ತ್ರಿಶ್ಶೂರ್ (ಕೇರಳ): ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು (ಆರ್‌ಎಸ್‌ಎಸ್) ನೋಂದಣಿ ಮಾಡಬೇಕೆಂಬ ಒತ್ತಾಯವನ್ನು ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ತಿರಸ್ಕರಿಸಿದ್ದಾರೆ.
ಸಂಘವು ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಸಾರ್ವಜನಿಕ ನಿಗಾದಿಂದಲೂ ದೂರ ಉಳಿದಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಆರ್‌ಎಸ್‌ಎಸ್ ಶತಮಾನೋತ್ಸವದ ಜನಸಂಪರ್ಕ ಕಾರ್ಯಕ್ರಮದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಮ್ಮ ಕಾರ್ಯಕರ್ತರು ಜನರೊಂದಿಗೆ ಇರುತ್ತಾರೆ. ಜನರು ಅವರನ್ನು ನಿತ್ಯ ನೋಡುತ್ತಿರುತ್ತಾರೆ. ನಾವು ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ. ರಹಸ್ಯವಾಗಿದ್ದರೆ ಇದೆಲ್ಲಾ ಸಾಧ್ಯವಾಗುವುದಿಲ್ಲ. ನಮ್ಮ ಬಳಿ ರಹಸ್ಯವಾಗಿ ಇಡುವಂಥದ್ದು ಏನೂ ಇಲ್ಲ' ಎಂದು ಹೇಳಿದರು.
'ನೋಂದಣಿ ವಿಷಯ ಕೇವಲ ರಾಜಕೀಯ. ಇಂತಹ ಪ್ರಯತ್ನಗಳು ಸಂಘಕ್ಕೆ ಹೊಸದೇನಲ್ಲ. ಸಂಘವು ಸ್ಥಾಪನೆಯಾದ 10 ವರ್ಷಗಳ ಬಳಿಕ ಇಂಥದ್ದನ್ನೆಲ್ಲ ಎದುರಿಸುತ್ತಿದ್ದೇವೆ. ಈ ರೀತಿ ಏನಾದರೊಂದು ಆಗದಿದ್ದರೆ ನಮಗೆ ಏನೋ ಕೊರತೆಯಿದೆ ಎಂದನಿಸುತ್ತದೆ' ಎಂದು ಅವರು ತಿರುಗೇಟು ನೀಡಿದರು.
'ಹಿಂದೂ ಧರ್ಮವೂ ನೋಂದಣಿಯಾಗಿಲ್ಲ. ಸರ್ಕಾರದ ನಿಧಿ ಪಡೆಯಲು ಬಯಸುವವರಿಗೆ ಮಾತ್ರ ನೋಂದಣಿಯಾಗುವ ಅಗತ್ಯವಿದೆ. ಸಂಘದ ಅಸ್ತಿತ್ವದ ಬಗ್ಗೆ ಸರ್ಕಾರಕ್ಕೂ ತಿಳಿದಿದೆ' ಎಂದು ಹೇಳಿದರು.
'ಈ ಹಿಂದೆ ಆರ್‌ಎಸ್‌ಎಸ್ ಮೇಲೆ ಎರಡು ಬಾರಿ ನಿಷೇಧ ಹೇರಲಾಗಿತ್ತು. ನ್ಯಾಯಾಲಯದ ಆದೇಶ ಮತ್ತು ಸತ್ಯಾಗ್ರಹಗಳ ಮೂಲಕ ಆ ನಿಷೇಧವನ್ನು ವಾಪಸ್ ಪಡೆಯಲಾಯಿತು. ಸಂಘವನ್ನು ನಿಷೇಧ ಮಾಡಿದ್ದರು ಎಂದರೆ, ಆರ್‌ಎಸ್‌ಎಸ್ ಅಸ್ತಿತ್ವದ ಬಗ್ಗೆ ಸರ್ಕಾರಕ್ಕೆ ಗೊತ್ತಿದೆ ಎಂದರ್ಥ' ಎಂದು ಪ್ರತಿಪಾದಿಸಿದರು.
'ಸಂಘವನ್ನು ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ ಸ್ಥಾಪಿಸಲಾಯಿತು. 100 ವರ್ಷಗಳಿಂದ ಯಾರೂ ನೋಂದಣಿ ಮಾಡಿ ಎಂದು ಹೇಳಿಲ್ಲ. ಸಂಘಕ್ಕೆ ತನ್ನದೇ ಆದ ಲಿಖಿತ ಸಂವಿಧಾನ ಇದ್ದು, 1950ರಲ್ಲಿ ಅದನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಆಗ ಸರ್ಕಾರ, ಮೊದಲು ನೋಂದಣಿ ಮಾಡಿ ಆಮೇಲೆ ಸಂವಿಧಾನ ಒಪ್ಪಿಕೊಳ್ಳುತ್ತೇವೆ ಎಂದು ಹೇಳಿರಲಿಲ್ಲ' ಎಂದು ಹೇಳಿದರು.

