ದುಬೈ: ಇರಾನ್ ಪರಮೋಚ್ಚ ನಾಯಕ ಆಯತೊಲ್ಲಾ ಖಮೇನಿ ಅಂತ್ಯಕ್ರಿಯೆ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೊಲ್ಲುವುದಾಗಿ ಬಹಿರಂಗ ಬೆದರಿಕೆ ಒಡ್ಡಲಾಗಿದೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಟ್ರಂಪ್, 1,000 ಕ್ಷಿಪಣಿಗಳನ್ನು ಸಜ್ಜಾಗಿ ನಿಲ್ಲಿಸಿದ್ದೇವೆ.
ನನ್ನನ್ನು ಕೊಲ್ಲುವ ಯೋಚನೆ ಮಾಡುವ ಮುನ್ನ ಯೋಚಿಸಿ ಎಂದು ತಿರುಗೇಟು ನೀಡಿದ್ದಾರೆ.
ಈ ಕುರಿತು ಟ್ರುತ್ ಸೋಶಿಯಲ್‌ನಲ್ಲಿ ಪ್ರತಿಕ್ರಿಯಿಸಿರುವ ಟ್ರಂಪ್, ಇರಾನ್ ಮೇಲೆ ದಾಳಿಗೆ 1,000 ಕ್ಷಿಪಣಿಗಳು ಸಜ್ಜಾಗಿ ನಿಂತಿವೆ. ಆ ಬಳಿಕ ಸಾವಿರಾರು ಕ್ಷಿಪಣಿಗಳು ಅದರ ಹಿಂದೆಯೇ ಬರಲಿವೆ ಎಂದು ಬೆದರಿಕೆ ಒಡ್ಡಿರುವ ಒಡ್ಡಿದ್ದಾರೆ. ತಮ್ಮ ಮೇಲೆ ಬೆದರಿಕೆ ಹಾಕಿರುವ ಇರಾನ್ ಈ ಬಗ್ಗೆ ಪರಾಮರ್ಶೆ ನಡೆಸಬೇಕು ಎಂದಿದ್ದಾರೆ. ತಮ್ಮ ಹತ್ಯೆ ಯತ್ನ, ಹತ್ಯೆಗೆ ಬೆದರಿಕೆ ಬರುತ್ತಿರುವ ಬೆನ್ನಲ್ಲೇ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗೆ ನಡೆದ ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಖಮೇನಿ ಅಂತ್ಯಕ್ರಿಯೆಯ ಸಮಯದಲ್ಲಿ, ಶೋಕತಪ್ತ ಅಭಿಮಾನಿಮಾನಿಗಳು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆಗೆ ಟ್ರಂಪ್ ಅವರನ್ನೂ ಕೊಲ್ಲಬೇಕೆಂದು ಒತ್ತಾಯಿಸುವ ಪೋಸ್ಟರ್‌ಗಳನ್ನು ಹಿಡಿದಿದ್ದರು. ಡೆತ್ ಆಫ್ ಟ್ರಂಪ್, ಡೆತ್ ಆಫ್ ನೆತನ್ಯಾಹು ಎಂದೂ ಘೋಷಣೆ ಕೂಗಿದ್ದರು.
ಈ ವರ್ಷದ ಫೆಬ್ರುವರಿ 28ರಂದು ಅಮೆರಿಕ ಮತ್ತು ಇಸ್ರೇಲ್, ಇರಾನ್ ಮೇಲೆ ಆರಂಭಿಸಿದ ವೈಮಾನಿಕ ದಾಳಿಯಲ್ಲಿ 86 ವರ್ಷದ ಖಮೇನಿ ಅವರು ಮೃತಪಟ್ಟಿದ್ದರು. 4 ತಿಂಗಳ ಬಳಿಕ ಜುಲೈ 10ರಂದು ಅಂತ್ಯ ಸಂಸ್ಕಾರ ನೆರವೇರಿಸಲಾಗಿತ್ತು.
'ಅಮೆರಿಕ ಮಿಲಿಟರಿಯು ಇರಾನ್‌ನ ಎಲ್ಲ ಪ್ರದೇಶ ಮತ್ತು ಸೇನೆಯನ್ನು ಸಂಪೂರ್ಣ ನಾಶಪಡಿಸುತ್ತದೆ. ಸರ್ವಸ್ತುತಿಯೂ ಅಲ್ಲಾಹನಿಗೆ!' ಎಂದು ಟ್ರಂಪ್ ಮುಂದುವರಿದು ಹೇಳಿದ್ದಾರೆ.
ಯುದ್ಧ ಮತ್ತು ಕದನ ವಿರಾಮದ ಸಮಯದಲ್ಲಿ ಟ್ರಂಪ್ ಪದೇ ಪದೇ ಅರೇಬಿಕ್ ಭಾಷೆಯಲ್ಲಿ ದೇವರ ಹೆಸರನ್ನು ಬಳಸಿದ್ದಾರೆ. ಇರಾನ್ ನಾಗರಿಕತೆಯನ್ನೇ ನಾಶಮಾಡುವ ಬೆದರಿಕೆ ಹಾಕಿದ್ದಾರೆ.
ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ ಕೊನೆಗೊಂಡಿತು ಎನ್ನುವಷ್ಟರಲ್ಲಿ ಬೂದಿ ಸರಿದು ಕೆಂಡ ಕಾಣುವಂತೆ ಮತ್ತೆ ಮತ್ತೆ ಸಂಘರ್ಷ ಭುಗಿಲೇಳುತ್ತಿದೆ.

