ರಾಣೆಬೆನ್ನೂರು: ನಗರದ ಮಧ್ಯಭಾಗದಲ್ಲಿರುವ ರಾಜ್ಯ ಹೆದ್ದಾರಿ ಸಮೀಪದ ಇತಿಹಾಸ ಪ್ರಸಿದ್ದ ಹವಾಲ್ದಾರ ಹೊಂಡ ಮತ್ತು ಮಾದರ ಹೊಂಡಗಳನ್ನು ವೈಜ್ಞಾನಿಕವಾಗಿ ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಿ ಬುಧವಾರ ರೈತ ಸಂಘಟನೆ ಹಾಗೂ ನಗರದ ನಿವಾಸಿಗಳು ಪ್ರತಿಭಟನೆ ನಡೆಸಿದರು.
ನಂತರ ನಗರಸಭೆ ಸಹಾಯಕ ಕಾರ್ಯ ಪಾಲಕ ಎಂಜಿನಿಯರ್ ಎಸ್.ಬಿ. ಮರಿಗೌಡರ ಅವರಿಗೆ ಮನವಿ ಸಲ್ಲಿಸಿದರು.
ರೈತ ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ, ನಗರದ ರಾಜ್ಯ ಹೆದ್ದಾರಿ ಸಮೀಪದಲ್ಲಿರುವ ಐತಿಹಾಸಿಕ ಹಿನ್ನೆಲೆಯುಳ್ಳ ಹವಾಲ್ದಾರ ಹೊಂಡ ಮತ್ತು ಮಾದರ ಹೊಂಡಗಳು ಅನೇಕ ವರ್ಷಗಳಿಂದ ಪ್ಲಾಸ್ಟಿಕ್ ತ್ಯಾಜ್ಯದಿಂದ ತುಂಬಿಕೊಂಡಿದೆ. ಕಸಾಯಿಖಾನೆ ಗಲೀಜು ಹಾಕುವುದರಿಂದ ಹೊಂಡದ ನೀರು ಪಾಚಿ ಗಟ್ಟಿ ಕೆಟ್ಟ ವಾಸನೆ ಬೀರುತ್ತಿದೆ ಎಂದು ದೂರಿದರು.
ಅಲ್ಲದೇ ಮಾದರ ಹೊಂಡ ಒತ್ತುವರಿಯಾಗಿದೆ. ರಾಜ್ ಕಾಲುವೆಯ ಚರಂಡಿ ನೀರು ನೇರವಾಗಿ ಮಾದರ ಹೊಂಡಕ್ಕೆ ಬಂದು ಸೇರುತ್ತದೆ. ಹಾಗಾಗಿ ಒತ್ತುವರಿ ತೆರವುಗೊಳಿಸಿ ರಾಜ್ ಕಾಲುವೆ ನೀರು ಸರಾಗವಾಗಿ ಹರಿದುಹೋಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕ್ರಮಕೈಗೊಳ್ಳದಿದ್ದರೆ ನಗರಸಭೆ ಎದುರು ಅಹೋ ರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದರು.
ವಿನಾಯಕ ಮೂದಗೇರಿ, ನಾಗರಾಜ ಸೊಪ್ಪಿನ, ಬಾಬಣ್ಣ ಕುರುವತ್ತಿ, ಚಿಕ್ಕಪ್ಪ ಚಲವಾದಿ, ಕಿರಣ ಬಾರ್ಕಿ, ಸುರೇಶ ಪವಾರ, ಶ್ರೀಕಾಂತ ಗೌಳಿ, ಯಲ್ಲಪ್ಪ ಗೌಳೀ, ಮಂಜು ಗೌಳೀ, ಬಸವರಾಜ ಯರೇಶೀಮಿ, ಜಗದೀಶ ಕಡ್ಲಿ, ರಿಹಾನ್, ನರಸಗೊಂಡರ, ಭಾಗವಹಿಸಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-23-459639027

