ಉತ್ತರಾಖಂಡದಿಂದ ನೇಪಾಳದವರೆಗೆ ಒಂದೇ ಎಚ್ಚರಿಕೆ: ಬೆಚ್ಚಗಾಗುತ್ತಿರುವ ಪರ್ವತ, ಕರಗುತ್ತಿರುವ ಹಿಮ, ಕುಸಿಯುತ್ತಿರುವ ನೆಲ ಮತ್ತು ನಿಯಂತ್ರಣವಿಲ್ಲದ ಅಭಿವೃದ್ಧಿ.
ಹಿಮಾಲಯವನ್ನು ನೋಡಿದಾಗ ನಮಗೆ ಕಾಣುವುದು ಅಚಲವಾದ ಪರ್ವತ. ಸಾವಿರಾರು ವರ್ಷಗಳಿಂದ ಹಿಮ, ಬಂಡೆ, ಕಣಿವೆ ಮತ್ತು ನದಿಗಳನ್ನು ತನ್ನೊಳಗೆ ಹೊತ್ತು ನಿಂತಿರುವ ಭೂಮಿಯ ಮಹಾಗೋಡೆ.
ಆದರೆ ಹಿಮಾಲಯ ನಿಜಕ್ಕೂ ಅಚಲವೇ?
2013ರ ಉತ್ತರಾಖಂಡದ ಕೇದಾರನಾಥ ದುರಂತದ ಸಂದರ್ಭದಲ್ಲಿ ಸ್ವತಃ ಅಲ್ಲಿಗೆ ಪ್ರತ್ಯಕ್ಷ ವರದಿಗಾಗಿ ಪತ್ರಕರ್ತನಾಗಿ ನಾನು ತೆರಳಿದ್ದ ಸಂದರ್ಭದಲ್ಲಿ, ಮಾತನಾಡುತ್ತ ಕೆಲವು ಭೂಗರ್ಭಶಾಸ್ತ್ರಜ್ಞರು ನೀಡಿದ್ದ ಎಚ್ಚರಿಕೆಗಳು ಇಂದು ಇನ್ನಷ್ಟು ಪ್ರಸ್ತುತವಾಗಿವೆ. ಅತಿವೃಷ್ಟಿ ಮಾತ್ರವೇ ಪ್ರವಾಹದಂಥ ದುರಂತಕ್ಕೆ ಕಾರಣವಲ್ಲ; ದುರ್ಬಲ ಪರ್ವತ ಇಳಿಜಾರುಗಳು, ಹಿಮ-ನೀರಿನ ಬದಲಾವಣೆ, ಭೂಕುಸಿತ, ನದಿಯ ಸ್ವಾಭಾವಿಕ ಹರಿವಿನ ಮೇಲೆ ನಿರ್ಮಾಣಗಳು, ರಸ್ತೆ-ವಿದ್ಯುತ್ ಯೋಜನೆಗಳು, ಹೋಟೆಲ್ಗಳು ಮತ್ತು ಹೆಚ್ಚುತ್ತಿರುವ ಮಾನವ ಒತ್ತಡ-ಇವೆಲ್ಲ ಸೇರಿ ಅಪಾಯವನ್ನು ಹಲವು ಪಟ್ಟು ಹೆಚ್ಚಿಸುತ್ತವೆ ಎಂದು ಆಗಲೇ ವರದಿಗಳು ತೋರಿಸಿದ್ದವು.
2026ರ ಆಗಸ್ಟ್ 26ರಂದು ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ದುರಂತ ಇದೇ ಎಚ್ಚರಿಕೆಯನ್ನು ಮತ್ತೊಮ್ಮೆ ನಮ್ಮ ಕಣ್ಣೆದುರು ತಂದಿದೆ. ಮೇಲಿದ್ದ ಬೃಹತ್ ಬಂಡೆ ಕುಸಿದ ಪರಿಣಾಮ ಹಿಮಸರೋವರ ತುಳುಕಿ ತಗ್ಗಿನ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಸಿತು. ಕಲ್ಲು, ಬಂಡೆ, ಮಣ್ಣು, ಹಿಮ ಹಾಗೂ ನೀರು ಕಣಿವೆಯತ್ತ ಧಾವಿಸಿತು. ಇದರ ಪರಿಣಾಮ ನದಿಯ ನೀರಿನ ಮಟ್ಟ ಕೆಲವೇ ನಿಮಿಷಗಳಲ್ಲಿ ಹಲವು ಮೀಟರ್ಗಳಷ್ಟು ಏರಿಕೆಯಾದ ವರದಿಗಳಿವೆ. ಮನೆಗಳು, ಸೇತುವೆಗಳು, ರಸ್ತೆಗಳು ಮತ್ತು ವಿದ್ಯುತ್ ಮೂಲಸೌಕರ್ಯಗಳು ಕೊಚ್ಚಿಹೋಗಿವೆ ಎಂಬುದನ್ನು ಪರ್ವತಗಳ ಸಮಗ್ರ ಅಭಿವೃದ್ಧಿಯ ಅಂತರರಾಷ್ಟ್ರೀಯ ಸಂಸ್ಥೆ (ICIMOD) ಮತ್ತು ಕಠ್ಮಂಡು ವಿಶ್ವವಿದ್ಯಾಲಯದ ಸಂಶೋಧನಾ ತಂಡಗಳು ವರದಿ ಮಾಡಿವೆ.
