ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಅವಘಡಗಳು ಸಂಭವಿಸಿದಲ್ಲಿ, ಕಣ್ಣಿಗೆ ಹಾನಿಯಾಗುವುದನ್ನು ತಪ್ಪಿಸಲು ನಗರದ ಕಣ್ಣಿನ ಆಸ್ಪತ್ರೆಗಳು ಅಗತ್ಯ ಸಿದ್ಧತೆ ಮಾಡಿಕೊಂಡಿವೆ. ಹಬ್ಬದ ಸಂದರ್ಭದಲ್ಲಿ ದಿನದ 24 ಗಂಟೆಯೂ ಸೇವೆ ನೀಡಲು ಸಜ್ಜಾಗಿವೆ.
ಮಿಂಟೊ, ನಾರಾಯಣ ನೇತ್ರಾಲಯ, ನೇತ್ರಧಾಮ, ಶಂಕರ, ಡಾ.
ಅಗರ್ವಾಲ್ಸ್ ಸೇರಿ ವಿವಿಧ ಕಣ್ಣಿನ ಆಸ್ಪತ್ರೆಗಳು ಚಿಕಿತ್ಸೆಗೆ ಬೇಕಾದ ಔಷಧಗಳನ್ನು ದಾಸ್ತಾನು ಮಾಡಿಕೊಂಡಿವೆ. ಅದೇ ರೀತಿ, ಪ್ರತ್ಯೇಕ ಹಾಸಿಗೆ ವ್ಯವಸ್ಥೆಯನ್ನು ಮಿಂಟೊ, ನಾರಾಯಣ ನೇತ್ರಾಲಯ ಸೇರಿ ಕೆಲ ಆಸ್ಪತ್ರೆಗಳಲ್ಲಿ ಮಾಡಲಾಗಿದೆ.
ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಒಟ್ಟು 25 ಹಾಸಿಗೆಗಳನ್ನು ಪಟಾಕಿ ಗಾಯಾಳುಗಳ ಚಿಕಿತ್ಸೆಗಾಗಿ ಮೀಸಲಿಡಲಾಗಿದೆ. ಇವುಗಳಲ್ಲಿ ತಲಾ 10 ಪುರುಷರು ಹಾಗೂ ಮಹಿಳೆಯರಿಗೆ, ಐದು ಹಾಸಿಗೆಗಳನ್ನು ಮಕ್ಕಳ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತದೆ.
'ಹಬ್ಬದ ದಿನಗಳಲ್ಲಿ 24 ಗಂಟೆಯೂ ಚಿಕಿತ್ಸೆ ಲಭ್ಯವಿರಲಿದ್ದು, ವೈದ್ಯರು ಹಾಗೂ ಸಿಬ್ಬಂದಿ ಹಾಜರಿರುತ್ತಾರೆ. ರೋಗಿಗಳ ಚಿಕಿತ್ಸೆಗೆ ಬೇಕಾದ ಸಲಕರಣೆ ಹಾಗೂ ಔಷಧಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿಗಳ ಹಾವಳಿ ಹೆಚ್ಚುತ್ತಿದ್ದು, ಮುನ್ನೆಚ್ಚರಿಕೆ ವಹಿಸದಿದ್ದಲ್ಲಿ ಬೆಳಕಿನ ಹಬ್ಬವು ಜೀವನದಲ್ಲಿ ಕತ್ತಲೆ ತರುವ ಸಾಧ್ಯತೆ ಇರುತ್ತದೆ' ಎಂದು ಮಿಂಟೊ ಕಣ್ಣಿನ ಆಸ್ಪತ್ರೆ ನಿರ್ದೇಶಕ ಡಾ.ಸುರೇಶ್ ಬಾಬು ತಿಳಿಸಿದರು.
247 ಪ್ರಕರಣ: ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಕಳೆದ ಐದು ವರ್ಷಗಳಲ್ಲಿ 247 ಪಟಾಕಿ ಗಾಯ ಪ್ರಕರಣಗಳು ವರದಿಯಾಗಿವೆ. ಈ ಪ್ರಕರಣಗಳಲ್ಲಿ 187 ಮಂದಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದರೆ, 60 ಮಂದಿ ಒಳರೋಗಿಗಳಾಗಿ ದಾಖಲಾಗಿದ್ದರು. ಗಾಯಗೊಂಡವರಲ್ಲಿ ಬಹುತೇಕರು ಬಿಜಲಿ ಪಟಾಕಿ ಸಿಡಿಸಿದವರಾಗಿದ್ದಾರೆ. ಪ್ರತಿ ವರ್ಷ ಸರಾಸರಿ 50ರಿಂದ 60 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಶೇ 40 ರಷ್ಟು ಮಂದಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಕಳೆದ ವರ್ಷ 56 ಮಂದಿ ಪಟಾಕಿ ಗಾಯಕ್ಕೆ ಚಿಕಿತ್ಸೆ ಪಡೆದಿದ್ದಾರೆ.
'ಪಟಾಕಿಯಿಂದ ಕಣ್ಣಿಗೆ ಹಾನಿಯಾದಲ್ಲಿ ಸ್ವಚ್ಛವಾದ ಕರವಸ್ತ್ರದಿಂದ ಕಣ್ಣನ್ನು ಮುಚ್ಚಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಣ್ಣನ್ನು ಉಜ್ಜುವುದು, ನೀರಿನಿಂದ ತೊಳೆದುಕೊಳ್ಳುವುದು ಮಾಡಬಾರದು. ಕೂಡಲೇ ಹತ್ತಿರದ ಕಣ್ಣಿನ ಆಸ್ಪತ್ರೆಗೆ ತೆರಳಿ, ತುರ್ತು ಚಿಕಿತ್ಸೆ ಪಡೆಯಬೇಕು. ಪಟಾಕಿ ಹೊಡೆದ ಬಳಿಕ ಅದರ ಮೇಲೆ ನೀರು ಹಾಕಬೇಕು. ಇದರಿಂದ ಮಾಲಿನ್ಯದ ಪ್ರಮಾಣ ಕಡಿಮೆ ಆಗುವ ಜತೆಗೆ ಸುಟ್ಟ ಪಟಾಕಿಗಳ ಬಿಸಿ ತುಂಡುಗಳನ್ನು ಅರಿವಿಲ್ಲದೆಯೇ ಮೆಟ್ಟುವುದು ತಪ್ಪಲಿದೆ' ಎಂದು ಡಾ.ಸುರೇಶ್ ಬಾಬು ತಿಳಿಸಿದರು.
