ದುಬೈ/ಟೆಹರಾನ್: ಒಂದು ವೇಳೆ ಹೊರ್ಮುಜ್ ಜಲಸಂಧಿ ಬಳಿ ತೈಲ ಟ್ಯಾಂಕರ್‌ಗಳಿಗೆ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ಬೆಂಗಾವಲು ನೀಡಲು ಮುಂದಾದರೆ ಯುದ್ಧ ಮತ್ತಷ್ಟು ತೀವ್ರಗೊಳ್ಳುತ್ತದೆ ಎಂದು ಇರಾನ್ ಭಾನುವಾರ ಎಚ್ಚರಿಸಿದೆ.
ಹೊರ್ಮುಜ್ ಜಲಸಂಧಿಯನ್ನು ಸರುಕ್ಷಿತವಾಗಿರಿಸಲು ಮಿತ್ರ ದೇಶಗಳಾದ ಚೀನಾ, ಫ್ರಾನ್ಸ್, ಜಪಾನ್, ದಕ್ಷಿಣ ಕೊರಿಯಾ, ಬ್ರಿಟನ್ ಯುದ್ಧ ನೌಕೆಗಳನ್ನು ರವಾನಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಕರೆ ನೀಡಿದ್ದರು.
ಆದರೆ ಟ್ರಂಪ್ ಅವರ ಈ ಕರೆಯನ್ನು ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಘ್ಚಿ ಅವರು 'ಭಿಕ್ಷಾಟನೆ' ಎಂದು ಬಣ್ಣಿಸಿದ್ದಾರೆ. ಯುದ್ಧದಲ್ಲಿ ಅಮೆರಿಕ ಮತ್ತು ಇಸ್ರೆಲ್ ಜತೆ ಕೈಜೋಡಿಸದಂತೆ ಇರಾನ್ ಇತರ ದೇಶಗಳಿಗೆ ಎಚ್ಚರಿಕೆಯನ್ನೂ ಅವರು ರವಾನಿಸಿದ್ದಾರೆ.
ಈ ಯುದ್ಧದಿಂದ ಆಗಿರುವ ನಷ್ಟ ಪರಿಹಾರ ತುಂಬಿಕೊಡಲು ಒಪ್ಪಿದರೆ ಯುದ್ಧ ಕೊನೆಗೊಳ್ಳುತ್ತದೆ ಎಂದು ಅರಘ್ಚಿ ಹೇಳಿದ್ದಾರೆ.
ಒಂದು ವೇಳೆ ಇರಾನ್‌ನ ತೈಲ ಮೂಲಸೌಕರ್ಯಕ್ಕೆ ಹಾನಿಯಾದರೆ, ಅಮೆರಿಕ ಮತ್ತು ಅದರ ಮಿತ್ರ ದೇಶಗಳ ತೈಲ ಆರ್ಥಿಕ ವ್ಯವಸ್ಥೆ, ಇಂಧನ ಮೂಲಸೌಕರ್ಯವನ್ನು ನಾಶಪಡಿಸಲಾಗುವುದು ಎಂದು ಇರಾನ್ ಜಂಟಿ ಸೇನಾ ಕಮಾಂಡ್ ಪುನರುಚ್ಚರಿಸಿದೆ.
ದಾಳಿ ತೀವ್ರಗೊಳಿಸಿದ ಇರಾನ್: ಯುಎಇಯ ಪ್ರಮುಖ ಬಂದರುಗಳ ಬಳಿಯ ಜನರನ್ನು ಸ್ಥಳಾಂತರಿಸುವಂತೆ ಕರೆ ನೀಡಿದ ಮರುದಿನವೇ, ಇರಾನ್ ಕೊಲ್ಲಿ ದೇಶಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಭಾನುವಾರ ತೀವ್ರಗೊಳಿಸಿದೆ.
ಈ ಮೂಲಕ ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಮೂರನೇ ವಾರವೂ ಮುಂದುವರಿದಿದ್ದು, ಕೊನೆಗೊಳ್ಳುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇರಾನ್‌ನ ತೈಲ ರಫ್ತುಗಳನ್ನು ನಿರ್ವಹಿಸುವ ಖಾರ್ಗ್ ದ್ವೀಪದ ಮೇಲೆ ಅಮೆರಿಕ ದಾಳಿ ನಡೆಸಿದ್ದರಿಂದ ಕುಪಿತಗೊಂಡಿರುವ ಇರಾನ್, ಕೊಲ್ಲಿ ದೇಶಗಳ ವಿರುದ್ಧ ದಾಳಿಗಳನ್ನು ಮುಂದುವರಿಸಿದೆ.
ದುಬೈನ ಮರೀನಾ, ಅಲ್ ಸುಫೌಹ್ ಪ್ರದೇಶಗಳಲ್ಲಿ ಹಾಗೂ ಕುವೈತ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇರಾನ್ ಹಲವು ಡ್ರೋನ್‌ಗಳ ಮೂಲಕ ದಾಳಿ ನಡೆಸಿದೆ. ಆದರೆ ಸಾವು-ನೋವಿನ ವರದಿಯಾಗಿಲ್ಲ.