ಇಲ್ಲಿ ಮುಖ್ಯ ಪ್ರಶ್ನೆ: ಇದು ಕೇವಲ ಒಂದು ನೈಸರ್ಗಿಕ ವಿಕೋಪವೇ?
ವೈಜ್ಞಾನಿಕವಾಗಿ ಉತ್ತರ ಅಷ್ಟು ಸರಳವಲ್ಲ...
ಹಿಮಾಲಯದ ಎತ್ತರದ ಪ್ರದೇಶಗಳು ಜಾಗತಿಕ ತಾಪಮಾನ ಏರಿಕೆಗೆ ನೇರವಾಗಿ ತುತ್ತಾಗುತ್ತಿವೆ ಎಂಬುದು ಹೊಸ ಸಂಗತಿಯೇನಲ್ಲ. ಹಿಮನದಿಗಳು ಹಿಂದೆ ಸರಿಯುತ್ತಿವೆ, ಹಿಮದ ಸ್ವರೂಪ ಬದಲಾಗುತ್ತಿದೆ, ಪರ್ಮಾಫ್ರಾಸ್ಟ್-ಅಂದರೆ ವರ್ಷಗಳ ಕಾಲ ಹೆಪ್ಪುಗಟ್ಟಿರುವ ನೆಲ-ಕರಗುತ್ತಿದೆ. ಇದರಿಂದ ಬಂಡೆ ಮತ್ತು ಹಿಮದ ಇಳಿಜಾರುಗಳ ಸ್ಥಿರತೆ ಕುಸಿಯಬಹುದು. ನೇಪಾಳದ ಇತ್ತೀಚಿನ ದುರಂತದ ಬಗ್ಗೆ ವಿಜ್ಞಾನಿಗಳು ಕೂಡ ಇದೇ ಹಿನ್ನೆಲೆಯಲ್ಲಿ ಎಚ್ಚರಿಸಿದ್ದಾರೆ. ಆದರೆ ನೇಪಾಳದ ಈ ನಿರ್ದಿಷ್ಟ ಘಟನೆಯನ್ನು 'ಹವಾಮಾನ ಬದಲಾವಣೆಯೇ ನೇರವಾಗಿ ಉಂಟುಮಾಡಿತು' ಎಂದು ಅಂತಿಮವಾಗಿ ಹೇಳಲು ಇನ್ನಷ್ಟು ವೈಜ್ಞಾನಿಕ ಅಧ್ಯಯನ ಅಗತ್ಯ. ಆದರೆ ಹವಾಮಾನ ಬದಲಾವಣೆ ಇಂಥ ಘಟನೆಗಳಿಗೆ ಪೂರಕವಾದ ಅಪಾಯವನ್ನು ಹೆಚ್ಚಿಸುತ್ತಿದೆ ಎಂಬುದು ಮಾತ್ರ ನಿರ್ವಿವಾದ.