'ಐದು ವರ್ಷದೊಳಗಿನ ಮಕ್ಕಳಿಗೆ ಪಟಾಕಿಗಳನ್ನು ಹೊಡೆಯಲು ಬಿಡಬಾರದು. ಬಯಲು ಪ್ರದೇಶದಲ್ಲಿ ಪಟಾಕಿಗಳನ್ನು ಬಿಸಾಡುವುದು ಸೇರಿ ವಿವಿಧ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು' ಎಂದು ಹೇಳಿದರು.
ಡಾ. ಸುರೇಶ್ ಬಾಬು ಮಿಂಟೊ ಕಣ್ಣಿನ ಆಸ್ಪತ್ರೆ ನಿರ್ದೇಶಕಹಸಿರು ಪಟಾಕಿಯಿಂದ ಯಾವುದೇ ತರಹದ ಹಾನಿಯಾಗುವುದಿಲ್ಲ ಎಂಬ ತಪ್ಪುಕಲ್ಪನೆಯಿಂದ ಹೊರಬರಬೇಕು. ಪಟಾಕಿ ಸಿಡಿಸುವಾಗ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕುಡಾ. ನರೇನ್ ಶೆಟ್ಟಿ ನಾರಾಯಣ ನೇತ್ರಾಲಯದ ನಿರ್ದೇಶಕಪಟಾಕಿ ಗಾಯಗಳಿಗೆ 24 ಗಂಟೆಗಳೂ ತುರ್ತು ಚಿಕಿತ್ಸೆ ಒದಗಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ದೀಪಾವಳಿ ಹಬ್ಬ ಆಚರಿಸಿಡಾ. ಅಮೋದ್ ನಾಯಕ್ ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆಪಟಾಕಿ ಗಾಯಗಳು ಹೊರಗಿನಿಂದ ಸಣ್ಣದಾಗಿ ಕಂಡರೂ ಕಣ್ಣಿನ ಒಳಭಾಗದ ಸೂಕ್ಷ್ಮ ಅಂಗಾಂಶಗಳಿಗೆ ಹಾನಿ ಮಾಡುವ ಸಾಧ್ಯತೆಯಿದೆ. ತಕ್ಷಣವೇ ನೇತ್ರ ತಜ್ಞರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳಬೇಕುಸುಟ್ಟಗಾಯಕ್ಕೆ ಚಿಕಿತ್ಸೆ
ಪಟಾಕಿ ಅವಘಡದಿಂದ ಸಂಭವಿಸುವ ಸುಟ್ಟ ಗಾಯಗಳಿಗೆ ತುರ್ತು ಚಿಕಿತ್ಸೆ ನೀಡಲು ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ಮಹಾಬೋಧಿ ಸುಟ್ಟ ಗಾಯಗಳ ಚಿಕಿತ್ಸಾ ಕೇಂದ್ರ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಈ ಕೇಂದ್ರಕ್ಕೆ ಅಗತ್ಯ ವೈದ್ಯರು ಶುಶ್ರೂಷಕರು ಹಾಗೂ ಸಹಾಯಕ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ದಿನದ 24 ಗಂಟೆಯೂ ಇಲ್ಲಿ ವೈದ್ಯಕೀಯ ಸೇವೆ ಲಭ್ಯವಿರಲಿದೆ.
ಸಹಾಯವಾಣಿಗಳು
* ಮಿಂಟೊ ಕಣ್ಣಿನ ಆಸ್ಪತ್ರೆ: 9481740137
* ನಾರಾಯಣ ನೇತ್ರಾಲಯ: ರಾಜಾಜಿನಗರ ಶಾಖೆ- 080 66121641/1643 ಅಥವಾ 9902546046
* ನಾರಾಯಣ ನೇತ್ರಾಲಯ ಎನ್ಎಚ್ ಹೆಲ್ತ್ ಸಿಟಿ ಬೊಮ್ಮಸಂದ್ರ: 080 66660658 ಅಥವಾ 9902821128
* ನಾರಾಯಣ ನೇತ್ರಾಲಯ ಇಂದಿರಾನಗರ ಶಾಖೆ: 080 66974000 ಅಥವಾ 9916024455
* ನಾರಾಯಣ ನೇತ್ರಾಲಯ ಬನ್ನೇರುಘಟ್ಟ ರಸ್ತೆ ಶಾಖೆ: 080 66121618 ಅಥವಾ 9035154170
* ನಾರಾಯಣ ನೇತ್ರಾಲಯ ವೈಟ್ಫೀಲ್ಡ್ ಶಾಖೆ: 080 66121658 ಅಥವಾ 9535258004
* ಶಂಕರ ಕಣ್ಣಿನ ಆಸ್ಪತ್ರೆ: (ಮಾರತಹಳ್ಳಿ) 080 69038900 ಅಥವಾ 9739270477
* ಜಯನಗರದ ನೇತ್ರಧಾಮ: 080 26088000 ಅಥವಾ 9448071816
* ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆ: 95949 04060

