ಮಲೇಬೆನ್ನೂರು: ಸಮೀಪದ ಹಿರೆಹಾಲಿವಾಣ ಗ್ರಾಮದಲ್ಲಿ ಕಳೆದೆರಡು ದಿನದಿಂದ ಏಕಾಏಕಿ ನಾಗರಿಕರಲ್ಲಿ ಜ್ವರ ಕಾಣಿಸಿಕೊಂಡಿದ್ದು ಶುಕ್ರವಾರ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಪಟ್ಟಣದ ಆರೋಗ್ಯ ಕೇಂದ್ರದಲ್ಲಿ 2 ಮಕ್ಕಳು ಸೇರಿದಂತೆ 30ಕ್ಕೂ ಹೆಚ್ಚು ನಾಗರಿಕರು ಜ್ವರಬಾಧೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
12 ರೋಗಿಗಳಿಗೆ ಒಳರೋಗಿ ವಿಭಾಗದಲ್ಲಿ, ಉಳಿದವರಿಗೆ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ನೀಡಿ ಕಳುಹಿಸಿಕೊಡಲಾಗಿದೆ ಎಂದು ಕರ್ತವ್ಯ ವೈದ್ಯಾಧಿಕಾರಿ ಪ್ರಶಾಂತ್ 'ಪ್ರಜಾವಾಣಿ'ಗೆ ಮಾಹಿತಿ ನೀಡಿದರು.'
'ರೋಗಿಗಳ ರಕ್ತದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. 2 ಮಕ್ಕಳಲ್ಲಿ ರಕ್ತದ ಪ್ಲೇಟ್‌ಲೆಟ್ ಪ್ರಮಾಣ ನಿರಂತರವಾಗಿ ಕಡಿಮೆಯಾದ ಕಾರಣ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ' ಎಂದರು
'ನಾಗರಿಕರು ಜ್ವರ ಕಾಣಿಸಿಕೊಂಡವವರು ಅಥವಾ ಸುಸ್ತಾದ ಅನುಭವವಾದರೆ ಉದಾಸೀನ ಮಾಡದೆ ಚಿಕಿತ್ಸೆ ಪಡೆಯಿರಿ' ಎಂದು ವೈದ್ಯರು ಸಲಹೆ ನೀಡಿದರು.
'ಗ್ರಾಮದ ಕೆಲವು ಭಾಗದಲ್ಲಿ ಜ್ವರ ಕಾಣಿಸಿಕೊಂಡ ನಂತರ ಮುಂಜಾಗ್ರತೆ ವಹಿಸಿ ನಂತರ ನೀರು ನಿಲ್ಲದಂತೆ, ಮೋರಿ, ಕುಡಿಯುವ ನೀರಿನ ಟ್ಯಾಂಕ್, ರಸ್ತೆ ಸ್ವಚ್ಛಗೊಳಿಸಿದ್ದು ಫಾಗಿಂಗ್ ಮಾಡಲಾಗಿದೆ. ಜನತೆ ಕಾಯಿಸಿ ಆರಿಸಿದ ನೀರು ಕುಡಿಯುವಂತೆ ತಿಳಿಸಿದ್ದೇವೆ' ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜೆ.ಕಾತ್ಯಾಯನಿ ತಿಳಿಸಿದರು.
'ಜ್ವರದಿಂದ ಅಸ್ವಸ್ಥಗೊಂಡು ಸ್ಥಳೀಯ ಆಯುರ್ವೇದ ಆಸ್ಪತ್ರೆ ಹಾಗೂ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇವೆ' ಎಂದು ರೋಗಿಗಳು ಹೇಳಿದರು.
'ಕೆಲವು ವರ್ಷದ ಹಿಂದೆ ಜ್ವರ ಕಾಣಿಸಿಕೊಂಡಿತ್ತು, ಮತ್ತೆ ಮರುಕಳಿಸಿದೆ. ಶಾಲಾ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಿಸಬೇಕು' ಎಂದು ಶಿವಕ್ಳ ಆಂಜನೇಯ ಆಗ್ರಹಿಸಿದರು.
'ಜ್ವರಬಾಧೆ ನಿಯಂತ್ರಿಸಲು ಗ್ರಾಮದಲ್ಲಿ ಹೆಚ್ಚಿನ ಸಿಬ್ಬಂದಿಯೊಡನೆ ರಕ್ತ ಪರೀಕ್ಷೆ, ಆರೋಗ್ಯ ತಪಾಸಣೆ ಹಾಗೂ ಲಾರ್ವಾ ಪತ್ತೆ ಕೆಲಸವನ್ನು ಶನಿವಾರ ಮಾಡಲಾಗುವುದು' ಎಂದು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಉಮ್ಮಣ್ಣ ತಿಳಿಸಿದರು.
'ಗ್ರಾಮದಲ್ಲಿ ಜ್ವರ ಪೀಡಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ತಾಲ್ಲೂಕು ಆಡಳಿತ, ಆರೋಗ್ಯ ಇಲಾಖೆ ಜ್ವರಬಾಧೆ ನಿಯಂತ್ರಿಸಲು ಮುಂದಾಗಬೇಕು. ಕುಡಿಯುವ ನೀರಿನ ತಪಾಸಣೆ ಹಾಗೂ ರೋಗ ಹರಡದಂತೆ ಗ್ರಾಮ ಪಂಚಾಯಿತಿ ಸ್ವಚ್ಛತೆಗೆ ಒತ್ತು ನೀಡಬೇಕು' ಎಂದು ಗ್ರಾಮಸ್ಥ ಗೊಂದೆರ ರೇವಣಸಿದ್ದಪ್ಪ ಮನವಿ ಮಾಡಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-43-164080482

