ಹೊಸಪೇಟೆ (ವಿಜಯನಗರ): ವಾರಾಂತ್ಯದ ಕರ್ಫ್ಯೂ ಅವಧಿ ಮುಗಿಯುತ್ತಿದ್ದಂತೆ ಸೋಮವಾರ ಬೆಳಿಗ್ಗೆ ನಗರದ ಪ್ರಮುಖ ರಸ್ತೆಗಳಲ್ಲಿ ಜನದಟ್ಟಣೆ ಕಂಡು ಬಂತು.
ಶನಿವಾರ ಹಾಗೂ ಭಾನುವಾರ ಬೆಳಿಗ್ಗೆ ಆರರಿಂದ ಹತ್ತು ಗಂಟೆಯ ವರೆಗೆ ಅಗತ್ಯ ವಸ್ತು ಖರೀದಿಸಲಷ್ಟೇ ಅವಕಾಶ ಇತ್ತು. ಎಲ್ಲ ರೀತಿಯ ವಾಣಿಜ್ಯ ವಹಿವಾಟು ಕೂಡ ಸ್ಥಗಿತಗೊಂಡಿತ್ತು. ಆದರೆ, ಸೋಮವಾರ ಕರ್ಫ್ಯೂ ಮುಗಿಯುತ್ತಿದ್ದಂತೆ ಜನ ಸಾಕಷ್ಟು ಸಂಖ್ಯೆಯಲ್ಲಿ ಹೊರಗೆ ಕಾಣಿಸಿಕೊಂಡರು.
ನಗರದಲ್ಲಿ ಆರಂಭಿಸಲಾಗಿರುವ ಆರು ತಾತ್ಕಾಲಿಕ ಮಾರುಕಟ್ಟೆ, ಮಾಂಸದ ಅಂಗಡಿ, ದಿನಸಿ ಅಂಗಡಿಗಳಲ್ಲಿ ಹೆಚ್ಚಿನ ಜನ ಕಾಣಿಸಿಕೊಂಡರು. ಕಟ್ಟಡ ನಿರ್ಮಾಣ ಕಾರ್ಮಿಕರು, ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರು, ದೈನಂದಿನ ಕಚೇರಿ ಕೆಲಸಕ್ಕೆ ಜನ ತೆರಳಿದರು.
ಇನ್ನು, ನಗರದ ತಾಲ್ಲೂಕು ಕಚೇರಿ, ನಗರಸಭೆಯ ಆವರಣದಲ್ಲೂ ಜನ ಕಂಡು ಬಂದರು.
ಮಂಗಳವಾರ (ಏ.27) ರಾತ್ರಿಯಿಂದ 14 ದಿನಗಳ ವರೆಗೆ ಲಾಕ್‌ಡೌನ್ ಘೋಷಿಸಿರುವ ಸುದ್ದಿ ಸೋಮವಾರ ಮಧ್ಯಾಹ್ನ ಹೊರಬೀಳುತ್ತಿದ್ದಂತೆ ಜನ ಅಗತ್ಯ ವಸ್ತುಗಳ ಖರೀದಿಗೆ ಪುನಃ ಮಾರುಕಟ್ಟೆ, ಅಂಗಡಿಗಳತ್ತ ದೌಡಾಯಿಸಿದರು. ಎರಡು ವಾರಕ್ಕೆ ಸಾಕಾಗುವಷ್ಟು ದಿನಸಿ ಸೇರಿದಂತೆ ಇತರೆ ವಸ್ತುಗಳನ್ನು ಖರೀದಿಸಿ ಕೊಂಡೊಯ್ದರು.

