ವಾಷಿಂಗ್ಟನ್/ದುಬೈ: ಅಣ್ವಸ್ತ್ರ ಕಾರ್ಯಕ್ರಮವನ್ನು ಕೈಬಿಡದೇ, ಕೆಲ ಷರತ್ತುಗಳಿಗೆ ಒಳಪಟ್ಟು ಹೊರ್ಮುಜ್ ಜಲಸಂಧಿಯನ್ನು ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸುವ ಇರಾನ್‌ನ ಪ್ರಸ್ತಾವವನ್ನು ಪರಿಶೀಲಿಸಲಾಗುತ್ತಿದೆ ಎಂದು ಶ್ವೇತಭವನ ಮಂಗಳವಾರ ಹೇಳಿದೆ.
'ಈ ಪ್ರಸ್ತಾವದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅತೃಪ್ತಿ ಹೊಂದಿದ್ದು, ಇದನ್ನು ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ' ಎಂದು ಸಿಎನ್‌ಎನ್ ಸುದ್ದಿಸಂಸ್ಥೆ ವರದಿ ಮಾಡಿದೆ.
'ಅಣ್ವಸ್ತ್ರ ಕಾರ್ಯಕ್ರಮದ ವಿಚಾರವನ್ನು ಇತ್ಯರ್ಥಪಡಿಸದೆ ಹೊರ್ಮುಜ್ ಜಲಸಂಧಿ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಟ್ರಂಪ್ ಸಿದ್ಧರಿಲ್ಲ' ಎಂದು ಮೂಲಗಳನ್ನು ಉಲ್ಲೇಖಿಸಿ ಸಿಎನ್‌ಎನ್ ಹೇಳಿದೆ.
ಹೀಗಾಗಿ, ಪಶ್ಚಿಮ ಏಷ್ಯಾ ಯುದ್ಧಕ್ಕೆ ಅಂತ್ಯ ಹಾಡುವ ಪ್ರಯತ್ನಗಳ ಅನಿಶ್ಚಿತತೆಯ ಕರಿನೆರಳು ಮುಂದುವರಿದಂತಾಗಿದೆ.
ಇರಾನ್‌ನ ಪ್ರಸ್ತಾವಗಳನ್ನು ಪಾಕಿಸ್ತಾನದ ಮೂಲಕ ಅಮೆರಿಕಕ್ಕೆ ರವಾನಿಸಿದ ಬಳಿಕ, ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿಯ ಉನ್ನತ ಅಧಿಕಾರಿಗಳು ಹಾಗೂ ಸಲಹೆಗಾರರೊಂದಿಗೆ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ಚರ್ಚಿಸಿದ್ದಾರೆ ಎಂದೂ ಮೂಲಗಳು ಹೇಳಿವೆ.
ಪ್ರಸ್ತಾವಿತ ಯೋಜನೆಯಂತೆ, ಇರಾನ್ ಹೊರ್ಮುಜ್ ಜಲಸಂಧಿಯ ಮೇಲಿನ ತನ್ನ ಬಿಗಿ ಹಿಡಿತವನ್ನು ಸಡಿಲಗೊಳಿಸಲಿದೆ. ಅಮೆರಿಕವು ಇರಾನ್ ಬಂದರುಗಳ ಮೇಲೆ ಹೇರಿರುವ ದಿಗ್ಬಂಧನವನ್ನು ತೆರವುಗೊಳಿಸಬೇಕು. ಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮದಂತಹ ಸಂಕೀರ್ಣ ವಿಷಯಗಳ ಕುರಿತು ಮಾತುಕತೆಗಳು ಮುಂದುವರಿಯಬೇಕು.
ಎರಡು ತಿಂಗಳ ಹಿಂದೆ ತನ್ನ ಮೇಲೆ ಅಮೆರಿಕ ಹಾಗೂ ಇಸ್ರೇಲ್ ದಾಳಿ ಪ್ರಾರಂಭಿಸಿದಾಗಿನಿಂದ ತೈಲ ಮತ್ತು ಅನಿಲ ಸಾಗಣೆಯ ಪ್ರಮುಖ ಮಾರ್ಗವಾದ ಹೊರ್ಮುಜ್ ಜಲಸಂಧಿಯನ್ನು ಇರಾನ್ ನಿರ್ಬಂಧಿಸಿದೆ. ಇದು ಜಾಗತಿಕ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಿದೆ.