ನೇಪಾಳದ ತಾಪಮಾನ ಏರಿಕೆಯ ಅಂಕಿ-ಅಂಶಗಳು ಈ ಆತಂಕವನ್ನು ಮತ್ತಷ್ಟು ಗಂಭೀರಗೊಳಿಸುತ್ತವೆ. 1971-94ರ 49 ಹವಾಮಾನ ಕೇಂದ್ರಗಳ ಮಾಹಿತಿಯ ಅಧ್ಯಯನದಲ್ಲಿ ನೇಪಾಳದ ಮಧ್ಯ ಪರ್ವತ ಮತ್ತು ಹಿಮಾಲಯ ಪ್ರದೇಶಗಳಲ್ಲಿ ಗರಿಷ್ಠ ತಾಪಮಾನವು ವರ್ಷಕ್ಕೆ ಸುಮಾರು 0.06ರಿಂದ 0.12 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿರುವುದು ಕಂಡುಬಂದಿತ್ತು. ಇದೇ ಸಂದರ್ಭದಲ್ಲಿ ಕಠ್ಮಂಡು ಕಣಿವೆಯ 2011-17ರ ಅಧ್ಯಯನವೊಂದು ಸರಾಸರಿ ತಾಪಮಾನ ವರ್ಷಕ್ಕೆ 0.06 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿರುವುದನ್ನು ದಾಖಲಿಸಿದೆ. ಹಾಗೆಂದು ಈ ಅಂಕಿ-ಅಂಶವನ್ನು ಇಡೀ ನೇಪಾಳದ ಇಂದಿನ ತಾಪಮಾನ ಏರಿಕೆಯ ಪ್ರಮಾಣವೆಂದು ಪರಿಗಣಿಸಲಾಗದು. ಹೀಗಿದ್ದರೂ ಒಂದಂತೂ ಸ್ಪಷ್ಟ: ಒಟ್ಟಾರೆ ಹಿಮಾಲಯ ಬೆಚ್ಚಗಾಗುತ್ತಿದೆ.
ಪರ್ವತ ಬಿಸಿಯಾಗುತ್ತಿದೆ ಎಂದರೆ ನಾವಂದುಕೊಳ್ಳುವಂತೆ ಕೇವಲ ಅದರ ಮೇಲಿನ ಹಿಮದ ಪದರು ಕರಗಿ ಕಡಿಮೆ ಆಗುತ್ತಿದೆ ಎಂದಷ್ಟೇ ಅಲ್ಲ. ಹಿಮನದಿಗಳು ಹಿಂದಕ್ಕೆ ಹಿಂದಕ್ಕೆ ಸರಿಯುತ್ತಿವೆ, ಹೊಸ ಹಿಮಸರೋವರಗಳು ನಿರ್ಮಾಣವಾಗುತ್ತಿವೆ, ಹಿಮದ ಮೇಲಿನ ನೀರಿನ ಪ್ರಮಾಣದಲ್ಲಿ ಹೆಚ್ಚುಕಡಿಮೆ ಆಗುತ್ತಿದೆ, ಪರ್ಮಾಫ್ರಾಸ್ಟ್ ಕರಗುವಿಕೆ ಮತ್ತು ಇಳಿಜಾರುಗಳು ದುರ್ಭಲಗೊಳ್ಳುತ್ತಿವೆ-ಇವೆಲ್ಲ ಒಂದಕ್ಕೊಂದು ಸಂಬಂಧಿಸಿದ ಪ್ರಕ್ರಿಯೆಗಳು. 2024ರಲ್ಲಿ ನೇಪಾಳದ ಥಾಮೆ ಕಣಿವೆಯಲ್ಲೇ ಹಿಮನದಿ ಮತ್ತು ಹಿಮಸರೋವರ ಸಂಬಂಧಿತ ಸರಣಿ ಪ್ರವಾಹ ಸಂಭವಿಸಿದ್ದು, ತೀವ್ರ ಉಷ್ಣತೆ ಮತ್ತು ಮಳೆಯೊಂದಿಗೆ ಹಿಮ ಕರಗುವಿಕೆ ಅಪಾಯವನ್ನು ಹೆಚ್ಚಿಸಬಹುದು ಎಂಬುದನ್ನು ಇತ್ತೀಚಿನ ಅಧ್ಯಯನಗಳು ತೋರಿಸಿವೆ.
