Dailyhunt Logo
  • Light mode
    Follow system
    Dark mode
    • Play Story
    • App Story
ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ ಯೋಜನೆಗೆ ಖಂಡನೆ: ಬಂಡೆ ತಬ್ಬಿ ಪ್ರತಿರೋಧ

ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ ಯೋಜನೆಗೆ ಖಂಡನೆ: ಬಂಡೆ ತಬ್ಬಿ ಪ್ರತಿರೋಧ

ಬೆಂಗಳೂರು: ಲಾಲ್‌ಬಾಗ್ ಬಂಡೆ ತಬ್ಬಿದ ನಾಗರಿಕರು 'ಹೆಬ್ಬಾಳ- ಸಿಲ್ಕ್ ಬೋರ್ಡ್ ಸುರಂಗ ರಸ್ತೆ' ಯೋಜನೆಗೆ ವಿರೋಧ ವ್ಯಕ್ತಪಡಿಸಿದರು. 'ಉದ್ಯಾನದ ಜೊತೆಗೆ ಬೆಂಗಳೂರಿನ ಪರಂಪರೆಯ ನಾಶ ಮಾಡಲು ಬಿಡುವುದಿಲ್ಲ' ಎಂದು ಒಕ್ಕೊರಲಿನಿಂದ ಹೇಳಿದರು.

'ಲಾಲ್‌ಬಾಗ್‌ ವಾಕರ್ಸ್‌ ಅಸೋಸಿಯೇಷನ್' ನೇತೃತ್ವದಲ್ಲಿ ಭಾನುವಾರ ನಡೆದ ಪ್ರತಿರೋಧದಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಬಂದಿದ್ದವರೂ ಜೊತೆಯಾದರು.

ಕಳೆದೆರಡು ಭಾನುವಾರಗಳಂದು ಮಾನವ ಸರಪಳಿ ರಚಿಸಿ, ಭಿತ್ತಿಪತ್ರ ಪ್ರದರ್ಶಿಸಿ ನಾಗರಿಕರು ಪ್ರತಿಭಟನೆ ನಡೆಸಿದ್ದರು. ಈ ಬಾರಿಯ ಪ್ರತಿರೋಧಕ್ಕೆ ಪೊಲೀಸರು ಅವಕಾಶ ಕೊಡದಿದ್ದರಿಂದ ಮೌನವಾಗಿ ಬಂಡೆ ಮೇಲೆ ಕುಳಿತರು. ನಂತರ ಬಂಡೆಯನ್ನು ತಬ್ಬಿಕೊಂಡರು. ಮಕ್ಕಳೊಂದಿಗೆ ಬಂದಿದ್ದ ಪೋಷಕರು, ವಿದ್ಯಾರ್ಥಿಗಳು ಜೊತೆಯಾದರು.

'ಲಾಲ್‌ಬಾಗ್ ಉದ್ಯಾನ ನಗರಿಯ ಪ್ರತೀಕ. ಉಸಿರು ನೀಡುವ ಶ್ವಾಸಕೋಶವಿದು. ಸುರಂಗ ರಸ್ತೆ ಯೋಜನೆ ಲಾಲ್‌ಬಾಗ್‌ನ ಸೌಂದರ್ಯ ಹಾಳು ಮಾಡಲಿದ್ದು, ನಾಗರಿಕರು ಯೋಜನೆ ವಿರುದ್ಧದ ಅಭಿಯಾನಕ್ಕೆ ನಿರಂತರವಾಗಿ ಬರುತ್ತಿದ್ದಾರೆ' ಎಂದು 'ಲಾಲ್‌ಬಾಗ್ ವಾಕರ್ಸ್ ಅಸೋಸಿಯೇಷನ್‌' ಅಧ್ಯಕ್ಷ ಎಸ್.ಉಮೇಶ್ ಹೇಳಿದರು.

'ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಯೋಜಿಸಲಾಗಿದೆ. ಯೋಜನೆ ವಿರೋಧಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ‌ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಹೈಕೋರ್ಟ್‌ನಲ್ಲಿ ಇದೇ 20ರಂದು ನಡೆಯಲಿದೆ. ಸರ್ಕಾರ ಯೋಜನೆಯನ್ನು ಮರು ಪರಿಶೀಲಿಸಬೇಕು. ಪರಿಸರಕ್ಕೆ ವಿರೋಧವಾದ ಅಭಿವೃದ್ಧಿ ಬೇಡ' ಎಂದರು.

ವೈಜ್ಞಾನಿಕ ಅಧ್ಯಯನ ನಡೆದಿಲ್ಲ: 'ಹೆಬ್ಬಾಳ- ಸಿಲ್ಕ್ ಬೋರ್ಡ್ ಸುರಂಗ ರಸ್ತೆ, ಹೆಬ್ಬಾಳ- ಪಶುವೈದ್ಯ ಕಾಲೇಜು ಸಂಪರ್ಕಿಸುವ 2 ಕಿ.ಮೀ. ಸುರಂಗ ರಸ್ತೆ, ಎತ್ತರಿಸಿದ ಒಂಬತ್ತು ರಸ್ತೆ ಕಾರಿಡಾರ್, ಮೆಟ್ರೊ ಡಬಲ್ ಡೆಕರ್ ಯೋಜನೆಗಳು ನಗರಕ್ಕೆ ಶಾಶ್ವತ ಹಾನಿ ಮಾಡಲಿವೆ. ಇವುಗಳ ಬಗ್ಗೆ ತಜ್ಞರಿಂದ ವಿಸ್ಕೃತ ವೈಜ್ಞಾನಿಕ ಅಧ್ಯಯನಗಳು ನಡೆದಿಲ್ಲ. ಈ ವಿನಾಶಕಾರಿ ಯೋಜನೆಗಳ ಪರಿಣಾಮಗಳನ್ನು ಊಹಿಸಲಾಗದು' ಎಂದು ಪರಿಸರವಾದಿ ದತ್ತಾತ್ರೇಯ ದೇವರ್ ಕಳವಳ ವ್ಯಕ್ತಪಡಿಸಿದರು.

'ಸಂಚಾರ ದಟ್ಟಣೆ ಸಮಸ್ಯೆ ತಗ್ಗಿಸಲು ಪರ್ಯಾಯ ಮಾರ್ಗ ಹುಡುಕಬೇಕು. ಪರಿಸರ ಕೇಂದ್ರಿತ ಅಭಿವೃದ್ಧಿ ಬೇಕೇ ಹೊರತು ಈ ದೂರದೃಷ್ಟಿ ಇಲ್ಲದ ಯೋಜನೆಗಳನ್ನು ನೋಡಿ ಮುಂದಿನ ಪೀಳಿಗೆ ನಮ್ಮನ್ನು ಶಪಿಸಬಾರದು' ಎಂದರು.

ಪರಿಸರವಾದಿಗಳಾದ ಸುಮಾ, ರಾಹುಲ್, ಭಾರತಿ ರಾವ್, ರಾಜ್, ವಸಂತಿ, ವಿನೋದ್, ಅರುಣ್, ಇಂದ್ರಾಣಿ, ಸಂಜಯ್, ಸುರೇಂದ್ರ, ದೀಪಾ ಪಾಲ್ಗೊಂಡಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Prajavani