ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತ ನಡೆದ ಸ್ಥಳಕ್ಕೆ 10 ನಿಮಿಷಗಳ ಒಳಗಾಗಿ ಆಂಬುಲೆನ್ಸ್ ತಲುಪಬೇಕು. ಇಲ್ಲವಾದರೆ ₹10 ಸಾವಿರ ದಂಡ ವಿಧಿಸಲಾಗುವುದು ಎಂಬ ನಿಯಮವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಜಾರಿಗೊಳಿಸಿದೆ.
ಆಂಬುಲೆನ್ಸ್, ಕ್ರೇನ್ ಮತ್ತು ಗಸ್ತು ವಾಹನಗಳ ನಿರ್ವಹಣೆಗೆ ಸಂಬಂಧಿಸಿ ಹೊಸ ನಿಯಮಾವಳಿಗಳನ್ನು ರೂಪಿಸಿರುವ ಪ್ರಾಧಿಕಾರ, 'ಮಾಹಿತಿ ಸ್ವೀಕರಿಸಿದ ಒಂದು ಗಂಟೆಯ ಒಳಗಾಗಿ ಅಪಘಾತಕ್ಕೀಡಾದವರನ್ನು ಹತ್ತಿರದ ಆಸ್ಪತ್ರೆಗೆ ತಲುಪಿಸದಿದ್ದರೆ ₹10 ಸಾವಿರ ದಂಡ ತೆರಬೇಕಾಗುತ್ತದೆ' ಎಂದು ತಿಳಿಸಿದೆ.
'ಅಪಘಾತ ನಡೆದ ಸ್ಥಳ 10 ಕಿ.ಮೀ.ಗಿಂತ ಹೆಚ್ಚು ದೂರದಲ್ಲಿ ಇದ್ದರೆ ಸಮಯದ ಮಿತಿಯನ್ನು ಹೆಚ್ಚಿಸಲಾಗುತ್ತದೆ. ಜಿಪಿಎಸ್ ದತ್ತಾಂಶ ಅಥವಾ ಐಎಂಎಸ್ ಕೇರ್ ಡ್ಯಾಷ್‌ಬೋರ್ಡ್ ಮೂಲಕ ಈ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ' ಎಂದು ಪ್ರಾಧಿಕಾರ ಹೇಳಿದೆ.
'ತುರ್ತು ಕರೆಯನ್ನು ನಿರಾಕರಿಸಿದರೆ ₹10 ಸಾವಿರ ದಂಡ ವಿಧಿಸಲಾಗುತ್ತದೆ. ಗುತ್ತಿಗೆ ಕರಾರುಗಳ ಅನ್ವಯ ಎಲ್ಲ ಉಪಕರಣಗಳು, ಔಷಧಗಳು ಮತ್ತು ಸಿಬ್ಬಂದಿಯನ್ನು ಒದಗಿಸಬೇಕು, ಇಲ್ಲದಿದ್ದರೆ ₹10 ಸಾವಿರ ದಂಡ ತೆರಬೇಕಾಗುತ್ತದೆ' ಎಂದು ತಿಳಿಸಿದೆ.
'ಎನ್‌ಎಚ್‌ಎಐ ಸುರಕ್ಷತಾ ವ್ಯವಸ್ಥೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಆಂಬುಲೆನ್ಸ್, ಕ್ರೇನ್ ಮತ್ತು ಗಸ್ತು ವಾಹನ ಸೇರಿದಂತೆ ರಸ್ತೆಯಲ್ಲಿನ ಎಲ್ಲ ಘಟಕಗಳಿಗೆ ಎಐಎಸ್ 140 ವ್ಯವಸ್ಥೆ ಹೊಂದಿರುವ ಜಿಪಿಎಸ್ ಸಾಧನವನ್ನು ಅಳವಡಿಸಲಾಗುವುದು. ಅವುಗಳನ್ನು ಆಯಂಡ್ರಾಯ್ಡ್ ಮೊಬೈಲ್‌ಗಳಿಗೆ ಸಂಪರ್ಕಿಸಲಾಗುತ್ತದೆ' ಎಂದು ಹೇಳಿದೆ.