ಸೋ ಕಾಲ್ಡ್ ಅಭಿವೃದ್ಧಿಯ ಮತ್ತೊಂದು ಮುಖ
ಇದಕ್ಕೆ ನಮ್ಮ ಸೋ ಕಾಲ್ಡ್ ಅಭಿವೃದ್ಧಿಯ ಮತ್ತೊಂದು ಮುಖವಿದೆ. ಉತ್ತರಾಖಂಡದ ದುರಂತದ ಸಂದರ್ಭದಲ್ಲಿ ನಾನೇ ಸ್ವತಃ ಮಾಡಿದ ಪ್ರತ್ಯಕ್ಷ ವರದಿಗಳ ಪ್ರಕಾರ, ನದಿಯ ದಡ, ಇಳಿಜಾರು ಮತ್ತು ಅಪಾಯಕಾರಿ ಪ್ರದೇಶಗಳಲ್ಲಿ ರಸ್ತೆ, ಹೋಟೆಲ್, ವಸತಿಗೃಹ, ಜಲವಿದ್ಯುತ್ ಯೋಜನೆ ಮತ್ತು ಇತರ ನಿರ್ಮಾಣಗಳು ಊಹಿಸದಷ್ಟು ಪ್ರಮಾಣದಲ್ಲಿ ಆಗಿದ್ದವು. ಇಂಥ ಆಧುನಿಕ ಅಭಿವೃದ್ಧಿ(?) ನಡೆದಾಗ ಪ್ರಕೃತಿಯ ಆಘಾತದ ಪರಿಣಾಮ ಸಹಜವಾಗಿ ಹಲವು ಪಟ್ಟು ಹೆಚ್ಚುತ್ತದೆ.
ಈ ಹಿನ್ನೆಲೆಯಲ್ಲಿ ನೋಡಿದಾಗ ಕೇದಾರನಾಥದಲ್ಲಿ 2013ರಲ್ಲಿ ನಡೆದ ಭೀಕರ ಜಲಸ್ಫೋಟ ಹಾಗೂ ನೇಪಾಳದಲ್ಲಿ ಮೊನ್ನೆ (26ನೇ ಆಗಸ್ಟ್ 2026) ಸಂಭವಿಸಿದ ಭೀಕರ ಪ್ರವಾಹ ಎರಡೂ ಖಂಡಿತಾ ಅನಿರೀಕ್ಷಿತವಲ್ಲ. ನಮ್ಮ ಕೇದಾರದ ದುರಂತದ ಸಂದರ್ಭದಲ್ಲೂ ಇದನ್ನೇ ('ದುರ್ಘಟನೆ ಯಾವುದೇ ಅಚ್ಚರಿ ಉಂಟುಮಾಡಿಲ್ಲ') ಭೂಗರ್ಭಶಾಸ್ತ್ರಜ್ಞರು ಹೇಳಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಹಿಮಾಲಯ ಪ್ರದೇಶದ ಅಧ್ಯಯನಿಗಳು ಹೇಳುವ ಪ್ರಕಾರವೂ ಇದು ನಿರೀಕ್ಷಿತ. ಅಭಿವೃದ್ಧಿಯ ಹುಚ್ಚು ಓಘಕ್ಕೆ ಬಿದ್ದು, ಸೂಕ್ಷ್ಮ ಪ್ರದೇಶದ ಪರಿಸರ ರಕ್ಷಣೆಯ ಬಗ್ಗೆ ನಾವು ಸೂಕ್ಷ್ಮತೆಯನ್ನು ಕಳೆದುಕೊಂಡಿರುವುದು ಹೊಸದೇನೂ ಅಲ್ಲ. ಇಂಥ ದುರಂತಗಳು ಸಂಭವಿಸಿದಾಗೊಮ್ಮೆ ಪರಿಸರಾಸಕ್ತರ, ವಿಜ್ಞಾನಿಗಳ ಧ್ವನಿಗೆ ಒಂದಷ್ಟು ಬಲ ಬರುತ್ತದೆಯೇ ಹೊರತು ನಂತರದ ದಿನಗಳಲ್ಲಿ ಯಾರೂ ಇಂಥವನ್ನು ಗಂಭೀರವಾಗಿ ಪರಿಗಣಿಸದಿರುವುದು ನಿಜವಾದ ದುರಂತ.
ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾದ ಗ್ಲೇಸಿಯಾಲಾಜಿಸ್ಟ್ಗಳು (ಜಿಎಸ್ಐ) ಸಹ ಕೇದಾರನಾಥ ಮತ್ತು ಸುತ್ತಲಿನ ಪ್ರದೇಶದಲ್ಲಿ 2010ರಲ್ಲೇ ಈ ಬಗ್ಗೆ ನಿಖರ ಅಧ್ಯಯನ ನಡೆಸಿದ್ದರು. ಜಿಎಸ್ಐನ ಹಿಂದಿನ ನಿರ್ದೇಶಕ ಹಾಗೂ ನುರಿತ ಗ್ಲೇಸಿಯಾಲಾಜಿಸ್ಟ್ ದೀಪಕ್ ಶ್ರೀವಾತ್ಸವ ಮತ್ತವರ ತಂಡ ಕೇದಾರ ಪ್ರವಾಹದ ಬಳಿಕವೂ ಪ್ರವಾಸ ನಡೆಸಿ ಕಾರಣಗಳನ್ನು ಹುಡುಕಿತ್ತು. ಹಾಗೆಯೇ ಡೆಹ್ರಾಡೂನ್ನ ಪೀಪಲ್ಸ್ ಸೈನ್ಸ್ ಇನ್ಸ್ಟಿಟ್ಯೂಟ್ನ ರವಿ ಚೋಪ್ರಾ ಪ್ರಕಾರ 'ಇಂಥ ಭೂ ಪ್ರದೇಶಗಳಲ್ಲಿನ ಮೇಘ ಸ್ಫೋಟ ಮತ್ತು ಪರ್ವತಗಳ ನಡುವೆ ಅನೂಹ್ಯ ಸಂಬಂಧ- ಹೊಂದಾಣಿಕೆಗಳಿವೆ. ಹಿಮಪರ್ವತ ಶ್ರೇಣಿಗಳಲ್ಲಿ ಅಗಣಿತ ಹಿಮಜಲ ಬುಗ್ಗೆಗಳಿರುತ್ತವೆ. ಅವೆಲ್ಲಾ ವೃತ್ತಾಕಾರದಲ್ಲಿ ಹರಿದು ಕೆಳಗಿನ ಜನವಸತಿ ಪ್ರದೇಶಗಳನ್ನು ಬಳಸಿ ಹರಿಯುತ್ತವೆ. ಈ ಸರೋವರಗಳಲ್ಲಿ ಮಂಜಿನ ಸವಕಳಿ ಸಹಜ. ಹಿಮ ಪರ್ವತ ಶ್ರೇಣಿಯಲ್ಲಿನ ಜನ ದಟ್ಟಣೆ ಮೇಲ್ಪದರದಲ್ಲಿ ಹಿಮ ಕುಸಿಯುವಂತೆ ಮಾಡಿ ಈ ಸ್ಥಳದಲ್ಲಿರುವ ನದಿಯ ಒತ್ತಡವನ್ನು ಹೆಚ್ಚಿಸುತ್ತದೆ.
ಹಿಮಕುಸಿತಕ್ಕೆ ಕಾರಣಗಳು ಹಲವು...
'ಇನ್ನು ಹಿಮದ ಕುಸಿತಕ್ಕೆ ಕಾರಣಗಳು ಹಲವು, ಅಂದರೆ ನೈಸರ್ಗಿಕವಾಗಿ ಹಿಮ ಜರುಗುವುದು, ಹೊರಗಿನ ಮತ್ತು ಮೆಕ್ಯಾನಿಕಲ್ ಒತ್ತಡಗಳು, ಇಳಿಜಾರಿನ ಸ್ಥಿತಿಗಳನ್ನು ಅವಲಂಬಿಸಿದೆ. ಟಿಬೆಟ್ ಪ್ರದೇಶದ ಮೇಲ್ಭಾಗದಲ್ಲಿ ಚಳಿಗಾಲದ ಒಂದು ಹಿಮ ಮಳೆಯು ಎರಡು ಮೀಟರ್ಗಳಷ್ಟು ಹಿಮವನ್ನು ಮುಚ್ಚಬಲ್ಲದು. ಪರ್ವತಗಳ ನಡುವಿನ ಬಟ್ಟಲಾಕಾರದ ಸರೋವರಗಳು, ಕಣಿವೆಯಲ್ಲಿ ಬಿರುಗಾಳಿಯನ್ನು, ಸೈಕ್ಲೋನಿಕ್ ಅಲೆಗಳನ್ನು ಉಂಟುಮಾಡಬಲ್ಲವು. ಅಲ್ಲಿಂದ ಕೆಳಗಿನ ಕಣಿವೆಯ ಭಾಗದಲ್ಲಿ ಕಂಡುಬರುವ ಪೈನ್ ಮತ್ತು ಬಿರ್ಚ್ನಂಥ ಮರಗಳು ಇಳಿಜಾರಿನಲ್ಲಿ ರಭಸವಾಗಿ ಬರುವ ಹಿಮದ ಕುಸಿಯುವಿಕೆಯನ್ನು ತಡೆಯಲು ಸಶಕ್ತವಾಗಿರುವುದಿಲ್ಲ. ಅಲ್ಲದೇ ನಗರೀಕರಣ ಹೆಚ್ಚಿದಂತೆಲ್ಲ ಸಸ್ಯ ಸಂಪತ್ತು ಕುಸಿದು ಅವು ಮೊದಲಿನಂತೆ ತಡೆಗೋಡೆಯಂತೆ ವರ್ತಿಸುವುದಿಲ್ಲ ಎಂದು ಅಭಿಪ್ರಾಯ ಪಡುತ್ತಾರೆ ದೀಪಕ್ ಶ್ರೀವಾತ್ಸವ.
