ವಾಷಿಂಗ್ಟನ್: 'ಇರಾನ್ ವಿರುದ್ಧದ ಸಂಘರ್ಷದಲ್ಲಿ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ' ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಜಾಗತಿಕ ಮಾರುಕಟ್ಟೆಗೆ ಪ್ರಮುಖ ವಾಣಿಜ್ಯ ಮಾರ್ಗವಾಗಿರುವ ಹೊರ್ಮುಜ್ ಜಲಸಂಧಿಯ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಗುರುವಾರ ಹೇಳಿದ್ದಾರೆ.
ಇಸ್ರೇಲ್ ಹಾಗೂ ಅಮೆರಿಕ ಪಡೆಗಳು ಫೆಬ್ರುವರಿ 28ರಂದು ಇರಾನ್ ಮೇಲೆ ದಾಳಿ ನಡೆಸಿದ್ದವು. ಅದಾದ ನಂತರ ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಸೃಷ್ಟಿಯಾಗಿರುವ ಉದ್ವಿಗ್ನತೆಯು ಜಾಗತಿಕ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ. ಅಮೆರಿಕ ಮತ್ತು ಇಸ್ರೇಲ್ ಪಡೆಗಳು ದಾಳಿ ನಿಲ್ಲಿಸದಿದ್ದರೆ, ಕೊಲ್ಲಿ ರಾಷ್ಟ್ರಗಳಿಂದ ತೈಲ ಸಾಗಣೆಯನ್ನು ಸಂಪೂರ್ಣ ನಿರ್ಬಂಧಿಸುವುದಾಗಿ ಎಚ್ಚರಿಸಿದೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿರುವ ಟ್ರಂಪ್, 'ಇರಾನ್ ಮೇಲೆ ಮುಕ್ತವಾಗಿ ಸವಾರಿ ಮಾಡುತ್ತಿದ್ದೇವೆ. ಇದೀಗ, ಹೊರ್ಮುಜ್ ಜಲಸಂಧಿಯತ್ತ ದಿಟ್ಟ ಹೆಜ್ಜೆ ಇಟ್ಟಿದ್ದೇವೆ' ಎಂದು ಹೇಳಿದ್ದಾರೆ.
ಹೊರ್ಮುಜ್ ಜಲಸಂಧಿಯನ್ನು ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಆಲೋಚಿಸುತ್ತಿರುವುದಾಗಿ ಟ್ರಂಪ್ ಇತ್ತೀಚೆಗೆ ಸಿಬಿಎಸ್ ಸುದ್ದಿವಾಹಿನಿಗೆ ಹೇಳಿದ್ದರು.
ಜಲಸಂಧಿಯ ವಿಚಾರಕ್ಕೆ ಬರದಂತೆಯೂ ಇರಾನ್‌ಗೆ ಎಚ್ಚರಿಕೆ ನೀಡಿದ್ದರು. ಅದಕ್ಕೆ ತಿರುಗೇಟು ನೀಡಿದ್ದ ಇರಾನ್, ಬೆದರಿಕೆಗೆ ಬಗ್ಗಲ್ಲ ಎಂದು ಪ್ರತಿಕ್ರಿಯಿಸಿತ್ತು.
ಹೊರ್ಮುಜ್ ಜಲಸಂಧಿ ಮುಚ್ಚಿದರೆ ವ್ಯಾಪಕ ಪರಿಣಾಮಗಳು ಉಂಟಾಗಲಿವೆ. ಜಾಗತಿಕವಾಗಿ ಅಭಿವೃದ್ಧಿ ಚಟುವಟಿಕೆಗಳಿಗೆ ಹಿನ್ನಡೆಯಾಗಲಿದೆ. ಆಹಾರ ಬಿಕ್ಕಟ್ಟು ಎದುರಾಗಲಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಲಿದೆ. ಇದರಿಂದ, ಜೀವನ ವೆಚ್ಚ ಹೆಚ್ಚಾಗಲಿದೆ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