ಉಭಯ ದೇಶಗಳ ನಡುವೆ ಕದನ ವಿರಾಮ ಏರ್ಪಟ್ಟಿದ್ದರೂ ಯುದ್ಧವನ್ನು ಶಾಶ್ವತವಾಗಿ ನಿಲ್ಲಿಸಲು ಹಾಗೂ ಜಲಸಂಧಿಯನ್ನು ಮತ್ತೆ ತೆರೆಯುವ ಮಾತುಕತೆಗಳು ಇನ್ನೂ ಫಲಪ್ರದವಾಗಿಲ್ಲ.
ಇರಾನ್ ಮುಂದಿಟ್ಟಿರುವ ಪ್ರಸ್ತಾವದಂತೆ ಹೊರ್ಮುಜ್ ಜಲಸಂಧಿಯನ್ನು ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸುವ ಬಗ್ಗೆ ಕತಾರ್ ಎಚ್ಚರಿಕೆ ನೀಡಿದೆ. 'ಈ ಜಲಮಾರ್ಗದ ಬಿಕ್ಕಟ್ಟಿಗೆ ನಿರ್ಣಾಯಕ ಪರಿಹಾರ ಕಂಡುಹಿಡಿಯುವುದು ಅಗತ್ಯ. ಇಲ್ಲದೇ ಹೋದಲ್ಲಿ ಸಂಘರ್ಷ ಮುಂದುವರಿಯಲಿದೆ. ಯಾವುದೇ ಕ್ಷಣದಲ್ಲಿ ಆಕ್ರಮಣಗಳು ಮತ್ತೆ ಆರಂಭವಾಗಬಹುದು' ಎಂದು ಕತಾರ್‌ನ ವಿದೇಶಾಂಗ ಸಚಿವಾಲಯ ವಕ್ತಾರ ಮಜೀದ್ ಅಲ್ ಅನ್ಸಾರಿ ಹೇಳಿದ್ದಾರೆ. ಟ್ರಂಪ್ ಅವರು ಇರಾನ್ ಪ್ರಸ್ತಾವಗಳನ್ನು ಒಪ್ಪದೇ ಇರುವುದಕ್ಕೆ ಕತಾರ್‌ನ ಈ ಎಚ್ಚರಿಕೆಯೂ ಒಂದು ಕಾರಣ ಎನ್ನಲಾಗುತ್ತಿದೆ.ಕತಾರ್ ಎಚ್ಚರಿಕೆ'ಅಣ್ವಸ್ತ್ರ ಯೋಜನೆ: ಚರ್ಚೆಯ ಮುಖ್ಯ ವಿಷಯ'
ವಾಷಿಂಗ್ಟನ್: ಇರಾನ್ ಜೊತೆ ನಡೆಸುವ ಶಾಂತಿ ಮಾತುಕತೆ ವೇಳೆ, ಅಣ್ವಸ್ತ್ರ ಕಾರ್ಯಕ್ರಮವೇ ಚರ್ಚೆಯ ಮುಖ್ಯ ವಿಷಯವಾಗಿರಲಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಹೇಳಿದ್ದಾರೆ.
ಫಾಕ್ಸ್ ನ್ಯೂಸ್‌ಗೆ ನೀಡಿರುವ ಸಂದರ್ಶನದಲ್ಲಿ ಈ ಮಾತು ಹೇಳಿರುವ ಅವರು, 'ಇರಾನ್‌ನ ಪ್ರಸ್ತಾವವನ್ನು ಅಮೆರಿಕ ಒಪ್ಪಲು ಸಾಧ್ಯವಿಲ್ಲ. ಅಣ್ವಸ್ತ್ರ ವಿಷಯವೇ ಸಂಘರ್ಷಕ್ಕೆ ಮೂಲ ಕಾರಣವಾಗಿದ್ದು, ಅದನ್ನು ಚರ್ಚಿಸದೆ ಅಥವಾ ಪರಿಹರಿಸದೆಯೇ ಯಾವುದೇ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.
'ಇರಾನ್‌ನಲ್ಲಿ ಮೂಲಭೂತವಾದಿ ಸರ್ಕಾರ ಇರುವವರೆಗೂ ಅಣ್ವಸ್ತ್ರ ಯೋಜನೆಯನ್ನು ಬಯಸುತ್ತದೆ' ಎಂದೂ ಅವರು ಹೇಳಿದ್ದಾರೆ.