ಅಧ್ಯಯನ ವರದಿಯೊಂದರ ಪ್ರಕಾರ ಪ್ರತಿ ಸಣ್ಣ ಹಿಮ ಕುಸಿತವು ಸಹ ಸುಮಾರು 900 ಮೀಟರ್ಗಳ ಪ್ರವಾಹದ ರೂಟ್ ಹೊಂದಿರುತ್ತವೆ. ಇದರ ಒತ್ತಡವು ಪ್ರತಿ ಘನ ಮೀಟರ್ಗೆ 84.8 ಟನ್ಗಳಿರುತ್ತವೆ ಎಂದರೆ ಉಂಟಾಗಬಹುದಾದ ರಭಸವನ್ನು ನಾವು ಊಹಿಸಬಹುದು. ಇನ್ನೂ ಸರಳವಾಗಿ ಹೇಳಬೇಕೆಂದರೆ 10 ಟನ್ಗಳ ವೇಗವೆಂದರೆ ಒಂದು ಮರವನ್ನು ಅನಾಯಾಸ ಬುಡಮೇಲು ಮಾಡಬಲ್ಲುದು. ಪ್ರತಿ ಘನ ಮೀಟರ್ಗೆ ಸರಾಸರಿ 100 ಟನ್ ವೇಗ ಇದ್ದರೆ ಎಂಥದ್ದೇ ಕಟ್ಟಡವನ್ನೂ ನೆಲಸಮ ಮಾಡಲು ಸಾಕು.
ಕಣ್ಣೆದುರು ನಿಂತ ಆ ಪರ್ವತ ಸಾಲು ಅತ್ಯಂತ ಬಲಿಷ್ಠವಾಗಿರುವಂತೆ ತೋರುತ್ತದೆ. ಅದರ ಅಗಾಧ ಎತ್ತರ, ಉದ್ದಕ್ಕೂ ಮೈಚಾಚಿ ನಿಂತ ಅದರ ವಿಶಾಲ ಹರವು. ಹಸಿರು ಹೊದ್ದು ಅದು ಮಲಗಿರುವ, ಕಣ್ಮನ ಸೆಳೆಯುವ ಅದರ ಸೌಂದರ್ಯ ಎಲ್ಲವೂ ಸುತ್ತಲ ನಿಸರ್ಗವನ್ನು ಕಂಗೊಳಿಸುವಂತೆ ಮಾಡಿರುತ್ತದೆ ನಿಜ. ಆದರೆ ಉಪಖಂಡಗಳಿಂದ ಬರಬಹುದಾದ ಮಾನವ ನಿರ್ಮಿತ ದಾಳಿ ಇರಬಹುದು ಅಥವಾ ನಿಸರ್ಗ ನಿರ್ಮಿತ ದಾಳಿಯೇ ಆಗಿರಬಹುದು ಅವನ್ನು ತಡೆಯಬಲ್ಲಷ್ಟು ಶಕ್ತಿಶಾಲಿಯಾಗಿಲ್ಲ ಹಿಮಪರ್ವತಗಳ ಸಾಲು ಎಂಬುದು ವಾಸ್ತವ. ಏಕೆಂದರೆ ಒಂದು ಕೋಟಿ ವರ್ಷಗಳಲ್ಲಿ ಕೆಳಗಿನ ಭೂಭಾಗ ಒತ್ತರಿಸಿ ಬಂದು ಹಿಮಾಲಯ ಇಂದಿನ ಸ್ಥಿತಿಯನ್ನು ಮುಟ್ಟಿದೆ ಎನ್ನುತ್ತಾರೆ ತಜ್ಞರು. ದಕ್ಷಿಣದ ಅರಾವಳಿಯು ಇದಕ್ಕಿಂತ ಒಂದು ಶತಕೋಟಿ ವರ್ಷಗಳಷ್ಟು ಹಳೆಯದು. ಆದರೆ ಇಂದಿಗೂ ಹಿಮಾಲಯದ ಬೆಳವಣಿಗೆ ನಿಂತಿಲ್ಲ. ಅದು ಇಂದಿಗೂ ಬೆಳೆಯುತ್ತಿರುವ ಹಂತದಲ್ಲೇ ಇದೆ ಎಂಬುದು ಗಮನಾರ್ಹ ಸಂಗತಿ. 