ಮಹಿಳೆಯರಲ್ಲಿ ನೋವಿನಿಂದ ಕೂಡಿದ ಋತುಸ್ರಾವ ಹಾಗೂ ಅನಿಯಮಿತ ಋತುಚಕ್ರ ಸಾಮಾನ್ಯ. ಆರಂಭದಲ್ಲೇ ಸೂಕ್ತ ಚಿಕಿತ್ಸೆ ಪಡೆದರೆ, ಮುಂದಿನ ಅನೇಕ ಗಂಭೀರ ಮಹಿಳಾ ರೋಗಗಳನ್ನು ತಡೆಗಟ್ಟಬಹುದು.
ಕಾರಣಗಳು: ಅಸಮರ್ಪಕ ಜೀವನಶೈಲಿ, ಅತಿಯಾದ ಯೋಚನೆ, ರಾತ್ರಿ ಜಾಗರಣೆ, ಅನಿಯಮಿತ ಆಹಾರ ಕ್ರಮ, ಮಲ, ಮೂತ್ರವನ್ನು ಬಲವಂತವಾಗಿ ತಡೆಹಿಡಿಯುವುದು, ಮಾನಸಿಕ ಒತ್ತಡ ಹಾಗೂ ಸ್ವಯಂ ಔಷಧ ಸೇವನೆ.

ಮುಟ್ಟಿನ ಸಮಯದಲ್ಲಿ ನೋವು ಸಾಮಾನ್ಯವೇ? ಯಾವಾಗ ಆತಂಕಪಡಬೇಕು?
ಮುಟ್ಟು ಬರುವ ಒಂದು ಅಥವಾ ಮುಟ್ಟಿನ ಸಮಯದಲ್ಲಿ ಮೊದಲ ಒಂದೆರಡು ದಿನಗಳಲ್ಲಿ ಹೊಟ್ಟೆಯ ಕೆಳಭಾಗ, ಸೊಂಟದಲ್ಲಿ ನೋವು ಅನುಭವಿಸುವುದು ಕೆಲ ಮಹಿಳೆಯರಲ್ಲಿ ಸಹಜ. ಇದು ಗರ್ಭಾಶಯದ ಸಂಕೋಚದಿಂದ ಉಂಟಾಗುತ್ತದೆ ಮತ್ತು ಸಾಮಾನ್ಯವಾಗಿ ವಿಶ್ರಾಂತಿ, ಬಿಸಿ ನೀರಿನ ಶಾಖ ಹಾಗೂ ಸರಳ ನೋವು ನಿವಾರಕ ಕ್ರಮಗಳಿಂದ ಕಡಿಮೆಯಾಗುತ್ತದೆ.
ಆದರೆ ಪ್ರತೀ ತಿಂಗಳು ತೀವ್ರ ನೋವಿನಿಂದ ದಿನನಿತ್ಯದ ಕೆಲಸಗಳನ್ನು ಮಾಡಲು ಸಾಧ್ಯವಾಗದಿದ್ದರೆ, ನೋವಿನ ಜೊತೆಗೆ ಅಧಿಕ ರಕ್ತಸ್ರಾವ, ದೊಡ್ಡ ರಕ್ತದ ಗಡ್ಡೆಗಳು, ಜ್ವರ, ವಾಂತಿ, ತಲೆಸುತ್ತು ಕಂಡುಬಂದರೆ ಅದನ್ನು ಸಾಮಾನ್ಯ ಮುಟ್ಟಿನ ನೋವೆಂದು ಕಡೆಗಣಿಸಬಾರದು. ಹಾಗೆಯೇ ಹಿಂದೆ ನೋವು ಇಲ್ಲದಿದ್ದರೂ ನಂತರದ ವರ್ಷಗಳಲ್ಲಿ ಹಠಾತ್ತನೆ ತೀವ್ರ ನೋವು ಆರಂಭವಾದರೆ ಅಥವಾ ನೋವು ತಿಂಗಳಿಂದ ತಿಂಗಳಿಗೆ ಹೆಚ್ಚಾಗುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ಇಂತಹ ಲಕ್ಷಣಗಳು ಕೆಲವೊಮ್ಮೆ ಗರ್ಭಾಶಯದ ಒಳಪದರದ ಅಸಹಜ ಬೆಳವಣಿಗೆ (ಎಂಡೊಮೆಟ್ರಿಯೊಸಿಸ್), ಗರ್ಭಾಶಯದ ಗಡ್ಡೆಗಳು (ಫೈಬ್ರಾಯ್ಡ್), ಗರ್ಭಾಶಯ ಸೋಂಕು, ಅಡಿನೋಮಯೋಸಿಸ್ (ಗರ್ಭಾಶಯದ ಒಳಪದರ) ಅಥವಾ ಇತರ ಸ್ತ್ರೀರೋಗಗಳ ಸೂಚನೆಯಾಗಿರಬಹುದು. ಆದ್ದರಿಂದ ನೋವನ್ನು ನಿರ್ಲಕ್ಷಿಸದೆ, ಅಥವಾ ನೋವು ನಿವಾರಕಗಳನ್ನು ವೈದ್ಯರ ಸಲಹೆ ಇಲ್ಲದೆ ತೆಗೆದುಕೊಳ್ಳದೆ ಅದರ ಮೂಲ ಕಾರಣವನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯ.

