ ಪಡೆದಿದ್ದರು. ಪ್ರತಿ ತಿಂಗಳು ಬಾಡಿಗೆ ಹಣ ನೀಡುವ ಬಗ್ಗೆ ಒಪ್ಪಂದವೂ ಮಾಡಿಕೊಳ್ಳಲಾಗಿತ್ತು.

ಪ್ರಾರಂಭದಲ್ಲಿ ಒಂದೆರಡು ತಿಂಗಳು ಬಾಡಿಗೆ ಹಣವನ್ನು ನೀಡಿದ್ದನ್ನು ಬಿಟ್ಟರೆ ಇದುವರೆಗೆ ಬಾಡಿಗೆ ಹಣವನ್ನೇ ನೀಡಿಲ್ಲ ಎಂದು ಕ್ಲಬ್‌ ಸದಸ್ಯರು ಆರೋಪಿಸುತ್ತಾರೆ.

'ಎಂಟು ವರ್ಷಗಳಿಂದ ಬಾಡಿಗೆ ನೀಡಿಲ್ಲ. ನಾನು ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದ ಸಂದರ್ಭದಲ್ಲಿ ಪಿಡಿಒ ಗಮನಕ್ಕೆ ತಂದಿದ್ದೆ. ಆದರೆ ಅವರು ಬಾಡಿಗೆ ನೀಡಲು ಮುಂದಾಗಿಲ್ಲ. ಇದುವರೆಗೆ ನಡೆದ ಗ್ರಾಮಸಭೆಗಳಲ್ಲಿ ಬಾಡಿಗೆ ಹಣ ನೀಡುವಂತೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ, ಪ್ರಯೋಜನವಾಗಿಲ್ಲ. ಬಾಡಿಗೆ ಪಾವತಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕಾನೂನಿನ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ' ಎಂದು ಮುಖಂಡ ಜಪಮಾಲೈ ಅವರು 'ಪ್ರಜಾವಾಣಿ'ಗೆ ತಿಳಿಸಿದರು.

ಪ್ರತಿಕ್ರಿಯಿಸದ ಪಿಡಿಒ: 'ಕೊಠಡಿಗೆ ಬಾಡಿಗೆ ನೀಡುವಂತೆ ಇದುವರೆಗೆ ನಾಲ್ಕೈದು ಬಾರಿ ಪಿಡಿಒಗೆ ಮನವಿ ಮಾಡಿದ್ದೇವೆ. ಮೌಖಿಕವಾಗಿ ಸಾಕಷ್ಟು ಬಾರಿ ಹೇಳಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಬಾಡಿಗೆ ಕೇಳಿದರೆ ಉಡಾಫೆಯಿಂದ ವರ್ತಿಸುತ್ತಾರೆ. ಅಲ್ಲಿನ ಸಿಬ್ಬಂದಿಯನ್ನು ಕೇಳಿದರೆ ಅವರೂ ಪ್ರತಿಕ್ರಿಯಿಸುವುದಿಲ್ಲ. ಪ್ರಾರಂಭದಲ್ಲಿ ಒಂದು ಕೊಠಡಿಯನ್ನು ಮಾತ್ರ ಬಾಡಿಗೆಗೆ ನೀಡಿದ್ದೆವು. ಬಳಿಕ ಇನ್ನೊಂದು ಕೊಠಡಿ ಬೇಕು ಎಂದು ಪಡೆದ ಅದಕ್ಕೂ ಬಾಡಿಗೆ ಪಾವತಿಸಿಲ್ಲ. ಹಿರಿಯ ಅಧಿಕಾರಿಗಳು ಇದನ್ನು ಗಮನಿಸಿ ನಮಗೆ ಬಾಡಿಗೆ ಪಾವತಿಸಲು ಸೂಚಿಸಬೇಕು' ಎಂದು ಸೇಂಟ್ ಮೇರಿಸ್ ಯೂತ್ ಕ್ಲಬ್ ಅಧ್ಯಕ್ಷ ಲೂಯಿಸ್ ನೇಯ್ಸನ್ ಅವರು ಹೇಳಿದರು.

ಪಾವತಿಗೆ ಕ್ರಮ: ಇಒ
ಪ್ರತಿಕ್ರಿಯೆ ಪಡೆಯಲು ಮಾರ್ಟಳ್ಳಿ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಶಿವಣ್ಣ ಅವರಿಗೆ ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ.

ಹನೂರು ತಾಲ್ಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ (ಇಒ) ರಾಜು ಅವರನ್ನು 'ಪ್ರಜಾವಾಣಿ' ಸಂಪರ್ಕಿಸಿದಾಗ, 'ಮಾರ್ಟಳ್ಳಿ ಗ್ರಾಮಪಂಚಾಯಿತಿ ಕಚೇರಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಬಗ್ಗೆ ಮಾಹಿತಿಯಲ್ಲ. ಒಂದು ವೇಳೆ ಕಟ್ಟಡವನ್ನು ಬಾಡಿಗೆಗೆ ಪಡೆದಿದ್ದರೆ ಕಡ್ಡಾಯವಾಗಿ ಬಾಡಿಗೆ ಪಾವತಿಸಬೇಕಿರುವುದು ಪಿಡಿಒ ಕೆಲಸ. ಎಷ್ಟು ವರ್ಷಗಳಿಂದ ಬಾಡಿಗೆ ಪಾವತಿಯಾಗಿಲ್ಲ ಎಂಬುದರ ಬಗ್ಗೆ ಯೂತ್ ಕ್ಲಬ್ ಸದಸ್ಯರು ನನಗೆ ಮಾಹಿತಿ ನೀಡಿದರೆ ಬಾಡಿಗೆ ಪಾವತಿಗೆ ಕ್ರಮವಹಿಸಲಾಗುವುದು' ಎಂದು ಹೇಳಿದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top