'ಪ್ರತಿ ವರ್ಷ 5 ಸೆಂಟಿ ಮೀಟರ್ನಷ್ಟು ಟಿಬೆಟಿಯನ್ ಪ್ಲಾಟೊದೊಳಗೆ ಭೂಭಾಗ ಜರುಗುವುದರೊಂದಿಗೆ ಪರ್ವತವು 1.5 ಸೆಂಟಿ ಮೀಟರ್ನಷ್ಟು ಬೆಳೆಯುತ್ತಿದೆ ಎನ್ನುತ್ತಾರೆ ಭೂಗರ್ಭಶಾಸ್ತ್ರಜ್ಞರು. ಈ ದೃಷ್ಟಿಯಿಂದ ನೋಡಿದರೆ ಹಿಮಾಲಯವಿನ್ನೂ ನಾವಂದುಕೊಂಡಷ್ಟು ದೃಢವಾಗಿ ನಿಂತಿಲ್ಲ. ಇಂಥ ಬೆಳೆಯುವ ಕೂಸಿನ ಮೇಲೆ ನಾವು ಎಸಗುವ ದೌರ್ಜನ್ಯ ಪ್ರಶ್ನಾರ್ಹವಲ್ಲವೇ? ಇಂಥ ದೌರ್ಜನ್ಯಕ್ಕೆ ಅದು ನಲುಗಿದ ಪರಿಣಾಮವೇ ಮೇಲಿಂದ ಮೇಲೆ ಇತ್ತೀಚೆಗಿನ ದುರಂತಕ್ಕೆ ಕಾರಣವಾಗಿರಲೂಬಹುದಲ್ಲವೇ?
ಈಗಲೂ ಬೆಳೆಯುತ್ತಿರುವ ಹಿಮಾಲಯ
ಹೀಗಾಗಿ ಹಿಮಾಲಯವನ್ನು ಇತರೆ ಯಾವುದೇ ಭೂಭಾಗಕ್ಕಿಂತ ಪ್ರತ್ಯೇಕಿಸಿ ನೋಡಬೇಕಿದೆ. ಅದು ಭಾರತ, ನೇಪಾಳ, ಟಿಬೆಟ್... ಹೀಗೆ ಯಾವುದೇ ದೇಶವಿರಬಹುದು; ಒಟ್ಟಾರೆ ಆಯಾ ದೇಶಗಳಲ್ಲಿನ ಹಿಮಾಲಯದ ಪ್ರದೇಶಕ್ಕೆ ಪ್ರತ್ಯೇಕ ನಿಯಮಗಳು ಬೇಕೇ ಬೇಕು. ಅದನ್ನು ದೇಶದ ಇತರೆಲ್ಲ ಭೂಭಾಗಗಳನ್ನು ನೋಡುವಂತೆ ನೋಡಲಿಕ್ಕಾಗದು. ದುರದೃಷ್ಟವಶಾತ್ ಇದನ್ನು ನಾವು ಅರಿತಿಲ್ಲ. ದೇಶದೆಲ್ಲೆಡೆಯಲ್ಲಿನ ಭೂಭಾಗದಂತೆಯೇ ಹಿಮಾಲಯವನ್ನೂ ನಾವು ಪರಿಗಣಿಸುತ್ತೇವೆ. ಎಲ್ಲೆಡೆ ನಡೆಸುವ ದಾಳಿಯನ್ನೇ ನಾವು ಹಿಮಶಿಖರಗಳ ಮೇಲೂ ನಡೆಸುತ್ತೇವೆ. ಪಾಪ, ಹಸುಳೆ ಹಿಮಪರ್ವತ! ಅದನ್ನು ತಾಳಿಕೊಳ್ಳಬೇಕಾದರೂ ಹೇಗೆ?