ಆಯುರ್ವೇದ ಪರಿಹಾರಗಳು:
⦁ ತಜ್ಞರ ಮಾರ್ಗದರ್ಶನದಲ್ಲಿ ಜೀವನಶೈಲಿಯನ್ನು ಸರಿಪಡಿಸಿಕೊಳ್ಳಿ.
⦁ ಎಳ್ಳು, ಜೀರಿಗೆ, ಕರಿಮೆಣಸು ಮತ್ತು ಬೆಲ್ಲದಿಂದ ತಯಾರಿಸಿದ ಕಷಾಯವನ್ನು ಸ್ವಲ್ಪ ತುಪ್ಪದೊಂದಿಗೆ ಸೇವಿಸುವುದು ಉಪಯುಕ್ತ.
⦁ ಹೊಕ್ಕಳಿಗೆ ಎಳ್ಳೆಣ್ಣೆ ಹಚ್ಚುವುದು ಸಹ ಮುಟ್ಟಿನ ನೋವನ್ನು ಕಡಿಮೆ ಮಾಡಲು ಸಹಕಾರಿ.
⦁ ಮುಟ್ಟಿನ ಸಮಯದಲ್ಲಿ ಸಾಧ್ಯವಾದಷ್ಟು ವಿಶ್ರಾಂತಿಯನ್ನು ತೆಗೆದುಕೊಳ್ಳುವುದರಿಂದ ಉಸಿರಾಟ, ರಕ್ತಪರಿಚಲನೆ ಮತ್ತು ನರಮಂಡಲದ ಕಾರ್ಯಗಳನ್ನು ನಿಯಂತ್ರಿಸುತ್ತದೆ.
ಮುಟ್ಟಿನ ಸಮಯದಲ್ಲಿ ಮೂರು ದಿನ ವಿಶೇಷವಾದ ಪಥ್ಯಾಹಾರ ಸೇವಿಸಿ. ಪಥ್ಯಾಹಾರ ಎಂದರೆ ಅನ್ನವನ್ನು ಹಾಲು ತುಪ್ಪದಲ್ಲಿ ಬೇಯಿಸಿ ತಿನ್ನುವುದು. ಇದು ಮುಟ್ಟಿನಿಂದ ಉಂಟಾಗುವ ಹೊಟ್ಟೆ ಮತ್ತು ಸೊಂಟದ ನೋವನ್ನು ತಗ್ಗಿಸಿ, ಬೇರೆ ಬೇರೆ ರೀತಿಯ ಮುಟ್ಟಿನ ಉಪದ್ರಗಳನ್ನು ತಡೆಯಲು ಸಹಕಾರಿಯಾಗಿದೆ.
ಸಮಯಕ್ಕೆ ಸರಿಯಾಗಿ ಪೌಷ್ಟಿಕ ಆಹಾರ ಸೇವಿಸುವುದು, ಹಸಿರು ಸೊಪ್ಪು, ಹಣ್ಣು ಹಾಗೂ ಕಬ್ಬಿಣಾಂಶಯುಕ್ತ ಆಹಾರಗಳನ್ನು ಸೇವಿಸುವುದು, ಸಮರ್ಪಕ ನಿದ್ರೆ, ನಿಯಮಿತ ಯೋಗ, ಪ್ರಾಣಾಯಾಮ ಹಾಗೂ ಧ್ಯಾನವು ಹಾರ್ಮೋನುಗಳ ಸಮತೋಲನಕ್ಕೆ ಸಹಕಾರಿ.
(ಲೇಖಕರು: ಡಾ. ಕೆ. ಸ್ನೇಹ. ಸಹಾಯಕ ಪ್ರಾಧ್ಯಾಪಕಿ, ಪ್ರಸೂತಿ ತಂತ್ರ ಮತ್ತು ಸ್ತ್ರೀರೋಗ ವಿಭಾಗ. ಎಸ್.ಡಿ.ಎಂ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ ಆಸ್ಪತ್ರೆ ಮತ್ತು ಮಹಾವಿದ್ಯಾಲಯ, ಬೆಂಗಳೂರು)