ಪ್ರಿನ್ಸ್ ಸುಲ್ತಾನ್ ನೆಲೆ ಮೇಲೆ ದಾಳಿ: ಸೌದಿ ಅರೇಬಿಯಾ ರಾಜಧಾನಿ ರಿಯಾದ್ ಬಳಿಯ ಅಲ್ ಖಾರ್ಜ್‌ನಲ್ಲಿರುವ ಪ್ರಿನ್ಸ್ ಸುಲ್ತಾನ್ ವಾಯುನೆಲೆ ಮೇಲೆ ಇರಾನ್ ಪದೇ ಪದೇ ದಾಳಿ ನಡೆಸಿದೆ. ಈ ವಾಯುನೆಲೆಯಲ್ಲಿ ಅಮೆರಿಕದ ಹಲವು ಯುದ್ಧ ವಿಮಾನಗಳಿವೆ ಎಂದು ಸೌದಿಯ ರಕ್ಷಣಾ ಸಚಿವಾಲಯ ತಿಳಿಸಿದೆ. ಅಲ್ಲದೆ, ಬಾಗ್ದಾದ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ಆವರಣದ ಮೇಲೂ ಇರಾನ್ ತನ್ನ ದಾಳಿಯನ್ನು ಮುಂದುವರಿಸಿದೆ.
ಮತ್ತೊಂದೆಡೆ, ಇರಾನ್‌ನ ಶಿರಾಝ್ ನಗರದ ಜನವಸತಿ ಪ್ರದೇಶವನ್ನು ಗುರಿಯಾಗಿಸಿ ಅಮೆರಿಕ-ಇಸ್ರೇಲ್ ಭಾನುವಾರ ವಾಯುದಾಳಿ ನಡೆಸಿದೆ. ಇದರಲ್ಲಿ ಹಲವರ ಮನೆಗಳು ನಾಶಗೊಂಡಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ.
ಇರಾನ್ ಆರೋಪ: ಯುಎಇಯ ರಾಸ್ ಅಲ್ ಖೈಮಾ ಮತ್ತು ದುಬೈ ಸಮೀಪದಿಂದ ಅಮೆರಿಕವು ಖಾರ್ಗ್ ದ್ವೀಪ ಮತ್ತು ಅಬು ಮೂಸಾ ದ್ವೀಪದ ಮೇಲೆ ದಾಳಿ ನಡೆಸಿದೆ ಎಂದು ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಘ್ಚಿ ಆರೋಪಿಸಿದ್ದಾರೆ. ಇದಕ್ಕೆ ಅಮೆರಿಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಆದರೆ ಯುಎಇ ಈ ಆರೋಪವನ್ನು ತಳ್ಳಿಹಾಕಿದೆ.
'ನಮ್ಮ ಮೇಲೆ ದಾಳಿ ಮಾಡುತ್ತಿರುವ ಅಮೆರಿಕ ಮತ್ತು ಅದರ ಮಿತ್ರ ದೇಶಗಳಿಗೆ ಮಾತ್ರ ಹೊರ್ಮುಜ್ ಜಲಸಂಧಿ ಮಚ್ಚಲಾಗಿದೆ' ಎಂದು ಅರಾಘ್ಚಿ ಪುನರುಚ್ಚರಿಸಿದ್ದಾರೆ.
ಸಾವು- ನೋವು: ಫೆಬ್ರುವರಿ 28ರಿಂದ ಆರಂಭವಾದ ಯುದ್ಧದಲ್ಲಿ 202 ಮಕ್ಕಳು ಮತ್ತು 223 ಮಹಿಳೆಯರು ಸೇರಿದಂತೆ 1,300ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ಇರಾನ್‌ನ ತಿಳಿಸಿದೆ.
ಇದರ ನಡುವೆ ಲೆಬನಾನ್ ಮೇಲೆ ಇಸ್ರೇಲ್ ದಾಳಿಯು ಮುಂದುವರಿದಿದ್ದು, ಹಲವು ಸಾವು-ನೋವುಗಳು ಸಂಭವಿಸಿವೆ. ಯುದ್ಧ ಆರಂಭವಾದಾಗಿನಿಂದ ಲೆಬನಾನ್‌ನಲ್ಲಿ 800ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ಇಸ್ರೇಲ್ ಮೇಲಿನ ಇರಾನ್ ಕ್ಷಿಪಣಿ ದಾಳಿಯಿಂದ 12 ಜನರು ಮೃತಪಟ್ಟಿದ್ದಾರೆ. ಯುದ್ಧ ಆರಂಭವಾದಾಗಿನಿಂದ ಅಮೆರಿಕದ 13 ಯೋಧರು ಅಸುನೀಗಿದ್ದಾರೆ.