ನೇಪಾಳದಲ್ಲೂ ಇದೇ ಪ್ರಶ್ನೆ ಎದುರಾಗುತ್ತಿದೆ. ಪರ್ವತ ಪ್ರದೇಶಗಳಲ್ಲಿ ಜನವಸತಿ, ಪ್ರವಾಸೋದ್ಯಮ, ರಸ್ತೆ, ಸೇತುವೆ ಮತ್ತು ವಿದ್ಯುತ್ ಮೂಲಸೌಕರ್ಯಗಳು ಹೆಚ್ಚುತ್ತಿವೆ. ನೈಸರ್ಗಿಕ ಅಪಾಯ ಸಂಭವಿಸುವ ಸ್ಥಳದಲ್ಲೇ ಮಾನವ ಆಸ್ತಿ ಮತ್ತು ಜನಸಂಖ್ಯೆಯ ಸಾಂದ್ರತೆ ಹೆಚ್ಚಾದಂತೆ ವಿಪತ್ತು 'ಅಪಾಯ'ದಿಂದ 'ಮಹಾದುರಂತ'ವಾಗುತ್ತದೆ. ಇತ್ತೀಚಿನ ನೇಪಾಳದ ಪ್ರವಾಹದಲ್ಲಿ ಮೂಲಸೌಕರ್ಯಗಳ ನಾಶವು ಇದಕ್ಕೆ ಸ್ಪಷ್ಟ ಉದಾಹರಣೆ.
ಹೀಗಾಗಿ ಪ್ರಶ್ನೆ ಅಭಿವೃದ್ಧಿ ಬೇಕೋ ಬೇಡವೋ ಎಂಬುದಲ್ಲ. ಪ್ರಶ್ನೆ ಹಿಮಾಲಯಕ್ಕೆ ಯಾವ ರೀತಿಯ ಅಭಿವೃದ್ಧಿ ಬೇಕು?
2013ರಲ್ಲಿ ಉತ್ತರಾಖಂಡದಲ್ಲಿ ಕೇಳಿಬಂದ ಎಚ್ಚರಿಕೆ-ಸೂಕ್ಷ್ಮ ಪರ್ವತ ಪ್ರದೇಶವನ್ನು ಸಮತಟ್ಟಿನ ಪ್ರದೇಶದಂತೆ ಪರಿಗಣಿಸಬಾರದು-ಇದು ನೇಪಾಳಕ್ಕೂ ಅನ್ವಯಿಸುತ್ತದೆ. ಪರ್ವತ ಹೊರುವ ಸಾಮರ್ಥ್ಯ, ನದಿಯ ಸ್ವಾಭಾವಿಕ ಹರಿವು, ಭೂಕುಸಿತದ ಸಾಧ್ಯತೆ, ಹಿಮನದಿಯ ಬದಲಾವಣೆ ಮತ್ತು ಹವಾಮಾನ ಮುನ್ಸೂಚನೆಗಳನ್ನು ಪರಿಗಣಿಸದೆ ನಿರ್ಮಾಣ ಮಾಡುವ ಅಭಿವೃದ್ಧಿ ಅಂತಿಮವಾಗಿ ಅಭಿವೃದ್ಧಿಯನ್ನೇ ನಾಶ ಮಾಡುತ್ತದೆ.
ಹಿಮಾಲಯದ ಸಮಸ್ಯೆ ಎಂದರೆ ಪರ್ವತ ಕುಸಿಯುತ್ತಿದೆ ಎಂಬುದಷ್ಟೇ ಅಲ್ಲ. ನಾವು ಅದರ ಮೇಲೆ ಹಾಕುತ್ತಿರುವ ಒತ್ತಡ ಹೆಚ್ಚುತ್ತಿದೆ; ಅದೇ ಸಮಯದಲ್ಲಿ ಹವಾಮಾನ ಬದಲಾವಣೆ ಅದರ ನೈಸರ್ಗಿಕ ಸ್ಥಿರತೆಯನ್ನು ದುರ್ಬಲಗೊಳಿಸುತ್ತಿದೆ.
ಉತ್ತರಾಖಂಡ 2013ರಲ್ಲಿ ಎದುರಿಸಿದ ಪರಿಸ್ಥಿತಿಯನ್ನೇ ನೇಪಾಳ 2026ರಲ್ಲಿ ಅನುಭವಿಸಿದೆ. ಮುಂದಿನ ಬಾರಿ ಎಚ್ಚರಿಸುವುದು ಹಿಮಾಲಯವಾಗದೇ ಇರಬಹುದು-ಹಿಮಾಲಯವೇ ಉತ್ತರಿಸಬಹುದು.