'ಹೊರ್ಮುಜ್: ಅಂಗಲಾಚಿದ ಇರಾನ್'
'ಹೊರ್ಮುಜ್ ಜಲಸಂಧಿಯನ್ನು ಅಮೆರಿಕವೇ ಶೀಘ್ರ ಮುಕ್ತಗೊಳಿಸಬೇಕು ಎಂಬುದು ಇರಾನ್ ಬಯಕೆಯಾಗಿದೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿಕೊಂಡಿದ್ದಾರೆ.
'ದೇಶವು ಸಂಪೂರ್ಣ ಕುಸಿಯುವ ಹಂತದಲ್ಲಿದೆ ಹಾಗೂ ದೇಶದ ನಾಯಕತ್ವ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕಿದೆ. ಹೀಗಾಗಿ ನೀವೇ ನೇತೃತ್ವ ವಹಿಸಿ, ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲು ಕ್ರಮ ಕೈಗೊಳ್ಳುವಂತೆ ಇರಾನ್ ಅಂಗಲಾಚಿದೆ' ಎಂಬುದಾಗಿ ಟ್ರಂಪ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಟ್ರಂಪ್ ಅವರ ಈ ಹೇಳಿಕೆ ಕುರಿತು ಇರಾನ್ ಪ್ರತಿಕ್ರಿಯೆ ನೀಡಿಲ್ಲ. ಸಾಮಾಜಿಕ ಮಾಧ್ಯಮ 'ಟ್ರೂಥ್ ಸೋಷಿಯಲ್'ನಲ್ಲಿ ಟ್ರಂಪ್ ಮಾಡಿರುವ ಪೋಸ್ಟ್ ಕುರಿತಂತೆ ಶ್ವೇತಭವನ ಕೂಡ ಪ್ರತಿಕ್ರಿಯೆ ನೀಡಿಲ್ಲ.
-ರೆಜಾ ತಲೈ-ನಿಕ್, ಇರಾನ್ ರಕ್ಷಣಾ ಸಚಿವಾಲಯದ ವಕ್ತಾರಇನ್ನು ಮುಂದೆ ಇತರ ದೇಶಗಳ ಮೇಲೆ ತನ್ನ ನೀತಿಗಳನ್ನು ಹೇರುವ ಸ್ಥಿತಿಯಲ್ಲಿ ಅಮೆರಿಕ ಇಲ್ಲ. ಅಂತಿಮವಾಗಿ ತನ್ನ ಕಾನೂನುಬಾಹಿರ ಮತ್ತು ಅಸಂಬದ್ಧ ಬೇಡಿಕೆಗಳನ್ನು ಕೈಬಿಡಬೇಕು ಎಂಬುದನ್ನು ಅದು ಒಪ್ಪಿಕೊಳ್ಳಬೇಕು. ಇರಾನ್ ಮುಂದಿಟ್ಟಿರುವ ಪ್ರಸ್ತಾವದಂತೆ ಹೊರ್ಮುಜ್ ಜಲಸಂಧಿಯನ್ನು ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸುವ ಬಗ್ಗೆ ಕತಾರ್ ಎಚ್ಚರಿಕೆ ನೀಡಿದೆ. 'ಈ ಜಲಮಾರ್ಗದ ಬಿಕ್ಕಟ್ಟಿಗೆ ನಿರ್ಣಾಯಕ ಪರಿಹಾರ ಕಂಡುಹಿಡಿಯುವುದು ಅಗತ್ಯ. ಇಲ್ಲದೇ ಹೋದಲ್ಲಿ ಸಂಘರ್ಷ ಮುಂದುವರಿಯಲಿದೆ. ಯಾವುದೇ ಕ್ಷಣದಲ್ಲಿ ಆಕ್ರಮಣಗಳು ಮತ್ತೆ ಆರಂಭ ವಾಗಬಹುದು' ಎಂದು ಕತಾರ್‌ನ ವಿದೇಶಾಂಗ ಸಚಿವಾಲಯ ವಕ್ತಾರ ಮಜೀದ್ ಅಲ್ ಅನ್ಸಾರಿ ಹೇಳಿದ್ದಾರೆ. ಟ್ರಂಪ್ ಅವರು ಇರಾನ್ ಪ್ರಸ್ತಾವಗಳನ್ನು ಒಪ್ಪದೇ ಇರುವುದಕ್ಕೆ ಕತಾರ್‌ನ ಈ ಎಚ್ಚರಿಕೆಯೂ ಒಂದು ಕಾರಣ ಎನ್ನಲಾಗುತ್ತಿದೆ.ನಿರ್ಣಾಯಕ ಪರಿಹಾರ ಅಗತ್ಯ
