ಹರಿಹರ: ನಗರದ ಗಾಂಧಿ ಮೈದಾನಕ್ಕೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಆಗ್ರಹಿಸಿ ತಾಲ್ಲೂಕು ಕ್ರೀಡಾಪಟುಗಳ ಒಕ್ಕೂಟದಿಂದ ಈಚೆಗೆ ಶಾಸಕ ಬಿ.ಪಿ. ಹರೀಶ್ ಸೇರಿದಂತೆ ವಿವಿಧ ಮುಖಂಡರಿಗೆ ಮನವಿ ಸಲ್ಲಿಸಲಾಯಿತು.
ಗಾಂಧಿ ಮೈದಾನದಲ್ಲಿ ಪ್ರತಿನಿತ್ಯ ವಾಲಿಬಾಲ್, ಕ್ರಿಕೆಟ್, ಫುಟ್‌ಬಾಲ್, ಬ್ಯಾಸ್ಕೆಟ್‌ಬಾಲ್, ಸೈಕ್ಲಿಂಗ್ ಸೇರಿದಂತೆ ವಿವಿಧ ಕ್ರೀಡೆಗಳ ಅಭ್ಯಾಸ ನಡೆಯುತ್ತಿದೆ.
ಆದರೆ, ಕ್ರೀಡಾಪಟುಗಳಿಗೆ ಶುದ್ಧ ಕುಡಿಯುವ ನೀರು, ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ಸಮರ್ಪಕ ವಿದ್ಯುತ್ ದೀಪ, ಅಗತ್ಯ ಕ್ರೀಡಾ ಸಾಮಗ್ರಿ ಸೇರಿದಂತೆ ಮೂಲ ಸೌಕರ್ಯಗಳಿಲ್ಲದೆ ತೊಂದರೆಯಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಬಿ.ಆನಂದ್ ಕುಮಾರ್ ಬೇಸರ ವ್ಯಕ್ತಪಡಿಸಿದರು.
ಕ್ರೀಡಾಂಗಣದ ಪಕ್ಕದ ಈಜುಕೊಳ ನಿರ್ವಹಣೆಯ ಕೊರತೆಯಿಂದ ಯುವ ಈಜುಪಟುಗಳು ತರಬೇತಿಯಿಂದ ವಂಚಿತರಾಗಿದ್ದಾರೆ. ವ್ಯಾಯಾಮ ಶಾಲೆಯ ಹಳೆಯ ಉಪಕರಣಗಳನ್ನು ಬದಲಿಸಿ ಹೊಸ ಉಪಕರಣಗಳನ್ನು ಒದಗಿಸುವುದರ ಜೊತೆಗೆ, ಮುಖ್ಯ ದ್ವಾರ ನಿರ್ಮಾಣದಿಂದ ಪರ್ಯಾಯವಾಗಿ ಬಳಸಲಾಗುತ್ತಿರುವ ರಸ್ತೆಯನ್ನು ದುರಸ್ತಿಗೊಳಿಸಬೇಕು ಎಂದು ಪ್ರಧಾನ ಕಾರ್ಯದರ್ಶಿ ಎಚ್.ಎಸ್. ರಾಘವೇಂದ್ರ ಒತ್ತಾಯಿಸಿದರು.
ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಘಟಕದ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಹಾಗೂ ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಅವರಿಗೂ ಪ್ರತ್ಯೇಕ ಮನವಿ ಸಲ್ಲಿಸಲಾಯಿತು.
ಉಪಾಧ್ಯಕ್ಷರಾದ ರಾಜನಹಳ್ಳಿ ಮಂಜುನಾಥ್, ಡಿ.ಬಿ. ರೇವಣಸಿದ್ದಪ್ಪ, ಅಜಯ್ ಸಾವಂತ್, ಸಹ ಕಾರ್ಯದರ್ಶಿ ಎಸ್. ಪ್ರಭಾಕರ್, ಬಿ.ಮಲ್ಲೇಶ್, ಸತೀಶ್ ಕುಮಾರ್, ಎಚ್.ಎಂ. ಕಾರ್ತಿಕ್, ಸಂಘಟನಾ ಕಾರ್ಯದರ್ಶಿ ಸಿ. ಗೌತಮ್, ಹುಲಿಕಟ್ಟೆ ಗುರುಕಿರಣ್ ಉಪಸ್ಥಿತರಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260705-43-2013370242

